Homeಲೇಖನಜಂಗಮ ಚೇತನದ ಯುಗಪ್ರವರ್ತಕ ಶ್ರೀ ಜಯದೇವ ಜಗದ್ಗುರುಗಳು

ಜಂಗಮ ಚೇತನದ ಯುಗಪ್ರವರ್ತಕ ಶ್ರೀ ಜಯದೇವ ಜಗದ್ಗುರುಗಳು

Published on

ಬಸವ ಪರಂಪರೆಯ ಶ್ರೇಷ್ಠ ಸಮಾಜಮುಖಿ ಧಾರ್ಮಿಕ ಹೊಸತನವನ್ನು ಕಂಡು ಬಡವರ ದಲಿತರ ಅನ್ನ ವಸತಿ ವಿದ್ಯೆಗಾಗಿ ಜೀವನವಿಡೀ ಶ್ರಮಿಸಿದ ಶ್ರೇಷ್ಠ ಶಿವಯೋಗ ಸಾಧಕರು. ಕರ್ನಾಟಕದ ಸಾಮಾಜಿಕ-ಸಾಂಸ್ಕೃತಿಕ ಮತ್ತು ಧಾರ್ವಿುಕ ಯುಗಪಲ್ಲಟಕ್ಕೆ ಪ್ರಮುಖವಾಗಿ ಕಾರಣರಾದವರಲ್ಲಿ ಶ್ರೀ ಅಥಣಿ ಶ್ರೀ ಮುರುಗೇಂದ್ರ ಶಿವಯೋಗಿಗಳು, ಶ್ರೀ ಹಾನಗಲ್ಲು ಕುಮಾರಸ್ವಾಮಿಗಳು ಮತ್ತು ಚಿತ್ರದುರ್ಗ ಶೂನ್ಯಪೀಠದ ಶ್ರೀ ಜಯದೇವ ಮುರುಘರಾಜೇಂದ್ರರು . ಶೂನ್ಯಪೀಠದ ಶ್ರೀ ಜಯದೇವ ಮುರುಘರಾಜೇಂದ್ರ ಜಗದ್ಗುರುಗಳು ಮಧ್ಯಕರ್ನಾಟಕದ ಸಾಮಾಜಿಕ ಮತ್ತು ಧಾರ್ವಿುಕ ಹೊಸ ಅಧ್ಯಯನಕ್ಕೆ ಕಾರಣರಾದದ್ದು ಚಾರಿತ್ರಿಕ ಸತ್ಯ. ವಚನಕಾರರ ಮಾತಿನಲ್ಲಿ ‘ಜಗದಗಲ ಮುಗಿಲಗಲ’ ವಿಶ್ವವಿಶಾಲವಾದ ಮಹಾವ್ಯಕ್ತಿತ್ವವನ್ನು ಹೊಂದಿದ್ದರು.

*ಜನನ-ವಿದ್ಯಾಭ್ಯಾಸ:*
ರಾಯಚೂರು ಜಿಲ್ಲೆಯ ದಕ್ಷಿಣಭಾಗಕ್ಕಿದ್ದ ಚಿಕ್ಕಗ್ರಾಮವೇ ಬಿನ್ನಾಳ. ಆ ಗ್ರಾಮದ ಹಿರೇಮಠದ ಗುರುಗಳು ಚೆನ್ನಬಸವಯ್ಯ ಮತ್ತು ಅವರ ಪತ್ನಿ ಭ್ರಮರಾಂಬೆ. ಈ ದಂಪತಿ ಶಿವಪೂಜಾ ದುರಂಧರರು ಮಾತ್ರವಲ್ಲ; ಪರಶಿವನ ಸದ್ಭಕ್ತರು. ಈ ಶಿವದಂಪತಿಯ ಪುಣ್ಯಗರ್ಭದಲ್ಲಿ 27.08.1878 ಗುರುವಾರ ಶುಭಮುಹೂರ್ತದಲ್ಲಿ ಗಂಡುಮಗುವೊಂದು ಜನಿಸಿತು. ಆಗ ಗ್ರಾಮಕ್ಕೆ ಗ್ರಾಮವೇ ನಲಿದಾಡಿತು. ತಂದೆ-ತಾಯಿ ಮಗುವಿಗೆ ‘ಚೆನ್ನವೀರದೇವ’ ಎಂದು ನಾಮಕರಣ ಮಾಡಿದರು. ಆ ಕಾಲದ ಸಂಪ್ರದಾಯದಂತೆ ಆರುವರ್ಷದ ಬಾಲಕ ಚೆನ್ನವೀರದೇವನಿಗೆ ಓಂಕಾರಪೂರ್ವಕ ಅಕ್ಷರಾಭ್ಯಾಸ ಮಾಡಿಸಿದರು. ಆ ಗ್ರಾಮದ ಬಸವೇಶ್ವರ ದೇವಸ್ಥಾನದ ಗಾಂವಟಿ ಶಾಲೆಯಲ್ಲಿ ವ್ಯಾಸಂಗ ಪ್ರಾರಂಭವಾಯಿತು. ಚೆನ್ನ ಬಸವಯ್ಯ-ಭ್ರಮರಾಂಬೆ ದಂಪತಿ ತಮ್ಮ ಪುಣ್ಯದಪುಂಜ ಚೆನ್ನವೀರ ದೇವನನ್ನು ಗದುಗಿನ ತೋಂಟದಾರ್ಯ ಮಠಕ್ಕೆ ಒಪ್ಪಿಸಿದರು! ಹಂಪಸಾಗರದ ತೋಂಟದಾರ್ಯ ಮಠದಲ್ಲಿ ಪ್ರಾಥಮಿಕ ವಿದ್ಯಾಭ್ಯಾಸಕ್ಕೆ ವ್ಯವಸ್ಥೆಗೊಳಿಸಲಾಯಿತು.

ಅನಂತರ ಗದುಗಿನ ತೋಂಟದಾರ್ಯ ಸಂಸ್ಕೃತ ಮಹಾಪಾಠಶಾಲೆಯಲ್ಲಿ ಸಂಸ್ಕೃತವಿದ್ವಾಂಸ ನೀಲಕಂಠಶಾಸ್ತ್ರಿಗಳಲ್ಲಿ ಅಭ್ಯಾಸ ಮುಂದುವರಿಯಿತು. ಆ ಕಾಲಕ್ಕೆ ಕಾಶಿಯ ಜಂಗಮವಾಡಿ ಮಠದಿಂದ ಅನೇಕ ವಿದ್ವಾಂಸರು ಬರುತ್ತಿದ್ದದ್ದುಂಟು. ಕಾಶಿಯು ವಿದ್ಯೆಯ ತವರುಮನೆ ಎನಿಸಿತ್ತು. ಚೆನ್ನವೀರದೇವರ ಮನಸ್ಸಿನಲ್ಲಿ ಕಾಶಿಯಲ್ಲೇ ಮುಂದಿನ ಪ್ರೌಢವಿದ್ಯಾಭ್ಯಾಸ ಮಾಡಬೇಕೆಂಬ ಬಯಕೆ ತಲೆದೋರುತ್ತಿತ್ತು. ಆದರೆ, ಕೈಯಲ್ಲಿ ಕಾಸಿಲ್ಲ. ಗದುಗಿನ ಮಾನ್ವಿ ಮನೆತನವು ಕೊಡುಗೈದಾನಕ್ಕೆ ಹೆಸರಾಗಿತ್ತು. ಗದುಗಿನ ಮಾನ್ವಿ ಮನೆತನದ ರುದ್ರಮ್ಮ ದಾನಕ್ಕೆ ದಾಸೋಹಕ್ಕೆ ಎತ್ತಿದಕೈ. ಚೆನ್ನವೀರದೇವರು ತಮ್ಮ ಬಯಕೆಯನ್ನು ನಿವೇದಿಸಿಕೊಂಡಾಗ ಕಾಶಿಯ ಪ್ರಯಾಣಕ್ಕೆ ಬೇಕಾಗುವ ದಾರಿ ಖರ್ಚನ್ನು ಆಕೆ ನೀಡಿದಳು. ರೈಲಿನಲ್ಲಿ ಪ್ರಯಾಣಮಾಡಿ ಕಾಶಿಗೆ ಬಂದಿಳಿದರು. ಕಾಶಿಯ ವಿಶ್ವಾರಾಧ್ಯ ಪೀಠಾಧೀಶರಾದ ರಾಜೇಶ್ವರಸ್ವಾಮಿಗಳ ಮಠದಲ್ಲಿದ್ದು ವಿದ್ಯಾಭ್ಯಾಸ ಮುಂದುವರಿಸಿದರು. ವಾರದ ಮಲ್ಲಪ್ಪನವರು ಕಾಲಕಾಲಕ್ಕೆ ವಿದ್ಯಾಭ್ಯಾಸದ ಖರ್ಚನ್ನು ನೀಡುತ್ತಿದ್ದರು. ಕಾಶಿಯ ಮಹಾವಿದ್ವಾಂಸರಾದ ಭಟ್ಟಾಚಾರ್ಯರಲ್ಲಿ ವ್ಯಾಕರಣವನ್ನೂ ತಾರಾಚರಣ ಮಹಾಮಹೋಪಾಧ್ಯಾಯರಲ್ಲಿ ತರ್ಕಶಾಸ್ತ್ರವನ್ನೂ ಅಧ್ಯಯನ ಮಾಡಿದರು. ಅವರು ಕಾಶಿಯಲ್ಲಿರುವಾಗ ಲೋಕಮಾನ್ಯ ತಿಲಕರು ಕಾಶಿವಿದ್ಯಾಪೀಠಕ್ಕೆ ಆಗಮಿಸಿದ್ದರು. ಅವರು ಜಂಗಮವಾಡಿ ಮಠಕ್ಕೆ ಬಂದಾಗ ಹತ್ತಾರು ವಿದ್ಯಾರ್ಥಿಗಳಲ್ಲಿ ಚೆನ್ನವೀರದೇವರನ್ನು ಕಂಡು ‘ಇವರು ಲೋಕೋತ್ತರ ಪುರುಷರು ಹಾಗೂ ಸಮಾಜದ ಯುಗಪುರುಷರು ಆಗುತ್ತಾರೆ’ ಎಂದು ಕೈವಾರಿಸಿದರು. ತಮ್ಮ ವಿದ್ಯಾಭ್ಯಾಸವನ್ನು ಸಂಪೂರ್ಣವಾಗಿ ಮುಗಿಸಿ ವಿದ್ಯಾಭೂಷಣರಾಗಿ ಕರ್ನಾಟಕಕ್ಕೆ ಚೆನ್ನವೀರದೇವರು ಮರಳಿದರು.

ಇವರು ಮರಳಿ ಕರ್ನಾಟಕಕ್ಕೆ ಬರುವಾಗ ಬೆಳಗಾವಿ ಜಿಲ್ಲೆಯ ಸವದತ್ತಿಯ ಕಲ್ಮಠದಲ್ಲಿ ಬಸವಪುರಾಣ ನಡೆಯುತ್ತಿತ್ತು. ಶ್ರೀ ಅಥಣಿ ಶಿವಯೋಗಿಗಳು ಪುರಾಣಪ್ರವಚನವನ್ನು ಮಾಡುತ್ತಿದ್ದರು. ಆ ಪ್ರವಚನಕ್ಕೆ ಹಾನಗಲ್ಲು ಕುಮಾರಸ್ವಾಮಿಗಳು, ಸೊಲ್ಲಾಪುರದ ನಿಜಗುಣಶಿವಯೋಗಿಗಳು ಬಂದಿದ್ದರು. ಈ ಮಂಗಲ ಮಹೋತ್ಸವಕ್ಕೆ ಶ್ರೀಚೆನ್ನವೀರ ದೇವರು ಆಮಂತ್ರಿತರಾಗಿದ್ದರು. ಅವರು ಅಥಣಿ ಶಿವಯೋಗಿಗಳ ಆಶೀರ್ವಾದಕ್ಕಾಗಿ ಬಂದರು. ಆಗ ಅಥಣಿ ಶಿವಯೋಗಿಗಳು ‘ಈ ಬಸವ ಚೇತನದ ಕುಡಿ ನಮ್ಮೆಲ್ಲರಿಗೆ ಮುಂದೆ ಜಗದ್ಗುರುಗಳಾಗುವರು ಇವರಿಗೆ ಆಶೀರ್ವಾದವನ್ನೀಯುವುದು ಹೇಗೆ?’ ಎಂದು ಅಪ್ಪಣೆ ಕೊಡುತ್ತ, ತಮ್ಮ ಪಕ್ಕದಲ್ಲಿಯೇ ಕುಳ್ಳಿರಿಸಿಕೊಂಡರು.

ಬೃಹನ್ಮಠದ ಜಗದ್ಗುರು: ಚಿತ್ರದುರ್ಗದ ಬೃಹನ್ಮಠದ ಮುಪ್ಪಿನೇಂದ್ರ ಮಹಾಸ್ವಾಮಿಗಳು 1902ರಲ್ಲಿಯೇ ಲಿಂಗೈಕ್ಯರಾಗಿದ್ದರು. ಈ ಪೀಠಕ್ಕೆ ಜಗದ್ಗುರುಗಳಾಗ ಬೇಕೆನ್ನುವ ಪೈಪೋಟಿ ಹೆಚ್ಚಾಯಿತು. ಬಹುತೇಕ ಸ್ವಾಮಿಗಳು ಈ ಮಠಕ್ಕೆ ಅಧಿಪತಿಯಾಗ ಬೇಕೆಂದು ಆಸೆ ಪಟ್ಟಿದ್ದರು. ವಾರದ ಮಲ್ಲಪ್ಪನವರು ಚೆನ್ನವೀರದೇವರನ್ನು ಬೃಹನ್ಮಠಕ್ಕೆ ಸ್ವಾಮಿಗಳನ್ನಾಗಿ ಮಾಡಲು ನಿಶ್ಚಯಿಸಿಕೊಂಡರು. ಅನಂತರ ಭಕ್ತವರ್ಗದವರ ಜತೆ ರ್ಚಚಿಸಿದರು. ಎಲ್ಲರ ಅಪೇಕ್ಷೆಯಂತೆ ಬೃಹನ್ಮಠದ ಸ್ವಾಮಿಗಳಾಗುವ ಕಾಲಕೂಡಿಬಂತು. ಆಗ ಚೆನ್ನವೀರದೇವರು ಬ್ಯಾಡಗಿಯ ಅಂಕಲಕೋಟೆ ಶ್ರೀಮಂತರೊಬ್ಬರ ಮನೆಯಲ್ಲಿದ್ದರು. ವಾರದ ಮಲ್ಲಪ್ಪನವರು ತಂತಿವಾರ್ತೆ ಕಳುಹಿಸಿದರು. ಅನಂತರ ಉಗಿಬಂಡಿಯಲ್ಲಿ ಕುಳಿತು ಹೊಳಲ್ಕೆರೆಗೆ ಪ್ರಯಾಣಿಸಿದರು. ಅಲ್ಲಿದ್ದ ಭಕ್ತರು ಕುದುರೆಗಾಡಿಯಲ್ಲಿ ಬೃಹನ್ಮಠಕ್ಕೆ ಕರೆತಂದರು! ವಾರದ ಮಲ್ಲಪ್ಪನವರು ಮತ್ತು ಸಮಾಜದ ಘನ್ಯವ್ಯಕ್ತಿಗಳು ‘ನೀವು ಶೂನ್ಯಪೀಠವನ್ನು ಏರುತ್ತಿರುವುದು ನಮಗೆ ಸಂತೋಷ ತಂದಿದೆ. ಇದು ದಿಗ್ದಿಗಂತದಲ್ಲಿ ಹಬ್ಬಲಿ. ನೀವು ಈ ಮಠವನ್ನು ಮುನ್ನಡೆಸಿಕೊಂಡು ಹೋಗಿ ಯಶಸ್ವಿಯಾಗುವಿರಿ’ ಎಂದು ಅಭಿನಂದಿಸಿದರು. ಆಗ ಮುರುಘಾ ಮಠಕ್ಕೆ ಪೀಠಾಧಿಪತಿಯಾಗಲು ಅನೇಕರ ಪೈಪೋಟಿ ಇತ್ತು.
ಚೆನ್ನವೀರ ದೇವರ ಸ್ವಸಾಮರ್ಥ್ಯ, ಜನರಬೆಂಬಲ ಮತ್ತು ಮುರುಘೕಶನ ಕೃಪೆಯಿಂದ ಶಾಲಿವಾಹನ ಶಕೆ 1825ನೆಯ ಶೋಭನಕೃತು ಸಂವತ್ಸರ ಕಾರ್ತಿಕ ಶುದ್ಧ ತ್ರಯೋದಶಿ 03.11.1902 ರಂದು ಶೂನ್ಯಪೀಠದ ಇಪ್ಪತ್ತನಾಲ್ಕನೆಯ ಜಗದ್ಗುರುಗಳಾಗಿ ಅಥಣಿ ಮುರುಘೕಂದ್ರ ಶಿವಯೋಗಿಗಳ ಸಮ್ಮುಖದಲ್ಲಿ ಅಥಣಿ ಗಚ್ಚಿನ ಮಠದ ಪೀಠಾಧಿಪತಿ ಶ್ರೀ ಸಿದ್ಧಲಿಂಗಪ್ಪನವರ ನೇತೃತ್ವದಲ್ಲಿ ನಿರಾಭಾರಿ ಚರಪಟ್ಟಾಧಿಕಾರವು ಅನುಗ್ರಹಿತವಾಯಿತು.

‘ಶ್ರೀಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳು’ ಎಂಬ ಅಭಿದಾನದಿಂದ ಪೀಠಾರೋಹಣ ಮಾಡಿದರು. ಚರಪಟ್ಟಾಧಿಕಾರ ಪಡೆದ ಮೇಲೆ, ಸಿದ್ಧಿ-ಸಾಧನೆಗಾಗಿ ಮುರುಘೕಶನ ಗದ್ದುಗೆಯಲ್ಲಿ ಇರತೊಡಗಿದರು. ಅವರು ಪದ್ಮಾಸನದಲ್ಲಿ ಕುಳಿತು ವಾಯುವನ್ನು ಸಹಸ್ರಾರಕ್ಕೆ ತಂದುಕೊಂಡು, ಬ್ರಹ್ಮರಂಧ್ರದಲ್ಲಿರುವ ಚಿತ್ಕಳೆಯನ್ನು ಕಾಣುತ್ತ ಆನಂದಿಸತೊಡಗಿದರು. ಅವರು ಲಿಂಗಾಂಗದ ನಿಬ್ಬೆರಗಿನಲ್ಲಿ ನಿಂದು ಆನಂದ ಸಾಮ್ರಾಜ್ಯದಲ್ಲಿಯೇ ವಿಹರಿಸಿದರು.

ನಾಡು ಪರ್ಯಟಣಕೆ ಮುಹೂರ್ತ
——————————————-
ಒಮ್ಮೆ ಅವರ ತೊಡೆಯಲ್ಲಿ ಹುಣ್ಣೊಂದು ಕಾಣಿಸತೊಡಗಿತು. ಅದರ ಬಾಧೆಯೋ ಹೇಳತೀರದು. ಒಂದುದಿನ ಬೆಳಿಗ್ಗೆ ಮಹಾಮೂರ್ತಿಯೊಂದು ಕನಸಿನಲ್ಲಿ ಕಾಣಿಸಿಕೊಂಡು ‘ಸುತ್ತು-ಕಟ್ಟು’ಎಂದು ಆಜ್ಞಾಪಿಸಿತು. ಜಗದ್ಗುರುಗಳು ಎಚ್ಚೆತ್ತುಕೊಂಡು ಯೋಚಿಸಿದಾಗ ‘ದೇಶವನ್ನು ಸುತ್ತು-ಸಮಾಜವನ್ನು ಕಟ್ಟು’ ಎಂಬ ಅರ್ಥ ಗೋಚರಿಸಿತು. ದೇಶ ಪರ್ಯಟನೆಗೆ ಸಿದ್ಧರಾದರು. ಮುರುಘೇಶನ ಅಪ್ಪಣೆಯಂತೆ ಸಂಚಾರಕ್ಕೆ ನಿಂತರು. ಪಂಡಿತರು, ಗಾಯಕರು, ಆನೆ, ಒಂಟೆ, ಕುದುರೆ, ಡಮನಿ ಮತ್ತು ಪಲ್ಲಕ್ಕಿಗಳು ಸಂಚಾರಕ್ಕೆ ಸಜ್ಜಾದವು. ಗುಡ್ಡದ ರಂಗವ್ವನಹಳ್ಳಿಯ ಭಕ್ತರ ಕೋರಿಕೆ ಮೇರೆಗೆ ಆ ಹಳ್ಳಿಯಿಂದ ಸಂಚಾರಕ್ಕೆ ಹೊರಟರು. ಗ್ರಾಮದ ಜನ ಬೀದಿಗಳನ್ನು ಶುಚಿಗೊಳಿಸಿದರು; ತಳಿರು-ತೋರಣ ಕಟ್ಟಿದರು. ಆ ಕಾಲಕ್ಕೆ ಹಳ್ಳಿಯ ಜನ ಆರುಸಾವಿರ ರೂ. ಕಾಣಿಕೆ ಒಪ್ಪಿಸಿದರು.

ನಂತರ ಮೊದಲು ಅಥಣಿಗೆ ಹೋಗಿ ಶ್ರೀಮುರುಘೕಂದ್ರ ಶಿವಯೋಗಿಗಳನ್ನು ಕಂಡು ಸಾಮಾಜಿಕ ಮತ್ತು ಆಧ್ಯಾತ್ಮಿಕ ವಿಚಾರಗಳನ್ನು ಸುದೀರ್ಘವಾಗಿ ಚರ್ಚಿಸಿದರು. ಅವರ ಅನುಗ್ರಹ ಪಡೆದು ಕೊಲ್ಹಾಪುರಕ್ಕೆ ಬಂದರು. ಕೊಲ್ಹಾಪುರದ ಶಾಹು ಮಹಾರಾಜರು ಬೀಳೂರು ಗುರುಬಸವ ಸ್ವಾಮಿಗಳಿಗೆ ನಡೆದುಕೊಳ್ಳುತ್ತಿದ್ದರು. ಹೀಗಾಗಿ, ಸ್ವಾಮಿಗಳ ಸೂಚನೆಯಂತೆ ಜಯದೇವ ಜಗದ್ಗುರುಗಳಿಗೆ ಭವ್ಯವಾದ ಸ್ವಾಗತ ಅಲ್ಲಿ ಸಿಕ್ಕಿತು. ಜಗದ್ಗುರುಗಳು ತಮ್ಮದೊಂದು ಖಾಸಾಮಠ ಇದ್ದರೆ ಒಳ್ಳೆಯದೆಂದು ತಿಳಿಸಿದಾಗ ಶಾಹುಮಹಾರಾಜರು ನಿವೇಶನವೊಂದನ್ನು ನೀಡಿ 1,30,000 ರೂಗಳನ್ನು ಕೊಟ್ಟು ಭವ್ಯವಾದ ಕಲ್ಲಿನ ಮಠವನ್ನು ಕಟ್ಟಿಸಿ ಶ್ರೀಗಳಿಗೆ ಅರ್ಪಿಸಿದರು. ಅದು ದಸರಾ ಚೌಕದಲ್ಲಿದ್ದು ಚಿತ್ರದುರ್ಗದ ಮಠವೆಂದು ಪ್ರಖ್ಯಾತವಾಗಿದೆ. ಇಲ್ಲಿಯ ವಿದ್ಯಾರ್ಥಿನಿಲಯದಲ್ಲಿ ದಾಸೋಹದ ವ್ಯವಸ್ಥೆ ಆದ ಮೇಲೆ ಬಿ.ಡಿ.ಜತ್ತಿ, ಮಹದೇವಪ್ಪ ರಾಂಪುರೆ, ರತ್ನಪ್ಪಕುಂಬಾರ ವೈ ಬಿ ಚವಾಣ ತಪೋವನದ ಶ್ರೀ ಕುಮಾರಸ್ವಾಮಿಗಳು ಮುಂತಾದ ಗಣ್ಯರು ವ್ಯಾಸಂಗ ಮಾಡಿದರು. ಸಾಂಗಲಿಯಲ್ಲಿ ಶ್ರೀಮುರುಘರಾಜೇಂದ್ರ ಬ್ಯಾಂಕನ್ನು ಸ್ಥಳೀಯರು ಪ್ರಾರಂಭಿಸಿದರು. ಅನಂತರ ಶ್ರೀಗಳು ಪುಣೆಗೆ ಹೊರಟರು. ಬಾಲಗಂಗಾಧರ ತಿಲಕ್, ಭಂಡಾರಕರ, ಗೋಪಾಲಕೃಷ್ಣ ಗೋಖಲೆ, ಮಹಾದೇವ ಗೋವಿಂದ ರಾನಡೆ ಮುಂತಾದವರು ಜಗದ್ಗುರುಗಳ ಆಗಮನವನ್ನು ಸ್ವಾಗತಿಸಿದರು. ಪುಣೆಯಿಂದ ಚಿತ್ರದುರ್ಗಕ್ಕೆ ಹಿಂತಿರುಗುವಾಗ ದಾವಣಗೆರೆಗೆ ಬಂದು ವಿರಕ್ತಮಠಕ್ಕೆ ಅಥಣಿಯ ಮೃತ್ಯುಂಜಯ ಸ್ವಾಮಿಗಳ ಚರಪಟ್ಟಾಧಿಕಾರವನ್ನು ನೆರವೇರಿಸಿಕೊಟ್ಟರು.

ಜಯದೇವ ಮುರುಘರಾಜೇಂದ್ರರು ಗುರುಮನೆಗಳ ಭೇಟಿಯಂತೆ ಅರಮನೆಗೂ ಭೇಟಿಕೊಟ್ಟದ್ದುಂಟು. 10.09.1937ರಂದು ಮೈಸೂರಿನ ಯುವರಾಜ ಕೃಷ್ಣರಾಜೇಂದ್ರರು ಚಿತ್ರದುರ್ಗಕ್ಕೆ ದಯಮಾಡಿಸಿದರು. ಆಗಿನ ದಿವಾನ್ ಮಿರ್ಜಾ ಇಸ್ಮಾಯಿಲ್ ಇದ್ದರು. ಶ್ರೀಗಳ ಆತಿಥ್ಯವನ್ನು ಅವರು ಸ್ವೀಕರಿಸಿದರು. ಇದು ಮುಂದೆ ಮೈಸೂರಿನ ಅರಮನೆಯ ಜತೆ ಉತ್ತಮ ಬಾಂಧವ್ಯಕ್ಕೆ ಕಾರಣವಾಯಿತು. ಶ್ರೀಗಳು ಸಂಸ್ಕೃತದ ಜತೆ ಕನ್ನಡವೂ ಬೆಳೆಯಬೇಕೆಂಬ ಮನೀಷೆ ಉಳ್ಳವರಾಗಿದ್ದರು. ಕರ್ನಾಟಕ ಏಕೀಕರಣ ಆಗಬೇಕೆಂದು ಹಿರಿಯ ಸಾಹಿತಿಗಳ ಹಾಗೂ ವಿದ್ವಾಂಸರ ಜತೆ ರ್ಚಚಿಸಿದರು. ವೀರಶೈವ ಮಹಾಸಭೆಗೆ ಚಿರಸ್ಥಾಯಿನಿಧಿ ಸ್ಥಾಪಿಸಲು 63 ಸಾವಿರ ರೂ. ದೇಣಿಗೆ ನೀಡಿದರು. 1919ರಲ್ಲಿ ಯುವರಾಜ ಜಯಚಾಮರಾಜ ಒಡೆಯರ್ ಕೈಯಲ್ಲಿ ಬೆಂಗಳೂರಿನ ಜಯದೇವ ಹಾಸ್ಟೆಲ್ ಶಂಕುಸ್ಥಾಪನೆಯನ್ನು ನೆರವೇರಿಸಿದರು. ಒಮ್ಮೆ ಮೈಸೂರಿಗೆ ಹೋದಾಗ ‘ರೋಗನಿಧಾನ ಚಿಕಿತ್ಸಾಲಯ’ವನ್ನು ಕಟ್ಟಿಸಿ ಸಮಾಜಕ್ಕೆ ಅರ್ಪಿಸಿದರು. ಮೈಸೂರಿನ ಅರಮನೆಯಲ್ಲಿ ಜಗದ್ಗುರುಗಳಿಗೆ ವೈಭವದ ರಾಜಮರ್ಯಾದೆ ದೊರಕಿತು. ಬೃಹನ್ಮಠದ ಕೀರ್ತಿ ದಿಗಂತವಿಶ್ರಾಂತವಾಯಿತು. ಬೆಳಗಾವಿ ನಗರದಲ್ಲಿ 1910ರಂದು ದೇಶಪಾಂಡೆ ಗಂಗಾಧರರಾವ್ ಸಮ್ಮುಖದಲ್ಲಿ ಸಮಾಜ ಪರಿವರ್ತನೆ ಬಗೆಗೆ ಚರ್ಚೆ ನಡೆಯಿತು. ಇದರ ಫಲವಾಗಿ ಬೃಹನ್ಮಠದಲ್ಲಿ ಭಕ್ತರ ಸಮಸ್ಯೆಗಳನ್ನು ನಿವಾರಿಸಲು ಅವಕಾಶ ಆಯಿತು. ಬೃಹನ್ಮಠವೇ ಜನತಾ ನ್ಯಾಯಾಲಯವಾಗಿ ಪರಿಣಮಿಸಿತು. ಅಲ್ಲಲ್ಲಿ ಇದ್ದ ಶಾಖಾಮಠಗಳನ್ನು ಪುನರುಜ್ಜೀವನಗೊಳಿಸಿದರು.

*ಪ್ರಸಂಗಗಳು*
– ಲಿಂಗೈಕ್ಯ: ಶ್ರೀಜಯದೇವ ಮುರುಘರಾಜೇಂದ್ರರು ಮಹಾತಪಸ್ವಿಗಳು, ಗುರು-ಲಿಂಗ-ಜಂಗಮ ಆರಾಧಕರು. ಅವರ ಬದುಕಿನಲ್ಲಿ ಹತ್ತಾರು ವಿಶೇಷ ಪ್ರಸಂಗಗಳು ನಡೆದವು. ಜಗದ್ಗುರುಗಳ ಪೀಠರೋಹಣದ ಎಷ್ಟೋ ವರ್ಷಗಳ ಮೇಲೆ ಶ್ರೀಗಳ ತಾಯಿ ಮುದ್ದುಕುಮಾರನನ್ನು ಕಾಣಲು ಹಂಬಲಿಸಿ ಬೃಹನ್ಮಠಕ್ಕೆ ಬಂದಳು. ಮಗನನ್ನು ಬಾಚಿತಬ್ಬಲು ಆಕೆಯ ಕೈಗಳು ಹಂಬಲಿಸಿದುವು. ಆದರೆ, ಮನಸ್ಸನ್ನು ಸ್ವಾಧೀನಕ್ಕೆ ತೆಗೆದುಕೊಂಡಳು. ಎಲ್ಲರಿಗೂ ಹೇಳುವಂತೆ ‘ಪ್ರಸಾದ ಸ್ವೀಕರಿಸಿ ಹೋಗಿರಿ’ ಎಂದು ಜಗದ್ಗುರುಗಳು ಅಪ್ಪಣೆ ಮಾಡಿದರು. ತಾಯಿಗೆ ‘ಹೋಗಿರಿ’ ಎಂಬ ಮಾತು ಕಠಿಣವಾಗಿ ಕೇಳಿಸಿತು. ಅನಂತರ ಮಠದ ಪರಿಜನರು ಸೀರೆ-ಖಣವನ್ನು ಕೊಟ್ಟು ಕಳುಹಿಸಿದರು. ಸ್ವಲ್ಪ ದಿನಗಳ ನಂತರ ಶ್ರೀಗಳಿಗೆ ವಿಷಯ ತಿಳಿಯಿತು. ಅನಂತರ ಮಠದ ಕಾರುಭಾರಿಗಳು ಅದನ್ನು ಭರಿಸುವಂತೆ ಸೂಚಿಸಿದರು. ಶ್ರೀಗಳು ತಮ್ಮವರಿಗೆಂದು ಒಂದು ದಮಡಿಯನ್ನೂ ನೀಡುತ್ತಿರಲಿಲ್ಲ. ಚಿತ್ರದುರ್ಗದ ಪೀಠಾರೋಹಣ ಮಾಡಿದ ಮೇಲೆ ಅಥಣಿ ಶಿವಯೋಗಿಗಳ ಆಶೀರ್ವಾದ ಪಡೆಯಲು ಬಯಸಿದರು. ಅಥಣಿಯ ಗಚ್ಚಿನಮಠದಲ್ಲಿ ಸಮಾಗಮಕ್ಕೆ ವ್ಯವಸ್ಥೆ ಆಯಿತು. ಜಗದ್ಗುರುಗಳು ಅಥಣಿಯತ್ತ ಹೊರಟರು. ಈ ವಿಷಯ ತಿಳಿದ ಶಿವಯೋಗಿಗಳು ಬೆಳಗಿನ ಜಾವ ನಾಲ್ಕು ಗಂಟೆಗೆ ಎದ್ದು ಹೊರಟರು. ಅಥಣಿಗೆ ನಾಲ್ಕು ಮೈಲಿ ದೂರದಲ್ಲಿದ್ದ ಹಳ್ಳಿಗೆ ನಡೆದೇ ಹೋದರು. ಜಗದ್ಗುರುಗಳ ದರ್ಶನವನ್ನು ಪಡೆದರು. ‘ಇಷ್ಟು ಹೊತ್ತಿನಲ್ಲಿ ಹೀಗೇಕೆ ದಯಮಾಡಿಸ ಬೇಕಾಗಿತ್ತಪ್ಪ’ ಎಂದಾಗ ಅಥಣಿಯ ಶ್ರೀ ಶಿವಯೋಗಿಗಳು ‘ನನಗೂ ಭೃತ್ಯಾಚಾರ ಬೇಕಲ್ಲಪ್ಪಾ’ ಎಂದು ಮಾರುತ್ತರ ಕೊಟ್ಟರು. ಅನಂತರ ಜಗದ್ಗುರುಗಳ ಉತ್ಸವ ಅಥಣಿಯಲ್ಲಿ ವೈಭವದಿಂದ ನಡೆಯಿತು. ಶ್ರೀಗಳು ಪಲ್ಲಕ್ಕಿಯಿಂದ ಬರಿಗಾಲಲ್ಲಿ ಇಳಿದು ನಡೆದಾಗ ಶಿವಯೋಗಿಗಳು ‘ಮೃತ್ಯುಂಜಪ್ಪಾ ಜಗದ್ಗುರುಗಳ ಆವುಗೆ ತೆಗೆದುಕೊಂಡು ಬಾ’ ಎಂದು ಹೇಳಿ ಸ್ವತಃ ಜಗದ್ಗುರುಗಳ ಪಾದಕ್ಕೆ ತೊಡಿಸಿದರು! ಇದು ಎಲ್ಲರಿಗೂ ಸಂಭ್ರಾಂತಗೊಳಿಸಿತು.

1934ರಲ್ಲಿ ಗಾಂಧೀಜಿಯವರು ಹಾವೇರಿಗೆ ಬಂದು ಜಗದ್ಗುರು ಗಳನ್ನು ಕಂಡರು. ಅವರಿಬ್ಬರ ನಡುವೆ ಅಸ್ಪಶ್ಯತಾ ನಿವಾರಣೆಯ ಕುರಿತು ಮಾತುಕತೆಗಳು ನಡೆದುವು. ಸರಳತೆ ಅವರ ಬದುಕಿನ ಗುಣವಾಗಿತ್ತು. ಪ್ರತಿನಿತ್ಯ ಶಿವಪೂಜೆ ಮಾಡುತ್ತಲೇ ಸಮಾಜ ಪರಿವರ್ತನೆಯ ಕಡೆ ಗಮನ ಕೊಡುತ್ತಿದ್ದರು. ಅವರು ಮುಳುಗುಂದ ಗವಿಮಠದ ಶಿವಲಿಂಗದೇವರನ್ನು 1928ರಲ್ಲಿ ಉತ್ತರಾಧಿಕಾರಿಯನ್ನಾಗಿ ಮಾಡಿ ಜಯವಿಭವ ಎಂಬ ನೂತನ ಹೆಸರನ್ನು ನೀಡಿ 1949ರಲ್ಲಿ ಉತ್ತರಾಧಿಕಾರತ್ವವನ್ನು ವಹಿಸಿಕೊಟ್ಟರು. ಅದಾದಮೇಲೆ ಶ್ರೀಗಳು ಶಿವಪೂಜೆಯಲ್ಲಿ ಹೆಚ್ಚು ತಲ್ಲೀನಗೊಳಿಸಿಕೊಂಡರು. ಅವರು ದೇಹಭಾವವನ್ನು ನೀಗಿಸಿಕೊಂಡರು. ಲಿಂಗಭಾವ ಸಮಸ್ತವಾಗಿ ಆವರಿಸಿಕೊಂಡಿತು. ಶ್ರೀಗಳು ಪ್ರಾಣಲಿಂಗಯೋಗದಲ್ಲಿ ನಿರತರಾದರು.

ಗ್ರಾಮೀಣ ವಿದ್ಯಾರ್ಥಿಗಳಿಗೆ ಅನ್ನ ವಸತಿ ನಿಲಯ ಕಲ್ಪಿಸಿ ಕೊಟ್ಟ ಮಹಾದಾಸೋಹಿ ಶ್ರೀ ಜಯದೇವ ಜಗದ್ಗುರುಗಳು. ಎಲ್ಲಾ ಶಾಖಾ ಮಠಗಳಲ್ಲಿಬಸವ ತತ್ವ ಪಾಲನೆ ಚಿಂತನಾ ಗೋಷ್ಠಿಗಳನ್ನು ಏರ್ಪಡಿಸುವ ಮೂಲಕ ಅಥಣಿಯ ಶ್ರೀ ಮುರುಗೇಂದ್ರ ಶ್ರೀಗಳ ಆಜ್ಞೆಯಂತೆ ಹರ್ಡೇಕರ ಮಂಜಪ್ಪನವರು ಮೃತ್ಯುಂಜಯ ಶ್ರೀಗಳು ದಾವಣಗೆರೆಯ ವಿರಕ್ತಮಠದಿಂದ ಪ್ರಾರಂಭಿಸಿದ ಮೇಲೆ ಎಲ್ಲ ಕಡೆಗಳಲ್ಲಿ ಬಸವ ಜಯಂತಿಯನ್ನು ಆಚರಿಸುವ ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸಿ ಚಿತ್ರದುರ್ಗ ಶಾಖಾ ಮೆಥಡ್ಗಳಲ್ಲಿ ಬಸವ ತತ್ವಗಳ ಪೂರಕ ಉಪನ್ಯಾಸ ಗೋಷ್ಠಿಗಳನ್ನು ಹಮ್ಮಿಕೊಂಡರು. ಕರ್ನಾಟಕದ ಮೊಟ್ಟ ಮೊದಲ ಉಚಿತ ವಿದ್ಯಾರ್ಥಿ ವಸತಿ ನಿಲಯ ಮತ್ತು ಬೋರ್ಡಿಂಗ್ ಆರಂಭವಾಗಿದ್ದುಧಾರವಾಡದ ಶ್ರೀ ಮುರುಘಾಮಠದಲ್ಲಿ ಇದಕ್ಕೆ ಕಾರಣೀಕರ್ತರು ಶ್ರೀ ಮೃತ್ಯುಂಜಯ ಸ್ವಾಮಿಗಳು ಅದರ ಹಿಂದಿನ ಪ್ರೇರಣಾ ಶಕಿ ಅಥಣಿಯ ಶ್ರೀ ಮುರುಗೇಂದ್ರ ಶಿವಯೋಗಿಗಳು.

ಬಯಲಲ್ಲಿ ಬಯಲಾದರು
ಅಂದು 02.10.1956 ರ ಸೋಮವಾರ ಬೆಳಗಿನ ಜಾವ. ಶಾ.ಶ.1878ನೇ ದುಮುಖಿನಾಮ ಸಂವತ್ಸರದ ಭಾದ್ರಪದ ಬಹುಳ ತ್ರಯೋದಶಿ ದಿನದಂದು ಲಿಂಗದ ಒಡಲನ್ನು ಅವರು ಹೊಕ್ಕರು. ಪ್ರಾಣವು ಮಹಾಬಯಲಲ್ಲಿ ಬೆರೆತುಕೊಂಡಿತು!
ಶ್ರೀಜಯದೇವ ಮುರುಘರಾಜೇಂದ್ರ ಜಗದ್ಗುರುಗಳು ಚಿತ್ರದುರ್ಗದ ಬೃಹನ್ಮಠಕ್ಕೆ ಶಿವಯೋಗದ ಸ್ಪರ್ಶ ನೀಡುವುದರೊಂದಿಗೆ ಸಾಮಾಜಿಕ ಪುನರುತ್ಥಾನಕ್ಕೆ ಕಾರಣರಾಗಿ ನೂರಾರು ವಿದ್ಯಾರ್ಥಿನಿಲಯಗಳನ್ನು ಸ್ಥಾಪಿಸಿದ ಆದ್ಯರಲ್ಲಿ ಪ್ರಪ್ರಥಮರಾದರು. ಬೃಹನ್ಮಠಕ್ಕೆ ಶಿವಯೋಗದ ಮಹಾಪಥವನ್ನು ನಿರ್ವಿುಸಿ ಯುಗಪ್ರವರ್ತಕ ಜಗದ್ಗುರುಗಳಾದರು.

ಆಕರ
ಡಾ ಮಲ್ಲೇಪುರಂ ವೆಂಕಟೇಶ ಅವರ ವಿಜಯಕರ್ನಾಟಕದಲ್ಲಿನ ಲೇಖನ
ಎಸ ಜೆ ಎಂ ಅಧ್ಯಯನ ಪೀಠ ಚಿತ್ರದುರ್ಗ
—————————————————————–
ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

Latest articles

More like this