ರಗಳೆಗಳ ಕವಿಯೆಂದು ಪ್ರತೀತಿ ಪಡೆದ ಹರಿಹರ ಬಸವೋತ್ತರ ಕಾಲದ ಬಹು ಮುಖ್ಯ ಶಿವಾನುಭವಿ ಕವಿ. ಅಲಂಕಾರ ಪವಾಡಗಳನ್ನು ಬಳಸಿ ಅತ್ಯಂತ ಮನಮುಟ್ಟುವ ಭಕ್ತಿ ಪ್ರಧಾನವಾದ ರಗಳೆಗಳನ್ನು ರಚಿಸಿದ್ದಾನೆ. ಹರಿಹರ ಬ್ರಾಹ್ಮಣನಾದರೂ ಸಹಿತ ಮಾದಾರ ಚೆನ್ನಯ್ಯ ಮತ್ತು ತಳ ಸಮುದಾಯದ ಶರಣರ ಜೀವನ ಚರಿತ್ರೆ ಕಟ್ಟಿ ಕೊಡುವಲ್ಲಿ ಹೆಸರುವಾಸಿಯಾಗಿದ್ದಾನೆ.
೧೨ನೆಯ ಶತಮಾನದ ಉತ್ತರಾರ್ಧದಲ್ಲಿದ್ದ ಶೈವ ಕವಿ.ಈತನ ಸೋದರಳಿಯನೆ ರಾಘವಾಂಕ.ಹರಿಹರನು ಕೆಲವು ಕಾಲ ನರಸಿಂಹ ಬಲ್ಲಾಳ ರಾಜನಲ್ಲಿ ಕರಣಿಕನಾಗಿದ್ದ.ಹುಟ್ಟಿದ್ದು ಹಂಪೆಯಲ್ಲಿ. ತಂದೆ ಮಹದೇವ ಭಟ್ಟ, ತಾಯಿ ಶರ್ವಾಣಿ,ತಂಗಿ ರುದ್ರಾಣಿ. ಈಕೆ ರಾಘವಾಂಕನ ತಾಯಿ. ಗುರು ಮಾಯಿದೇವ.ಆರಾಧ್ಯ ದೈವ ಹಂಪೆಯ ವಿರೂಪಾಕ್ಷ.
ಈತ “ರಗಳೆಗಳ ಕವಿ” ಎಂದೆ ಪ್ರಸಿದ್ಧನಾಗಿದ್ದಾನೆ. ಹನ್ನೆರಡನೆಯ ಶತಮಾನದ ಬಹು ಮಹತ್ವದ ಶರಣ ಚಳವಳಿ ಮತ್ತು ವಚನ ಸಾಹಿತ್ಯದ ಪ್ರಭಾವವು ಹರಿಹರನ ಮೇಲೆ ದಟ್ಟವಾಗಿದೆ. ಮೂಲತಃ ಆತನು ಭಕ್ತ ಕವಿ. ಆತನ ಕಾವ್ಯದ ತುಂಬ ಭಕ್ತಿಯು ಓತಪ್ರೋತವಾಗಿ ಹರಿದಿದೆ. ಹರಿಹರನ ಎರಡೂ ಶತಕಗಳಲ್ಲಿ ಆತನು ಹಂಪೆಯ ಶ್ರೀ ವಿರೂಪಾಕ್ಷನಲ್ಲಿ ತಳೆದಿರುವ ಭಕ್ತಿಯು ಎದ್ದು ಕಾಣುತ್ತದೆ. ಅಂತೆಯೇ ಆತನ ಶಿವಗಣದ ರಗಳೆಗಳಲ್ಲಿ ಶಿವಶರಣರ ಶಿವಭಕ್ತಿಯ ಉಜ್ವಲ ಚಿತ್ರಣವಿದೆ.
ಹರಿಹರನ ಶತಕದ್ವಯವು ಪ್ರಮುಖವಾಗಿ ಆತನ ಆತ್ಮಕಥನಗಳೇ ಆಗಿವೆ. ಗಿರಿಜಾ ಕಲ್ಯಾಣವು ಹರಿಹರನ ಮಹೋನ್ನತ ಚಂಪೂ ಕಾವ್ಯವಾಗಿದೆ. ಆವರೆಗಿನ ಕನ್ನಡ ಚಂಪೂ ಕೃತಿಗಳಲ್ಲಿ ಕಾಣದ ಕಥಾ ವಿಷಯವು ಇಲ್ಲಿದೆ. ಶೈವ ಪುರಾಣ ಗಳಲ್ಲಿ ಕಂಡು ಬರುವ ಶಿವಪಾವ೯ತಿಯರ ವಿವಾಹದ ಕಥೆ ಗಿರಿಜಾ ಕಲ್ಯಾಣದ ವಸ್ತು. ಗಿರಿಜೆಯ ಜನನದಿಂದ ಶಿವನೊಡನೆ ಅವಳ ವಿವಾಹದವರೆಗೆ ಮನೋಜ್ಞವಾಗಿ ಅವಳ ಸೌಂದಯ೯, ಸೊಬಗು, ಭಕ್ತಿಯ ಕಠೋರತೆ ಇವುಗಳನ್ನು ಸೂಕ್ಷ್ಮವಾಗಿ ಕವಿಯು ಚಿತ್ರಿಸಿದ್ದಾನೆ.
*ಹರಿಹರನ ಕೃತಿಗಳು*
ಗಿರಿಜಾ ಕಲ್ಯಾಣ ಎಂಬ ಚಂಪೂಕಾವ್ಯ,
ಪಂಪಾಶತಕ,
ರಕ್ಷಾಶತಕ,
ಮುಡಿಗೆಯ ಅಷ್ಟಕ .
ಶಿವ ಶರಣರ ರಗಳೆಗಳನ್ನೂ ರಚಿಸಿದ್ದಾರೆ.ಇವುಗಳಲ್ಲಿ ಅರುವತ್ತಮೂರು ಪುರಾತನರು ಶಿವ ಶರಣರ ರಗಳೆಗಳು ಇವೆ.
*ಹರಿಹರನ ರಗಳೆಗಳು*
ಹರಿಹರನ ರಗಳೆಗಳಂತೂ ಆತನ ಹೆಸರನ್ನು ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಅಜರಾಮರಗೊಳಿಸಿರುವ ಅಮರ ಕೃತಿಗಳು. ಹರಿಹರನ ನೈಜಪ್ರತಿಭೆಯು ಇಲ್ಲಿ ಗೋಚರಿಸುತ್ತದೆ. ಅವನ ರಗಳೆಗಳ ಸಂಖ್ಯೆಗಳ ಬಗ್ಗೆ ಗೊಂದಲವಿದೆಯಾದರೂ, ಅವುಗಳ ಸಂಖ್ಯೆಯು ೧೦೬ ಎಂದು ಬಹುತೇಕರ ಅಭಿಪ್ರಾಯವಾಗಿದೆ. ವಿವಿಧ ಗಾತ್ರದ, ಬೇರೆ ಬೇರೆ ಶಿವಶರಣರ ಕಥೆಗಳನ್ನು ಈ ರಗಳೆಗಳಲ್ಲಿ ಹೇಳಲಾಗಿದೆ. ಮುಖ್ಯವಾಗಿ ೬೩ ಪುರಾತನರ, ಅಂದರೆ ತಮಿಳಿನ ‘ಪೆರಿಯ ಪುರಾಣ’ದಲ್ಲಿ ಹೇಳಲಾಗಿರುವ ೬೩ ಶಿವಭಕ್ತರ ಕಥೆಗಳು ಇಲ್ಲಿವೆ.
‘ಬಸವರಾಜದೇವರ ರಗಳೆ’,
‘ತಿರುನೀಲಕಂಠದೇವರ ರಗಳೆ’,
‘ನಂಬಿಯಣ್ಣನ ರಗಳೆ’,
‘ಮಹಾದೇವಿಯಕ್ಕನ ರಗಳೆ’,
‘ಪ್ರಭುದೇವರ ರಗಳೆ’,
‘ಕುಂಬಾರ ಗುಂಡಯ್ಯನ ರಗಳೆ’,
‘ಮಾದಾರ ಚೆನ್ನಯ್ಯ’ನ ರಗಳೆ
‘ಇಳೆಯಾಂಡ ಗುಡಿಮಾರ’ನ ರಗಳೆ ಮತ್ತು
‘ರೇವಣಸಿದ್ಧೇಶ್ವರ ರಗಳೆಗಳು’ ಹರಿಹರನ ಪ್ರಮುಖ ರಗಳೆಗಳು.
ವಚನಕಾರರ ಜೀವನ ಚಿತ್ರಣಕ್ಕೆ ಆಕರವಾಗಿ ಹರಿಹರನ ರಗಳೆಗಳನ್ನು ಪರಿಗಣಿಸಿದರೂ ಸಹಿತ ಪವಾಡ ಮತ್ತು ವೈಭವೀಕರಣದ ನಿಯಂತ್ರಣವು ಅಗತ್ಯವಾಗಿದೆ. ಬಸವಕಾಲೀನ ಶರಣರ ಬಗ್ಗೆ ಕಾವ್ಯ ಸೃಷ್ಟಿ ಮಾಡುವಾಗ ಅಭಿಮಾನ ಮತ್ತು ಭಕ್ತಿಯ ಪರಾಕಾಷ್ಠತೆಗೆ ಒಳಪಟ್ಟು ಭಾವುಕನಾಗುವ ಕವಿ ನೈಜ ಚಿತ್ರಣ ಜೊತೆಗೆ ಅತ್ಯಂತ ಹೊಗಳಿಕೆ ಒಳಪಡಿಸಿದ ಸಂಗತಿಗಳು ಎದ್ದು ಕಾಣುತ್ತವೆ. ಆದರೆ ಶರಣರ ವಚನಗಳಲ್ಲಿ ವೈಚಾರಿಕತೆಯು ಎದ್ದು ಕಾಣುವಾಗ ಹರಿಹರನ ಭಾವುಕತೆ ಭಕ್ತಿ ಪರವಶವು ಗೌಣವೆನಿಸುತ್ತವೆ. ಸಾಂಪ್ರದಾಯಕ ಓದುಗರು ಹರಿಹರನನ್ನು ಶರಣರ ಜೀವನ ಚರಿತ್ರೆಗೆ ಪೂರಕ ಆಕಾರವೆಂದು ಪರಿಗಣಿಸುತ್ತಾರೆ. ನನ್ನ ವ್ಯಕ್ತಿಗತ ಅಭಿಮತದಲ್ಲಿ ಹರಿಹರನ ಅತಿಯಾದ ಹೊಗಳಿಕೆ ಒಂದು ಹಂತದಲ್ಲಿ ಶರಣರ ಆಂದೋಲನ ಕ್ರಾಂತಿಗೆ ಹಿಂದೇಟು ಎಂದೆನಿಸುವದರಲ್ಲಿ ಎರಡು ಮಾತಿಲ್ಲ.
ಡಾ.ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ