Homeಸುದ್ದಿಗಳುಕೂಡಲಸಂಗಮ ಜಗದ್ಗುರುಗಳಿಂದ ಡಾ.ಮಲ್ಲಿಕಾರ್ಜುನ ಛಬ್ಬಿಯವರ ಕವನ ಸಂಕಲನ ಕ್ಯಾದಿಗಿಯ ಬನದೊಳಗ ಲೋಕಾರ್ಪಣೆ

ಕೂಡಲಸಂಗಮ ಜಗದ್ಗುರುಗಳಿಂದ ಡಾ.ಮಲ್ಲಿಕಾರ್ಜುನ ಛಬ್ಬಿಯವರ ಕವನ ಸಂಕಲನ ಕ್ಯಾದಿಗಿಯ ಬನದೊಳಗ ಲೋಕಾರ್ಪಣೆ

Published on

ಬೈಲಹೊಂಗಲ – ಬೈಲಹೊಂಗಲ ತಾಲ್ಲೂಕಿನ ಅರವಳ್ಳಿ ಗ್ರಾಮದ ಕವಿ, ಕಥೆಗಾರ, ವಿಮರ್ಶಕ, ಸಂಶೋಧಕರು ಈಗ ಸವದತ್ತಿ ತಾಲ್ಲೂಕಿನ ಮುರಗೋಡ ಹೋಬಳಿಯ ಚಿಕ್ಕೊಪ್ಪ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಹಿಂದಿ ಭಾಷಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಡಾ. ಮಲ್ಲಿಕಾರ್ಜುನ ಶಿವಪ್ಪ ಛಬ್ಬಿಯವರ ಹದಿನೈದನೆಯ ಕೃತಿ ‘ಕ್ಯಾದಿಗಿಯ ಬನದೊಳಗ’ ಕವನ ಸಂಕಲನವನ್ನು ಬೈಲಹೊಂಗಲ ಪಟ್ಟಣದ ಕಿತ್ತೂರ ಚೆನ್ನಮ್ಮ ಸಮಾಧಿ ರಸ್ತೆಯಲ್ಲಿರುವ ಗಣಾಚಾರಿ ಮಹಾವಿದ್ಯಾಲಯದಲ್ಲಿ ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮಿಗಳು ಲೋಕಾರ್ಪಣೆ ಮಾಡಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಬೆಳಗಾವಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷರು ಹಾಗೂ ಬಸವ ಸಮಿತಿಯ ಕೇಂದ್ರ ಕಾರ್ಯಕಾರಿ ಸಮಿತಿಯ ಸದಸ್ಯರಾದ ಮೋಹನ ಬಸನಗೌಡ ಪಾಟೀಲ ಅವರು ಮಾತನಾಡಿ ಡಾ. ಮಲ್ಲಿಕಾರ್ಜುನ ಛಬ್ಬಿ ಅವರ ಕಾವ್ಯ ಕ್ರಿಯೆಯು ಅನನ್ಯವಾದದ್ದು. ಇದುವರೆಗಿನ ಅವರ ಕವನ ಸಂಕಲನ ಹೆಸರುಗಳೇ ವಿಶಿಷ್ಟವೆನಿಸಿವೆ. ಕಲ್ಪವೃಕ್ಷ ಕನ್ನಡ, ಒಲವು ಅರಳುವ ಸಮಯ, ಬೆಳೂಲಿ, ಭೂಮಿ ಪಾತ್ರೆಯ ಹೂಗಳು, ಬಣ್ಣವಿಲ್ಲದ ಭಾವಚಿತ್ರ, ನದಿಯ ನೆನಪಲಿ ನಾವೆ, ಶಬ್ದ ನೀಡಿದ ದೈವವೆ, ಹೂವು ಉದುರುವ ಸದ್ದು, ಹನಿ ಹಣತೆ, ನವಿಲು ತೋಟ (ಹಾಯ್ಕುಗಳು) ಈ ಶೀರ್ಷಿಕೆಯಲ್ಲಿ ಕಾವ್ಯ ಕ್ರಿಯೆಯು ಅಗಾಧವಾದ ಸಂವೇದನೆ ಮಡುಗಟ್ಟಿರುವುದು ಭಾಸವಾಗುತ್ತದೆ. ಇದೇ ಆಶಯವನ್ನು ಹುಟ್ಟಿಸುವಂತಹ ಇವರ ಇನ್ನೊಂದು ಗೇಯಗೀತೆಗಳ, ಜಾನಪದ ಸೊಗಡಿನ ‘ಕ್ಯಾದಿಗಿಯ ಬನದೊಳಗ’ ಕವನ ಸಂಕಲನ ವೈಶಿಷ್ಟ್ಯಪೂರ್ಣವಾಗಿದೆ ಎಂದು ತಿಳಿಸಿದರು.

ಖ್ಯಾತ ನ್ಯಾಯವಾದಿಗಳು ಹಾಗೂ ಪ್ರಖರ ವಾಗ್ಮಿಗಳಾದ ಎಫ್.ಎಸ್. ಸಿದ್ಧನಗೌಡರ ಅವರು ಮಾತನಾಡಿ
ಡಾ. ಮಲ್ಲಿಕಾರ್ಜುನ ಛಬ್ಬಿ ವೃತ್ತಿಯಿಂದ ಶಿಕ್ಷಕರು, ಪ್ರವೃತ್ತಿಯಿಂದ ಸಾಹಿತಿಗಳು. ಕನ್ನಡ ಸಾಹಿತ್ಯಕ್ಕೆ ಈಗಾಗಲೇ ಕವನ, ಕಥೆ, ವಿಮರ್ಶೆ, ಸಂಶೋಧನಾ ಲೇಖನಗಳ ಜೊತೆಗೆ ಕೋ. ಚೆನ್ನಬಸಪ್ಪನವರ ಬದುಕು ಬರಹವನ್ನು ಕುರಿತು ಸಂಶೋಧನಾ ಮಹಾಪ್ರಬಂಧವನ್ನು ಸಾದರಪಡಿಸಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪದವಿಯನ್ನು ಪಡೆದಿದ್ದಾರೆ. ಸರಳ ಸಜ್ಜನಿಕೆ ಮತ್ತು ಸ್ನೇಹಪರ ವ್ಯಕ್ತಿತ್ವದಿಂದ ಸಾಹಿತ್ಯ ವಲಯದಲ್ಲಿ ಚಿರಪರಿಚಿತರಾಗಿದ್ದಾರೆ. ಶ್ರೀಯುತರ ಸಾಧನೆಯನ್ನು ಪರಿಗಣಿಸಿ ಅಂಬಿಕಾತನಯದತ್ತ ಕಾವ್ಯ ಬಹುಮಾನ, ಹರಿಹರಶ್ರೀ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತು ಕೊಡಮಾಡುವ ಡಾ. ಆರ್.ಜೆ. ಗಲಗಲಿ ದತ್ತಿ ಪ್ರಶಸ್ತಿಗೆ ಪುರಸ್ಕೃತರಾಗಿರುವುದಲ್ಲದೆ, ಶಿಕ್ಷಣ ಇಲಾಖೆಯಿಂದ ಜನ ಮೆಚ್ಚಿದ ಶಿಕ್ಷಕ ಪ್ರಶಸ್ತಿಗೂ ಭಾಜನರಾಗಿದ್ದಾರೆ ಎಂದು ಪ್ರಶಂಶಿಸಿದರು.

ನೇಸರಗಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರು ಹಾಗೂ ಸಂಶೋಧಕರು ಖ್ಯಾತ ಫಿಲಂ ಸಾಂಗ್ ಬರಹಗಾರರಾದ ಡಾ. ಪಕೀರನಾಯಕ ದುಂಡಪ್ಪ ಗಡ್ಡಿಗೌಡರ ಅವರು ಮಾತನಾಡಿ “ಛಬ್ಬಿಯವರ ಶಕ್ತಿ ಇರುವುದೇ ಈ ಪ್ರಾದೇಶಿಕ ಮಾತಿನ ಲಯದಲ್ಲಿ. ಅದೆಷ್ಟು ಸಲೀಸಾಗಿ ಲಯ ಮತ್ತು ಪ್ರಾಸ ಅವರಿಗೆ ಈ ನುಡಿಗಟ್ಟಲ್ಲಿ ಒಲಿದು ಬಿಡುತ್ತದೆಂದರೆ, ಅವರು ನೆನೆಸಿದ ಕಾವ್ಯೋದ್ದೇಶವನ್ನು ಭಾಷೆ ಅರಿತು ತಾನೇ ಮುಂದುವರಿಸಿದಂತೆ ಕೆಲವೆಡೆ ಭಾಸವಾಗುತ್ತದೆ. ಇದು ಭಾಷೆಯ ಪವಾಡ. ಕವಿಯ ಪುಣ್ಯ ವಿಶೇಷ. ಪ್ರಜ್ಞಾಪೂರ್ವಕವಾಗಿ ಕೆಲವು ರೂಪಕಗಳನ್ನು ಸೃಷ್ಟಿಸಲಾಗುವುದಿಲ್ಲ. ಅದು ತಟಕ್ಕನೆ ಹುಟ್ಟಿಕೊಳ್ಳುತ್ತದೆ. ತಾತ್ವಿಕ ಸ್ಪಷ್ಟತೆ ಮತ್ತು ಭಾಷಿಕ ಬಂಧ ಎರಡೂ ಕಾವ್ಯಾನುಭವವನ್ನು ದಟ್ಟವಾಗಿಸುವ ಸೂಚನೆ ಈ ಕವನ ಸಂಕಲನದಲ್ಲಿದೆ” ಎಂದು ಹೇಳಿದರು.

ಸಭೆಯ ಅಧ್ಯಕ್ಷತೆ ವಹಿಸಿದ ಖ್ಯಾತ ನ್ಯಾಯವಾದಿಗಳು ಹಾಗೂ ಲಿಂಗಾಯತ ಪಂಚಮಸಾಲಿ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷರಾದ ಶ್ರೀಶೈಲ ಗಂಗಪ್ಪ ಬೋಳಣ್ಣವರ ಅವರು ಮಾತನಾಡಿ “ಮೂಲ ಲಯಗಳನ್ನು ಬಳಸಿಕೊಂಡು ಕವಿತೆಯನ್ನು ಕಟ್ಟುತ್ತಿರುವವರು ಛಬ್ಬಿಯವರು. ಹಾಗೆ ನೋಡಿದರೆ ನವೋದಯದ ನಿಸರ್ಗ ಪ್ರತಿಮೆಗಳನ್ನು ತಮ್ಮ ಕಾಲಕ್ಕೆ ಆದರೆ ಅವುಗಳಿಗೆ ಶಕ್ತಿಯುತ ರೂಪಕಗಳನ್ನು ತುಂಬುವ ಹಾದಿಯಲ್ಲಿದ್ದಾರೆ. ಉತ್ತರ ಕರ್ನಾಟಕದ ಬದುಕನ್ನು ಅನಾವರಣಗೊಳಿಸಲು ಅದೇ ಭಾಗದ ಜನಪದ ಲಯಗಳನ್ನು ಈಗಾಗಲೇ ಬಳಸಿದ್ದಾರೆ. ಗ್ರಾಮ ಬದುಕಿನ ತಲ್ಲಣಗಳು ಮತ್ತು ನೆನಪಿನ ಲೋಕವನ್ನು ಕಟ್ಟುವಾಗ ಛಬ್ಬಿಯವರ ಭಾಷೆ ಕುತೂಹಲ ಮೂಡಿಸುತ್ತದೆ. ಈ ನಿಟ್ಟಿನಲ್ಲಿ ನವೋದಯದ ಪ್ರತಿಮೆಗಳ ಹಾಗೆ ಕಂಡರೂ ಭಿನ್ನವಾಗುತ್ತಾರೆ” ಎಂದು ಹೇಳಿದರು.

ಬೈಲಹೊಂಗಲ ನಗರಸಭೆಯ ಮಾಜಿ ಉಪಾಧ್ಯಕ್ಷರಾದ  ಮಹೇಶ ವೀರಭದ್ರಪ್ಪ ಹರಕುಣಿ ಸ್ವಾಗತಿಸಿದರು. ಉಪನ್ಯಾಸಕರಾದ ಶಿವನಗೌಡ ಪಾಟೀಲ (ಬೈಲವಾಡ) ವಂದಿಸಿದರು.

Latest articles

More like this