ಮೂಡಲಗಿ : ಚುಟುಕು ಸಾಹಿತ್ಯ ಪರಿಷತ್ತು ತಾಲೂಕ ಘಟಕ ಮೂಡಲಗಿ ವತಿಯಿಂದ ಕವಿಮನೆ ಸಮೀಪದ ಶ್ರೀ ಸಾಯಿ ಮಂದಿರದಲ್ಲಿ ಶನಿವಾರ ದಿವಸ ಸಾಯಂಕಾಲ ನಡೆದ ಕವಿ ಮನೆಯೊಳ್ ಕಾವ್ಯಾವಲೋಕನ ಎಂಬ ಕಾರ್ಯಕ್ರಮದಲ್ಲಿ ಅನಿಲ ಮಡಿವಾಳರ ಇವರ ಕಾಲಚಕ್ರ ಕಾವ್ಯ ಕೃತಿಯ ಕಾವ್ಯಾವಲೋಕನ ಮಾಡಲಾಯಿತು .
ಕಾವ್ಯ ಕೃತಿಯನ್ನು ಅವಲೋಕಿಸಿದ ಶಿವಕುಮಾರ ಕೋಡಿಹಾಳ ಉದಯೋನ್ಮುಖ ಸಾಹಿತಿಗಳು ಮೂಡಲಗಿ ಇವರು, ಕಾಲಚಕ್ರ ಕೃತಿಯು ಸಹೃದಯರ ಹೃದಯವನ್ನು ತಟ್ಟುವ ಕವನಗಳನ್ನು ಹೊಂದಿದ್ದು ಆರು ತರಹದ ಹಂತಗಳಲ್ಲಿ ಓದಿದಾಗ ಅರ್ಥ ಆಗುತ್ತದೆ. ಮತ್ತು ಧ್ಯಾನದ ಮೂಲಕ ಜೀವನ ಸಾಕ್ಷಾತ್ಕಾರ ಮಾಡಿಕೊಳ್ಳಲು ಕೆಲವು ಕವನಗಳು ಸಹಾಯಕ ಎಂದು ಮಾರ್ಮಿಕವಾಗಿ ಹೇಳಿದರು.ಇಲ್ಲಿ ಕವಿಯ ಅತ್ಯಂತ ಕ್ರಿಯಾಶೀಲ ಚಿಂತನೆಗಳು ಜನಜಾಗೃತಿ ಮೂಡಿಸುವ ಕೆಲಸ ಮಾಡಿವೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ನಿಂಗಪ್ಪ ಸಂಗ್ರೇಜಿಕೊಪ್ಪ ಕವಿ ಮನೆ ಒಳಗೆ ಕಾವ್ಯವನ್ನು ಅವಲೋಕನ ಮಾಡುವ ಕಾರ್ಯ ನಿಜಕ್ಕೂ ಶ್ಲಾಘನೀಯ. ಅನಿವಾರ್ಯ ಸಂದರ್ಭಗಳಲ್ಲಿ ಸಮೀಪದ ಸ್ಥಳಗಳಲ್ಲಿ ಕಾರ್ಯಕ್ರಮ ರೂಪಿಸುವ ಮೂಲಕ ಕನ್ನಡ ಸಾಹಿತ್ಯದ ಹೊಸ ಮುನ್ನುಡಿ ಬರೆಯುತ್ತ ಸಾಗಿರುವ ಚುಟುಕು ಸಾಹಿತ್ಯ ಪರಿಷತ್ತಿಗೆ ಅಭಿನಂದಿಸುತ್ತ, ಕಾಲಚಕ್ರ ಕೃತಿಯು ಜೀವನದ ಮೌಲ್ಯಗಳನ್ನು ಹಾಗೂ ಬರುವ ಪೀಳಿಗೆಗೆ ನೀಡಬೇಕಾದ ಸಂಸ್ಕಾರಗಳ ಕುರಿತು ಮನದಟ್ಟು ಮಾಡುವಲ್ಲಿ ಕಾವ್ಯ ಗೆದ್ದಿದೆ ಎಂದು ಹೇಳಿದರು.
ಕಾಲಚಕ್ರ ಕಾವ್ಯ ಕೃತಿಯ ಕವಿಗಳಾದ ಅನಿಲ ಮಡಿವಾಳ ಅವರು ಮಾತನಾಡಿ, ಸಹೃದಯರು ಸೇರಿಕೊಂಡು ಕವಿಮನೆಗೆ ಬಂದು ಕವಿಯ ಕಾವ್ಯವನ್ನು ಅವಲೋಕನ ಮಾಡುವ ಮೂಲಕ ಮುಳುಗುವ ಕವಿ ಮತ್ತು ಕವಿತೆಗಳನ್ನು ಎತ್ತುವ ಕೆಲಸ ಮಾಡಿದ ಚುಟುಕು ಸಾಹಿತ್ಯ ಪರಿಷತ್ತು ಮೂಡಲಗಿ ಘಟಕದ ಕಾರ್ಯ ನಿಜಕ್ಕೂ ಸಂತಸ ತರಿಸಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಚು.ಸಾ.ಪ ಅಧ್ಯಕ್ಷರಾದ ಚಿದಾನಂದ ಹೂಗಾರ ಅವರು ಕವಿಯ ಕಾವ್ಯವನ್ನು ಅವಲೋಕನ ಮಾಡುವ ಮೂಲಕ ನಮ್ಮ ಭಾಗದ ಕವಿಗಳ ಕಾವ್ಯ ಪ್ರೌಢಿಮೆಯನ್ನು ಅರಿಯಲು ಸಾಧ್ಯ ಹಾಗೂ ಯುವ ಬರಹಗಾರರಿಗೆ ಮಾರ್ಗದರ್ಶನ ಸಮಾಜಕ್ಕೆ ಮುಟ್ಟಿಸುವಲ್ಲಿ ಹಾಗೂ ನೀಡಲಿದೆ ಎಂದು ಹೇಳಿದರು. ಕವಿ ಪರಿಚಯವನ್ನು ವಿಭಿನ್ನ ರೀತಿಯಲ್ಲಿ ಕಥಾ ರೂಪದಲ್ಲಿ ಹೇಳುವ ಮೂಲಕ ಕೇಳುಗರ ಕುತೂಹಲ ಹೆಚ್ಚಿಸಿದ ಶ್ರೀಮತಿ ಶಶಿರೇಖಾ ಬೆಳ್ಳಕ್ಕಿಯವರು ಆರಂಭದಲ್ಲಿ ಕವಿ ಪರಿಚಯವನ್ನು ಬಹಳ ಅಚ್ಚುಕಟ್ಟಾಗಿ ನಡೆಸಿಕೊಟ್ಟರು.
ಈ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿಗಳಾದ ಸಂಗಮೇಶ ಗುಜಗೊಂಡ, ವಾಯ್.ಬಿ.ಕಳ್ಳಿಗುದ್ದಿ, ಮುರುಗೇಶ ಗಾಡವಿ, ರವೀಂದ್ರ ಸೊರಗಾಂವಿ, ಬಾಳಪ್ಪ ನಂದಿ, ದುರ್ಗಪ್ಪ ದಾಸನ್ನವರ,ಸಿದ್ದಣ್ಣ ನಡಗಡ್ಡಿ, ಸಿದ್ದು ಮಹಾರಾಜ,ಶೈಲಜಾ ಬಡಿಗೇರ , ಗೋದಾವರಿ ದೇಶಪಾಂಡೆ, ವಿದ್ಯಾಶ್ರೀ ಪೂಜಾರಿ, ಸರಸ್ವತಿ ಶೆಕ್ಕಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಯಲ್ಲಪ್ಪ ಗದಾಡಿ ಕಾರ್ಯಕ್ರಮ ನಿರೂಪಿಸಿದರು. ವಿವೇಕಾನಂದ ಹೂಗಾರ ವಂದಿಸಿದರು.