ಬೆಳಗಾವಿ: ಒಳಪಂಗಡಗಳ ಅಂತಃಕಲಹ, ಗುರು-ವಿರಕ್ತರ ತರತಮಭಾವಗಳಿಂದ ಜರ್ಜರಿತವಾಗಿದ್ದ ಸಮಾಜವನ್ನು ಏಕತ್ರಗೊಳಿಸಿದ ಲಿಂ. ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರಸ್ವಾಮಿಗಳು ಗುರು-ವಿರಕ್ತರನ್ನು ಒಂದಾಗಿಸಿದ ಸೇತುವೆಯಾಗಿದ್ದಾರೆ ಎಂದು ಕಾರಂಜಿ ಮಠದ ಗುರುಸಿದ್ಧ ಮಹಾಸ್ವಾಮಿಗಳು ಹೇಳಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಬೆಳಗಾವಿ ಜಿಲ್ಲಾ ಘಟಕವು ಆಯೋಜಿಸಿದ ಅಮಾವಾಸ್ಯೆ ಶಿವಾನುಭೋಗೋಷ್ಠಿಯ ದಿವ್ಯ ಸಾನ್ನಿಧ್ಯವನ್ನು ವಹಿಸಿ ಮಾತನಾಡಿದ ಅವರು, ಸಮಾಜದ ಏಳಿಗೆಗೆ ಪೂಜ್ಯರ ಕೊಡುಗೆಯು ಮಹತ್ತರವಾದದಾಗಿತ್ತು ನಾವೆಲ್ಲರೂ ಅವರನ್ನು ಕೃತಜ್ಞತೆಯಿಂದ ಸ್ಮರಿಸಬೇಕಾದದ್ದು ಅಗತ್ಯವಾಗಿದೆ ಎಂದು ಪ್ರತಿಪಾದಿಸಿದರು.
ಇದಕ್ಕೂ ಮೊದಲು ಹಾನಗಲ್ಲ ಶ್ರೀ ಕುಮಾರಸ್ವಾಮಿಗಳ ಜೀವನ ಮತ್ತು ಸಾಧನೆ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದ ಯರಗಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ. ರಾಜಶೇಖರ ಬಿರಾದಾರ ಅವರು ಹಾನಗಲ್ಲ ಶ್ರೀ ಕುಮಾರಸ್ವಾಮಿಗಳು ಕಾರಣಿಕ ಪುರುಷರಾಗಿದ್ದು ಇಂದಿಗೂ ಬೆರಗುಗೊಳಿಸುವ ಅಸಾಮಾನ್ಯ ಸಾಧನೆಗಳನ್ನು ಮಾಡಿದವರು. ಕ್ಷುಲ್ಲಕ ಸಂಗತಿಗಳಿಗೆ ಛಿದ್ರಗೊಂಡಿದ್ದ ಸಮಾಜವನ್ನು ಒಂದುಗೂಡಿಸಲು ಅಖಿಲ ಭಾರತ ವೀರಶೈವ ಮಹಾಸಭಾ, ಶಿವಯೋಗ ಮಂದಿರ ಸ್ಥಾಪನೆಯಂತಹ ಹಲವು ರಚನಾತ್ಮಕ ಕಾರ್ಯಕ್ರಮಗಳ ಮೂಲಕ ಸಮುದಾಯವನ್ನು ಒಗ್ಗೂಡಿಸುವ ಮಹತ್ತರ ಕಾರ್ಯವನ್ನು ಮಾಡಿದರು. ಸಮಾಜದ ಉನ್ನತ ಸ್ಥಾನದಲ್ಲಿದ್ದರೂ ಸರಳ ಜೀವನ ಉದಾತ್ತ ಚಿಂತನೆಯ ಶ್ರೀಗಳ ನಡೆಯು ಅನುಕರಣೆಯವಾದಾಗಿತ್ತು. ಆಧ್ಯಾತ್ಮಿಕ ಮತ್ತು ಲೌಕಿಕ ಶಿಕ್ಷಣಕ್ಕಾಗಿ ಶಿಕ್ಷಣ ಸಂಸ್ಥೆಗಳ ಸ್ಥಾಪನೆ, ಪ್ರಾಚೀನ ವೈದ್ಯ ಪದ್ಧತಿಯ ಮುಂದುವರಿಕೆಗಾಗಿ ಆಯುರ್ವೇದದ ಪುನರುಜ್ಜೀವನ, ಸಂಗೀತ ಜ್ಞಾನವನ್ನು ಪಸರಿಸಲು ಪಂಚಾಕ್ಷರಿ ಗವಾಯಿಗಳಂತಹ ಶಿಷ್ಯೋತ್ತಮರ ಪಡೆಯನ್ನು ಸಿದ್ಧಗೊಳಿಸಿದ್ದು ಮತ್ತು ಪ್ರಾಚೀನ ಧರ್ಮ ಗ್ರಂಥಗಳ ಸಂಗ್ರಹ ಪರಿಷ್ಕರಣೆ ಹಾಗೂ ಸಂಶೋಧನೆಯ ಮಹತ್ವದ ಕಾರ್ಯಗಳನ್ನು ಪೂಜ್ಯರು ಅನವರತ ಮಾಡಿದರು ಎಂದು ಹೇಳಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಬೆಳಗಾವಿ ಜಿಲ್ಲಾ ಘಟಕದ ಅಧ್ಯಕ್ಷರಾದ ಶ್ರೀಮತಿ ರತ್ನಾಪ್ರಭಾ ಬೆಲ್ಲದ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಾಜೇಶ್ವರಿ ಗವಿಮಠ ಮತ್ತು ಸಂಗಡಿಗರು ಪ್ರಾರ್ಥಿಸಿದರು, ಎಸ್.ವಿ. ನಿರ್ವಾಣಿ ಅವರು ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು, ಆರ್.ಕೆ. ನೆರ್ಲಿ ಅವರು ವಚನ ವಿಶ್ಲೇಷಣೆ ಮಾಡಿದರು, ಡಿ.ವಿ. ಜಾಧವ ಅವರು ನಿರೂಪಿಸಿದರು, ಎಸ್.ಎಸ್. ಮಡಿವಾಳರ ಅವರು ವಂದಿಸಿದರು.