ಆಕೆ
ಬದುಕಿನ ಪುಟಕೆ ಹೊದಿಕೆ
ನಿತ್ಯ ನೂತನ ಝೇಂಕಾರ
ಭಾವನೆಗಳ ನಂಟಲಿ
ವೀಣೆ ತಂತಿಯ ರೂಪಾಂತರ
ಪ್ರಕೃತಿಯ ಒಡಲಲಿ ಧರಿಸಿ
ಸವಿ ಜೇನು ಹಂಚುತ
ಜೀವಿಯ ಪುನರುತ್ಥಾನದಿ
ಕಲಾ ಕುಸುರಿಗೆ ಸ್ಫೂರ್ತಿಯ ಸೆಲೆ.
ಮೂಕ ವೇದನೆ ಸಹಿಸಿ
ಹೃದಯ ನಂದನದಿ ನೆಲೆಸಿ
ಜರಿದರೂ ಹರಿವ ತೊರೆಯಾಗಿ
ಸಮಚಿತ್ತದ ಒಡನಾಡಿ.
ನಾಕ ನರಕದ ದಿಬ್ಬಣದಿ
ಅಕ್ಕರೆಗೆ ಆಕಾರ ನೀಡಿ
ನಿರಾತಂಕದ ಬೆಳಕ ಬಟ್ಟಲು ಹಿಡಿದು
ಮಮತೆ ಧಾರೆ ಎರೆವ ಪ್ರತಿಭಾ.
ಸರಿದು ಹೋಗದಿರು
ಮೊರೆಯ ಆಲಿಸು
ಬಿರಿದ ಮಲ್ಲಿಗೆ
ಜರಿದರೂ ಜಾರದಂತೆ
ಮುನಿದ ಇಳೆಯ ತಬ್ಬಿ
ಬಿಗುಮಾನ ಸಹಜ ಬಿಡು
ಚದುರಿದ ಭಾವನೆಗಳಲಿ
ಹೊಮ್ಮುವ ತೆರದಿ
ಬಯಕೆ ಬಿತ್ತಿದ ಸರದಿ.
ಕೇಕೆ ಹಾಕಲು ಅಹವಾಲು
ನಾ ನೀ ಎಂಬ ರುಮಾಲಿಗೆ
ಸುತ್ತಲೆಲ್ಲ ಮೆತ್ತಿದ ಗತ್ತು
ಮೇರೆ ಮೀರಿದಂತೆ ನೋಡಿಕೋ.
ಬಿಟ್ಟು ನೋಡೊಮ್ಮೆ ಬಿಗುಮಾನ
ನಟ್ಟ ನಡುವೆ ಅಂತರ್ಗತ
ಸಿಟ್ಟಿನಾಚೆ ಅನುಭಾವ
ಗುಟ್ಟು ಬಿಟ್ಟು ಕೊಡದಂತೆ.
ಬಾಚಿ ತಬ್ಬಿಕೊ
ಮಚ್ಚೆ ಅನೇಕ ಇರಬಹುದು
ಹೆಚ್ಚೇನು ಹೇಳಲಿ
ಒಂದೆಂಬ ಸಿರಿತನವ.
ಸರಿದು ಹೋಗದಿರು
ಮುರಿದ ಮನವ ಕಟ್ಟಿ
ಸುರಿವ ಸೋನೆಗೆ
ತೋಯ್ದ ಆಹ್ಲಾದ ವರ.
ಭಿನ್ನ ರಾಗಕೆ ತಾಳ ಹಾಕದೇ
ನಿಷ್ಕಲ್ಮಶ ದನಿ ಎತ್ತಿ
ಸಾಮರಸ್ಯ ಸಂಗಮದಿ
ಒಳಿತಿನ ಬಾಗೀನ.
ರೇಷ್ಮಾ ಕಂದಕೂರ