Homeಕವನಕವನ : ನಾ ತೊಟ್ಟ ಚಪ್ಪಲಿ !

ಕವನ : ನಾ ತೊಟ್ಟ ಚಪ್ಪಲಿ !

Published on

ನಾ ತೊಟ್ಟ ಚಪ್ಪಲಿ !

ನಾ ತೊಟ್ಟ ಚಪ್ಪಲಿ
ನನ್ನ ದೇಹದ ಭಾರವನ್ನು ಹೊತ್ತಿರುವ ಎರಡನೇ ತಾಯಿ
ದಾರಿಯೊಳಗಿನ ಮುಳ್ಳು ಕಲ್ಲುಗಳಿಂದ ಸುರಕ್ಷಿಸುವ ಕರುಣಾಮಯಿ
ಹೆತ್ತವಳು ಉಸಿರು ಕೊಟ್ಟರೆ
ಹೊತ್ತವಳು ಬದುಕಿಗೆ ಆಸರೆ

ನಾ ತೊಟ್ಟ ಚಪ್ಪಲಿ
ಎಂದಿಗೂ ನೋವಿನಲ್ಲಿ ಬಲಿ
ಪೂಜೆಯಲ್ಲೂ ಹೊರಗೆ
ಮನೆಯಂಗಳದ ಕಾವಲಿಗೆ
ಎಂದೋ ಮಳೆ ಸುರಿದಾಗ ಶುಚಿ
ಕೆಸರು ಗದ್ದೆಯಲ್ಲಿ ನೆಲಕಚ್ಚಿ
ದೇಹದ ಹೊರ ಅಂಗವಾದ
ನಾ ತೊಟ್ಟ ಚಪ್ಪಲಿ.

ಊರಿಂದ ಮಸಣದ ಕುಣಿಕೆಗೆ
ನನ್ನೊಡನೆ ನೋವುಂಡ
ನಾ ತೊಟ್ಟ ಚಪ್ಪಲಿ!
ಮನೆಯ ಬಾಗಿಲಿಂದ ದೇವಸ್ಥಾನದ ಮೆಟ್ಟಿಲವರೆಗೆ
ಭಕ್ತಿಯೊಳಗೆ ಮಿಂದ
ನಾ ತೊಟ್ಟ ಚಪ್ಪಲಿ!

ಗುಡಿಯೊಳಗೆ ದೇವರು ಹೊರಗಿಟ್ಟನು
ಮನೆಯಿಂದ ಮನುಷ್ಯನು ಹೊರಗಿಟ್ಟನು
ಗುಡಿಯೊಳಗೆ
ಮನೆಯೊಳಗೆ
ಮನದೊಳಗೆ
ಮನೆಯ ದೇವರಂತೆ ಪೂಜಿಸಿದ್ದು ಚಮ್ಮಾರ
ತೊಡುವ ಚಪ್ಪಲಿಯೇ ಜೀವನದ ಉದರ .

ನಾ ತೊಟ್ಟ ಚಪ್ಪಲಿ
ಒಮ್ಮೆ ಮಗುವಾಗಿ ,
ಒಮ್ಮೆ ಹೆಣ್ಣಾಗಿ, ಗಂಡಾಗಿ
ಅರ್ಧನಾರಿಯಾಗಿ ಹುಟ್ಟಿ ,
ನನ್ನ ದೇಹಕ್ಕಿಂತ ಬಲು ಗಟ್ಟಿ
ಅವಳು ಹೆಣ್ಣಿಗೆ ತಂದೆಯಾದಳು
ಗಂಡಿಗೆ ತಾಯಿಯಾದಳು
ದಿಕ್ಕಿಲ್ಲದ ದೇಹಕ್ಕೆ ಜೊತೆಯಾದವಳು
ನಾ ತೊಟ್ಟ ಚಪ್ಪಲಿ!

ನಾ ತೊಟ್ಟ ಚಪ್ಪಲಿ
ಜಾತಿ ಧರ್ಮಕ್ಕೂ ಬಲಿಯಾದವಳು
ಹುಟ್ಟು ಚಮ್ಮಾರ
ಬದುಕು ನೂರಾರು ಜಾತಿ ಧರ್ಮಗಳಲ್ಲಿ ಸಾಗುವ ದೂರ
ಅವಳು ಎಂದಿಗೂ ಶೋಷಿತಳು !
ಬದುಕಿಗೆ ಆಸರೆಯಾದರು
ಶುಭಮಂಗಳಕ್ಕೆ ಕಪ್ಪು ಇವಳು,
ಎಂದಿಗೂ ನನ್ನ ತಾಯಿಯಂತೆ
ನನ್ನ ಜೊತೆಯಿರುವವಳು,
ನಾ ತೊಟ್ಟ ಚಪ್ಪಲಿ!

ಭೋವಿ ರಾಮಚಂದ್ರ
ಹರಪನಹಳ್ಳಿ
8861588118.

Latest articles

More like this