ಸಿಂದಗಿ – ಜನರ ಕಷ್ಟ ಕೇಳಿ, ಸಮಸ್ಯೆ ಬಗೆಹರಿಸಲು ಆರಂಭಿಸಿದ ಪ್ರಜಾಸೇವೆ ಇಲಾಖೆಯ ಮುಖ್ಯ ಧ್ಯೇಯವೇ ಜನರ ಮನೆಬಾಗಿಲಿಗೆ ಸರ್ಕಾರವನ್ನು ಕೊಂಡೊಯ್ಯುವುದು. ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನ ಮುಕ್ತವಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ನೀಡಿದರೆ ಪರಿಹಾರ ಕೂಡಲೇ ಸಿಗಲಿದೆ ಎಂದು ಶಾಸಕ ಅಶೋಕ್ ಮನಗೂಳಿ ಹೇಳಿದರು.
ಅವರು ತಾಲೂಕಿನ ಚಾಂದಕವಟೆ ಗ್ರಾಮದಲ್ಲಿ ರಾಜ್ಯ ಸರ್ಕಾರದ ಆದೇಶದ ಮೇರೆಗೆ ಹಮ್ಮಿಕೊಂಡಿರುವ ಪ್ರಜಾ ಸೇವೆ ಆಂದೋಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಜನರ ಬದುಕಿನಲ್ಲಿ ಬದಲಾವಣೆ ತರುವ ಕೆಲಸ ಮಾಡಲಿದ್ದೇವೆ. ಇಲ್ಲಿ ಪಕ್ಷ, ಜಾತಿ ಧರ್ಮದ ಭೇದವಿಲ್ಲ. ಜನ ಸೇವೆಯೇ ಇಲ್ಲಿ ಪ್ರಮುಖ ಧ್ಯೇಯ. ಸರ್ಕಾರದ ಸೇವೆ ನಿಮ್ಮ ಹಕ್ಕು. ಅದನ್ನು ನಿಮ್ಮ ಮನೆ ಬಾಗಿಲಿಗೆ ತಲುಪಿಸುವುದು ನಮ್ಮ ರಾಜ್ಯ ಸರ್ಕಾರದ ಆಲೋಚನೆ ಎಂದರು.
ಪಿಂಚಣಿ, ಭೂಮಿ ವ್ಯಾಜ್ಯ, ಸರ್ಕಾರದ ಸೌಲಭ್ಯಗಳು, ಖಾತೆ ಬದಲಾವಣೆ, ಗ್ಯಾರಂಟಿ ಯೋಜನೆಗಳು ಹಾಗೂ ಮನೆ-ನಿವೇಶನಕ್ಕೆ ಸಂಬಂಧಿಸಿದ ಅರ್ಜಿಗಳನ್ನು ಪರಿಶೀಲಿಸಿ ಪರಿಹಾರ ಒದಗಿಸಲಾಗುವುದು. ಬಡವರು ಹಾಗೂ ಶೋಷಿತರಿಗೆ ತಹಶೀಲ್ದಾರ್ ಅಥವಾ ಸಂಬಂಧಪಟ್ಟ ಅಧಿಕಾರಿಗಳು ಮಟ್ಟದ ವ್ಯಾಜ್ಯಗಳಲ್ಲಿ ಹೋರಾಡಲು ಉಚಿತವಾಗಿ ವಕೀಲರ ಸೇವೆ ಒದಗಿಸಿ ಕಾನೂನು ನೆರವು ನೀಡಲಾಗುವುದು. ಅರ್ಜಿ ತಿರಸ್ಕೃತಗೊಂಡರೆ ಅದಕ್ಕೆ ಕಾರಣವನ್ನು ತಿಳಿಸಲಾಗುವುದು. ಅರ್ಜಿದಾರರಿಗೆ ಸಂಪೂರ್ಣ ಪರಿಹಾರ ಸಿಗುವವರೆಗೂ ಸರ್ಕಾರ ಅವರ ಬೆನ್ನಿಗೆ ನಿಲ್ಲಲಿದೆ ಎಂದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಕರೆಪ್ಪ ಬೆಳ್ಳಿ, ಕಾರ್ಯ ನಿರ್ವಾಹಕ ಅಧಿಕಾರಿ ಅನಿಲ ಹಳ್ಳಿ,ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಗುರುರಾಜಗೌಡ ಪಾಟೀಲ್,ಗ್ಯಾರಂಟಿ ಯೋಜನಾ ಸಮಿತಿ ಅಧ್ಯಕ್ಷ ಸಂತೋಷ ಸಾಲಿ ಸೇರಿದಂತೆ ಅನೇಕರು ವೇದಿಕೆ ಮೇಲೆ ಇದ್ದರು.
ಕಾರ್ಯಕ್ರಮದಲ್ಲಿ ಚಾಂದಕವಟೆ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಅನೇಕ ಹಳ್ಳಿಗಳ ಸಾರ್ವಜನಿಕರು ತಮ್ಮ ವಿವಿಧ ಸಮಸ್ಯೆಗಳ ಕುರಿತಾಗಿ ಶಾಸಕರು ಒಂದಿಗೆ ಮತ್ತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಅರ್ಜಿ ಸಲ್ಲಿಸಿ ಮಾತನಾಡಿದರು.
ಈ ವೇಳೆ ತಹಶೀಲ್ದಾರ್ ಕರೆಪ್ಪ ಬೆಳ್ಳಿ ಮಾತನಾಡಿ ತಮ್ಮ ವಿವಿಧ ಸಮಸ್ಯೆಗಳಿಗೆ ಕೂಡಲೇ ಪರಿಹಾರ ನೀಡಲು ತಾಲೂಕ ಆಡಳಿತ ಸಿದ್ಧವಾಗಿದೆ ಎಂದರು.
ಕಂದಾಯ ಇಲಾಖೆ 8, ತಾಲೂಕು ಪಂಚಾಯತ್ 24, ವಿದ್ಯುತ್ ಇಲಾಖೆ 7, ಸಾರಿಗೆ ಇಲಾಖೆ 8 ಸೇರಿದಂತೆ ವಿವಿಧ ಇಲಾಖೆಗಳ ಒಟ್ಟು 62 ಅರ್ಜಿಗಳು ಸಾರ್ವಜನಿಕರಿಂದ ಬಂದಿವೆ ಎಂದು ತಹಸೀಲ್ದಾರ್ ತಿಳಿಸಿದರು