ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಅಭಿನಯದ ಬಹುನಿರೀಕ್ಷಿತ ಸಿನಿಮಾ “ಡೆವಿಲ್” ಡಿಸೆಂಬರ್ 12ರಂದು ತೆರೆಗೆ ಬರಲು ಸಜ್ಜಾಗಿದೆ. ಈ ವೇಳೆ, ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಮತ್ತೆ ಜೈಲಿನೊಳಗಾಗಿರುವ ಹಿನ್ನೆಲೆಯಲ್ಲಿ, ಸಿನಿಮಾ ತಂಡವು ಅವರ ಅನುಪಸ್ಥಿತಿಯಲ್ಲೇ ರಿಲೀಸ್ ಮಾಡಲು ತೀರ್ಮಾನಿಸಿದೆ.
ಚಿತ್ರದ ನಾಯಕಿಯಾಗಿ ನಟಿಸುತ್ತಿರುವ ರಚನಾ ರೈ, ಪ್ರಚಾರ ಕಾರ್ಯದಲ್ಲಿ ಸಕ್ರಿಯರಾಗಿದ್ದು, ಮಾಧ್ಯಮಗಳಿಗೆ ನೀಡಿದ ಸಂದರ್ಶನಗಳಲ್ಲಿ ದರ್ಶನ್ ಹಾಗೂ ಸಿನಿಮಾ ಕುರಿತು ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
“ದರ್ಶನ್ ಸರ್ ಅವರ ಹೀರೋಯಿನ್ ಆಗಿ ನಾನು ನಟಿಸುತ್ತೇನೆ ಎಂಬುದು ಮೊದಲಿಗೆ ನನಗೆ ನಂಬಲಸಾಧ್ಯವಾಗಿತ್ತು. ಶೂಟಿಂಗ್ ದಿನವೇ ಅದನ್ನು ನಂಬಿದೆ. ಥಾಯ್ಲೆಂಡ್ ಶೂಟಿಂಗ್ ವೇಳೆ ಅವರು ನನಗೆ ಹಲವಾರು ಹೊಸ ತಿನಿಸುಗಳನ್ನು ಪರಿಚಯಿಸಿದರು. ವಿಜಯಲಕ್ಷ್ಮಿ ಮ್ಯಾಡಂ ಕೂಡ ಆಗಿದ್ದರು. ದರ್ಶನ್ ಸರ್ ಮೊದಲು ಟೇಸ್ಟ್ ಮಾಡಿದ ಅತಿ ಬೆಸ್ಟ್ ಫುಡ್ ನಾನೂ ಸವಿದೆ,” ಎಂದು ರಚನಾ ಶೂಟಿಂಗ್ ನೆನಪಿಸಿಕೊಂಡಿದ್ದಾರೆ.
ಅವರು ಮುಂದೆ ಹೇಳುವಾಗ, “ದರ್ಶನ್ ಸರ್ ಸೆಟ್‌ಗೆ ಬಂದಾಗ ಪೂರ್ಣ ಮನಸ್ಸು ಸಿನಿಮಾ ಮೇಲೆಯೇ ಇರುತ್ತಿತ್ತು. ಅವರು ಶೂಟಿಂಗ್‌ನಲ್ಲಿ ತುಂಬಾ ತೊಡಗಿಸಿಕೊಂಡಿದ್ದರು. ಆ ಪಾತ್ರವನ್ನು ಶೇಕಡಾ ನೂರು ಪ್ರತಿಶತ ಕೊಟ್ಟಿದ್ದರು. ಯಾವುದೇ ಅಳುಕು, ಅಸಮಾಧಾನ ಕಾಣಲಿಲ್ಲ,” ಎಂದಿದ್ದಾರೆ.
ವೈಯಕ್ತಿಕ ವಿಷಯಗಳ ಕುರಿತು ಕೇಳಿದಾಗ, ರಚನಾ ರೈ ಸ್ಪಷ್ಟವಾಗಿ ಹೇಳಿದರು, “ದರ್ಶನ್ ಅವರ ವೈಯಕ್ತಿಕ ವಿಚಾರಗಳ ಬಗ್ಗೆ ನಾನು ಶೂಟಿಂಗ್ ಸಮಯದಲ್ಲೂ ಕೇಳಲಿಲ್ಲ. ಆ ವಿಚಾರದಲ್ಲಿ ನಾನು ತಲೆ ಹಾಕಲ್ಲ. ಅದರ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಆದರೆ ಅವರು ದೇವರಂತ ವ್ಯಕ್ತಿ,” ಎಂದು ಅವರು ಹೇಳಿದರು.
ಡೆವಿಲ್ ಸಿನಿಮಾ ಕುರಿತಂತೆ ಮಾತನಾಡಿದ ರಚನಾ, “ನನ್ನ ಪಾತ್ರ ಮತ್ತು ಸಿನಿಮಾದ ಹಾಡುಗಳಿಗೆ ಜನ ತೋರಿಸುತ್ತಿರುವ ಪ್ರೀತಿ ನೋಡಿ ತುಂಬಾ ಖುಷಿ ಆಗುತ್ತಿದೆ. ಇದು ನಮ್ಮ ಎಲ್ಲರಿಗೂ ಪ್ರೋತ್ಸಾಹ,” ಎಂದರು.
ಗಮನಿಸಬೇಕಾದ್ದು ಏನೆಂದರೆ, ಡೆವಿಲ್ ಶೂಟಿಂಗ್ ಪ್ರಾರಂಭವಾದ ಕೆಲವೇ ದಿನಗಳಲ್ಲಿ ದರ್ಶನ್ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿದ್ದರು. ಬಳಿಕ ಹಲವು ತಿಂಗಳ ಬಳಿಕ ಅವರಿಗೆ ಜಾಮೀನು ಸಿಕ್ಕಿತು. ಆರೋಗ್ಯ ಸುಧಾರಿಸಿಕೊಂಡು ಅವರು ಶೂಟಿಂಗ್ ಪೂರ್ಣಗೊಳಿಸಿದ್ದರು. ಆದರೆ ಇತ್ತೀಚೆಗೆ ಸುಪ್ರೀಂಕೋರ್ಟ್ ಅವರ ಜಾಮೀನು ರದ್ದುಪಡಿಸಿದ್ದರಿಂದ ದರ್ಶನ್ ಮತ್ತೆ ಜೈಲು ಸೇರಿದ್ದಾರೆ.
ಈ ನಡುವೆಯೇ ಸಿನಿಮಾ ಪೂರ್ಣಗೊಂಡಿರುವುದರಿಂದ, ನಿರ್ಮಾಪಕರು ದರ್ಶನ್ ಅವರಿಲ್ಲದೆ “ಡೆವಿಲ್” ಚಿತ್ರವನ್ನು ಡಿಸೆಂಬರ್ 12ರಂದು ರಿಲೀಸ್ ಮಾಡಲು ನಿರ್ಧರಿಸಿದ್ದಾರೆ.
“ಡೆವಿಲ್” ಈಗಾಗಲೇ ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆ ಮೂಡಿಸಿದ್ದು, ಚಿತ್ರದ ಟ್ರೇಲರ್ ಮತ್ತು ಹಾಡುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.