Homeಕವನಕವನ : ಕಾಯುತ್ತಿದ್ದೇನೆ

ಕವನ : ಕಾಯುತ್ತಿದ್ದೇನೆ

Published on

ಕಾಯುತ್ತಿದ್ದೇನೆ

ಕಾಯುತ್ತಿದ್ದೇನೆ
ನನ್ನ ವ್ಯಾಲೆಂಟೈನ್ ಗೆ
ಓ ನನ್ನ ಪ್ರೇಮವೇ
ಒಮ್ಮೆ ಬಂದು ಬಿಡು

ಕಾಯುತ್ತಿದ್ದೇನೆ
ರೈತ ಹುಬ್ಬಿಗೆ ಕೈ ಹಚ್ಚಿ
ಮುಗಿಲ ಮೋಡದ
ಮಳೆಯ ಹನಿಗಾಗಿ
ಓ ನನ್ನ ಪ್ರೇಮವೇ
ಒಮ್ಮೆ ಬಂದು ಬಿಡು

ಕಾಯುತ್ತಿದ್ದೇನೆ
ಕಳೆದು ಹೋದ ಕರು
ತನ್ನ ತಾಯಿಯರಸುವಂತೆ
ಮುಗ್ಧ ಪ್ರೀತಿಯ ಅಪ್ಪುಗೆಗೆ
ಓ ನನ್ನ ಪ್ರೇಮವೇ
ಒಮ್ಮೆ ಬಂದು ಬಿಡು

ಕಾಯುತ್ತಿದ್ದೇನೆ
ಕರಾಳ ದಿನಗಳ
ಜೈಲಿನಲ್ಲಿ ಕೊಳೆಯುವ
ಅಮಾಯಕರು ಜಾಮೀನಿಗಾಗಿ
ಓ ನನ್ನ ಪ್ರೇಮವೇ
ಒಮ್ಮೆ ಬಂದು ಬಿಡು

ಕಾಯುತ್ತಿದ್ದೇನೆ
ದಲಿತ ಬಡವರ ದಮನಿತರ
ಶೋಷಣೆಯ ಸಂಕೋಲೆ
ಕಳಚಿ ಬೀಳುವ ದಿನಕೆ
ಓ ನನ್ನ ಪ್ರೇಮವೇ
ಒಮ್ಮೆ ಬಂದು ಬಿಡು

ನನಗೀಗ ಅರ್ಥವಾಗುತ್ತಿದೆ
ಪ್ರೀತಿ ಪ್ರೇಮ ಪದಗಳು
ಭಯ ಭೀತಿಯಲ್ಲಿ ಮುದುಡಿವೆ
ಸಮರಸ ಸಮಾಧಿಯಾಗಿ
ದ್ವೇಷದ ಮಾರುಕಟ್ಟೆಯಲ್ಲಿ
ಹೂವು ಕೊಳ್ಳುವವರಿಲ್ಲ

ಓ ನನ್ನ ಪ್ರೇಮವೇ
ಒಮ್ಮೆ ಬಂದು ಬಿಡು
ಜಗದ ಹಗೆಯಳಿಸಿ
ಸ್ನೇಹ ಪ್ರೀತಿಯ ಉಸಿರಾಗಿ
ನೊಂದ ಮನಕೆ ನೆಮ್ಮದಿಯ
ತಿಳಿ ಕಾವೇರಿಯಾಗಿ

ಓ ನನ್ನ ಪ್ರೇಮವೇ
ಒಮ್ಮೆ ಬಂದು ಬಿಡು
ಸುಡುವ ಕೆಂಡದ ಮಧ್ಯೆ
ಶಾಂತಿಯ ಮೊಂಬತ್ತಿ ಬೆಳಕಾಗಿ
ಹೊಸ ಬದುಕಿನ ನಿರ್ಮಲ
ನಿಶ್ಚಿತ ಶಾಶ್ವತ ಪ್ರೀತಿಯಾಗಿ

ಓ ನನ್ನ ಪ್ರೇಮವೇ
ಒಮ್ಮೆ ಬಂದು ಬಿಡು
ಬುದ್ಧ ಬಸವರ ಬೆಳಕಾಗಿ
ಅನಾಥ ಮಕ್ಕಳ ತಾಯಿಯಾಗಿ
ಅಂಗ ಲಿಂಗದ ಹಂಗು ತೊರೆದು
ಭೋರ್ಗರೆವ ಪ್ರೇಮ ಪ್ರವಾಹವಾಗಿ

ಮತ್ತೆ ಕಾಯಿಸ ಬೇಡ
ದಶಕದ ಶಾಪ ಅಳಿದು
ಒಲವು ಚಿಗುರಿ ಅರಳಲಿ
ಕೋಪ ತಾಪ ಅಳಿದು
ತನು ಮನಕೆ ತಂಪು ನೆರಳಾಗಿ
ನನ್ನ ನಿನ್ನೊಳಗಿನ ನಗೆ ಸಂಭ್ರಮಕೆ

ಓ ನನ್ನ ಪ್ರೇಮವೇ
ಒಮ್ಮೆ ಬಂದು ಬಿಡು
ಬವಣೆ ಭ್ರಾಂತಿ ಕಳೆದು
ಹೊಸ ಬದುಕಿನ ಕ್ರಾಂತಿಯಾಗಿ
ಸತ್ಯ ಸಮತೆ ಮೆರವಣಿಗೆಗೆ
ನನ್ನ ಒಂಟಿ ಪಯಣದಲ್ಲಿ

ಬಾ ಪ್ರೇಮವೇ ಒಮ್ಮೆ
ನಮ್ಮ ಬರಿದಾದ ಬಾಳಿನಲ್ಲಿ
ತಿಳಿ ಬೆಳಕಾಗಿ ತಂಗಾಳಿ ಸೂಸಿ
ನೆಮ್ಮದಿ ನಿದ್ರೆಗೆ ಜಾರುವ ಮುನ್ನ
ನಿನ್ನ ಕೈ ಕುಲುಕಿ ಅಪ್ಪಿ ಮುದ್ದಾಡುವೇ
ಬಂದು ಬಿಡು ಕಾಯುತ್ತಿದ್ದೇನೆ
_________________________

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

Latest articles

More like this