Homeಸುದ್ದಿಗಳುಗ್ರಂಥಾಲಯ ಇಲಾಖೆಯ ಪುಸ್ತಕಗಳ ಆಯ್ಕೆ ಪಟ್ಟಿಯಲ್ಲಿ ‘ಕನ್ನಡ ನಾಡಿನ ಹೆಮ್ಮೆ ಶ್ರೀ ಮಧ್ವಾಚಾರ್ಯರು’ ಕೃತಿಗೆ ಮನ್ನಣೆ

ಗ್ರಂಥಾಲಯ ಇಲಾಖೆಯ ಪುಸ್ತಕಗಳ ಆಯ್ಕೆ ಪಟ್ಟಿಯಲ್ಲಿ ‘ಕನ್ನಡ ನಾಡಿನ ಹೆಮ್ಮೆ ಶ್ರೀ ಮಧ್ವಾಚಾರ್ಯರು’ ಕೃತಿಗೆ ಮನ್ನಣೆ

Published on

ಬೆಂಗಳೂರು: ಕನ್ನಡ ನಾಡಿನ ಹೆಮ್ಮೆಯ ಮಹಾನ್ ದಾರ್ಶನಿಕರಾದ ಶ್ರೀ ಮಧ್ವಾಚಾರ್ಯರ ಜೀವನ, ಸಾಧನೆ ಹಾಗೂ ತತ್ತ್ವಚಿಂತನೆಗಳನ್ನು ಪರಿಚಯಿಸುವ ಉದ್ದೇಶದಿಂದ ರಚಿಸಲಾದ ‘ಕನ್ನಡ ನಾಡಿನ ಹೆಮ್ಮೆ ಶ್ರೀ ಮಧ್ವಾಚಾರ್ಯರು’ ಕೃತಿಯು ಕರ್ನಾಟಕ ಸರ್ಕಾರದ ಸಾರ್ವಜನಿಕ ಗ್ರಂಥಾಲಯ ಇಲಾಖೆಯ 2023ನೇ ಸಾಲಿನ ಪುಸ್ತಕಗಳ ಆಯ್ಕೆ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.

ಬೆಂಗಳೂರಿನ ಅನ್ನಪೂರ್ಣ ಪಬ್ಲಿಷಿಂಗ್ ಹೌಸ್ ಪ್ರಕಟಿಸಿರುವ ವಿದ್ಯಾ ವಾಚಸ್ಪತಿ ಡಾ. ಕವಿತಾ ಕೃಷ್ಣ ಮಕ್ಕಳ ಮಾಲಿಕೆಯಲ್ಲಿ ಲೇಖಕ ಡಾ. ಗುರುರಾಜ ಪೋಶೆಟ್ಟಿಹಳ್ಳಿ ಅವರು ರಚಿಸಿರುವ ಈ ಕೃತಿಯಲ್ಲಿ ಆಚಾರ್ಯ ಮಧ್ವರ ಜೀವನ, ಸಾಧನೆ, ತತ್ತ್ವಜ್ಞಾನ ಮತ್ತು ಆಧ್ಯಾತ್ಮಿಕ ಸಂದೇಶಗಳನ್ನು ಸರಳ ಭಾಷೆಯಲ್ಲಿ ಪರಿಚಯಿಸುವುದು ಕನ್ನಡಿಗರ ಸಾಂಸ್ಕೃತಿಕ ಹಾಗೂ ಬೌದ್ಧಿಕ ಪರಂಪರೆಯನ್ನು ಅರಿಯಲು ಸಹಕಾರಿಯಾಗಿದೆ.

‘ಕನ್ನಡ ನಾಡಿನ ಹೆಮ್ಮೆ ಶ್ರೀ ಮಧ್ವಾಚಾರ್ಯರು’ ಎಂಬ ಶೀರ್ಷಿಕೆಯೇ ನಾಡಿನ ದಾರ್ಶನಿಕ ಪರಂಪರೆಯ ಬಗ್ಗೆ ಹೊಂದಿರುವ ಗೌರವವನ್ನು ಪ್ರತಿಬಿಂಬಿಸುತ್ತದೆ.ಮಹಾನ್ ದಾರ್ಶನಿಕರ ಜೀವನ ಮತ್ತು ತತ್ತ್ವಚಿಂತನೆಗಳನ್ನು ಸಾಹಿತ್ಯದ ಮೂಲಕ ಜನರಿಗೆ ಪರಿಚಯಿಸುವುದು ಕೇವಲ ಬರವಣಿಗೆಯ ಕೆಲಸವಲ್ಲ; ಅದು ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ, ಮುಂದಿನ ಪೀಳಿಗೆಗೆ ತಲುಪಿಸುವ ಮಹತ್ವದ ಜವಾಬ್ದಾರಿಯೂ ಹೌದು.

ಪರಂಪರೆಯ ಸಂರಕ್ಷಣೆಗೆ ಸಾಹಿತ್ಯವೇ ಸೇತುವೆ

ನಮ್ಮ ನಾಡಿನ ಮಹಾನ್ ದಾರ್ಶನಿಕರು, ಸಂತರು ಮತ್ತು ಚಿಂತಕರ ಜೀವನ ಹಾಗೂ ಸಂದೇಶಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವಲ್ಲಿ ಸಾಹಿತ್ಯದ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಇಂತಹ ಕೃತಿಗಳು ಓದುಗರಿಗೆ ಜ್ಞಾನವನ್ನು ಒದಗಿಸುವುದರ ಜೊತೆಗೆ, ನಾಡಿನ ಪರಂಪರೆ ಮತ್ತು ಸಾಂಸ್ಕೃತಿಕ ಮೌಲ್ಯಗಳ ಬಗ್ಗೆ ಅರಿವು ಮೂಡಿಸಲು ಸಹಕಾರಿಯಾಗುತ್ತವೆ.ಈ ನಿಟ್ಟಿನಲ್ಲಿ ಗ್ರಂಥಾಲಯಗಳು ಉತ್ತಮ ಸಾಹಿತ್ಯವನ್ನು ಓದುಗರಿಗೆ ತಲುಪಿಸುವ ಪ್ರಮುಖ ಮಾಧ್ಯಮಗಳಾಗಿವೆ.

ಶ್ರೀ ಮಧ್ವಾಚಾರ್ಯರ ಜಯಂತಿಯನ್ನು ರಾಜ್ಯ ಸರ್ಕಾರದ ವತಿಯಿಂದ ಆಚರಿಸುವ ಕುರಿತು ಅಧಿಕೃತ ಘೋಷಣೆ ಸಂತಸದ ಸಂದರ್ಭದಲ್ಲಿ ‘ಕನ್ನಡ ನಾಡಿನ ಹೆಮ್ಮೆ ಶ್ರೀ ಮಧ್ವಾಚಾರ್ಯರು’ ಕೃತಿಗೆ ದೊರೆತಿರುವ ಈ ಮನ್ನಣೆಯು ಲೇಖಕರಿಗೆ ಮತ್ತಷ್ಟು ಉತ್ತಮ ಕೃತಿಗಳನ್ನು ರಚಿಸಲು ಪ್ರೇರಣೆಯಾಗಲಿ.

ಶ್ರೀ ಮಧ್ವಾಚಾರ್ಯರ ತತ್ತ್ವಜ್ಞಾನ ಮತ್ತು ಆಧ್ಯಾತ್ಮಿಕ ವಿಚಾರಧಾರೆಗಳು ಕನ್ನಡ ಸಾಹಿತ್ಯದ ಮೂಲಕ ವ್ಯಾಪಕವಾಗಿ ಜನರನ್ನು ತಲುಪಲಿ ಎಂಬುದು ಸಾಹಿತ್ಯಾಸಕ್ತರ ಆಶಯವಾಗಿದೆ.

Latest articles

More like this