Homeಲೇಖನಮನದಿಚ್ಚೆ ಈಡೇರಿಸುವ ತಿಮ್ಮಾಪೂರದ ಮಾರುತೇಶ

ಮನದಿಚ್ಚೆ ಈಡೇರಿಸುವ ತಿಮ್ಮಾಪೂರದ ಮಾರುತೇಶ

Published on

ಪ್ರಾಚೀನ ಪರಂಪರೆಯ ದ್ಯೋತಕವಾದ ತಿಮ್ಮಾಪುರದ ಮಾರುತೇಶ್ವರ ಹಾಗೂ ಬಸವೇಶ್ವರ ಜಾತ್ರೆ ಇದೇ ಸೆಪ್ಟೆಂಬರ್ 19ರಿಂದ 20 ಹಾಗೂ 21ರವರೆಗೆ ಮೂರು ದಿನ ವಿಜೃಂಭಣೆಯಿ0ದ ಜರುಗುವುದು.

ಮಾರುತೇಶ್ವರ ಜಾತ್ರೆಯಲ್ಲಿ ವಿಸ್ಮಯ ರೀತಿಯ ಹತಾರ ಸೇವೆ, ಕಾಯಿ ಒಡೆಯುವುದು, ಹೇಳಿಕೆ ವಿಶೇಷ ಆಕರ್ಷಣೆಯಾಗಿದೆ ಶ್ರದ್ಧೆ ಭಕ್ತಿಗಳ ಸಂಗಮ ಈ ಜಾತ್ರೆ. ತಿಮ್ಮಾಪೂರದ ಶ್ರೀ ಮಾರುತೇಶ್ವರನ ವಿಶೇಷತೆಯನ್ನು ತಿಳಿಸುವ ಪ್ರಯತ್ನ ಈ ಲೇಖನ.

ರಾಮಾಯಣದಲ್ಲಿ ಹನುಮಂತನ ರಾಮ ಭಕ್ತಿ. ಕಾರ್ಯಸಾಧನೆ, ಸಿದ್ಧಿ ಅಮೋಘವಾದದ್ದು. ಹನುಮಂತನ ಮಹಿಮೆ ಅಪಾರ, ಆತ ಲೋಕಗುರು, ಸರ್ವವ್ಯಾಪಕ, ಸರ್ವಪೂಜಕ, ಸರ್ವಸಿದ್ಧಿ ಪ್ರದಾಯಕ, ಊರ ರಕ್ಷಕ. ಹನುಮನಿಲ್ಲದ ಊರು ಈಗಲೂ ಇಲ್ಲ. ಭರತ ಭೂಮಿಯಲ್ಲಿ ಹನುಮಂತ ಜನಪ್ರಿಯ ದೇವರು. ಎಲ್ಲ ಸಮಾಜದ ಆರಾಧ್ಯ ದೈವ. ಅಂತೆಯೇ ಹನುಮಂತನ ಗುಡಿಗಳು ನಾಡಿನೆಲ್ಲೆಡೆ ಸ್ಥಾಪನೆಗೊಂಡು ಪೂಜಿಸಲ್ಪಡುತ್ತಿವೆ. ಭಾರತದಾದ್ಯಂತ ಪೌರಾಣಿಕವಾಗಿ, ಐತಿಹಾಸಿಕವಾಗಿ, ಚಾರಿತ್ರಿಕವಾಗಿ ಹನುಮಂತನ ಹಲವು ಐತಿಹ್ಯಗಳನ್ನು ಕಾಣಬಹುದು. ಅವು ಪವಿತ್ರ ಕ್ಷೇತ್ರಗಳಾಗಿ ಪ್ರಸಿದ್ಧಿ ಪಡೆದಿವೆ.

ವಿಜಾಪುರ-ಬಾಗಲಕೋಟೆ ಜಿಲ್ಲೆಯಲ್ಲಿ ಐವರು ಪ್ರಾಣದೇವರನ್ನು ಜಾಗೃತ ದೇವರೆಂದು ಕರೆಯಲಾಗಿದೆ. ಹಲಗಣಿ, ಯಲಗೂರು, ತುಳಸಿಗೇರಿ, ಅಚನೂರು ಹಾಗೂ ಕೋರವಾರ ದೇವರನ್ನು ಜಾಗೃತ ದೇವರೆನ್ನುವ ಪ್ರತೀತಿ ಇದೆ.
ಅದರಂತೆ, ಬಾಗಲಕೋಟೆ ಜಿಲ್ಲೆಯ ಹುನಗುಂದದಿ0ದ ಉತ್ತರಕ್ಕೆ ೫ ಕಿ.ಮೀ.ಅಂತರವಿರುವ ತಿಮ್ಮಾಪುರದ ಹನುಮಂತ ದೇವರನ್ನು ಕೂಡ ಜಾಗೃತ ದೇವರೆಂದು ಹೇಳಬಹುದು. ಈಗಲೂ ಇಲ್ಲಿ ಪವಾಡ ಸದೃಶ ಘಟನೆಗಳು ನಡೆಯುತ್ತಿವೆ. ಆದರೆ ಇದಕ್ಕೆ ಸರಿಯಾದ ಪ್ರಚಾರ ಸಿಕ್ಕಿಲ್ಲ ಎಂದೇ ಹೇಳಬಹುದು.

ಹಿನ್ನೆಲೆ
ಈಗಿರುವ ತಿಮ್ಮಾಪೂರದ ಹನುಮಂತ ದೇವರ ಮೂರ್ತಿ ಮೊದಲು ಹುನಗುಂದ ತಾಲ್ಲೂಕಿನ ದಮ್ಮೂರ ಗುಡ್ಡದಲ್ಲಿತ್ತಂತೆ. ಆ ಮೂರ್ತಿಯನ್ನು ತಂದು ತಿಮ್ಮಾಪೂರದಲ್ಲಿ ಪ್ರತಿಷ್ಠಾಪಿಸಿದ ಸಂಗತಿಯನ್ನು ಗುಡಿಯ ಆರ್ಚಕರು ಈಗಲೂ ಕಣ್ಣಿಗೆ ಕಟ್ಟುವಂತೆ ಹೇಳುತ್ತಾರೆ. ಈ ಜಾತ್ರೆಯು ರವಿವಾರ ಜರುಗುವುದಲ್ಲದೆ ಡೊಳ್ಳುಬಾರಿಸಿ ಉತ್ಸಾಹ ತುಂಬುವುದು ಈ ಜಾತ್ರೆಯ ವಿಶೇಷವಾಗಿದೆ. ಈ ಜಾತ್ರೆಯು ಉತ್ತರಿ ಮಳೆ ಕೂಡಿದಾಗ ಬರುತ್ತದೆ. ಅದಕ್ಕಾಗಿ ಈ ಜಾತ್ರೆಯು “ಉತ್ತರಿ ಮಳೆ ಜಾತ್ರೆ” ಎಂದು ಈ ಭಾಗದಲ್ಲಿ ಪ್ರಸಿದ್ಧಿ ಪಡೆದಿದೆ.

ಹತಾರ ಸೇವೆ
ಈ ಜಾತ್ರೆಯ ವಿಶೇಷವೆಂದರೆ “ಹತಾರ ಸೇವೆ”. ಪೂಜಾರಿಯ ಮೈಯಲ್ಲಿ ದೇವರು ಬಂದು ಹರಿತವಾದ ಖಡ್ಗ(ಹತಾರ)ದಿಂದ ತೊಡೆ ಹಾಗೂ ಹೊಟ್ಟೆಗೆ ಹೊಡೆದುಕೊಳ್ಳುವ ದೃಶ್ಯ ರೋಮಾಂಚಕವಾದುದು. ಈಗ ಹತಾರ ಸೇವೆಯ ಜಾತ್ರೆಗಳು ಬಹಳ ಕಡಿಮೆ. ಆದರೆ ತಿಮ್ಮಾಪೂರದಲ್ಲಿ ೨೧ನೇ ಶತಮಾನದ ಈ ಕಾಲಘಟ್ಟದಲ್ಲಿಯೂ ಉಳಿದುಕೊಂಡು ಬಂದದ್ದು ಒಂದು ವಿಸ್ಮಯ. ಇದು ಭಾರತೀಯ ಸಂಸ್ಕೃತಿಯ ಪ್ರತೀಕ.
ಕಾಯಿ ಒಡೆಯುವ ಸಂಭ್ರಮ

ಜಾತ್ರೆಯ ದಿನ ಸಾಯಂಕಾಲ ಸಕಲ ವಾದ್ಯಗಳೊಂದಿಗೆ ಗುಡಿ ಪ್ರದಕ್ಷಿಣೆ ಹಾಕುವ ದೃಶ್ಯ ರಂಜನೀಯ. ಪ್ರತಿ ಸುತ್ತಿಗೂ ಪ್ರತಿಯೊಂದು ಮನೆಯವರು ಸುತ್ತಿಗೊಂದರ0ತೆ “ಸುತಕಾಯಿ” ಒಡೆಯುವ ಸಂಪ್ರದಾಯ ಇಲ್ಲಿನ ವಿಶೇಷ. ಮಾರುತೇಶ್ವರನ ಗುಡಿ ಎದುರು ನಾಲ್ಕು ಜನ ಕಂಬಳಿ ಹಿಡಿದು ನಿಂತಿರುತ್ತಾರೆ. ಅದರ ಒಳಗೆ ತೆಂಗಿನಕಾಯಿ ಜೋರಾಗಿ ಒಗೆದು ಒಡೆಯುವುದು ಎಲ್ಲರಿಗೂ ಖುಷಿ ಕೊಡುವಂತಹದ್ದು. ಜಾತ್ರೆಯ ಈ ಸಂದರ್ಭದಲ್ಲಿ ಹತ್ತಾರು ಸಾವಿರ ತೆಂಗಿನಕಾಯಿಗಳು ಮಾರಾಟವಾಗುತ್ತದೆ.

ಪವಾಡ ಸದೃಶ ಘಟನೆಗಳು
ತಿಮ್ಮಾಪುರದ ಶ್ರೀ ಮಾರುತಿ ದೇವರ ಪವಾಡ ಸದೃಶ ಘಟನೆಗಳು ಈಗಲೂ ನಡೆಯುತ್ತಿರುವುದು ವಿಶೇಷ. ಅವುಗಳ ಪೈಕಿ ಕೆಲವನ್ನು ಇಲ್ಲಿ ಕೊಡಲಾಗಿದೆ. ಇಲ್ಲಿಗೆ ಬರುವ ಭಕ್ತರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡು ದೇವರಿಗೆ ಹೂ ಏರಿಸುತ್ತಾರೆ, ಕೈಮುಗಿದು ಪ್ರಾರ್ಥಿಸುತ್ತಾರೆ. ಆ ಹೂ ತನ್ನಿಂದ ತಾನೇ ಕೆಳಗೆ ಬೀಳುತ್ತದೆ. ಹೂ ಬಿದ್ದರೆ ತಮ್ಮ ಬೇಡಿಕೆ ಈಡೇರುತ್ತದೆ ಎಂಬ ನಂಬಿಕೆ ಇಲ್ಲಿನ ಜನರಲ್ಲಿ ವ್ಯಾಪಕವಾಗಿದೆ.

ಈ ಊರಿಗೆ ಯಾರೇ ಅಧಿಕಾರಿಗಳು, ಸ್ವಾಮಿಗಳು ಬಂದರೂ ಶ್ರೀ ಮಾರುತೇಶ್ವರನ ದರ್ಶನ ಪಡೆಯಲೇಬೇಕು. ದೇವರ ದರ್ಶನ ಪಡೆಯದೇ ಹಾಗೇ ಹೊರಟರೆ ಅವರ ವಾಹನ ಚಾಲನೆಯೇ ಆಗುವುದಿಲ್ಲ. ಅಲ್ಲಿ ಕುಳಿತ ಗ್ರಾಮಸ್ಥರು “ನೀವು ಗುಡಿಗೆ ಹೋಗಿ ಬನ್ನಿ” ಎಂದು ಸಲಹೆ ನೀಡುತ್ತಾರೆ. ಅವರು ಗುಡಿಗೆ ಹೋಗಿ ಬಂದ ನಂತರ ಗಾಡಿಯು(ವಾಹನ) ಚಾಲೂ ಆಗುತ್ತದೆ. ಇಂತಹ ಅನೇಕ ಘಟನೆಗಳು ಇಲ್ಲಿ ಈಗಲೂ ಸಾಕಷ್ಟು ನಡೆಯುತ್ತಿವೆ.

ಸರ್ಕಾರ ಒಂದು ಆದೇಶವನ್ನು ಹೊರಡಿಸಿತ್ತು. ಅದರ ಪ್ರಕಾರ ಗುಡಿಯಲ್ಲಿರುವ ಆಯುಧಗಳನ್ನು ತಂದು ಸರ್ಕಾರಕ್ಕೆ ಒಪ್ಪಿಸಬೇಕಿತ್ತು. ಆ ಪ್ರಕಾರ ತಿಮ್ಮಾಪುರಕ್ಕೆ ಬಂದ ಒಬ್ಬ ಅಧಿಕಾರಿ ಮಾರುತೇಶ್ವರ ಗುಡಿಯ ಖಡ್ಗ ತೆಗೆದುಕೊಳ್ಳಲು ಬಂದರು. ಆದರೆ ಖಡ್ಗ ತೆಗೆದುಕೊಳ್ಳಲು ಆಗದೆ ಹಾಗೇ ವಾಪಸ್ ಹೋದದ್ದು ಇತಿಹಾಸ. ಗ್ರಾಮಸ್ಥರು ಈ ಘಟನೆಯನ್ನು ಈಗಲೂ ಕಣ್ಣಿಗೆ ಕಟ್ಟುವಂತೆ ಹೇಳುತ್ತಾರೆ.

ಹೇಳಿಕೆ
ಪೂಜಾರಿಯ ಮೈಯ್ಯಲ್ಲಿ ದೇವರು ಬಂದು ನುಡಿಸುವ ನುಡಿಗೆ ಹೇಳಿಕೆ ಎನ್ನುವರು. ಉತ್ತರಿ ಮಳೆ ಕೂಡಿದಾಗ ಬರುವ ಈ ಜಾತ್ರೆ ರೈತರಿಗೆ ಬಹಳ ಉಪಯುಕ್ತ ಕಾಲ. ರೈತರು ಹಿಂಗಾರಿ ಬೆಳೆ ಬಿತ್ತುವ ದಿನಗಳು. ಈ ಜಾತ್ರೆಯಲ್ಲಿನ ಹನುಮಪ್ಪನ ಹೇಳಿಕೆ ಪ್ರಸಿದ್ಧಿ ಪಡೆದಿದೆ. ಮುಂದಿನ ಮಳೆ ಬೆಳೆ ಹಾಗೂ ಬದುಕಿಗೆ ಸಂಬAಧಿಸಿದ ಹಲವಾರು ವಿಷಯಗಳು ಹೇಳಿಕೆಯಲ್ಲಿರುತ್ತವೆ. ಈ ಭಾಗದಲ್ಲಿ ಪ್ರಸಿದ್ಧಿ ಪಡೆದ ಹನುಮಪ್ಪನ ಹೇಳಿಕೆಯ ಕೆಲವು ಮಾದರಿಗಳನ್ನು ಇಲ್ಲಿ ಉಲ್ಲೇಖಿಸಲಾಗಿದೆ.

“ಉತ್ತರಿ, ಹಸ್ತ, ಚಿತ್ತಾ ಸಾಧಾರಣ ಹತ್ಯಾಗ ಮುತ್ತು ಇಟ್ಟೀನಿ”- ಈ ಹೇಳಿಕೆಯಂತೆ ಆ ವರ್ಷ ಮಳೆ ಸಾಧಾರಣ ಆದರೂ ಹತ್ತಿ ಸಾಕಷ್ಟು ಬೆಳೆಯಿತು ಎಂಬುದನ್ನು ಗ್ರಾಮಸ್ಥರು ಈಗಲೂ ಸ್ಮರಿಸಿಕೊಳ್ಳುತ್ತಾರೆ.
೨೦೦೬ನೇ ವರ್ಷದ ಹೇಳಿಕೆ ಈ ರೀತಿಯಾಗಿತ್ತು: ಬಿಳಿ ಬಸವಣ್ಣ, ಕೆಂದ ಬಸವಣ್ಣ, ಕರೇ ಬಸವಣ್ಣ ಜೋಡಿಲೇ ಬರತಾವು, ಆದರೆ ಕರೀ ಬಸವಣ್ಣ ಅರ್ಧ ಗುಡ್ಡಕ್ಕೆ ಬಂದು ನಿಂದರುತ್ತಾನೆ. ಆದರೆ ರೈತರೇ ಸರಿಪಡಿಸಿಕೊಳ್ಳಬೇಕು ಎಂಬುದಾಗಿತ್ತು.

“ಮುಂಗಾರಿ ಒಂದು ಕಡಿಮೆ, ಹಿಂಗಾರಿ ಒಂದು ಹೆಚ್ಚು, ಸರ್ವ ಧಾನ್ಯ ಉಡಿ ತುಂಬಿ ಹೆಚ್ಚಾತು”- ಅಂದಂತೆ ಆ ವರ್ಷ ಅಕ್ಕಡಿ ಕಾಳು ಹೆಚ್ಚು ಬೆಳೆದವು. ಮುಂಗಾರಿಗಿಂತ ಹಿಂಗಾರಿ ಬೆಳೆ ಹೆಚ್ಚು ಬಂದದ್ದನ್ನು ಜನ ಈಗಲೂ ನೆನಪಿಸಿಕೊಳ್ಳುತ್ತಾರೆ. ಹೀಗೆ ಹನುಮಂತ ದೇವರ ಹೇಳಿಕೆ ವರ್ಷವಿಡೀ ಈ ಭಾಗದ ಜನರ ಬಾಯಲ್ಲಿ ಇರುತ್ತದೆ.

ಶ್ರೀ ಮಾರುತೇಶ್ವರ ಜಾತ್ರೆಯ ಮರುದಿನ ಸಂಜೆ ಶ್ರೀ ಬಸವೇಶ್ವರ ರಥೋತ್ಸವ ವಿಜೃಂಭಣೆಯಿಂದ ಜರುಗುವುದು. ಈ ಎಲ್ಲ ಜಾತ್ರೆಯ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ನಾವು ನೀವೆಲ್ಲರೂ ಪುನೀತರಾಗೋಣ. ಹಾಗಾದರೆ ಬನ್ನಿ ತಿಮ್ಮಾಪುರದ ಮಾರುತೇಶ್ವರ, ಬಸವೇಶ್ವರ ಜಾತ್ರೆಗೆ. ದೇವರ ಆಶೀರ್ವಾದ ಪಡೆಯಿರಿ.

ಜಗದೀಶ ಮಲ್ಲಪ್ಪ ಹದ್ಲಿ,
ತಿಮ್ಮಾಪುರ (ಸಾ), ಹುನಗುಂದ ತಾಲ್ಲೂಕು, ಬಾಗಲಕೋಟೆ ಜಿಲ್ಲೆ.
. ಮೊಬೈಲ್ ನಂಬರ: 9611761979

Latest articles

More like this