ಬಿಹಾರ ಚುನಾವಣಾ ಪ್ರಚಾರದ ತೀವ್ರ ಹಂತದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಭಾಷಣಗಳು ರಾಜಕೀಯ ಕಣವನ್ನು ಕಾವುಗೊಳಿಸಿವೆ.
ಬಿಹಾರದ ಹಲವು ಕ್ಷೇತ್ರಗಳಲ್ಲಿ ಪ್ರಚಾರ ನಡೆಸಿದ ಅವರು, ಕಾಂಗ್ರೆಸ್, ಆರ್‌ಜೆಡಿ ಮತ್ತು ಸಮಾಜವಾದಿ ಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಈ ಪಕ್ಷಗಳು ಅಭಿವೃದ್ಧಿಯನ್ನು ಕಡೆಗಣಿಸಿ ಅಲ್ಪಸಂಖ್ಯಾತರ ತೃಪ್ತಿಪಡಿಸುವ ರಾಜಕೀಯದಲ್ಲಿ ತೊಡಗಿವೆ ಎಂದು ಅವರು ಆರೋಪಿಸಿದರು.
ಕುಟುಂಬ ಮತ್ತು ಮಾಫಿಯಾಗಳಿಗಷ್ಟೇ ಅಭಿವೃದ್ಧಿ ಸೀಮಿತವಾಗಿದೆ
ರಘುನಾಥಪುರ, ದರೌಲಿ, ಶಹಪುರ, ಬಕ್ಸರ್, ದುಮ್ರೋನ್ ಮತ್ತು ಬ್ರಹ್ಮಪುರ ಪ್ರದೇಶಗಳಲ್ಲಿ ಎನ್‌ಡಿಎ ಅಭ್ಯರ್ಥಿಗಳ ಪರವಾಗಿ ಮಾತನಾಡಿದ ಯೋಗಿ ಆದಿತ್ಯನಾಥ್, ಕಾಂಗ್ರೆಸ್ ಮತ್ತು ಆರ್‌ಜೆಡಿ ಪಕ್ಷಗಳು ಕುಟುಂಬ ರಾಜಕೀಯ ಮತ್ತು ಮಾಫಿಯಾ ಆಳ್ವಿಕೆಯಲ್ಲಿ ಸಿಲುಕಿಕೊಂಡಿವೆ ಎಂದು ಆರೋಪಿಸಿದರು.
“ಈ ಪಕ್ಷಗಳು ಬಾಬರ್ ಮತ್ತು ಔರಂಗಜೇಬರ ಸಮಾಧಿಗಳಿಗೆ ನಮಸ್ಕಾರ ಮಾಡುತ್ತವೆ, ಆದರೆ ರಾಮಭಕ್ತರ ಮೇಲೆ ಗುಂಡು ಹಾರಿಸುತ್ತವೆ. ಇವರಿಗೆ ಅಭಿವೃದ್ಧಿ ಎಂದರೆ ತಮ್ಮ ಕುಟುಂಬ ಮತ್ತು ಆಪ್ತರಿಗೆ ಮಾತ್ರ ಸೀಮಿತವಾದ ಸೌಲಭ್ಯಗಳು.” ಎಂದು ಹೇಳಿದರು.
ಆರ್‌ಜೆಡಿ ಮತ್ತು ಕಾಂಗ್ರೆಸ್ ಮೈತ್ರಿ ಅಪರಾಧದ ಕಾರ್ಖಾನೆ
ಯೋಗಿ ಆದಿತ್ಯನಾಥ್ ಅವರು ಆರ್‌ಜೆಡಿ ಮತ್ತು ಕಾಂಗ್ರೆಸ್ ಮೈತ್ರಿಯನ್ನು “ಅಪರಾಧದ ಕಾರ್ಖಾನೆ ಮತ್ತು ಅಭಿವೃದ್ಧಿಗೆ ಅಡ್ಡಿಪಡಿಸುವ ಶಕ್ತಿ” ಎಂದು ಕರೆದರು.
“2005ರ ಮೊದಲು ಬಿಹಾರ ಗೂಂಡಾಗಿರಿ ಮತ್ತು ಮಾಫಿಯಾ ಆಳ್ವಿಕೆಯ ಕೇಂದ್ರವಾಗಿತ್ತು. ಆದರೆ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಮಾಫಿಯಾಗಳ ಪತನ ಆರಂಭವಾಯಿತು. ಈಗ ಬಿಹಾರ ಅಭಿವೃದ್ಧಿಯ ಹಾದಿಯಲ್ಲಿ ಸಾಗುತ್ತಿದೆ.” ಎಂದು ಹೇಳಿದರು
ಎನ್‌ಡಿಎ ಸರ್ಕಾರದ ಅಭಿವೃದ್ಧಿ ಯೋಜನೆಗಳು
ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಎನ್‌ಡಿಎ ಸರ್ಕಾರಗಳು ಕೈಗೊಂಡ ಹಲವು ಅಭಿವೃದ್ಧಿ ಯೋಜನೆಗಳ ಬಗ್ಗೆ ಮಾತನಾಡಿದ ಯೋಗಿ ಆದಿತ್ಯನಾಥ್, ಬಡವರ ಮನೆ ನಿರ್ಮಾಣ, ರಸ್ತೆ ಸಂಪರ್ಕ ಮತ್ತು ಸಾಂಸ್ಕೃತಿಕ ಯೋಜನೆಗಳ ಕುರಿತು ಉಲ್ಲೇಖಿಸಿದರು.
ಅವರು “ರಾಮ-ಜಾನಕಿ ಮಾರ್ಗ ಯೋಜನೆ ಅಯೋಧ್ಯೆ ಮತ್ತು ಸೀತಾಮಢಿ ನಗರಗಳನ್ನು ಸಂಪರ್ಕಿಸಿ, ಎರಡೂ ರಾಜ್ಯಗಳ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಬಾಂಧವ್ಯವನ್ನು ಬಲಪಡಿಸುವ ಪ್ರಮುಖ ಯೋಜನೆ” ಎಂದು ವಿವರಿಸಿದರು.
ರಾಮನ ಅಸ್ತಿತ್ವವನ್ನು ನಿರಾಕರಿಸಿದವರು ಇಂದು ರಾಮರಾಜ್ಯಕ್ಕೆ ವಿರೋಧಿಸುತ್ತಿದ್ದಾರೆ
“ಕಾಂಗ್ರೆಸ್ ರಾಮನ ಅಸ್ತಿತ್ವವನ್ನೇ ನಿರಾಕರಿಸಿತು, ಆರ್‌ಜೆಡಿ ರಾಮನ ಮಿತ್ರನನ್ನು ವಿರೋಧಿಸಿತು, ಮತ್ತು ಸಮಾಜವಾದಿ ಪಕ್ಷ ರಾಮಭಕ್ತರ ಮೇಲೆ ಗುಂಡು ಹಾರಿಸಿತು. ಆದರೆ ನಾವು ಆಗ ಹೇಳಿದ್ದೇನು ಗೊತ್ತೇ? ಗುಂಡು ಹಾರಿಸಲಿ, ಲಾಠಿ ಬೀಸಲಿ, ನಾವು ರಾಮನನ್ನು ತರುತ್ತೇವೆ ಮತ್ತು ದೇವಾಲಯವನ್ನು ಅಯೋಧ್ಯೆಯಲ್ಲೇ ನಿರ್ಮಿಸುತ್ತೇವೆ ಎಂದು. ಇಂದಿನ ಅಯೋಧ್ಯೆಯ ದೇವಾಲಯ ಅದಕ್ಕೆ ಸಾಕ್ಷಿಯಾಗಿದೆ.” ಎಂದು ಯೋಗಿ ಆದಿತ್ಯನಾಥ್ ತಮ್ಮ ಭಾಷಣದಲ್ಲಿ ಹೇಳಿದರು.
ಉತ್ತರ ಪ್ರದೇಶ ರಾಮರಾಜ್ಯದ ಹಾದಿಯಲ್ಲಿ, ಈಗ ಬಿಹಾರದ ಸರದಿ
ಬಿಹಾರದ ಜನತೆಗೆ ಕರೆ ನೀಡಿದ ಯೋಗಿ ಆದಿತ್ಯನಾಥ್, “ಉತ್ತರ ಪ್ರದೇಶ ಇಂದು ರಾಮರಾಜ್ಯದ ಹಾದಿಯಲ್ಲಿ ಯಶಸ್ವಿಯಾಗಿ ನಡೆಯುತ್ತಿದೆ. ಈಗ ಬಿಹಾರವೂ ಅದೇ ದಾರಿಯನ್ನು ಅನುಸರಿಸಬೇಕು. ಎನ್‌ಡಿಎ ಅಭ್ಯರ್ಥಿಗಳಿಗೆ ಮತ ನೀಡಿ ಬಿಹಾರವನ್ನೂ ರಾಮರಾಜ್ಯದತ್ತ ಕೊಂಡೊಯ್ಯೋಣ” ಎಂದು ಮನವಿ ಮಾಡಿದರು.
ಬಿಹಾರದಲ್ಲಿ ನಡೆಯುತ್ತಿರುವ ಚುನಾವಣಾ ಕಣದ ನಡುವೆ ಯೋಗಿ ಆದಿತ್ಯನಾಥ್ ಅವರ ಈ ಹೇಳಿಕೆಗಳು ರಾಜಕೀಯ ಚರ್ಚೆಗೆ ಹೊಸ ತಿರುವು ನೀಡಿವೆ. ವಿರೋಧ ಪಕ್ಷಗಳ ವಿರುದ್ಧ ಕಿಡಿ ಕಾರಿದ ಅವರ ಭಾಷಣಗಳು ಎನ್‌ಡಿಎ ಶಿಬಿರದ ಉತ್ಸಾಹವನ್ನು ಹೆಚ್ಚಿಸುತ್ತಿದ್ದರೆ, ವಿರೋಧಿಗಳಿಗೆ ಕಠಿಣ ಸವಾಲು ಎಸೆದಂತಾಗಿದೆ.