Homeಲೇಖನಬಸವ ತತ್ವದ ರಾಯಭಾರಿ ಚಿತ್ತರಗಿ ಚಿಜ್ಯೋತಿ ಶ್ರೀ ವಿಜಯಮಹಾಂತ ಶಿವಯೋಗಿ

ಬಸವ ತತ್ವದ ರಾಯಭಾರಿ ಚಿತ್ತರಗಿ ಚಿಜ್ಯೋತಿ ಶ್ರೀ ವಿಜಯಮಹಾಂತ ಶಿವಯೋಗಿ

Published on

ಬಸವೋತ್ತರ ಕಾಲದ ಶ್ರೇಷ್ಠ ಶಿವಯೋಗ ಸಾಧಕರು ಅಪ್ಪಟ ಬಸವಾಭಿಮಾನಿಗಳು ಅಪ್ಪ ಬಸವಣ್ಣನವರ ವಚನಗಳ ಕತ್ತನ್ನು ಬೆನ್ನಿಗೆ ಕಟ್ಟಿಕೊಂಡು ಬಿಳಿ ಶುಭ್ರ ಕುದುರೆಯನ್ನು ಏರಿ ಊರ್ರೂರು ಅಳೆದು ಶರಣರ ಆಶಯ ವೈಚಾರಿಕ ಸಿದ್ಧಾಂತಗಳನ್ನು ನಾಡಿನ ಮೂಲೆ ಮೂಲೆಗೂ ಪಸರಿಸಿದ ಮಹಾತಪಸ್ವಿಗಳು ಶ್ರೀ ವಿಜಯ ಮಹಾಂತ ಶಿವಯೋಗಿಗಳು.

*ವಿಜಯ ಮಹಾಂತೇಶ್ವರ ಮಠ*
————————————————–
ವಿಜಯ ಮಹಾಂತೇಶ್ವರ ಮಠವು ಯಡೆಯೂರು ಸಿದ್ದಲಿಂಗೇಶ್ವರ ಶಿವಯೋಗಿಗಳ ಪ್ರೇರಣೆಯಿಂದ 1462 ರಲ್ಲಿ ಚಿತ್ತರಗಿಯಲ್ಲಿ ಸ್ಥಾಪನೆಯಾಯಿತು. ಅಂದಿನಿಂದ ಈ ಪೀಠದ ಪರಂಪರೆಯಲ್ಲಿ ಬಂದ 19 ಸ್ವಾಮೀಜಿಗಳೆಲ್ಲರೂ ‘ಗುರು ಮಹಾಂತ’, ‘ವಿಜಯ ಮಹಾಂತ’ ಹಾಗೂ ‘ಮಹಾಂತ’ ಎಂಬ ಅಭಿದಾನಗಳಿಂದ ನಾಮಾಂಕಿತರಾಗಿದ್ದಾರೆ. ಈ ನಿರಂಜನ ಪೀಠದ 16 ನೇ ಪೀಠಾಧಿಪತಿ ಆಗಿದ್ದವರು ಮಹಾತಪಸ್ವಿ, ಪರಮ ದಾಸೋಹಿ, ಚಿತ್ತರಗಿ ಚಿಜ್ಯೋತಿ ಎಂದೇ ಖ್ಯಾತರಾದ ಶ್ರೀ ವಿಜಯ ಮಹಾಂತ ಶಿವಯೋಗಿಗಳು. ಇವರು ಲಿಂಗೈಕ್ಯರಾಗಿ 115 ವರ್ಷಗಳಾಗಿದ್ದರೂ ಅವರ ಪ್ರಭಾವ ಭಕ್ತರ ಮನಸ್ಸಿನಲ್ಲಿ ಇವತ್ತಿಗೂ ಅಚ್ಚೊತ್ತಿದೆ.

ಬಸವತತ್ವದ ಪರಿಪಾಲಕರಾಗಿದ್ದ ವಿಜಯ ಮಹಾಂತರ ತಪಸ್‌ ಶಕ್ತಿ, ಕರ್ತೃತ್ವಶಕ್ತಿಯಿಂದಾಗಿ ಚಿತ್ತರಗಿ–ಇಳಕಲ್‌ ಪೀಠ ನಾಡಿನಲ್ಲಿ ಖ್ಯಾತಿ ಗಳಿಸಿದೆ. ವಿಜಯ ಮಹಾಂತ ಶಿವಯೋಗಿಗಳು ಹಾಸನ ಜಿಲ್ಲೆಯ ಸಸಿವಾಳದಲ್ಲಿ ಕ್ರಿ.ಶ 1850ರಲ್ಲಿ ಕೊಳಗಲ್ಲಮಠದ ವೀರಯ್ಯ ಹಾಗೂ ಗೌರಮ್ಮ ದಂಪತಿಯ ಮಗನಾಗಿ ಜನಿಸಿದರು. ಮಳೆಯಪ್ಪಯ್ಯ ಅವರ ಬಾಲ್ಯದ ಹೆಸರು. ತಂದೆ-ತಾಯಿಯ ವಿರೋಧದ ನಡುವೆ ಶಿವಪಥದ ಹುಡುಕಾಟಕ್ಕಾಗಿ ಸಸಿವಾಳದ ಸಮೀಪದಲ್ಲಿದ್ದ ಕಲ್ಲು ಬೆಟ್ಟದ ಆಶ್ರಮವಾಸಿಯಾದರು. ಮುಂದೆ ಇವರು ಬಳ್ಳಾರಿಯ ಸಕ್ಕರೆ ಕರಡೆಪ್ಪನವರ ಬಸವ ಸಂಸ್ಕೃತಿ ಪಾಠಶಾಲೆಯಲ್ಲಿ ಓದಿದರು. ಓದುವುದು ಪಂಡಿತನಾಗುವುದಕ್ಕಲ್ಲ, ಅಧ್ಯಾತ್ಮದ ಅರಿವು ವಿಸ್ತರಿಸಿಕೊಳ್ಳುವುದಕ್ಕೆ ಎಂಬುದು ಅವರ ನಿಲುವಾಗಿತ್ತು. ಬಾಲ್ಯದಿಂದಲೂ ವಚನಗಳಲ್ಲಿ ಶರಣರ ಚರಿತ್ರೆಗಳಲ್ಲಿ ಅಘಾಧವಾದ ಆಸಕ್ತಿ ಹೊಂದಿದ್ದ ಬಾಲಕ ಮಳೆಯಪ್ಪಯ್ಯ, ದಕ್ಷಿಣ ಕರ್ನಾಟಕದಿಂದ ಉತ್ತರ ಕರ್ನಾಟಕಕ್ಕೆ ಬಂದಿದ್ದು ಒಂದು ರೋಚಕ ಸಂಗತಿಯಾಗಿದೆ.

ಬಸವತತ್ವ ನಿಷ್ಠರಾಗಿದ್ದ ಶ್ರೀ ವಿಜಯ ಮಹಾಂತ ಶಿವಯೋಗಿಗಳು ಅಧ್ಯಯನ ಮಾಡಿ, ಬಸವಲಿಂಗ ಗುರುಗಳಿಂದ ದೀಕ್ಷೆ ಪಡೆದರು. ಊರೂರು ಸಂಚರಿಸಿ, ಪುರಾಣ, ಪ್ರವಚನ ಮಾಡಿ ಜಾಗೃತಿ ಮಾಡಿದರು. ಶ್ರೀ ವಿಜಯ ಮಹಾಂತ ಶಿವಯೋಗಿಗಳು ಚಿತ್ತರಗಿ ಶ್ರೀ ಮಠಕ್ಕೆ ಪೀಠಾಧಿಪತಿಗಳಾಗಿ ಆಗಮಿಸಿದರು, ಆಶ್ಚರ್ಯ ಮತ್ತು ವಿಚಿತ್ರ ಎಂದರೆ ಎಂದೂ ಕಾವಿಯನ್ನು ಧರಿಸಲಿಲ್ಲ,ಪಲ್ಲಕ್ಕಿ ಸಿಂಹಾಸನ ಹತ್ತಲಿಲ್ಲ, ಬಿಳಿಯ ಶುಭ್ರ ನಿಲುವಂಗಿ ಬಿಳಿಯ ಪಂಚೆ ಕೊರಳಿಗೊಂದು ಉದ್ದನೆಯ ಕೈ ವಸ್ತ್ರ, ತಲೆಗೆ ಮಾತ್ರ ತಿಳಿ ಕೇಸರಿ ರುಮಾಲು ಸುತ್ತಿ ನಿತ್ಯ ಹಳ್ಳಿಗಳಿಗೆ ತೆರಳಿ ಅಲ್ಲಿ ಜನರಲ್ಲಿ ಬಸವ ತತ್ವದ ಅರಿವನ್ನು ಮೂಡಿಸುತ್ತಿದ್ದರು.

*ಭೀಕರ ಬರಗಾಲದವನ್ನು ನಿರ್ವಹಿಸಿದ ಶಿವಯೋಗಿ*
—————————————————————–
ಚಿತ್ತರಗಿ ಇಳಕಲ್ ಹುನಗುಂದ ಮುಂತಾದ ಭಾಗಗಳಲ್ಲಿ ಅತ್ಯಂತ ಭೀಕರ ಬರಗಾಲವು ಬಡವರನ್ನು ಊರು ಬಿಟ್ಟು ಹೋಗುವ ಪರಿಸ್ಥಿತಿ ನಿರ್ಮಾಣಗೊಂಡಿತು. ಇದನ್ನರಿತ
ಚಿತ್ತರಗಿ ಚಿಜ್ಜ್ಯೋತಿ ಶ್ರೀ ವಿಜಯಮಹಾಂತ ಶಿವಯೋಗಿಗಳು ಮಠದಲ್ಲಿ ಶೇಖರಣೆಗೊಂಡಿದ್ದ ಜೋಳ ಗೋದಿ ಸಜ್ಜೆ ಮುಂತಾದ ದವಸ ಧಾನ್ಯಗಳ ಮೂಟೆಗಳನ್ನು
ಬಡವರಿಗೆ ಹಂಚಿ ಒಂದು ವರ್ಷ ಪೂರ್ತಿ ಮಠದಲ್ಲಿ ಅಣ್ಣ ಪ್ರಸಾದದ ವ್ಯವಸ್ಥೆ ಮಾಡಿದರು. ಮಳೆ ಬರದೇ ಪ್ರಕೃತಿವಿಕೋಪಕ್ಕೆ ಹೋದಾಗ ಎಲ್ಲ ಭಕ್ತರನ್ನು ಕೂಡಿಸಿ ಭಕ್ತಿ ಭಜನೆ ಪ್ರಾರ್ಥನೆ ಮಾಡಿಸಿ ಸತ್ಸಂಗದ ಅನುಭಾವದಲ್ಲಿ ತೊಡಗಿಸಿ ಕೃಷಿಗೆ ಬೇಕಾದ ಮಳೆಗೆ ತಪಸ್ಸನ್ನು ಮಾಡಿ ಚಿತ್ತರಗಿ ಸುತ್ತು ಮುತ್ತೆಲ್ಲ ವಿಪರೀತ ಮಳೆ ಬರುವ ಹಾಗೆ ಪ್ರಾರ್ಥಿಸಿದರು ಜಪಿಸಿದರು.

ಶ್ರೀ ಮಠದಲ್ಲಿ ಚಿತ್ತರಗಿ ಚಿಜ್ಜ್ಯೋತಿ ಶ್ರೀ ವಿಜಯಮಹಾಂತ ಶಿವಯೋಗಿಗಳು ಎಲ್ಲ ವರ್ಗದವರಿಗೆ ಧರ್ಮಿಯರಿಗೆ ಅವಕಾಶ ನೀಡಿ ಧಾರ್ಮಿಕ ಸಯಾಮಾಜಿಕ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಮಾನ ಅವಕಾಶಗಳನ್ನು ನೀಡಿದರು.

*ಶಿವಯೋಗ ಮಂದಿರ ಸ್ಥಾಪನೆಯ ಸ್ಥಳದ ಆಯ್ಕೆ.*
————————————————————–
ಹಾನಗಲ್ ಶ್ರೀ ಕುಮಾರ ಶಿವಯೋಗಿಗಳು ಲಿಂಗಾಯತ ವಟುಗಳಿಗಾಗಿ ಒಂದು ತರಬೇತಿ ಕೇಂದ್ರವನ್ನು ಸ್ಥಾಪಿಸಬೇಕೆನ್ನುವ ಉದ್ದೇಶದಿಂದ ಅಂದಿನ ಸಾಮಾಜಿಕ ಧುರೀಣರಾದ ಶ್ರೀ ವಾರದ ಮಲ್ಲಪ್ಪನವರನ್ನು ಅರಟಾಳ ರುದ್ರಗೌಡರನ್ನು ಸಂಪರ್ಕಿಸಿದಾಗ ಅವರು ಒಂದು ಒಳ್ಳೆಯ ಸ್ಥಳವನ್ನು ಹುಡುಕುವ ಜವಾಬ್ದಾರಿಯನ್ನು ಹಾನಗಲ್ ಶ್ರೀ ಗುರುಕುಮಾರೇಶ್ವರ ಸ್ವಾಮಿಗಳಿಗೆ ಹೇಳುತ್ತಾರೆ, ಇವರ ಜೊತೆಗೆ ಶ್ರೀ ವೈರಾಗ್ಯ ಮಲ್ಲಣ್ಣಾರ್ಯರು ನೇರವಾಗಿ ಚಿತ್ತರಗಿ ಶ್ರೀ ಮಠಕ್ಕೆ ಬಂದು ಪೂಜ್ಯರಾದ ಶ್ರೀ ವಿಜಯಮಹಾಂತ ಸ್ವಾಮಿಗಳನ್ನು ಸಂಪರ್ಕಿಸುತ್ತಾರೆ.

ಶ್ರೀ ವಿಜಯ ಮಹಾಂತಸ್ವಾಮಿಗಳು ತಮ್ಮಲ್ಲಿದ್ದ ಬಿಳಿ ಕುದುರೆ ಹತ್ತಿ ತಮ್ಮ ಪ್ರೀತಿಯ `ಮಹಾಂತಮ್ಮ~ ಹೆಸರಿನ ಆಕಳನ್ನು ಕೊಟ್ಟಿಗೆಯಿಂದ ಬಿಚ್ಚಿ ಶ್ರೀ ಹಾನಗಲ್ ಕುಮಾರಸ್ವಾಮಿಗಳಿಗೆ ಹಾಗೂ ವೈರಾಗ್ಯ ಮಲ್ಲಣಾರ್ಯರಿಗೆ ಈ ಮಹಾಂತಮ್ಮ ಎಂಬ ಪುಣ್ಯ ಗೋವು ಎಲ್ಲಿ ಹೋಗಿ ಮಲಗುತ್ತದೆಯೋ ಅಲ್ಲಿ ಶಿವಯೋಗ ಮಂದಿರವನ್ನು ಸ್ಥಾಪಿಸೋಣ ಎನ್ನುತ್ತಾರೆ. ಅವರ ಜೊತೆಗೆ ಕೆಲ ಬಸವ ಭಕ್ತರನ್ನು ಆಕಳ ಹಿಂದೆ ಬಿಡುತ್ತಾರೆ. ಮಹಾಂತಮ್ಮ ಎಂಬ ಆಕಳು ಚಿತ್ತರಗಿಯಿಂದ ಹೋಗಿ ಐಹೊಳೆ ಪಟ್ಟದಕಲ್ಲು ಮಾರ್ಗವಾಗಿ ಇವತ್ತಿನ ಶಿವಯೋಗ ಮಂದಿರದ ಸ್ಥಳದಲ್ಲಿನ ಮಲಪ್ರಭೆಯ ತಟದಲ್ಲಿ ಮಲಗಿತು. ಇದನ್ನು ನಿರ್ಧರಿಸಿ ಎಲ್ಲ ಹಿರಿಯರು ಶಿವಯೋಗ ಮಂದಿರಕ್ಕೆ ಸೂಕ್ತವಾದ ಸ್ಥಳವೆಂದು ಒಪ್ಪಿ ಅಲ್ಲಿ ಸ್ಥಾಪಿಸಿದರು. ಈ ರೀತಿಯಾಗಿ ಪೂಜ್ಯರಾದ ಶ್ರೀ ವಿಜಯಮಹಾಂತ ಸ್ವಾಮಿ ಗಳು ಅವತ್ತಿನ ಶಿವಯೋಗ ಮಂದಿರವನ್ನು ಸ್ಥಾಪಿಸಲು ನೆರವಾಗುತ್ತಾರೆ.

ಪೂಜ್ಯರಾದ ಶ್ರೀ ವಿಜಯಮಹಾಂತ ಸ್ವಾಮಿಗಳು ಕುದುರೆಯ ಮೂಲಕ ಬಸವ ತತ್ವ ಪ್ರಸಾರಕ್ಕಾಗಿ, ವಚನಗಳ ರಕ್ಷಣೆಗಾಗಿ ನಾಡಿನಾದ್ಯಂತ ಸಂಚರಿಸಿದರು. ತಾಳೆ ಗರಿಗಳ ವಚನ ಸಂಪುಟದ ಗಂಟೊಂದು ಸದಾ ಅವರ ಬೆನ್ನು ಮೇಲೆ ಇರುತ್ತಿತ್ತು. ಅವರು ಬಸವಣ್ಣನವರನ್ನು `ಅಪ್ಪನೆಂದು~ ಅವರ ವಚನಗಳಿಗೆ `ಅಪ್ಪನ ವಚನ~ಗಳೆಂದು ಸಂಬೋಧಿಸುತ್ತಿದ್ದರು.

ಮುಂದೆ 1963 ರಲ್ಲಿ ಪೀಠಕ್ಕೆ ಬಂದ ಹಿಂದಿನ ಗುರು ಮಹಾಂತ ಸ್ವಾಮೀಜಿ ಅವರು ಶಿಕ್ಷಣ ಸಂಸ್ಥೆಗಳನ್ನು ಉಚಿತ ಪ್ರಸಾಸ ನಿಲಯಗಳನ್ನು ಸ್ಥಾಪಿಸಿ, ವಿದ್ಯಾಪ್ರಸಾರ ಮಾಡಿದರು. ಅವರು ಸ್ವತಃ ಕೃಷಿ ಕೆಲಸ ಮಾಡುವ ಕಾಯಕ ಜೀವಿಗಳಾಗಿದ್ದರು.

1970 ರಲ್ಲಿ ಪೀಠಾಧಿಪತಿಯಾದ ಲಿಂಗೈಕ್ಯ ಡಾ.ಮಹಾಂತ ಸ್ವಾಮೀಜಿ ಅವರು ಬಸವ ತತ್ವ ನಿಷ್ಠರು. ಬಸವಧರ್ಮದ ಆಚೆಗಿರುವ ಯಾವುದನ್ನುಒಪ್ಪಿಕೊಳ್ಳದ ದಿಟ್ಟ ಗಣಾಚಾರಿಗಳು. ಹೀಗಾಗಿ ವೈಚಾರಿಕವಲ್ಲದ ಆಚರಣೆಗಳನ್ನು, ಪರಂಪರೆಗಳನ್ನು ತಿರಸ್ಕರಿಸಿ, ಬಸವ ತತ್ವ, ಆದರ್ಶಗಳ ಉಳಿವಿಗಾಗಿ ಸುದೀರ್ಘವಾಗಿ ಹೋರಾಡಿದರು.

1972 ರ ಬರಗಾಲದ ಸಂದರ್ಭದಲ್ಲಿ ಉಣ್ಣಲೂ ಆಹಾರ ಇಲ್ಲದಿದ್ದರೂ ಜನರು ದುಶ್ಟಟಗಳಿಗೆ ಬಲಿಯಾಗುವುದನ್ನು ಕಂಡು ದುಶ್ಚಟಗಳನ್ನು ನಿವಾರಿಸಿಲು ಹಾಕಿಕೊಂಡಿದ್ದು ಐತಿಹಾಸಿಕ `ಮಹಾಂತ ಜೋಳಿಗೆ~. ಹಳ್ಳಿ, ನಗರ, ಬೇರೆ ರಾಜ್ಯ, ದೇಶಗಳಗೆ ಹೋಗಿ ಜೋಳಿಗೆಯ ಮೂಲಕ 3 ಲಕ್ಷ ಜನರನ್ನು ದುಶ್ಚಟಗಳಿಂದ ಮುಕ್ತ ಮಾಡಿದ ಕೀರ್ತಿ ಇವರದು. ಡಾ.ಮಹಾಂತಪ್ಪ ಅವರು ಜೋಳಿಗೆಗೆ ದುಶ್ಚಟಗಳ ಹೊರತು ಯಾವತ್ತೂ ಧನ, ಕನಕ ಬೇಡದ ನಿಜ ಅರ್ಥದ ವಿರಕ್ತರು.

ಲಿಂ ವಿಜಯ ಮಹಾಂತ ಶಿವಯೋಗಿಗಳ ಕತೃ ಗದ್ದುಗೆಗೆ ಈಗಲೂ ನಿತ್ಯ ಸಾವಿರಾರು ಜನ ದರ್ಶನ ನೀಡುತ್ತಾರೆ. ವಿಜಯ ಮಹಾಂತರ ಹೆಸರು ಇಲ್ಲಿಯ ಜನರನ್ನು ಭಾವುಕರನ್ನಾಗಿಸುತ್ತದೆ. ಭಕ್ತರ ಹೃದಯದಲ್ಲಿ ಅವರು ಚಿರಜೀವಿಗಳಾಗಿದ್ದಾರೆ. ಪೂಜ್ಯ ಶ್ರೀ ವಿಜಯಮಹಾಂತ ಸ್ವಾಮಿಗಳು ಇವತ್ತಿನ ಎಲ್ಲಾ ಮಠಾಧೀಶರಿಗೆ ಮಾದರಿಯಾಗಿದ್ದಾರೆ. ಅಂತಹ ಪರಂಪರೆಯಲ್ಲಿ ಇವತ್ತಿನ ಶ್ರೀ ಗುರುಮಹಾಂತಸ್ವಾಮಿಗಳೂ ಕೂಡ ಬಸವ ತತ್ವ ಪ್ರಸಾರದಲ್ಲಿ ನಿರಂತರವಾಗಿ ಅಧ್ಯಯನ ಅನುಭವವನ್ನು ಜನರಿಗೆ ಮುಟ್ಟಿಸುವ ಕಾರ್ಯ ನಿರಂತರವಾಗಿ ಮಾಡುತ್ತಿದ್ದಾರೆ.

*ಬಯಲಲ್ಲಿ ಬಯಲಾದರು*
————————————-
ಪೂಜ್ಯರಾದ ಶ್ರೀ ವಿಜಯಮಹಾಂತ ಶಿವಯೋಗಿಗಳು ನಿತ್ಯ ಸ್ಮರಣೀಯರು. ಅವರು ಶುಕ್ರವಾರ ತಮ್ಮ 61 ನೆಯ ವಯಸ್ಸಿನಲ್ಲಿ ಬಯಲಲ್ಲಿ ಬಯಲಾದರು.

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

Latest articles

More like this