ಗಾಂಧಿಯನೇಕೆ ಕೊಂದರು ?
——————————–
ಸತ್ಯ ಶಾಂತಿ ನ್ಯಾಯ ಮೂರ್ತಿ
ಗಾಂಧಿಯನೇಕೆ ಕೊಂದರು ?
ಎಷ್ಟೋ ವರುಷಗಳ ಹಿಂದೆ
ನನ್ನ ಮುಗ್ಧ ಮಗನ ಪ್ರಶ್ನೆಯು
ದಶಕ ಕಳೆಯಿತು ಉತ್ತರ ಹುಡುಕಲು
ಕೊನೆಗೂ ಸಿಕ್ಕಿತು ಕಾರಣ
ಬಿಚ್ಚಿ ಹೇಳಿದೆ ನನ್ನ ಮಗನಿಗೆ
ನಿಜದ ನಿಲುವಿನ ಹೂರಣ
ಬಾಪು ಸರಳ ಸಮತೆ ಪ್ರಿಯ
ಕೈಗೆ ಕೊಟ್ಟನು ಸ್ವಾತಂತ್ರ್ಯ
ದಾಸ್ಯ ತೊಲಗಿಸಿ ದೇಸಿ ಚರಕ
ನೂಲು ನೂತನು ಭಾರತ
ಸುಳ್ಳು ಎಂದೂ ಹೇಳಲಿಲ್ಲ
ಕೋಮು ಗಲಭೆ ಮಾಡಲಿಲ್ಲ
ಜಾತಿ ಧರ್ಮದ ದ್ವೇಷ ಬೆಂಕಿಗೆ
ತುಪ್ಪವನ್ನು ಸುರಿಯಲಿಲ್ಲ
ಗಣಿ ಲೂಟಿ ಹೊಡೆಯಲಿಲ್ಲ
ದೇಶ ಬಿಟ್ಟು ಓಡಲಿಲ್ಲ
ಸುಳ್ಳು ಲೆಕ್ಕದಿ ದುಡ್ಡು ತಿಂದು
ದೊಡ್ಡ ಬಂಗಲೆ ಕಟ್ಟಲಿಲ್ಲ
ರೈತರನ್ನು ಕೊಲ್ಲಲಿಲ್ಲ
ಶ್ರಮಿಕ ಜನರನು ತುಳಿಯಲಿಲ್ಲ
ನಿರುದ್ಯೋಗ ನಿತ್ಯ ತಾಂಡವ
ಕೆರೆಗೆ ಯುವಕರ ನೂಕಲಿಲ್ಲ
ಧರ್ಮ ದೇವರ ಹೆಸರಿನಲ್ಲಿ
ಮೋಸ ಮಾಡಿ ಮೆರೆಯಲಿಲ್ಲ
ಮೌಲ್ಯ ಮೆಟ್ಟಿ ನೆಲದಿ ಹೂತು
ಖುರ್ಚಿ ಗದ್ದುಗೆ ಏರಲಿಲ್ಲ
ಗುಂಡು ಹೊಡೆದರೂ
ಸತ್ಯ ಹೇಳಿದ ನಮ್ಮ
ದೇಶದ ಮೋಹನ
ಗಾಂಧಿ ಮಂತ್ರವೇ ಪಾವನ
—————————————–
ಗಾಂಧೀ ಎಂದರೆ ?
———————
ಗಾಂಧೀ ಎಂದರೆ ,
ಬರಿ ಅರ್ಧ ಬಟ್ಟೆ ತೊಟ್ಟು
ದೇಶ ಸುತ್ತಿದ ಫ಼ಕೀರನಲ್ಲ
ರಾಟೆ ನೂತು ಭಜನೆ
ಮಾಡಿದವನಲ್ಲ
ಮೇಕೆಹಾಲು ಕುಡಿದು
ಕಡಲೆ ತಿಂದು
ಬದುಕ ನೂಕಿದವನಲ್ಲ
ಗ್ರಾಮರಾಜ್ಯ,ಸ್ವಾತಂತ್ರ್ಯ
ಸಮಾನತೆಗೆ
ಒಳಗೊಳಗೇ ಕೊರೆದ
ಅಶಾಂತ ಸಂತ
ಉಪ್ಪಿಗಾಗಿ ಸಾವಿರ ಮೈಲಿ
ನಡೆದು
ಉಪವಾಸ ಸತ್ಯಾಗ್ರಹಕ್ಕೆ
ಮುಡುಪಿಟ್ಟ
ಶುದ್ಧ ಸಜ್ಜನ ಶಾಂತಿಯ
ಸೈನಿಕ
ಹೊಲೆಯರ ಕೇರಿಯಲಿ
ಕಕ್ಕಸ ತೊಳೆದ
ಕಸಗುಡಿಸಿ ಮನೆ ಮನ
ಹಸನಗೊಳಿಸಿದ
ರೋಗಿಗಳ ಅಪ್ಪಿ ಹಣ್ಣು
ತಿನಿಸಿದ
ದೀನ ದಲಿತರ ಬಡವ
ಬಲ್ಲಿದರ ಒಂದು ಮಾಡಿ
ರಾಮ ರಹಿಮರನು ಕೂಡಿಸಿ
ಈಶ ವಾಸು ಯೇಸುರನು
ಪೂಜಿಸಿದ
ತನ್ನವರಿಗೆ ಮನೆ ಮಾರು
ಆಸ್ತಿ ಮಾಡದೆ
ಪ್ರೇಮ ಶಾಂತಿ ಸತ್ಯಕೆ
ಹೊಸ ಭಾಷೆ ಬರೆದ
ಹಲ್ಲು ಹೋಗಿ ಕಣ್ಣು
ಮಂಜಾಗಿ ದೇಹ ಬೆಂಡಾದರು
ಬಿಡಲಿಲ್ಲ ಓದು ಅಧ್ಯಯನ
ಪ್ರಾರ್ಥನಾ ,
ಸಾವು ಮುಂದಿದ್ದರು
ಕುಂದಲಿಲ್ಲ ,
ದುರುಳರ ದ್ವೇಷಕ್ಕೆ ನಗುತಲಿ
ಪ್ರಾಣಬಿಟ್ಟ ಮಹಾತ್ಮಾ
ಬಾಪು ನೀನು ಇನ್ನೊಮ್ಮೆ
ಮತ್ತೊಮ್ಮೆ ಹುಟ್ಟಿ ಬಾ
ಬಿಳಿ ಟೋಪಿ ಕರಿ ರಕ್ಕಸರ
ತಲೆ ಹೊಡೆಯಲು
ನೆಲ ಗಣಿ ನುಂಗುವ ಬಿಜಾಸುರರ ಮುಗಿಸಲು
ಸತ್ಯ ಶಾಂತಿ ಸಹ ಬಾಳ್ವೆಗೆ
ಮುನ್ನುಡಿ ಬರೆಯಲು
ಬಾ ಬಾಪು ಬಾ ನೀ ಬರುವ
ಹಾದಿಯಲಿ ಪೊರೆಕೆ ಹಿಡಿವೆ
ಡಾ.ಶಶಿಕಾಂತ ಪಟ್ಟಣ -ಪೂನಾ ರಾಮದುರ್ಗ