‘ಪ್ರೇಮದ ಊರಲಿ’ 2026ರಲ್ಲಿ ಬಿಡುಗಡೆಯಾದ ಕನ್ನಡದ ಒಂದು ಸಂಗೀತಮಯ ರೋಮ್ಯಾಂಟಿಕ್ ಕೌಟುಂಬಿಕ ಚಲನಚಿತ್ರವಾಗಿದೆ.
ನಿರ್ದೇಶನ ಮತ್ತು ಬರಹ: ಮನೋಜ್ ಕುಮಾರ ಅವರದು
ನಿರ್ಮಾಣ: ವನಿಲ್ಲಾ ಎಂಟರ್ಟೈನ್ಮೆಂಟ್ಸ್ ಮತ್ತು ಜನಕಮ್ಮ ಪ್ರೊಡಕ್ಷನ್ಸ್ (ಮಮತಾ ದೇವೇಂದ್ರ ಎ ಸಂಗೀತ: ಸುನಾದ್ ಗೌತಮ್ ರದು ‘ಪ್ರೇಮದ ಊರಲಿ’ ಚಲಚಿತ್ರದಲ್ಲಿ
ಶ್ರೀ ರಾಮ್ ಚಿತ್ರದ ನಾಯಕನಾಗಿದ್ದು, ‘ಸಂತು’ ಎಂಬ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ತಪಸ್ವಿನಿ ಪೂಣಚ್ಚ ಚಿತ್ರದ ಮುಖ್ಯ ನಾಯಕಿಯಾಗಿದ್ದು, ‘ರುಕ್ಮಿಣಿ’ ಎಂಬ ಪಾತ್ರವನ್ನು ನಿರ್ವಹಿಸಿದ್ದಾರೆ.
ರಾಮಿಕಾ ಶಿವು ಇನ್ನೊಂದು ಪ್ರಮುಖ ಪಾತ್ರವಾದ ‘ವಸಂತ’ ಆಗಿ ನಟಿಸಿದ್ದಾರೆ.
ರಂಗಾಯಣ ರಘು : ಕನ್ನಡದ ಹಿರಿಯ ನಟರಾದ ಇವರು ‘ನಾಗಣ್ಣ’ ಎಂಬ ಮಹತ್ವದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಗೋವಿಂದೇ ಗೌಡ : ಹಾಸ್ಯ ಹಾಗೂ ಪೋಷಕ ನಟರಾದ ಇವರು ‘ಬ್ರೋಕರ್’ ಪಾತ್ರದಲ್ಲಿ ನಟಿಸಿದ್ದಾರೆ.
ಈ ಹಳ್ಳಿ ಕಥೆ ಗ್ರಾಮೀಣ ಜನಸಮೂಹವನ್ನು ಪ್ರತಿಧ್ವನಿಸುವ ಅಂಶಗಳನ್ನು ಹೊಂದಿದೆ, ನಾಗಣ್ಣ (ರಂಗಾಯಣ ರಘು) ತನ್ನ ಮಗ ಸಂತು ( ಶ್ರೀ ರಾಮ್ ) ನನ್ನು ತನ್ನ ಹೆಂಡತಿಯ ಮರಣದ ನಂತರ ಒಂಟಿ ಪೋಷಕನಾಗಿ ಬೆಳೆಸುತ್ತಾನೆ.ಹೆಚ್ಚು ಓದದಿದ್ದರೂ ತಂದೆ-ಮಗನ ಸಂಬಂಧವು ಭಾವನಾತ್ಮಕ ಮಾರ್ಗವನ್ನು ತೆಗೆದುಕೊಳ್ಳುತ್ತದೆ. ಸಂತುವನ್ನು ಉತ್ಸಾಹಿ ರೈತನನ್ನಾಗಿ ಬೆಳೆಸುವ ನಾಗಣ್ಣ, ತನ್ನ ಮಗನ ಶೈಕ್ಷಣಿಕ ಸಾಧನೆಯ ಕೊರತೆಯನ್ನು ಪರಿಗಣಿಸಿ ವಿದ್ಯಾವಂತ ಸೊಸೆಯನ್ನು ಬಯಸುತ್ತಾನೆ.
ಸಂತು ನಗರ ಪ್ರದೇಶದ ಹುಡುಗಿಯನ್ನು (ತಪಸ್ವಿನಿ ಪೂಣಚ್ಚ) ಪ್ರೀತಿಸಿದ ಘಟನೆ ಬಹಳ ವಿಶಿಷ್ಟ ರೀತಿಯಲ್ಲಿ ನಿರೂಪಿಸಿದ್ದಾರೆ.
ಭಾವನೆಗಳಲ್ಲಿ ಕಂಡು ಬರುವ ದೃಶ್ಯಗಳು ಹೃದಯಕ್ಕೆ ಹತ್ತಿರ ಆಗುತ್ತವೆ ಮತ್ತು ಪ್ರತಿಯೊಂದು ಪ್ರಮುಖ ದೃಶ್ಯವೂ ವಿಶಿಷ್ಟವಾದ ಹಿನ್ನೆಲೆ ಸಂಗೀತದಿಂದ ಕೂಡಿದೆ.. ಪಾತ್ರಗಳ ಕಣ್ಣೀರು ಅವು ಸುರಿಯುವ ಮಳೆಯಲ್ಲಿ ದುಃಖವನ್ನು ಇಮ್ಮಡಿ ಗೊಳಿಸುತ್ತವೆ. ಪ್ರಮುಖ ಪಾತ್ರಧಾರಿಗಳಾದ ಶ್ರೀ ಮತ್ತು ರಮಿಕಾ ಶಿವು ಧಾರಾವಾಹಿ ಸಣ್ಣ ಪರದೆಯ ನಟರು ಬೆಳ್ಳಿ ತೆರೆಯಲ್ಲಿ ಮಿಂಚಿದ್ದಾರೆ.
ಪ್ರೇಮದ ಊರಲಿ ಚಿತ್ರವು ರೈತರ ಉದ್ದೇಶವನ್ನು ಪ್ರತಿಪಾದಿಸಿದೆ. ಈ ಚಿತ್ರವು ಒಂದು ಕೌಟುಂಬಿಕ ಮತ್ತು ಪ್ರೇಮ ಕಥೆಯಾಗಿದ್ದು, ಇವರ ಪಾತ್ರಗಳ ನಡುವಿನ ಸಂಬಂಧಗಳ ಸುತ್ತ ಕಥೆ ಸಾಗುತ್ತದೆ. ಮದುವೆ ಬೇಡ ಎನ್ನುತ್ತಿದ್ದ ಹುಡುಗಿ ಮದುವೆ ಆಗಬೇಕು ಎಂದು ಹಂಬಲಿಸುವುದು. ನಗರದಲ್ಲಿ ಮನೆ ಮಾಡಿಕೊಂಡು ಮದುವೆ ಗಂಡಿನೊಂದಿಗೆ ಜೀವಿಸಬೇಕು ಎನ್ನುವವಳು. ತಂದೆ ತನ್ನ ಸರ್ವಸ್ವ ಭೂ ತಾಯಿಯ ಮಡಿಲಲ್ಲಿ ತಂದೆಯೊಂದಿಗೆ ರೈತನಾಗಿ ಬದುಕು ನಡೆಸಬೇಕು ಎನ್ನುವ ನಾಯಕ.ಚೆನ್ದಾಗಿ ಓದಿದ ಹುಡುಗಿ ತನ್ನ ಮನೆಯ ಸೊಸೆ ಆಗಬೇಕು ಎಂದು ಕನಸು ಕಾಣುವ ನಾಯಕನ ತಂದೆ ಹೀಗೆ ಹಲವಾರು ಕೌಟುಂಬಿಕ ಹಾಗೂ ರೈತರ ಬದುಕಿನ ಹಳ್ಳಿಯ ಪರಿಸರ ಕಟ್ಟಿಕೊಳ್ಳುತ್ತಾ ಸಾಗುವ ಕಥೆ.ಈ ರೀತಿಯ ಕಥೆಯನ್ನು
ನಿರ್ದೇಶಕ ಮನೋಜ್ ಕುಮಾರ್ ಒಂದು ಸರಳ ಕತೆಯ ಮೂಲಕ ಭಾವನಾತ್ಮಕ ವಿಷಯ ತೆರೆಯ ಮೇಲೆ ಮೂಡಿಸಿ ಸೊಗಸಾಗಿ ದೃಶ್ಯಗಳನ್ನು ಪೋಣಿಸಿದ್ದಾರೆ. ಅದನ್ನು ರಾಜ್ಕಾಂತ್ ಬಹಳ ಆಕರ್ಷಕವಾಗಿ ಸೆರೆ ಹಿಡಿದಿದ್ದಾರೆ. ಸುನಾದ್ ಗೌತಮ್ ಈ ಚಿತ್ರವನ್ನು ಆಹ್ಲಾದಕರವಾಗಿ ಸಂಗೀತಮಯಗೊಳಿಸಿದ್ದಾರೆ. ಹೀಗಾಗಿಯೇ ಪ್ರಾಮಾಣಿಕ ಪ್ರಯತ್ನದಿಂದ ಈ ಸಿನಿಮಾ ಜೀವಂತಿಕೆಯಿಂದ ನಳನಳಿಸುತ್ತಿದೆ.
ಇದೊಂದು ಸಂಬಂಧಗಳ ಸಂಕೀರ್ಣತೆಯನ್ನು ಹೇಳುವ ಸಿನಿಮಾ. ಒಳಗಣ್ಣಿನಿಂದ ನೋಡಿದರೆ ಎಲ್ಲವೂ ಅರ್ಥವಾಗುತ್ತದೆ ಎಂಬುದನ್ನು ಸಾರುವ ಸಿನಿಮಾ. ಅದನ್ನು ಹೇಳಲು ನಿರ್ದೇಶಕರು ಬರೆದಿರುವ ಪಾತ್ರಗಳು ಲವಲವಿಕೆಯಿಂದ ಕೂಡಿವೆ. ಊರಲ್ಲೇ ಇರುವ ತರುಣ ರೈತ, ಎಲ್ಲರನ್ನೂ ಗೋಳು ಹೊಯ್ದುಕೊಳ್ಳುವ ತರ್ಲೆ ಹುಡುಗಿ, ಮೌನವೇ ಆಭರಣದಂತಿರುವ ಮತ್ತೊಬ್ಬಳು ತರುಣಿ, ಪುತ್ರನನ್ನು ಹಚ್ಚಿಕೊಂಡಿರುವ ಮುಗ್ಧ ತಂದೆ ಹೀಗೆ ಆಪ್ತ ಪಾತ್ರಪ್ರಪಂಚ ಸೃಷ್ಟಿಸಿದ್ದಾರೆ.
ತಾರಾಗಣ: ಶ್ರೀರಾಮ್, ರಮಿಕಾ ಶಿವು, ತಪಸ್ವಿನಿ ಪೂಣಚ್ಚ, ರಂಗಾಯಣ ರಘು, ಅಭಿಷೇಕ್ ಕಲ್ಮನಿ, ಇಳಾ ವಿಟ್ಲ
ಇಲ್ಲಿ ಹೇಳಿಕೊಳ್ಳುವ ವಿಲನ್ಗಳೂ ಇಲ್ಲ. ಸನ್ನಿವೇಶವೇ ವಿಲನ್. ಹಾಗಾಗಿ ಸಿನಿಮಾ ಕೊಂಚ ಭಿನ್ನ ಸಾಲಿನಲ್ಲಿ ನಿಲ್ಲುತ್ತದೆ. ಶ್ರೇಷ್ಠತೆಯ ಹಂಬಲವೇ ಇಲ್ಲದೆ ಹೃದಯ ಮುಟ್ಟುವ ಕತೆಯೊಂದನ್ನು ತಂಗಾಳಿ ಸವರಿ ಹೋಗುವಷ್ಟೇ ಸಹಜವಾಗಿ, ಸರಳವಾಗಿ ನಿರ್ದೇಶಕರು ಹೇಳಿದ್ದಾರೆ. ಅವರ ಕತೆಗಾರಿಕೆಗೆ ಮೆಚ್ಚುಗೆ.ಇದು ವಯಸ್ಸಿನ ಅಂತರದ ಕಥೆಯಲ್ಲ, ಪ್ರೀತಿಯೆಂಬ ಪ್ರಶಾಂತ ಭಾವದ ಸುಂದರ ಕಾವ್ಯ
‘ಪ್ರೇಮದ ಊರಲಿ’ ಸಿನಿಮಾ ಸರಳ ಕಥೆ, ಜೀವಂತಿಕೆಯಿಂದ ಕೂಡಿರುವ ಸಂಗೀತಮಯ ಚಿತ್ರ.
ಹಳ್ಳಿ ಅಲ್ಲಿನ ಪರಿಸರ ದಿನ ಹಾಲು ಕರೆದು ಮಗನಿಗೆ ಕುಡಿಯಲು ಕೊಡುವ ತಂದೆ, ತಂದೆ ತನ್ನ ಆದರ್ಶ ಎನ್ನುವ ಮಗ, ಬಡತನದಲ್ಲಿ ಮಗಳನ್ನು ಓದಿಸುವ ಸಲುವಾಗಿ ಸಾಲ ಮಾಡಿದ ತಂದೆ. ಸಾಲ ವಸೂಲಿ ಮಾಡಲು ದರ್ಪ ತೋರುವ ಗೌಡ, ಓದಿದ ಮಗ ರೈತ ಆಗೋದು ಬೇಡ ಎನ್ನುವ ಮನಸ್ಥಿತಿಯ ತಂದೆ ಹೀಗೆ ಬದುಕಿನ ವಿವಿಧ ಮುಖಗಳನ್ಶು ಈ ಚಲನಚಿತ್ರ ಪರಿಚಯಿಸುತ್ತ ರೈತನ ಬದುಕು ಶ್ರೇಷ್ಠ ಎಂದು ನಿರೂಪಿಸಿದೆ..
ವಿರಾಮದ ನಂತರ ಕಥೆ ಮತ್ತೊಂದು ರೂಪದಲ್ಲಿ ಸಾಗುತ್ತದೆ. ಸಂಶಯಕ್ಕೆ ಸಂಸಾರ ಹಾಳಾಗುತ್ತೆ ಎಂಬ ವಿಷಯ ಬಂದರೂ ಕೂಡ ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು ಎಂಬಂತೆ ಅಣ್ಣ ತಂಗಿ ಸಂಬಂಧ ನಿದರ್ಶನದೊಂದಿಗೆ ಕೂಡಿ ಬಾಳಿದರೆ ಸ್ವರ್ಗ ಸುಖ ಎಂಬುದನ್ನು ಅಜ್ಜಿಯ ನೖತಿಕ ಮಾತುಗಳು ಅಗಲಿ ಹೋಗಬಹುದಾಗಿದ್ದ ಕುಟುಂಬವನ್ನು ಒಂದುಗೂಡಿಸುತ್ತವೆ. ಅಲ್ಲಲ್ಲಿ ದೃಶ್ಯಗಳು ಕಣ್ಣಂಚಲ್ಲಿ ನೀರು ತರಿಸುತ್ತವೆ..
ಪ್ರೇಮದ ಊರಲಿ ಹೃದಯದ ತೇರಲಿ ಒಲವಿನ ಮಳೆ ನಿಜವಾಗಿ ಸುರಿದಿದೆ. ಬಹಳ ವರ್ಷ ಗಳ ನಂತರ ಭಾವನಾತ್ಮಕ ಹಳ್ಳಿಯ ಪರಿಸರದ ಕೌಟುಂಬಿಕ ಕಥಾನಕ ಕನ್ನಡಕ್ಕೆ ಆಗಮಿಸಿದೆ ಎಂದರೆ ಅತಿಶಯೋಕ್ತಿಯಲ್ಲ.
ಡಾ. ವೈ. ಬಿ. ಕಡಕೋಳ
ಶಿಕ್ಷಕ ಸಾಹಿತಿಗಳು
ಮುನವಳ್ಳಿ 591117
ಸವದತ್ತಿ ತಾಲೂಕು
ಬೆಳಗಾವಿ ಜಿಲ್ಲೆ
9449518400