Homeಲೇಖನಅಪ್ರತಿಮ ಜನಪದ ಕಲಾವಿದೆ ನಿರ್ದೇಶಕಿ ವಿಶ್ವೇಶ್ವರಿ ಹಿರೇಮಠ

ಅಪ್ರತಿಮ ಜನಪದ ಕಲಾವಿದೆ ನಿರ್ದೇಶಕಿ ವಿಶ್ವೇಶ್ವರಿ ಹಿರೇಮಠ

Published on

ಜಾನಪದ ಕಲೆಗಾಗಿಗೆಯೇ ಜೀವನವನ್ನು ಮೀಸಲಿಟ್ಟ ಅಪರೂಪದ ಹಿರೇಮಠ ರಂಗ ದಂಪತಿಗಳ ನಿರಂತರ ಕಾರ್ಯ ಶ್ಲಾಘನೀಯವಾದದ್ದು. ವಿಶ್ವೇಶ್ವರಿ ಹಿರೇಮಠ ಅವರು ನನಗೆ 1982 ರಿಂದಲೂ ಪರಿಚಯ. ನಾನಾಗ ಹೈಸ್ಕೂಲ್ ವಿದ್ಯಾರ್ಥಿ ಕಲೆ ನಾಟಕ ಗೀತೆ ಹೀಗೆ ಯುವಜನ ಸೇವಾ ಇಲಾಖೆಯವರು ಪ್ರತಿ ವರ್ಷ ಯುವ ಜನ ಮೇಳ ಏರ್ಪಡಿಸುತ್ತಿದ್ದರು. 1982 ರಿಂದ 1984 ರ ವರೆಗೆ ನಾನು ಮತ್ತು ಅವರು ಯುವಜನ ಸೇವಾ ಇಲಾಖೆ ಅವರು ಏರ್ಪಡಿಸುವ ಯುವಜನ ಮೇಳದಲ್ಲಿ ಪಾಲ್ಗೊಂಡಿದ್ದೆವು.

ನನಗಿಂತ ಐದು ವರ್ಷ ದೊಡ್ಡವರಾದ ವಿಶ್ವೇಶ್ವರಿ ತಮ್ಮೂರಿನ ತಂಡವನ್ನು ತೆಗೆದುಕೊಂಡು ಅಳ್ನಾವರ ಪಂತ್ ಬಾಳೆಕುಂದ್ರಿ ಗೋಡಚಿಯ ಯುವ ಜನ ಮೇಳದೊಳಗೆ ಪಾಲ್ಗೊಂಡಿದ್ದರು. ಪಾದರಸದಂತೆ ಕಾರ್ಯಕ್ರಮದಲ್ಲಿ ಓಡಾಡುತ್ತ ಸಹ ಕಲಾವಿದರನ್ನು ಪ್ರೋತ್ಸಾಹಿಸುತ್ತಾ ರಂಗ ತಾಲೀಮು ಮಾಡಿಸುತ್ತಿದ್ದರು. ನಾನು ನಮ್ಮೂರಿನಿಂದ ನಾಟಕ ಸಮೂಹ ಗೀತೆ ಮುಂತಾದ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದೆವು. ಅದಾದ ನಂತರ 42 ವರುಷಗಳ ಮೇಲೆ10 ಜನವರಿ 2026 ರಂದು ಧಾರವಾಡ ವಿದ್ಯಾವರ್ಧಕ ಸಂಘದ ಡಾ ಎಂ ಎಸ್ ಸುಂಕಾಪುರ ಅವರ ಮಕ್ಕಳಾದ ಶೋಭಾ ಸಂಗಣ್ಣವರ ಪುಷ್ಪಾ ಪಾಟೀಲ ಇವರ ಆಗ್ರಹದ ಮೇರೆಗೆ ನಾನು ದತ್ತಿ ಉಪನ್ಯಾಸ ನೀಡಲು ಹೋದಾಗ ಮತ್ತೆ ವಿಶ್ವೇಶ್ವರಿ ಹಿರೇಮಠ ಅವರ ನೇರ ಸಂಪರ್ಕವಾಯಿತು. ಅದೇ ಚಲನಶೀಲತೆ ಸೃಜನಶೀಲ ಸಾಹಿತ್ಯ ಒಲವು ವೈಚಾರಿಕತೆ ಮತ್ತು ಸರಳತೆ ಕಾಣುತ್ತಿತ್ತು. ನಾಲ್ಕು ದಶಕದ ಮೇಲೆ ಒಬ್ಬ ರಂಗ ಕರ್ಮಿಯನ್ನು ಮತ್ತೆ ಭೇಟಿ ಆಗಿದ್ದು ನನಗೆ ಅತೀವ ಸಂತಸ ತಂದಿತು.

*ಜನನ ಮತ್ತು ಕುಟುಂಬ*
ತಾಯಿ ನೀಲಾಂಬಿಕಾದೇವಿ ಅಪ್ಪ ರುದ್ರಯ್ಯ ಕಲ್ಮಠ
ಇವರ ಹೊಟ್ಟೆಯಲ್ಲಿ 17 ಡಿಸೆಂಬರ್ 1961 ರಂದು ಜನಿಸಿದರು ಅಪ್ಪ ರುದ್ರಯ್ಯ ಕಲ್ಮಠ ಇವರು ಸ್ವಾತಂತ್ರ್ಯ ಹೋರಾಟಗಾರರು ಕಿತ್ತೂರಿನಿಂದ ಹೋಗಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಸಾಬರಮತಿ ಆಶ್ರಮದಲ್ಲಿ ಗಾಂಧೀಜಿ ಅವರೊಂದಿಗೆ ಉಳಿದು ಬಂದವರು .ನಂತರ ಗ್ರಾಮ ಸೇವಕರಾಗಿ,ಕೃಷಿ ಅಧಿಕಾರಿಗಳಾಗಿ ಕೆಲಸ ಮಾಡಿದವರು 6 ಜನ ಹೆಣ್ಣು ಮಕ್ಕಳು ಇಬ್ಬರು ಗಂಡು ಮಕ್ಕಳು ಕೊನೆ ಮಗಳಾಗಿ ವಿಶ್ವೇಶ್ವರಿ. ಮಕ್ಕಳಿಗೆ ಆಸ್ತಿ ಮಾಡಬಾರದು ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಬೇಕು ಎನ್ನುವ ತತ್ವದಲ್ಲಿ ಎಲ್ಲರಿಗೂ ಒಳ್ಳೆಯ ವಿದ್ಯಾಭ್ಯಾಸವನ್ನು ಅವರ ತಂದೆ ತಾಯಿಯವರು ಕೊಟ್ಟಿದ್ದಾರೆ.ಅಕ್ಕಂದಿರು ಒಬ್ಬಳು ಶಿಕ್ಷಕಿಯಾಗಿ,ಇಬ್ಬರು ಪ್ರಾಧ್ಯಾಪಕರಾಗಿ ಒಬ್ಬಳು ವೈದ್ಯೆಯಾಗಿ, ವಿಶ್ವೇಶ್ವರಿ ಕಲಾವಿದೆಯಾಗಿ,ಅಣ್ಣ ಜೀವ ವಿಮಾ ಡಿವಿಜಿನಲ್ ಮ್ಯಾನೇಜರ್,ತಮ್ಮ ತೋಟಗಾರಿಕಾ ಇಲಾಖೆಯಲ್ಲಿ ಆಫೀಸರ್ ಆಗಿ ನಿವೃತ್ತಿ ಹೊಂದಿದ್ದರು.

ಡಿಗ್ರಿ ಆದ ಮೇಲೆ 1984 ರಲ್ಲಿ ನೀನಾಸಂ ಜನಸ್ಪಂದನ ರಂಗ ತರಬೇತಿ ಶಿಬಿರದಲ್ಲಿ ಪಾಲ್ಗೊಂಡು ಮೊಟ್ಟಮೊದಲ ಹವ್ಯಾಸಿ ರಂಗ ನಾಟಕ ಧರ್ಮಪುರಿಯ ಶ್ವೇತ ವೃತ್ತ ದಲ್ಲಿ ಪಾಲ್ಗೊಂಡು ಜೋಶಿಯವರ ನಿರ್ದೇಶನದಲ್ಲಿ ರಂಗ ಪ್ರವೇಶ ಮಾಡಿದ ವಿಶ್ವೇಶ್ವರಿ ಮುಂದೆ ರಂಗಾಸಕ್ತರಾದರು. ಅಲ್ಲಿ ಕಲಾವಿದೆಯಾಗಿ ಅವರನ್ನು ಗುರುತಿಸಿದ ನೀನಾಸಂ ನ ಮ್ಯಾಗ್ಸೆಸ್ಸೆ ಪ್ರಶಸ್ತಿ ಪಡೆದ ಕೆ ವಿ ಸುಬ್ಬಣ್ಣವರು ನಿನಾಸಂ ರಂಗ ಶಿಕ್ಷಣ ಕೇಂದ್ರಕ್ಕೆ ಕಳಿಸಿಕೊಡಲು ವಿಶ್ವೇಶ್ವರಿ ಅವರ ತಂದೆಯವರನ್ನು ಒಪ್ಪಿಸಿದರು. ಮೊದಲು ನಾಟಕ ಮಾಡಲು ಅಥವಾ ಕಲಿಯಲು ಕಳಿಸಿಕೊಡದ ಸಂಬಂಧಿಗಳು ವಿರೋಧಿಸಿದರು ಆದರೂ ಮನೆಯವರ ಬೆಂಬಲದಿಂದ ನಿನಾಸಂ ಸೇರಿ 1985 ರಲ್ಲಿ ನೀನಾಸಂನಿಂದ ಹೊರಬಂದು ತಮ್ಮ ಆಸಕ್ತಿಯನ್ನು ನಿರ್ದೇಶನದತ್ತ ತೊಡಗಿಸಿಕೊಂಡರು,

ನಾಟಕವೆಂದರೆ ಮೂಗು ಮುರಿಯುವ ಕಾಲದಲ್ಲಿ ಮಹಿಳೆಯರೇ ರಂಗಭೂಮಿಗೆ ಬರಲು ಹಿಂಜರಿಯುತ್ತಿರುವಾಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನನ್ನನ್ನ ನಿರ್ದೇಶಕಿಯಾಗಿ ಆಯ್ಕೆ ಮಾಡಿ ಕರ್ನಾಟಕದ ಹಲವಾರು ಜಿಲ್ಲೆಗಳಲ್ಲಿ ರಂಗ ತರಬೇತಿಗಳ ಶಿಬಿರಗಳನ್ನ ನಿರ್ದೇಶಿಸಲು ಕಳಿಸಿಕೊಟ್ಟರು ಉತ್ತರ ಕರ್ನಾಟಕದ ಮೊಟ್ಟ ಮೊದಲ ಮಹಿಳಾ ನಿರ್ದೇಶಕಿಯಾಗಿ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲೂ ರಂಗ ತರಬೇತಿಗಳ ಶಿಬಿರಗಳನ್ನು ಮಾಡಿ ನಾಟಕಗಳನ್ನು ಮಾಡಿಸಿ ಸಾಕಷ್ಟು ಮಹಿಳೆಯರನ್ನು ರಂಗಕ್ಕೆ ತಂದ ಹೆಮ್ಮೆ ವಿಶ್ವೇಶ್ವರಿ ಅವರದ್ದು.

*ಮದುವೆಗೆ ಪೂರಕವಾದ ರಂಗ ಅಭಿರುಚಿ*

ನೀನಾಸಮ್ ನಿಂದ ಡಿಪ್ಲೋಮಾ ಮುಗಿಸಿಕೊಂಡು ಬಂದ ಮೇಲೆ ವಿಶ್ವೇಶ್ವರಿ ಮತ್ತು ಬಸಲಿಂಗಯ್ಯ ಅವರಿಬ್ಬರೂ
ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪದವಿ ಡಾ ಕಲ್ಬುರ್ಗಿ ಸರ್ ಮಾರ್ಗದರ್ಶನದಲ್ಲಿ ಮುಗಿಸಿ 89ರಲ್ಲಿ ಜಾನಪದ ಹಾಡುಗಾರ ನನ್ನೊಂದಿಗೆ ನಿನಾಸಂ ನಲ್ಲಿ ನಟನಾಗಿ ಗಾಯಕ ನಾಗಿ ಗುರುತಿಸಿಕೊಂಡ ಹಿರೇಮಠದೊಂದಿಗೆ 1989 ರಲ್ಲಿ ಮದುವೆಯಾದರು. ಇಬ್ಬರದು ಒಂದೇ ಕ್ಷೇತ್ರ ಆಗಿರುವುದರಿಂದ ವಿಶ್ವೇಶ್ವರಿ ಅವರ ನಾಟಕಗಳಿಗೆ ಸಂಗೀತ ನೀಡುವುದರ ಜೊತೆಗೆ ನಾಟಕಗಳನ್ನು,ಶಿಬಿರಗಳನ್ನು ಮಾಡಿದರು.
ಬಸವಲಿಂಗಯ್ಯ ಹಿರೇಮಠ ಅವರು ಪಕ್ಕಾ ಜಾನಪದ ಹಾಡುಗಾರರು,ಜಾನಪದ ರಂಗಭೂಮಿಯನ್ನು ಅಧ್ಯಯನ ಮಾಡಿದವರಾದ್ದರಿಂದ ವಿಶ್ವೇಶ್ವರಿ ಕೂಡಾ ಆಧುನಿಕ ರಂಗಭೂಮಿಯ ನೋಟಗಳನ್ನು ಜನಪದ ರಂಗಭೂಮಿಯತ್ತ ಹೊರಳಿಸಿ ಹೊಸ ಸಾಧ್ಯತೆಗಳೊಂದಿಗೆ ಜನಪದ ಬಯಲಾಟಗಳನ್ನ ಪರಿಷ್ಕರಿಸಿ ನಿರ್ದೇಶಿಸಿ ಶ್ರೀ ಕೃಷ್ಣ ಪಾರಿಜಾತ ಸಾವಿರದ ಮುನ್ನೂರಕ್ಕೂ ಹೆಚ್ಚು ಪ್ರಯೋಗಗಳನ್ನು ಕಂಡಿದ್ದು ಸಂಗ್ಯಾಬಾಳ್ಯ ರಾಧನಾಟ ನಿಜಗುಣ ಆಟ ಬಯಲಾಟಗಳಿಗೆ ಆಧುನಿಕ ಸ್ಪರ್ಶ ನೀಡಿದರು. ಈ ಮಧ್ಯೆ ಡಾ ಸ ಜ ನಾಗಲೋಟಿಮಠ ಹಾಗೂ ಇಳಕಲ್ ಮಹಾಂತಪ್ಪಗಳ ಜೊತೆಗೆ ಮಹಾಂತ ಜೋಳಿಗೆ ಕಾರ್ಯಕ್ರಮದಲ್ಲಿ ಅಥಣಿಯ ಸುತ್ತಮುತ್ತಲಿನ 80 ಹಳ್ಳಿಗಳಿಗೆ ದೇವದಾಸಿ ವಿಮೋಚನಾ ಸಂಸ್ಥೆಯ ಬಿ ಎಲ್ ಪಾಟೀಲ್ ಅವರೊಂದಿಗೆ ಕೈಜೋಡಿಸಿ ಬೀದಿ ನಾಟಕಗಳನ್ನ ಮಾಡಿಸಿ ವೈಚಾರಿಕತೆಗೆ ಕರೆ ಕೊಟ್ಟರು ರಂಗ ದಂಪತಿಗಳು. ಕೊಕಟನೂರ ಅಂತಹ ಗ್ರಾಮದಲ್ಲಿ ಅಲ್ಲಿಯ ಸಂಪ್ರದಾಯವಾದಿಗಳ ಮಧ್ಯದಲ್ಲಿ ವಿರೋಧದ ನಡುವೆಯೂ ಮೂಢನಂಬಿಕೆಗಳ ಮತ್ತು ಮುತ್ತು ಕಟ್ಟುವುದನ್ನು ವಿರೋಧಿಸಿ ಬೀದಿ ನಾಟಕವನ್ನು ಮಾಡಿಸಿ ಹೆಗ್ಗಳಿಕೆ ಪಡೆದರು. ದೇವದಾಸಿಯರ ಮಕ್ಕಳಿಗೆ ಹಿಂದಿ ಹಾಗೂ ಮರಾಠಿ ಭಾಷೆಗಳಲ್ಲಿ ಏಡ್ಸ್ ಕುರಿತು ಮೂಢನಂಬಿಕೆಗಳ ಕುರಿತು ನಾಟಕಗಳನ್ನು ರಚಿಸಿ ನಿರ್ದೇಶಿಸಿ ದೆಹಲಿ, ಒರಿಸ್ಸಾ, ವಾರಣಾಸಿ, ಮುಂಬೈ ಮುಂತಾದ ರಾಜ್ಯಗಳಲ್ಲಿ ಪ್ರದರ್ಶನ ಮಾಡಿದ್ದಾರೆ.

ಖರೆ ಖರೇ ಸಂಗ್ಯಾ ಬಾಳ್ಯಾ

ಒಂದು ದಿನ ಡಾ ಎಂ ಎಂ ಕಲ್ಬುರ್ಗಿ ಸರ್
ಲಿಂಗೈಕ್ಯ  ಬಸಲಿಂಗಯ್ಯ ಮತ್ತು ವಿಶ್ವೇಶ್ವರಿ ಇವರಿಬ್ಬರನ್ನು ಕರೆದು ನಾನು ಈ ಸಂಗ್ಯಾ ಬಾಳ್ಯ ನಾಟಕದ ಬಗ್ಗೆ ಬೇರೆ ಯೋಚನೆ ಮಾಡಿ ಒಂದು ನಾಟಕ ಬರೀತೀನಿ. ನೀವು ಅದನ್ನು ಪ್ರಯೋಗ ಮಾಡಿಸ್ತೀರಾ ಅಂತ ಕೇಳಿದರು.
ಪತ್ತಾರ ಮಾಸ್ತರ ಕೈವಾಡದಿಂದ ಗಂಗೆ ಹೆಸರುಕಟ್ಟಿತು ಅವಳು ದೊಡ್ಡ ಮನೆತನದ ಮಗಳು ಮತ್ತು ಸೊಸೆ. ಆಗಿನ ಕಾಲದಲ್ಲಿ ಹೆಣ್ಣು ಮಕ್ಕಳು ಪತ್ತಾರನ ಮನೆಗೆ ಅಥವಾ ದೇವರಿಗೆ ಮಾತ್ರ ಹೊರ ಹೋಗುತ್ತಿದ್ದರು ಆದ್ದರಿಂದ ಆಭರಣ ಮಾಡಿಸಲು ಪತ್ತಾರನ ಮನೆಗೆ ಹೋದಾಗ ಅವಳ ಮೇಲೆ ಕಣ್ಣು ಹಾಕಿದ ಪತ್ತಾರ ಅವಳನ್ನು ತನ್ನವಳನ್ನಾಗಿ ಮಾಡಿಕೊಳ್ಳಲು ಪ್ರಯತ್ನಿಸುತ್ತಾನೆ ಅವಳು ಒಪ್ಪಿಕೊಳ್ಳದಿದ್ದ ಸಂದರ್ಭದಲ್ಲಿ ಅವಳ ಮೇಲೆ ಇಂತಹ ಕಥೆಯನ್ನು ಕಟ್ಟಿದ್ದಾನೆ ಅನ್ನುವ ಕುರಿತು ಕಲಬುರ್ಗಿ ಸರ್ ಹಿರೇಮಠ ದಂಪತಿಗಳ ಮುಂದೆ ವಿವರವಾಗಿ ಹೇಳುತ್ತಾರೆ. ಆಗ ಇವರಿಬ್ಬರೂ ಸರ್ ನೀವು ನಾಟಕ ಬರೆಯಿರಿ ನಾವು ಪ್ರಯತ್ನಿಸುತ್ತೇವೆ ಎಂದರು. ಆಯ್ತು ನಾಟಕವನ್ನು ನೀವೇ ಮಾಡಿಸಬೇಕು ಅಂತ ಹೇಳಿದ್ದರಿಂದ ಹಿರೇಮಠ ದಂಪತಿಗಳ ಆ ನಾಟಕವನ್ನು ಕೈಗೆತ್ತಿಕೊಂಡು 2010ರಲ್ಲಿ ಜಾನಪದ ಸಂಶೋಧನಾ ಕೇಂದ್ರದ ಕಲಾವಿದರಿಂದ ಕರ್ನಾಟಕದಾದ್ಯಂತ 30ಕ್ಕೂ ಹೆಚ್ಚು ಪ್ರಯೋಗಗಳನ್ನು ಮಾಡಿ ಯಶಸ್ವಿಯಾಯಿತು .ಸಾಕಷ್ಟು ವಿಮರ್ಶೆಗಳು ನಾಟಕ ಕುರಿತು ಬಂದವು ಆ ನಾಟಕಕ್ಕೆ ನನ್ನ ಸಲಹೆಯಂತೆ ಕಲ್ಬುರ್ಗಿ ಸರ್ ಖರೆ ಖರೇ ಸಂಗ್ಯಾ ಬಾಳ್ಯಾ ಅನ್ನೋಣ ಅಂತ ಹೇಳಿದ್ದು ವಿಶ್ವೇಶ್ವರಿ ನೆನೆಯುತ್ತಾರೆ. ಖರೆ ಖರೆ ಸಂಗ್ಯಾ ಬಾಳ್ಯಾ ಅಂದಿದ್ದಕ್ಕೆ ಕರ್ನಾಟಕದ ತುಂಬಾ ದೊಡ್ಡ ಚರ್ಚೆಗಳು ಅದವು.ಪತ್ರಿಕೆಗಳಲ್ಲಿ ಕಲಬುರ್ಗಿ ಸರ್ ಅವರನ್ನು ಕುರಿತು ಹೆಚ್ಚು ವಿರೋಧದ ಮಾತುಗಳು ಬಂದವು.ಈ ನಡುವೆ 30ಕ್ಕೂ ಹೆಚ್ಚು ಪ್ರಯೋಗಗಳನ್ನು ಕರ್ನಾಟಕದಾದ್ಯಂತ ವಿಶ್ವೇಶ್ವರಿ ನಿರ್ದೇಶನ ಹಾಗೂ ಬಸವಲಿಂಗಯ್ಯ ಅವರ ಸಂಗೀತ ನಿರ್ದೇಶನದಲ್ಲಿ ನಾಟಕ ಪ್ರಯೋಗಗೊಂಡಿತು.

ಸಾಮಾಜಿಕ ಸೇವೆ ;

ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯರಾಗಿ ಸಿಜಿಕೆ ಅವರು ಅಧ್ಯಕ್ಷರಿದ್ದಾಗ ಮೂರು ವರ್ಷ ಕೆಲಸ ಮಾಡಿದ್ದಾರೆ
ದೂರದರ್ಶನ ಹಾಗೂ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಶೈಕ್ಷಣಿಕ ಸಮಿತಿ ಸದಸ್ಯರಾಗಿ ಕೆಲಸ ಮಾಡಿ ಒಳ್ಳೆಯ ಹೆಸರನ್ನು ಸಂಪಾದಿಸಿದ್ದಾರೆ. ರಾಜ್ಯ ಮಹಿಳಾ ನೌಕರರ ದೌರ್ಜನ್ಯ ಪರಿಶೀಲನಾ ಸಮಿತಿಯ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ. ಸಾಧನಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ ಕರ್ನಾಟಕ ವಿದ್ಯಾವರ್ಧಕ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯೆಯಾಗಿ ನಾಲ್ಕು ಬಾರಿ ಆಯ್ಕೆಯಾಗಿದ್ದಾರೆ.

*ಸಾಕ್ಷ್ಯ ಚಿತ್ರ*
ಮಲ್ಲಿಕಾರ್ಜುನ ಮನ್ಸೂರ
ಪಂಚಾಕ್ಷರಿ ಗವಾಯಿಗಳು

*ಕಿರು ಚಿತ್ರ*
ಓಂ ನಮೋ
ಗಂಗಾ
ಕಿತ್ತೂರು ಚೆನ್ನಮ್ಮ
ಸಂಗೊಳ್ಳಿ ರಾಯಣ್ಣ

*ಚಲನ ಚಿತ್ರ*
ಸಿಂಗಾರೆವ್ವ
ಟೋನಿ
ಮಿರ್ಚಿ ಮಂಡಕ್ಕಿ ಖಡಕ್ ಚಾಯ್
ಹೀಗೆ ಹಲವು ಚಲನ ಚಿತ್ರಗಳಲ್ಲಿ ನಟಿಸಿದ ಹಿರಿಯ ನಟಿ.

*ಪ್ರಶಸ್ತಿಗಳು*
ಧ್ರುವರಂಗ ಪ್ರಶಸ್ತಿ
ಕರ್ನಾಟಕ ಜನಪದ ಅಕಾಡೆಮಿ ಪ್ರಶಸ್ತಿ
ಅತ್ಯುತ್ತಮ ನಿರ್ದೇಶಕಿ ಪ್ರಶಸ್ತಿ
ಅತ್ಯುತ್ತಮ ರಂಗ ಜೋಡಿ ಪ್ರಶಸ್ತಿ
ಅಭಿನಯ ರಂಗ ಭಾರತಿ ಪ್ರಶಸ್ತಿ
ಗಾನಗಂಗೆ ಪ್ರಶಸ್ತಿ
ಸುವರ್ಣ ಶ್ರೇಷ್ಠ ಪ್ರಶಸ್ತಿ
ಧಾರವಾಡ ರತ್ನ ಪ್ರಶಸ್ತಿ
ಸಿಜಿಕೆ ಪ್ರಶಸ್ತಿ
ಸೇವಾ ರತ್ನ ಪ್ರಶಸ್ತಿ
ಹೀಗೆ ಹತ್ತು ಹಲವಾರು ಪ್ರಶಸ್ತಿಗಳನ್ನು ಪಡೆದ ಉತ್ತರ ಕರ್ನಾಟಕದ ಶ್ರೇಷ್ಠ ರಂಗ ಕರ್ಮಿ ಅಂದರೆ ಅದು ವಿಶ್ವೇಶ್ವರಿ ಹಿರೇಮಠ.
ದಕ್ಷಿಣಕ್ಕೆ ಗುಬ್ಬಿ ವೀರಣ್ಣ ಅವರ ಮೊಮ್ಮಗಳು ಬಿ ಜಯಶ್ರೀ ಉತ್ತರ ಕರ್ನಾಟಕಕ್ಕೆ ವಿಶ್ವೇಶ್ವರಿ ಹಿರೇಮಠ ಪ್ರತಿಭಾವಂತ ನಟಿ ನಿರ್ದೇಶಕಿ.

ಇಂತಹ ಅಪರೂಪದ ಪ್ರಬುದ್ಧ ಜನಪದ ಹೊಸ ಪ್ರಯೋಗದ ರಂಗ ನಾಯಕಿ ಇನ್ನೂ ಹಲವು ಸಾಧನೆ ಮಾಡಲೆಂದು ಹಾರೈಸುತ್ತೇನೆ.
_________________________

ಡಾ.ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

Latest articles

More like this