Homeಲೇಖನಲೇಖನ : ನಿನ್ನ ನೀನು ಮರೆತರೇನು ಸುಖವಿದೆ?

ಲೇಖನ : ನಿನ್ನ ನೀನು ಮರೆತರೇನು ಸುಖವಿದೆ?

Published on

ಒಂದು ಕಾಲದಲ್ಲಿ ಹೆಣ್ಣು ನಾಲ್ಕು ಗೋಡೆಗಳ ಮಧ್ಯೆ ಹೊಗೆಯಾಡುವ ಅಡುಗೆ ಮನೆಯಲ್ಲಿ ಕಣ್ಣೊರೆಸುತ್ತ ಒಲೆಯ ಮುಂದೆ ಕುಳಿತು ಅಡುಗೆ ಕೆಲಸದ ಜೊತೆಯಲ್ಲಿ ಬಟ್ಟೆ ಪಾತ್ರೆ ಅಂತ ಮನೆಯ ಹೊಸ್ತಿಲನ್ನು ದಾಟುತ್ತಲೇ ಇರಲಿಲ್ಲ. ‘ನ ಸ್ತ್ರೀ ಸ್ವಾತಂತ್ರ್ಯಂ ಅರ್ಹತಿ’ ಎನ್ನುವ ಮನುಸ್ಮೃತಿಯ ಹೇಳಿಕೆಯನ್ನು ಚಾಚೂ ತಪ್ಪದೇ ಪಾಲಿಸುತ್ತಿದ್ದಳು. ಹೆಣ್ಣು ಹುಟ್ಟಿದರೆ ಹುಣ್ಣು. ಅವಳೊಂದು ದೊಡ್ಡ ಹೊರೆ ಎಂಬ ಗೊಣಗು ಎಲ್ಲೆಲ್ಲೂ ಕೇಳಿ ಬರುತ್ತಿತ್ತು. ವರದಕ್ಷಿಣೆಯ ಸಾಮಾಜಿಕ ಪಿಡುಗಿನಿಂದ ಹೆಣ್ಣು ಹೆತ್ತ ತಾಯಿಯನ್ನು ಹೀಯಾಳಿಸುತ್ತಿದ್ದರು. ಹೆತ್ತ ತಾಯಿಯೂ ನೊಂದುಕೊಂಡು ಜೀವವನ್ನು ತೇಯುತ್ತಿದ್ದಳು. ಗಂಡಿನ ಪ್ರಾಧಾನ್ಯತೆ ಹೆಣ್ಣನ್ನು ಪಾತಾಳಕ್ಕೆ ತಳ್ಳಿತ್ತು.

ಇದನ್ನು ಕಂಡ ಕವಿಯತ್ರಿ ಸಂಚಿ ಹೊನ್ನಮ್ಮ ತನ್ನ ಹದಿಬದೆಯ ಧರ್ಮದಲ್ಲಿ ‘ಹೆಣ್ಣು ಹೆಣ್ಣೆಂದೇಕೆ ಬೀಳುಗಳೆವರು ಕಣ್ಣು ಕಾಣದ ಗಾವಿಲರು’ ಎಂಬ ಚಾಟೋಕ್ತಿಯಿಂದ ಸಮಾಜದ ಕಣ್ಣು ತೆರೆಯಲು ಪ್ರಯತ್ನಿಸಿದಳು. ಹೆಣ್ಣಿನ ಅಸ್ತಿತ್ವಕ್ಕೆ ಧಕ್ಕೆ ತರುವ ಅಂಶಗಳೇ ರಾರಾಜಿಸುತ್ತಿದ್ದವು. ಹೀಗಾಗಿ ಮಹಿಳೆ ದಿನ ದೂಡುವುದೇ ದೊಡ್ಡ ಸವಾಲಾಗಿತ್ತು.ಹೆಣ್ಣಿಗೆ ಬುದ್ಧಿಯೇ ಕಮ್ಮಿ ಎನ್ನುವದಕ್ಕೆ ಪುಟಿ ಕೊಡುವಂತೆ ‘ಹೆಣ್ಣುಮಕ್ಕಳ ಬುದ್ಧಿ ಮೊಣಕಾಲ ಕೆಳಗೆ’ ಎಂಬ ಗಾದೆ ಮಾತು ಹುಟ್ಟಿಕೊಂಡಿತ್ತು.

ಆದರೀಗ ಮಹಿಳೆಯರ ಲೋಕ ತುಂಬಾ ಬದಲಾಗಿದೆ. ಹೆಣ್ಣು ಮನೆಯ ನಂದಾದೀಪ ಅವಳೆ ಸಮಾಜದ ಕಣ್ಣು. ಅಂತ ಗುರುತಿಸಿಕೊಂಡಿದ್ದಾಳೆ. ಈಗ ಅವಳು ಇಡೀ ಕುಟುಂಬವನ್ನು ಸಮರ್ಥವಾಗಿ ನಿಭಾಯಿಸುವಷ್ಟು ಶಕ್ತಿ ಅಷ್ಟೇ ಅಲ್ಲ, ಪ್ರತಿಯೊಂದು ಕ್ಷೇತ್ರದಲ್ಲಿ ಗಂಡಿಗೆ ಸರಿಸಮವಾಗಿ ಬೆಳೆದು ನಿಂತಿದ್ದಾಳೆ. ಎಂಬುದು ನಿಜಕ್ಕೂ ಹೆಮ್ಮೆಯ ಸಂಗತಿ.
ಮಹಿಳೆ ಎಲ್ಲ ರಂಗಗಳಲ್ಲೂ ದಾಪುಗಾಲು ಹಾಕುತ್ತ ಪ್ರಗತಿ ಸಾಗಿಸುತ್ತಿದ್ದರೂ ಕೆಲವೊಂದು ವಿಷಯಗಳಲ್ಲಿ ಅವಳಿಗೆ ಪ್ರಕೃತಿ ದತ್ತವಾದ ದೌರ್ಬಲ್ಯಗಳು ಕಾಡುತ್ತಲೇ ಇರುತ್ತವೆ. ಅದನ್ನು ಮೀರಿ ನಿಂತು ಗೆಲ್ಲಬಲ್ಲವಳಾಗಿದ್ದರೂ ಇಡೀ ಸಮಾಜದೆದುರಿಗೆ ತನ್ನ ಬಲಗಳನ್ನು ಪ್ರದರ್ಶಿಸಿ ಮೆರೆಯುತ್ತಿದ್ದಾಳಾದರೂ ಕೆಲ ಸಂಗತಿಗಳಲ್ಲಿ ಅವಳು ಅಬಲೆಯೆಂಬ ಹಣೆಪಟ್ಟಿಯಿಂದ ದೂರವಾಗಲು ಸಾಧ್ಯವಾಗುತ್ತಿಲ್ಲ. ಕೆಲವು ಬಾರಿ ನಮ್ಮ ಸಂಸ್ಕೃತಿ ಸಂಪ್ರದಾಯದ ಉಡುಗೆ ತೊಡುಗೆಗಳನ್ನು ಮರೆತು ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಂಡು ಮಾರಣಾಂತಿಕ ಹಲ್ಲೆಗಳಿಗೂ ಬಲಿಯಾಗುತ್ತಿದ್ದಾಳೆ.

ಏನೆಲ್ಲ ಸಾಧಿಸುವ ಛಲವಿರುವ ಹೆಣ್ಣು ಅಹಂಭಾವದಿಂದ ನಮ್ಮ ಸಂಸ್ಕೃತಿ ರೀತಿ ನೀತಿಯನ್ನು ಮರೆತು ಪಾಶ್ಚಾತ್ಯ ಸಂಸ್ಕೃತಿಗೆ ಮರುಳಾಗಿ ಹೊಂದಾಣಿಕೆಯನ್ನು ಮರೆತರೆ ಹೆಣ್ಣಿಗೆ ಅಪಾಯ ಕಟ್ಟಿಟ್ಟ ಬುತ್ತಿ. ಮೂರು ಹೊತ್ತು ಜೀವಕ್ಕೆ ಕುತ್ತು ತರುವ ಸುದ್ದಿಗಳನ್ನು ಟಿವಿ ಮತ್ತು ದಿನಪತ್ರಿಕೆಗಳಲ್ಲಿ ನೋಡಿ ಓದಿ ಮರುಗುತ್ತೇವೆ. ಮನೆಯ ಮಗಳನ್ನು ಮಣ್ಣಲ್ಲಿಟ್ಟು ಜೀವ ಹಿಂಡಿಕೊಳ್ಳುತ್ತಿರುವ ಪಾಲಕರು ಅಸಂಖ್ಯ.

ಅತ್ಯಮೂಲ್ಯವಾದ ಜೀವನವನ್ನು ನೀರ ಮೇಲಿನ ಗುಳ್ಳೆಯಂತೆ ನೀರ ಪಾಲಾಗಿಸುವುದಕ್ಕೆ ಕಾರಣ ನಮ್ಮ ಶ್ರೀಮಂತ ಸಂಸ್ಕೃತಿಗೆ ಬೆನ್ನು ತೋರಿ ಪಾಶ್ಚಾತ್ಯ ಸಂಸ್ಕೃತಿಗೆ ಮುಖ ಮಾಡಿರುವದೂ ಒಂದು ಮುಖ್ಯ ಕಾರಣವಾಗಿದೆ. ಹೆಣ್ಣು ದೈವೀ ಶಕ್ತಿಯನ್ನು ಹೊಂದಿದ್ದಾಳೆ. ಅವಳು ಸಹನಾಮಯಿ ಕ್ಷಮೆಯಾ ಧರಿತ್ರಿ ಎಂಬುದನ್ನು ಮರೆತು ಫ್ಯಾಶನ್ ಮತ್ತು ಫ್ಯಾನ್ಸಿ ಲೋಕಕ್ಕೆ ಕಾಲಿಟ್ಟು ಅಂದ ಚೆಂದದ ಹೆಸರಿನಲ್ಲಿ ಮೈಚೆಲ್ಲಿ ತಾನೂ ಹೇಳ ಹೆಸರಿಲ್ಲದಂತಾಗುವದು ಎಷ್ಟು ಸರಿ. ಸೃಜನಶೀಲತೆಗೆ, ಕ್ರಿಯಾಶೀಲತೆಗೆ, ನಾವೀನ್ಯತೆಗೆ ಹೆಣ್ಣು ತನ್ನನ್ನು ಒಡ್ಡಿಕೊಳ್ಳಲಿ ಹಾಗಂತ ಪರಿಸ್ಥಿತಿ ಕೈಮೀರಿ ಹೋಗಿ ಬಿಗಡಾಯಿಸುವಷ್ಟರ ಮಟ್ಟಿಗೆ ತನ್ನನ್ನು ತಾನು ಮರೆಯುವದು ನಿಜಕ್ಕೂ ಅಪಾಯಕಾರಿ ಮತ್ತು ಕಳವಳಕಾರಿ ಸಂಗತಿ ಎನ್ನುವದು ಈಗಾಗಲೇ ಸಾಬೀತಾಗಿದೆ.

ಆಧುನಿಕತೆಯ ಹೆಸರಿನಲ್ಲಿ ನಮ್ಮ ಸತ್ಸಂಪ್ರದಾಯದ ಸಂಕೇತವಾಗಿರುವ ಕುಂಕುಮ ಬೊಟ್ಟು,ಅರಿಷಿಣ, ಕೈಬಳೆ ,ಕಾಲಗೆಜ್ಜೆಗಳನ್ನು ತೊರೆಯುತ್ತಿರುವದು ಸಾಂಪ್ರದಾಯಿಕ ಉಡುಗೆಗಳಾದ ಸೀರೆ ಚೂಡಿದಾರಗಳಿಗೆಲ್ಲ ಗುಡ್ ಬೈ ಹೇಳುತ್ತಿರುವದು ಶೋಚನೀಯ ವಿಚಾರ. ನಮ್ಮತನವನ್ನು ಕಾಪಿಟ್ಟುಕೊಂಡು ಬೆಳೆಸಬೇಕಾದವಳೇ ಹೀಗೆ ನಿರ್ಲಕ್ಷಿಸಿದರೆ ನಮ್ಮ ಸಂಸ್ಕೃತಿಯ ಗತಿ ಅಧೋಗತಿ. ಇದು ಬೇಲಿಯೇ ಎದ್ದು ಹೊಲ ಮೇಯ್ದಂತಾಗುತ್ತದೆ. ಇದರರ್ಥ ಸದಾ ಸೀರೆಗೆ ಅಂಟಿಕೊAಡಿರಬೇಕು ವಿವಿಧ ವಸ್ತç ವಿನ್ಯಾಸಗಳನ್ನು ಮರೆಯಬೇಕಂತಲ್ಲ. ನಿನ್ನ ನೀನು ಮರೆತರೇನು ಸುಖವಿದೆ ನಿನ್ನತನವ ತೊರೆದರೇನು ಸೊಗಸಿದೆ ಎನ್ನುವ ಗೀತೆಯಂತೆ ನಮ್ಮ ಸುಖ ಸೊಗಸುಗಳನ್ನು ಕಳೆದುಕೊಂಡು ಹುಡುಕಬೇಕಾಗುತ್ತದೆ. ವೇಷ ಭೂಷಣಗಳಿಂದ ವ್ಯಕ್ತಿಯ ವ್ಯಕ್ತಿತ್ವವನ್ನು ಅಳೆಯಬಾರದೆಂಬ ಮಾತೆನೋ ಇದೆ. ಆದರೆ ಉಡುಗೆ ತೊಡುಗೆಗಳನ್ನು ಸಂದರ್ಭೋಚಿತವಾಗಿ ಬಳಸುವದರಲ್ಲಿ ತಪ್ಪೇನಿಲ್ಲ.

ನಾವು ಆಧುನಿಕತೆಯೊಂದಿಗೆ ಕಾಲು ಹಾಕುತ್ತಿದ್ದೇವೆ ಎಂದು ತೋರಿಸಿಕೊಳ್ಳಲು ನಾವು ಹಾಕಿಕೊಳ್ಳುವ ಬಟ್ಟೆ ಬರೆಗಳೆ ಆಗಬೇಕಿಂದಿಲ್ಲ. ನಮ್ಮಲ್ಲಿರುವ ಮೌಡ್ಯ ಆಚರಣೆಗಳಿಗೆ ನಂಬಿಕೆಗಳಿಗೆ ತಿಲಾಂಜಲಿಯಿಟ್ಟು ಹಳೆಯದಾದರೂ ನಮಗೆ ಹಿತಾನಂದ ನೀಡುವಂತಹ ಹೆಮ್ಮೆ ಮೂಡಿಸುವಂತಹ ವಸ್ತ್ರ ವಿನ್ಯಾಸವನ್ನು ರೂಢಿಸಿಕೊಳ್ಳುವದೂ ಮಹಿಳೆಯರ ಹೊಣೆಗಾರಿಕೆಯಲ್ಲಿ ಪ್ರಮುಖ ಸ್ಥಾನ ಪಡೆಯುತ್ತದೆ. ಬಹಳ ಕಲಿತಿಹೆವೆಂದು ಹಮ್ಮು ಬಿಮ್ಮುಗಳನ್ನು ಚಟವಾಗಿಸಿಕೊಳ್ಳದೇ ನಯ ವಿನಯ ಸೌಜನ್ಯದ ನಡುವಳಿಕೆಗಳನ್ನು ಎತ್ತಿ ಹಿಡಿಯಬೇಕು.

ಹಿಂದಿನಂತೆ ಮಹಿಳೆ ನಾಲ್ಕು ಗೋಡೆಗಳಲ್ಲಿ ಬಂಧಿಯಾಗಿಲ್ಲ. ದುಡಿಯುವ ಮಹಿಳೆಯಾಗಿ ನಾನಾ ಕಛೇರಿಗಳಲ್ಲಿ ಮಿಂಚುತ್ತಿದ್ದಾಳೆ. ದಿನನಿತ್ಯದ ಮನೆಗೆಲಸ ಮುಗಿಸಿ ಗಡಿಬಿಡಿಯಲ್ಲಿ ಊರಿಂದ ಊರಿಗೆ ಓಡಾಡುವ ಓಟಕ್ಕೆ ಬಸ್ ರೈಲುಗಳಲ್ಲಿ ಪಯಣಿಸುವ ಮಹಿಳೆಯರಿಗೆ ಸೀರೆ ಹಲವಾರು ಬಾರಿ ತೊಡರು ಕಿರಿ ಕಿರಿ ಎನಿಸುವದುಂಟು. ಅಂಥ ಸಂದರ್ಭಗಳಲ್ಲಿ ಚೂಡಿ, ಸೆಲ್ವಾರ ಕಮೀಜ್ ಗಳನ್ನು ತೊಟ್ಟು ಸುಖಕರವಾಗಿ ಪಯಣಿಸುವದು ಒಳಿತು. ಹಾಗಂತ ಧಾರ್ಮಿಕ ಕಾರ್ಯಕ್ರಮಗಳಿಗೆ ಹಾಜರಾಗುವಾಗ ದೇವಾಲಯಗಳಿಗೆ ಭೇಟಿಕೊಟ್ಟಾಗ ಹಬ್ಬ ಹರಿದಿನಗಳಂದು ಪೂಜಾ ಸಮಾರಂಭಗಳಲ್ಲಿ ಭಾರತೀಯ ಸಂಸ್ಕೃತಿಯ ವಿಶೇಷ ಪ್ರತೀಕವಾದ ಸೀರೆಯೇ ಹೆಚ್ಚು ಒಪ್ಪುವದು. ಮತ್ತು ಮಹಿಳೆಯರ ಅಂದ ಚೆಂದದ ಮೆರಗು ಹೆಚ್ಚಿಸುವದು.
ವೇಗಾವೇಗದ ಬದುಕಿನಲ್ಲಿ ಮಹಿಳೆ ಬೌದ್ಧಿಕವಾಗಿ ಇಷ್ಟೆಲ್ಲ ಸಾಧಿಸಿದ್ದನ್ನು ನಾವೆಲ್ಲ ಮೆಚ್ಚಲೇಬೇಕು ನಿಜ. ಆದರೆ ಸಾಧಿಸುವ ನಾಗಾಲೋಟದ ಭರದಲ್ಲಿ ನಮ್ಮ ರೀತಿ ನೀತಿ ಸಂಸ್ಕಾರ ಸಂಪ್ರದಾಯ ಸಂಸ್ಕೃತಿಗಳನ್ನು ತೊರೆಯುವದು ನೂರಕ್ಕೆ ನೂರರಷ್ಟು ಖಂಡನೀಯ. ಆಧುನಿಕತೆಯ ಹೆಸರಿನಲ್ಲಿ ಹೆಣ್ಣು ತನ್ನತನವನ್ನು ಮರೆಯುತ್ತಿರುವದು ಶುದ್ಧ ತಪ್ಪು. ಪ್ರೀತಿ ಗೌರವ ಉಕ್ಕಿಸುವಂತ ಮೈಮನ ಬೆಳಗುವಂತ ಹೆಣ್ತನದ ಸಂಕೇತಗಳನ್ನು ವಿಶೇಷತೆಗಳನ್ನು ಉಳಿಸಿಕೊಂಡೇ ಪ್ರಗತಿಯತ್ತ ಕಾಲು ಹಾಕಬಹುದಲ್ಲವೆ? ಇದರತ್ತ ಕೊಂಚ ಗಮನಹರಿಸಿ ಕಾರ್ಯಾನುಷ್ಟಾನಕ್ಕೆ ತಂದರೆ ಸಾಕು. ಅಪ್ಪಟ ಭಾರತೀಯ ನಾರಿಯ ಮುಂದೆ ಕೆಟ್ಟ ದೃಷ್ಟಿಯ ದುಷ್ಟ ಶಕ್ತಿಯ ಆಟ ನಡೆಯುವದೇ ಇಲ್ಲ. ಆಗ ಏನಿದ್ದರೂ ಮಹಿಳೆ ತಾಯಿ, ಸಹೋದರಿಯರ ರೂಪ ದೈವೀ ಸ್ವರೂಪ. ಹಾಗಾದರೆ ಇನ್ನು ಮುಂದೆ ನಮ್ಮತನವನು ಮರೆಯದೇ ಹೆಜ್ಜೆ ಹಾಕಿ ಸುಖಕರವಾದ ಸೊಗಸಾದ ಜೀವನವನ್ನು ನಮ್ಮದಾಗಿಸಿಕೊಳ್ಳೋಣವೇ?


ಜಯಶ್ರೀ. ಜೆ. ಅಬ್ಬಿಗೇರಿ
ಆಂಗ್ಲ ಭಾಷಾ ಉಪನ್ಯಾಸಕರು
ಬೆಳಗಾವಿ ೯೪೪೯೨೩೪೧೪೨

Latest articles

More like this