ಇಸ್ರೊ ಯುವ ವಿಜ್ಞಾನಿ ರಮೇಶ ಭೀಮಪ್ಪ ಬಾರ್ಕಿ ಅವರ ಪರಿಚಯ
ಗ್ರಾಮೀಣ ಪ್ರತಿಭೆಯೊಂದು ದೇಶವ್ಯಾಪಿ ಪ್ರಜ್ವಲಿಸಿ ತನ್ನ ಕೀರ್ತಿ ಪತಾಕೆ ಹಾರಿಸಿದಾಗ ಹೆತ್ತಪ್ಪ ಅಮ್ಮನಿಗೆ, ಊರಿನ ಹಾಗೂ ತಾಲೂಕಿನ ಜನತೆಗೆ, ಆಗುವ ಸಂತಸಕ್ಕೆ ಪಾರವೇ ಇಲ್ಲ. ಅಂತಹ ಸಾಧನೆಯನ್ನು ಯಾಲಕ್ಕಿ ಕಂಪಿನ ನಾಡು ಹಾವೇರಿ ಜಿಲ್ಲೆಯ ಹಾನಗಲ್ಲ ತಾಲೂಕಿನ ಮಾರನಬೀಡ ಗ್ರಾಮದ ಕುವರ ರಮೇಶ್ ಬಾರ್ಕಿ ಅವರು ಮಾಡಿದ್ದಾರೆ. ಯುವ ಜನತೆಗೆ ಮಾದರಿಯಾಗಿ, ಕಠಿಣ ಪರಿಶ್ರಮ ಹಾಗೂ ಗುರು ಹಿರಿಯರ ಆಶೀರ್ವಾದಕ್ಕೆ ಸಾಕ್ಷಿ ನಮ್ಮ ಜಿಲ್ಲೆಯ ಕುವರ ಆಗಿದ್ದಾನೆ.
ಸುಮಾರು ನಾಲ್ಕೈದು ದಶಕಗಳ ಹಿಂದೆ ಗ್ರಾಮ ಪಂಚಾಯಿತಿ ಸಿಪಾಯಿಯ ಮಗನಾಗಿ ಜನಿಸಿದ ವ್ಯಕ್ತಿಯೊಬ್ಬರು ಶಿಕ್ಷಣ ಪಡೆದು ಪವಿತ್ರ ಶಿಕ್ಷಕ ವೃತ್ತಿ ಜೀವನದಲ್ಲಿ ಮುಂದೆ 2011-12 ನೆಯ ಶೈಕ್ಷಣಿಕ ವರ್ಷದ ಸಾಲಿನಲ್ಲಿ ಕರ್ನಾಟಕದ ಯಾಲಕ್ಕಿ ನಾಡಿನಿಂದ ರಾಷ್ಟ್ರಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿ, ಅಂದಿನ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರಿಂದ ರಾಷ್ಟ್ರ ಉತ್ತಮ ಶಿಕ್ಷಕ ಪ್ರಶಸ್ತಿ ಸ್ವೀಕರಿಸಿದ ಗುರುವರ್ಯ ಭೀಮಪ್ಪ ಬಾರ್ಕಿ ಅವರು ಪ್ರಸ್ತುತ ಹಾನಗಲ್ಲ ತಾಲೂಕಿನ ಹುಣಸಿಕಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಧಾನ ಗುರುಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಮಗನೇ ಹಳ್ಳಿಯಿಂದ ಹೈದ್ರಾಬಾದ್ ವರೆಗೆ ತನ್ನ ಪ್ರಯಾಣ ಬೆಳೆಸಿದ ಸಾಧಕ ರಮೇಶ ಭೀಮಪ್ಪ ಬಾರ್ಕಿ.
ಆತ್ಮೀಯರೇ ಒಂದು ಶ್ಲೋಕವಿದೆ ಏನೆಂದರೆ..
ಕಾಕಚೇಷ್ಠಾ ಬಕಧ್ಯಾನಂ
ಶ್ವಾನನಿದ್ರಾ ತಥೈವ ಚ ।
ಅಲ್ಪಾಹಾರಿ ಗೃಹತ್ಯಾಗಿ
ವಿದ್ಯಾರ್ಥಿ ಪಂಚ ಲಕ್ಷಣಮ್ ॥ ಅಂದರೆ..
ಕಾಗೆಯಂತೆ ಪರಿಶ್ರಮ, ಕೊಕ್ಕರೆಯಂತೆ ಏಕಾಗ್ರತೆ, ನಾಯಿಯಂತೆ ಎಚ್ಚರಿಕೆಯ ನಿದ್ದೆ, ಕಡಿಮೆ ಆಹಾರ, ಮನೆಯ ಸುಖ ತ್ಯಜಿಸುವ ಮನಸ್ಸು “ಇವು ವಿದ್ಯಾರ್ಥಿಯ ಐದು ಗುಣಗಳು”. ಇದನ್ನು ಏಕೆ ಇಲ್ಲಿ ಪ್ರಸ್ತಾಪ ಮಾಡಿದೆನೆಂದರೆ ಅಂತಹ ಗುಣ ಲಕ್ಷಣವನ್ನು ಹೊಂದಿ, ದೊಡ್ಡ ಸಾಧನೆ ಮಾಡಿದ ಕೀರ್ತಿ ನಮ್ಮ ಹಾವೇರಿ ಜಿಲ್ಲೆಯ ಹಾನಗಲ್ಲ ತಾಲೂಕಿನ ಮಾರನಬೀಡ ಗ್ರಾಮದ ಯುವಕನದ್ದು. ಈ ಐದು ಲಕ್ಷಣಗಳನ್ನು ಯಾರೇ ಹೊಂದಿದ್ದರೂ ಅವರು ಮುಂದೆ ಸಾಧನೆ ಮಾಡಿಯೇ ಮಾಡುತ್ತಾರೆ. ಅತಿ ಕಡು ಬಡತನದಲ್ಲಿಯೂ ಅಂಬೇಡ್ಕರ್ ಅವರು ಛಲದಿಂದ ಓದಿ ಭಾರತ ಸಂವಿಧಾನವನ್ನೇ ಬರೆದರು, ಇಂತಹ ಪರಿಶ್ರಮದ ಎಷ್ಟೋ ಉದಾಹರಣೆಗಳು ನಮ್ಮಲ್ಲಿ ಸಿಗುತ್ತವೆ. ಇವುಗಳನ್ನು ಇಂದಿನ ಯುವ ಪೀಳಿಗೆ ಅರ್ಥ ಮಾಡಿಕೊಂಡು ತಂದೆ ತಾಯಿಗಳ ಶ್ರಮ ಹಾಗೂ ಅವರ ಇಂಗಿತವನ್ನು ತಿಳಿದು ವಿದ್ಯಾರ್ಥಿ ಜೀವನದಲ್ಲಿ ಕಷ್ಟಪಟ್ಟು ಓದುವುದನ್ನು ಕಲಿಯಬೇಕು.
ಬನ್ನಿ ರಮೇಶ್ ಬಾರ್ಕಿ ಅವರ ಬಗ್ಗೆ ತಿಳಿಯೋಣ..
ರಮೇಶ ಬಾರ್ಕಿ ಅವರು ಭೀಮಪ್ಪ ಹಾಗೂ ಗೌರಮ್ಮ ದಂಪತಿಗಳ ಮಗನಾಗಿ ಹಾನಗಲ್ಲ ತಾಲೂಕಿನ ಮಾರನಬೀಡ ಗ್ರಾಮದಲ್ಲಿ 1999 ಜೂನ್ 2 ರಂದು ಜನಿಸುತ್ತಾರೆ. ಹಾನಗಲ್ಲ ತಾಲೂಕಿನಲ್ಲಿ ಪವಿತ್ರ ಶಿಕ್ಷಕ ಸೇವೆಗೈದ ಬಿ ಆರ್ ಬಾರ್ಕಿ ಗುರುಗಳ ಹಿರಿಯ ಮಗನೇ ಇಂದು ಇಸ್ರೋ ಬಾಹ್ಯಾಕಾಶ ಸಂಸ್ಥೆಯಲ್ಲಿ ವಿಜ್ಞಾನಿಯಾಗಿ ಕಾರ್ಯನಿರ್ವಹಿಸುತ್ತಿರುವ ಹೆಮ್ಮೆಯ ಕುವರ. ನಾಡಿನ ಪ್ರತಿಯೊಬ್ಬ ವಿದ್ಯಾರ್ಥಿಗಳೂ ( ಮಕ್ಕಳೂ ) ಆದರ್ಶವಾಗಿಟ್ಟುಕೊಳ್ಳಬೇಕಾದ ಸಾಧಕ ರಮೇಶ ಬಾರ್ಕಿ. ತಂದೆಯ ಆದರ್ಶ, ಕಾಯಕ ನಿಷ್ಠೆ, ಪ್ರಾಮಾಣಿಕ ಸೇವೆ, ತಾಯಿಯ ಮಾತೃ ವಾತ್ಸಲ್ಯ, ಕಟ್ಟುನಿಟ್ಟಿನ ಜೀವನ ಕ್ರಮಗಳು ರಮೇಶ್ ಅವರಿಗೆ ತಮ್ಮ ಜೀವನದ ದಾರಿದೀಪವಾಗಿ ಪರಿಣಮಿಸಿದೆ.
ರಮೇಶ ಅವರು ಪ್ರಾಥಮಿಕ ಶಿಕ್ಷಣವನ್ನು (1 ರಿಂದ 5) ಹಾನಗಲ್ಲ ತಾಲೂಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಾರನಬೀಡದಲ್ಲಿ ಪಡೆದು “ಬೆಳೆಯುವ ಸಿರಿ ಮೊಳಕೆಯಲ್ಲಿ ” ಎಂಬಂತೆ ನವೋದಯ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಮಾಧ್ಯಮಿಕ ಶಿಕ್ಷಣವನ್ನು (6 ರಿಂದ 12 ನೇ ತರಗತಿ) ಜವಾಹರ ನವೋದಯ ವಿದ್ಯಾಲಯದಲ್ಲಿ ಪಡೆದರು. (ಗುಂಡೂರು, ಮಹಾರಾಜ ಪೇಟೆ, ಹಾವೇರಿ ಜಿಲ್ಲೆ). ನಂತರ 4 ವರ್ಷಗಳ ಬಿ.ಎಸ್ಸಿ ವೃತ್ತಿ ಪದವಿ ವ್ಯಾಸಂಗವನ್ನು ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಕಾಲೇಜಿನಲ್ಲಿ ಫಾರೆಸ್ಟ್ರಿ ಪದವಿ ಪಡೆದರು. ಆ ನಂತರ ಎರಡು ವರ್ಷಗಳ ಎಂ.ಎಸ್ಸಿ ಸ್ನಾತ್ತಕೋತ್ತರ ಪದವಿಯನ್ನು (ಫಾರೆಸ್ಟ್ರಿ) ಭುವನೇಶ್ವರ ವಿಶ್ವವಿದ್ಯಾಲಯ ಒರಿಸ್ಸಾ ರಾಜ್ಯದಲ್ಲಿ ಮುಗಿಸಿದರು. ಅಲ್ಲಿ ಬಂಗಾರ ಪದಕದೊಂದಿಗೆ ತೇರ್ಗಡೆಯಾದರು (ಗೋಲ್ಡ್ ಮೆಡಲಿಸ್ಟ್). ಮುಂದೆ ತಮ್ಮ ವಿದ್ಯಾಭ್ಯಾಸ ಫಾರೆಸ್ಟ್ರಿ ಉನ್ನತ ವ್ಯಾಸಂಗವನ್ನು ಫಿನ್ಲ್ಯಾಂಡ್ ದೇಶದಲ್ಲಿ ಮುಗಿಸಿ ಉತ್ತಮ ಶಿಕ್ಷಣ ಪಡೆದರು. ನಂತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಾ 2025 ರ ಜೂನ್ ತಿಂಗಳಲ್ಲಿ ಇಸ್ರೋ ಬಾಹ್ಯಾಕಾಶ ಸಂಸ್ಥೆಯ ವಿಜ್ಞಾನಿಗಳ ಆಯ್ಕೆ ಪರೀಕ್ಷೆ ಎದುರಿಸಿದರು. ನಂತರ ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗೆ ಸ್ಪರ್ಧಾತ್ಮಕ ಪರೀಕ್ಷೆ ಬರೆದು ಅದರಲ್ಲಿಯೂ ಉತ್ತೀರ್ಣರಾದರು. ಇಷ್ಟೆಲ್ಲಾ ಪರಿಶ್ರಮ, ಶಿಕ್ಷಣ ಪಡೆದ ರಮೇಶ್ ಬಾರ್ಕಿ ಅವರು ಕೊನೆಗೂ ತಮ್ಮ ಕಠಿಣ ಪರಿಶ್ರಮ, ಗುರು ಹಿರಿಯರ ಆಶೀರ್ವಾದದೊಂದಿಗೆ ಅದೃಷ್ಟದ ಬಾಗಿಲನ್ನು ತೆರೆದೇ ಬಿಟ್ಟರು. ಅದುವೇ 2026 ರ ಜನೇವರಿ ತಿಂಗಳಲ್ಲಿ ಹೈದ್ರಾಬಾದ್ ಇಸ್ರೋ ಬಾಹ್ಯಾಕಾಶ ಸಂಸ್ಥೆಯ ಫಲಿತಾಂಶ ಪ್ರಕಟವಾಗಿ ವಿಜ್ಞಾನಿಯಾಗಿ ಆಯ್ಕೆ.
“ವಿದ್ಯೆ ಸಾಧಕನ ಸ್ವತ್ತೆ ಹೊರತು ಸೋಮಾರಿಯ ಸ್ವತ್ತಲ್ಲ” ಎಂಬ ಮಾತಿಗೆ ಪ್ರತೀಕ ನಮ್ಮ ಹಾವೇರಿ ಜಿಲ್ಲೆಯ ಕುವರ ರಮೇಶ್ ಬಾರ್ಕಿ. ಇಂತಹ ಸಾಧಕರು ಮನೆ ಮನೆಯಲ್ಲಿ ಇದ್ದರೆ ತಂದೆ ತಾಯಿಗಳಿಗೂ, ಊರಿಗೂ, ನಾಡಿಗೂ ಕೀರ್ತಿ ಸಿಗುವದಲ್ಲದೆ ಇಂದಿನ ಯುವ ಜನತೆಗೆ ಸ್ಫೂರ್ತಿಯಾಗುವರು.
ಪ್ರಸ್ತುತ ಹಾವೇರಿ ಜಿಲ್ಲೆಯ ಹಾನಗಲ್ಲ ತಾಲೂಕಿನ ಮಾರನಬೀಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಗುರುಗಳಾಗಿ ಸೇವಿ ಸಲ್ಲಿಸುತ್ತಿರುವ ಶ್ರೀ ಬಿ ಆರ್ ಬಾರ್ಕಿ ಇವರು ತಮ್ಮ ಮಗನ ಸಾಧನೆಗೆ ಅತ್ಯಂತ ಸಾರ್ಥಕ ಧನ್ಯ ಭಾವವನ್ನು ವ್ಯಕ್ತಪಡಿಸುತ್ತಾರೆ. ತಾಯಿ ಶ್ರೀಮತಿ ಗೌರಮ್ಮ ಅವರು ಮಗನ ಸಾಧನೆಗೆ ತುಂಬಾ ಸಂತೋಷವನ್ನು ಹೊಂದಿದ್ದಾರೆ. ರಮೇಶ್ ಬಾರ್ಕಿ ಅವರ ತಂದೆ ತಾಯಿಗಳ ಆಸೆ ಏನೆಂದರೆ ತಮ್ಮ ಮಗನಂತೆ ನಾಡಿನ ಎಲ್ಲಾ ಮಕ್ಕಳು ಕಠಿಣ ಪರಿಶ್ರಮ ಹಾಗೂ ಶಿಸ್ತು ಬದ್ಧ ಜೀವನ ಮಾಡಿ ತಂದೆ ತಾಯಿಗೆ ಹಾಗೂ ನಾಡಿಗೆ ಕೀರ್ತಿ ತರಬೇಕೆಂದು ಬಯಸುತ್ತಾರೆ. ರಮೇಶ್ ಬಾರ್ಕಿ ಅವರು ಓದಿದ ಪ್ರಾಥಮಿಕ ಶಾಲೆ, ನವೋದಯ ಶಾಲೆ, ಪದವಿ ಕಾಲೇಜುಗಳ ಗುರು ಬಳಗ ತುಂಬಾ ಖುಷಿಯನ್ನು ವ್ಯಕ್ತಪಡಿಸಿದ್ದು ಇಂತಹ ಮಕ್ಕಳು ಎಲ್ಲಾ ಶಾಲಾ ಕಾಲೇಜುಗಳಲ್ಲಿ ಹೊರಹೊಮ್ಮಲಿ ಎಂದು, ಶಿಷ್ಯನಿಗೆ ಅಭಿನಂದನೆ ಸಲ್ಲಿಸಿದ್ದಾರೆ.
“ಎದೆಗೆ ಬಿದ್ದ ಅಕ್ಷರ ಭುವಿಗೆ ಬಿದ್ದ ಬೀಜ ಮುಂದೊಂದು ದಿನ ಫಸಲನ್ನು ಕೊಟ್ಟೇ ಕೊಡುತ್ತದೆ” ಎಂಬ ಕವಿವಾಣಿ ಮಾತಿನಂತೆ ಪ್ರಸ್ತುತ ಇಸ್ರೋ ಬಾಹ್ಯಾಕಾಶ ಸಂಸ್ಥೆಯಲ್ಲಿ ವಿಜ್ಞಾನಿಯಾಗಿ ಕಾರ್ಯನಿರ್ವಹಿಸುತ್ತಿರುವ ರಮೇಶ್ ಭೀಮಪ್ಪ ಬಾರ್ಕಿ ಇವರ ಸಾಧನೆಗೆ ಮತ್ತೊಮ್ಮೆ ಅಭಿನಂದನೆಗಳನ್ನು ತಿಳಿಸುತ್ತಾ ಇವರ ವೃತ್ತಿ ಜೀವನ ದೇಶದಾದ್ಯಂತ ಹೆಸರು ಮಾಡಲಿ, ಇನ್ನೂ ಹೆಚ್ಚಿನ ಸಾಧನೆ ಇವರಿಂದ ಆಗಲೆಂದು ಹಾರೈಸೋಣ..
ಶುಭ ಹಾರೈಕೆಗಳೊಂದಿಗೆ..
ಸಂತೋಷ್ ಬಿದರಗಡ್ಡೆ, ಶಿಕ್ಷಕ ಸಾಹಿತಿ
ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ತಿಳವಳ್ಳಿ .