Homeಲೇಖನಸಾರ್ವಜನಿಕ 'ಬಸವ ಜಯಂತಿ' ಆರಂಭಿಸಿದ ಮೊದಲಿಗ ಹರ್ಡೇಕರ ಮಂಜಪ್ಪ

ಸಾರ್ವಜನಿಕ ‘ಬಸವ ಜಯಂತಿ’ ಆರಂಭಿಸಿದ ಮೊದಲಿಗ ಹರ್ಡೇಕರ ಮಂಜಪ್ಪ

Published on

ಹರ್ಡೇಕರ ಮಂಜಪ್ಪ (೧೮೮೬-೧೯೪೭) ಒಬ್ಬ ಕನ್ನಡಿಗ, ರಾಜಕೀಯ ಚಿಂತಕ. ಸಮಾಜ ಸುಧಾರಕ ಮತ್ತು ಪತ್ರಕರ್ತ. ಅವರು ಕರ‍್ನಾಟಕದ ಗಾಂಧಿ ಎಂದು ಪ್ರಸಿದ್ಧರಾಗಿದ್ದಾರೆ.

ಪಂಪನ ಕಾವ್ಯ ಬಣ್ಣಿತವಾದ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿಯಲ್ಲಿನ ಬಡ ಕುಟುಂಬವೊಂದರಲ್ಲಿ ಫೆಬ್ರವರಿ ೧೮, ೧೮೮೯ರಲ್ಲಿ ಜನಿಸಿದರು. ಇವರ ಅಣ್ಣನೆ ಇವರ ಪಾಲನೆಯನ್ನು ಮಾಡಿದ್ದಲ್ಲದೆ, ಇವರ ಎಲ್ಲ ಧ್ಯೇಯ ಸಾಧನೆಗಳಿಗೆ ಒತ್ತಾಸೆಯಾಗಿ ನಿಂತರು. ಮಂಜಪ್ಪನವರು ಕಲಿತಿದ್ದು ಕೇವಲ ೭ನೆಯ ತರಗತಿಯವರೆಗೆ. ತಮ್ಮ ಸ್ವಂತ ಪ್ರಯತ್ನಗಳಿಂದ ಇಂಗ್ಲಿಷ್ ಕಲಿಯಲು ಪ್ರಯತ್ನಿಸಿದರೂ ಸಹ ಹೆಚ್ಚಿನ ಪ್ರಗತಿಯಾಗಲಿಲ್ಲ. ಅವರು ೧೯೦೩ರಲ್ಲಿ ಹತ್ತಿರದ ಶಿರಸಿಯಲ್ಲಿ ಮುಲ್ಕಿ (ಪ್ರಾಥಮಿಕ ಶಿಕ್ಷಣ) ಪರೀಕ್ಷೆಯಲ್ಲಿ ಉತ್ತೀರ್ಣರಾದರು. ತಾವು ಕಲಿತ ಶಾಲೆಯಲ್ಲಿಯೆ ಸಹಶಿಕ್ಷಕರಾದರು. ೧೯೦೫ರಲ್ಲಿ ಪ್ರತ್ಯೇಕ ಶಾಲೆಯ ಏಕೋಪಾಧ್ಯಾಯರಾದರು. ವೃತ್ತಿ ಜೀವನದ ಪ್ರತಿ ತಿಂಗಳಿಗೆ ೭ ರೂಪಾಯಿ ಸಂಬಳ ಪಡೆಯುತ್ತಿದ್ದರು.

ಮಂಜಪ್ಪ ಮತ್ತು ಅವರ ಸಹೋದರ ಸ್ವದೇಶಿ ಚಳವಳಿಯಲ್ಲಿ ಭಾಗಿಯಾಗಿದ್ದರು. ಮರಾಠಿ ಭಾಷೆಯನ್ನು ತಿಳಿದಿದ್ದರು ಮತ್ತು ಸೆಪ್ಟೆಂಬರ್ ೨, ೧೯೦೬ ರಂದು ೧೦,೦೦೦ ಕ್ಕೂ ಹೆಚ್ಚು ಚಂದಾದಾರರೊಂದಿಗೆ ಧನುರ್ಧಾರಿ ಎಂಬ ಸಾಪ್ತಾಹಿಕ ಪತ್ರಿಕೆಯನ್ನು ಆರಂಭಿಸಿದರು.

ನೀರ ಬೊಬ್ಬುಳಿಕೆಗೆ ಕಬ್ಬುನದ ಕಟ್ಟ ಕೊಟ್ಟು
ಸುರಕ್ಷಿತವ ಮಾಡುವ ಭರವ ನೋಡಾ!
ಮಹಾದಾನಿ ಕೂಡಲಸಂಗಮ ದೇವನ ಪೂಜಿಸಿ ಬದುಕುವೋ ಕಾಯವ ನಿಶ್ಚಯಿಸದೆ!

ಅವರು ನಿಧಾನವಾಗಿ ಸಂತ, ಸುಧಾರಣಾವಾದಿ ಬಸವಣ್ಣನವರ ಬೋಧನೆಗಳತ್ತ ಆಕರ‍್ಷಿತರಾದರು. ಬಸವಣ್ಣನವರ ಅಗತ್ಯ ಬೋಧನೆಗಳನ್ನು ಹೊರತರಲು ಮಂಜಪ್ಪ ಹಲವಾರು ಕಿರು ಪುಸ್ತಕಗಳನ್ನು ಬರೆದರು ಮತ್ತು ಅವರ ಅನುಯಾಯಿಗಳಲ್ಲಿ ಏಕತೆಯನ್ನು ಉತ್ತೇಜಿಸಲು ಪ್ರಯತ್ನಿಸಿದರು. ೧೯೧೩ ರಲ್ಲಿ, ಅವರು ಬಸವ ಜಯಂತಿಯನ್ನು ಸಾರ‍್ವಜನಿಕವಾಗಿ ಚರಿಸಲು ಪ್ರಾರಂಭಿಸಿದರು.

ಮಂಜಪ್ಪ ೧೯೨೭ ರಲ್ಲಿ ಆಲಮಟ್ಟಿಯಲ್ಲಿ ಆಶ್ರಮ ಶಾಲೆಯನ್ನು ತೆರೆದರು. ಗಾಂಧೀಜಿಯವರ ರಚನಾತ್ಮಕ ಕೆಲಸದ ಬಗ್ಗೆ ಜಾಗೃತಿ ಮೂಡಿಸಲು ಅವರು ಹಳ್ಳಿಗಳಿಗೆ ಪ್ರವಾಸ ಮಾಡಿದರು. ಬಸವಣ್ಣ ಮತ್ತು ಗಾಂಧಿಯವರ ಬೋಧನೆಗಳ ನಡುವೆ ಹಲವಾರು ಹೋಲಿಕೆಗಳನ್ನು ಅವರು ಗ್ರಹಿಸಿದರು. ಸತ್ಯಾಗ್ರಹ, ದೇಶಭಕ್ತಿ ಮತ್ತು ರಾಷ್ಟ್ರೀಯತೆಯಂತಹ ವಿಷಯಗಳ ಕುರಿತು ಸಾವಿರಕ್ಕೂ ಹೆಚ್ಚು ಉಪನ್ಯಾಸಗಳನ್ನು ನೀಡಿದರು. ೧೯೨೪ ರಲ್ಲಿ ತಮ್ಮ ‘ ಬಸವೇಶ್ವರ ಸೇವಾ ದಳ’ ತಂಡದ ಸಹಾಯದಿಂದ ಬೆಳಗಾವಿಯಲ್ಲಿ ಕಾಂಗ್ರೆಸ್ ಪಕ್ಷದ ಅಧಿವೇಶನವನ್ನು ಆಯೋಜಿಸಿದರು. ಅಧಿವೇಶನದಲ್ಲಿ ಗಾಂಧಿಯವರಿಗೆ ಬಸವಣ್ಣನವರ ಕುರಿತಾದ ಪುಸ್ತಕವನ್ನು ನೀಡಿದರು.

ಮಂಜಪ್ಪ ಒಬ್ಬ ಸ್ವಾತಂತ್ರ‍್ಯ ಹೋರಾಟಗಾರರಾಗಿದ್ದರು, ಅವರು ” ಕರ್ನಾಟಕ ದ ಗಾಂಧಿ” ಎಂದು ಜನಪ್ರಿಯರಾದರು. ಅವರು ಆತ್ಮಚರಿತ್ರೆ ಸೇರಿದಂತೆ ೪೦ ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಅವರ ಕೆಲವು ಕೃತಿಗಳು; ಗಾಂಧಿ ಚರಿತ್ರೆ, ಬುದ್ಧ ಚರಿತ್ರೆ, ಬಸವ ಚರಿತ್ರೆ, ಬುದ್ಧಿಯ ಮಾತು, ಬ್ರಹ್ಮಚರ್ಯ, ಅಹಿಂಸೆ.

ಮಂಜಪ್ಪನವರು ಮದುವೆಯಾದರೆ ಸಮಾಜ ಸೇವೆಗೆ ತೊಡಕಾಗುವುದೆಂದು ೧೯೧೦ರಲ್ಲಿ ಮದುವೆ ಆಗಬಾರದೆಂಬ (೨೨ನೆ ವಯಸ್ಸಿನಲ್ಲಿ) ತೀರ್ಮಾನಿಸಿದ್ದರು.

ಹೊತ್ತಾರೆಯೆದ್ದು ಶಿವಲಿಂಗದೇವನ
ದೃಷ್ಟಿಯಾರೆ ನೋಡದವನ ಸಂಸಾರವೇನವನ ?!
ಬಾಳುವೆಣನ ಬೀಳುವೆಣನ ಸಂಸಾರವೇನವನ ?!
ನಡೆವೆಣನ ನುಡಿವೆಣನ ಸಂಸಾರವೇನವನ ?!
ಕರ್ತೃ ಕೂಡಲಸಂಗ, ನಿಮ್ಮ ತೊತ್ತಗೆಲಸಮಾಡದವನ
ಸಂಸಾರವೇನವನ?!

ಬ್ರಹ್ಮಚರ್ಯದಿಂದ ಕೂಡಿದ ಸಾತ್ವಿಕ ಜೀವನವನ್ನು ಅಳವಡಿಸಿಕೊಂಡು ಅದಕ್ಕಾಗಿ ತಮ್ಮ ಅಕ್ಕಿ,ಬೇಳೆಯ ಆಹಾರದಲ್ಲಿಯು ಸಹ ಉಪ್ಪು ಸಕ್ಕರೆಯಂತಹ ರುಚಿಗಳನ್ನು ನಿಷೇಧಿಸಿಕೊಂಡು ಬಿಟ್ಟರು. ಹಾಗೂ ಬ್ರಹ್ಮಚರ್ಯಕ್ಕೆ ಪೋಷಕವಾಗುವ ರೀತಿಯ ಆಹಾರ ಸೇವನೆಯ ಆರಂಭಿಸಿ, ಉಪ್ಪು, ಹುಳಿ, ಖಾರ ಹಾಗು ಸಿಹಿ ಪದರ‍್ಥಗಳ ಸೇವನೆ ನಿಲ್ಲಿಸಿದರು. ಆಹಾರದಲ್ಲಿನ ಸ್ವಯಂ ನಿರ್ಬಂಧಗಳು ಶುದ್ಧ ಮತ್ತು ಶಿಸ್ತಿನ ಜೀವನವನ್ನು ಸಾಗಿಸಲು ಸಹಾಯಕ ಎಂದು ಮಂಜಪ್ಪನವರ ನಂಬಿಕೆಯಾಗಿತ್ತು.

ಸಂಸಾರವೆಂಬುದೊಂದು ಗಾಳಿಯ ಸೊಡರು!
ಸಿರಿಯೆಂಬುದೊಂದು ಸಂತೆಯ ಮಂದಿ ಕಂಡಯ್ಯ!
ಇದ ನೆಚ್ಚಿ ಕೆಡಬೇಡ;
ಸಿರಿಯೆಂಬುದ ಮರೆದು ಪೂಜಿಸು
ನಮ್ಮ ಕೂಡಲಸಂಗಮದೇವನ.

ಕರ್ನಾಟಕ ಗಾಂಧಿ: ರಾಷ್ಟ್ರೀಯ ನಾಯಕರಿಂದ ಪ್ರಭಾವಿತರಾದ ಮಂಜಪ್ಪನವರು, ೧೯೧೪ರಲ್ಲಿ ತಿಲಕರನ್ನು ಭೇಟಿಯಾದರು. ೧೯೨೦ ಅಗಸ್ಟದಲ್ಲಿ ಖಾದಿವ್ರತ ಕೈಗೊಂಡರು. ಹರಿಹರ ರೇಲ್ವೆ ಸ್ಟೇಶನ್ದಿಂದ ೫ ಕಿ.ಮಿ. ದೂರದಲ್ಲಿ, ತುಂಗಭದ್ರಾ ನದಿಯ ದಂಡೆಯ ಮೇಲೆ ಬಾಳಪ್ಪ ಎನ್ನುವ ತಮ್ಮ ಗೆಳೆಯರ ಭೂಮಿಯಲ್ಲಿ ಒಂದು ಆಶ್ರಮ ಕಟ್ಟಿಸಿಕೊಂಡರು. ಅದಕ್ಕೆ “ಸತ್ಯಾಗ್ರಹ ಆಶ್ರಮ” ಎಂದು ಹೆಸರಿಡಲಾಯಿತು. ೧೯೨೩ರಲ್ಲಿ ಈ ಆಶ್ರಮವನ್ನು ಪ್ರವೇಶಿಸಿದರು. ೧೯೨೪ರಲ್ಲಿ ಸಾಬರಮತಿಗೆ ಹೋಗಿ ಗಾಂಧೀಜಿಯವರ ಜೊತೆಗೆ ಕೆಲ ದಿನ ಇದ್ದರು. ೧೯೨೪ರಲ್ಲಿ ಬೆಳಗಾವಿಯಲ್ಲಿ ಕಾಂಗ್ರೆಸ್ ಅಧಿವೇಶನ ನಡೆದಾಗ ಬಸವೇಶ್ವರ ಸೇವಾದಳ ಎನ್ನುವ ಸ್ವಯಂಸೇವಕರ ಸಂಘಟನೆಯನ್ನು ರಚಿಸಿ ಅಧಿವೇಶನದ ಯಶಸ್ಸಿಗೆ ಕಾರಣರಾದರು.

ಬಹುಷಃ ಸ್ವತಃ ಗಾಂಧೀಜಿಯವರು ತಮ್ಮ ಮೇಲೆ ವಿಧಿಸಿಕೊಂಡಿದ್ದಕ್ಕಿಂತ ಹೆಚ್ಚಿನ ಶಿಸ್ತನ್ನು ಮಂಜಪ್ಪನವರು ತಮ್ಮ ವೈಯಕ್ತಿಕ ಜೀವನದಲ್ಲಿ ಅಳವಡಿಸಿಕೊಂಡಿದ್ದರು. ಚರಕದಿಂದ ನೂಲುವುದು ಮತ್ತು ಖಾದಿ ಬಟ್ಟೆಯ ನೇಯ್ಗೆಯನ್ನು ಸಹಾ ತಮ್ಮ ದಿನಚರಿಯಾಗಿಸಿಕೊಂಡ ಮಂಜಪ್ಪನವರು ತಮ್ಮ ‘ಖಾದಿ ವಿಜಯ’ ಮಾಸ ಪತ್ರಿಕೆಯ ಮೂಲಕ ಖಾದಿ ಪ್ರಚಾರವನ್ನು ಕೈಗೊಂಡರು. ‘ಖಾದಿಯ ವಿಜ್ಞಾನ’ ಎಂಬ ಗ್ರಂಥವನ್ನು ಸಹಾ ಮಂಜಪ್ಪನವರು ರಚಿಸಿದರು. ಆದ್ದರಿಂದಲೆ ಜನ ಇವರನ್ನು ಕರ್ನಾಟಕ ಗಾಂಧಿ ಎಂದು ಕರೆದರು.

ಕಾಲಕ್ರಮೇಣ ತಮ್ಮ ಪರಿಸರದಲ್ಲಿದ್ದ ಲಿಂಗಾಯತದಲ್ಲಿ ಅಷ್ಟೊಂದು ಪಂಗಡಗಳಿರುವುದು ಅವರನ್ನು ಆಶ್ಚರ್ಯ ಚಕಿತರನ್ನಾಗಿಸಿತು. ಲಿಂಗಾಯತ ಚಿಂತನೆಗಳು ಮತಗಳ ಗೋಡೆಗಳನ್ನು ಉರುಳಿಸಿ ಆ ಮೂಲಕ ಆಚರಣೆಗಳಲ್ಲಿದ್ದ ಮೂಢ ನಂಬಿಕೆಗಳನ್ನು ಹೋಗಲಾಡಿಸುವ ಮೂಲೋದ್ದೇಶವನ್ನು ಹೊಂದಿದ್ದ ಹಿನ್ನಲೆಯಲ್ಲಿ ಬಸವೇಶ್ವರರ ತತ್ವಗಳನ್ನು ಪ್ರಸ್ತುತ ಪಡಿಸುವ ಹಲವಾರು ಪುಸ್ತಿಕೆಗಳನ್ನು ಹೊರತಂದು, ಉಚಿತವಾಗಿ ಹಂಚಿ ಆ ಜನಾಂಗವನ್ನು ಒಟ್ಟುಗೂಡಿಸುವ ಪ್ರಯತ್ನ ಮಾಡಿದರು. ಲಿಂಗಾಯತರ‍ ಸಹೃದಯಿಗಳಾದ ಧಾರವಾಡದ ಮುರುಘಾ ಮಠದ ಮೃತ್ಯುಂಜಯ ಸ್ವಾಮೀಜಿಯವರು ಮಂಜಪ್ಪನವರಿಗೆ ಅಪಾರ ಬೆಂಬಲವಿತ್ತರು.

‘ಬಸವ ಜಯಂತಿ’ ಆಚರಣೆ ಆರಂಭಿಸಿದ ಮೊದಲಿಗ:
ಕರ್ತೃ ಲೋಕವೆಂಬುದು ಕರ‍್ತಾರನ ಕಮ್ಮಟವಯ್ಯ.
ಇಲ್ಲಿ ಸಲ್ಲುವರು ಅಲ್ಲಿಯೂ ಸಲ್ಲುವರಯ್ಯ.
ಇಲ್ಲಿ ಸಲ್ಲದವರು ಅಲ್ಲಿಯೂ ಸಲ್ಲರಯ್ಯ
ಕೂಡಲಸಂಗಮದೇವ.

ದಾವಣಗೆರೆಯಲ್ಲಿ ೧೯೧೩ರಲ್ಲಿ ಮೊದಲ ‘ಬಸವ ಜಯಂತಿ’ ಆಚರಣೆ ಪ್ರಾರಂಭ. ೧೯೧೯ರಲ್ಲಿ ಕನ್ನಡದಲ್ಲಿ ಮೊಟ್ಟ ಮೊದಲ ಬಾರಿಗೆ ‘ಮಹಾತ್ಮಾ ಗಾಂಧೀಜೀ ಚರಿತ್ರೆ’ ಪ್ರಕಟನೆ. ೧೯೨೪ ‘ಬಸವ ಚರಿತ್ರೆ’ ಸಂಶೋಧನಾತ್ಮಕ ಗ್ರಂಥ ಪ್ರಕಟನೆ. ೧೯೨೫ ಬಂಥನಾಳ ಮಹಾಸ್ವಾಮಿಗಳೊಂದಿಗೆ ವಿಜಾಪುರ ಜಿಲ್ಲೆಯ ಹಳ್ಳಿಗಳ ಸಂಚಾರ. ೧೯೨೬ ‘ಬಸವ ಭೋಧಾಮೃತ’ ಗ್ರಂಥ ಪ್ರಕಟನೆ. ಮಂಜಪ್ಪನವರು ೧೯೪೭ ರ ಜನವರಿ ೩ ರಂದು ನಿಧನರಾದರು.


ಡಾ. ಸತೀಶ ಕೆ. ಇಟಗಿ, ಪತ್ರಿಕೋದ್ಯಮ ಉಪನ್ಯಾಸಕ
ಅಂಚೆ: ಕೋಳೂರ-೫೮೬೧೨೯, ತಾ: ಮುದ್ದೇಬಿಹಾಳ,
ಜಿ: ವಿಜಯಪುರ-೫೮೬೧೨೯ (ಕರ್ನಾಟಕ ರಾಜ್ಯ)
ಮೊ: ೯೨೪೧೨೮೬೪೨೨
Email: satshitag10@gmail.com,

 

Latest articles

More like this