ಅಂಬೇಡ್ಕರ್ ನೆನಪಾಗುತ್ತಾರೆ
ದೇಶದಲ್ಲಿ ಕೋಮು ಗಲಭೆ
ಬೆಂಕಿಯ ಕೆನ್ನಾಲಿಗೆ
ಗುಡಿಸಲುಗಳನ್ನು ಸುಡುವಾಗ
ನನಗೆ ಮತ್ತೆ
ಅಂಬೇಡ್ಕರ್ ನೆನಪಾಗುತ್ತಾರೆ
ಪಿಪ್ರಾದ ದಲಿತರ ತಂದು
ಸಾಮೂಹಿಕವಾಗಿ ಸುಟ್ಟಾಗ
ಅಸ್ಪೃಶ್ಯರ ಚೀರು ಧ್ವನಿಯ ಮಧ್ಯೆ
ನನಗೆ ಮತ್ತೆ
ಅಂಬೇಡ್ಕರ್ ನೆನಪಾಗುತ್ತಾರೆ
ಕುದುರೆಮೋತಿಯ ಪಾರವ್ವ
ಹುಸೇನಬೀಯರನ್ನು
ಬಹಿರಂಗ ಅತ್ಯಾಚಾರ ಮಾಡಿ
ಮೆರೆದ ಕಾವಿಯ ಗದ್ದುಗೆ ಎದುರು
ನನಗೆ ಅಂಬೇಡ್ಕರ್ ನೆನಪಾಗುತ್ತಾರೆ
ಹಿರೇಬಾಗೇವಾಡಿಯ ಹೊಲೆಯರಿಗೆ
ಕರೆಸಿ ಮಲವ ತಿನಿಸಿದ
ದುಷ್ಟ ಗೌಡ ದೇಸಾಯಿ ಶ್ರೀಮಂತರ ನಡುವೆ
ನನಗೆ ಮತ್ತೆ
ಅಂಬೇಡ್ಕರ್ ನೆನಪಾಗುತ್ತಾರೆ
ಅಬಲೆ ನಿರ್ಭಯಾಳ ಮೇಲೆ
ಎರಗಿ ಅತ್ಯಾಚಾರ ಮಾಡಿ
ಕೊಲೆಗೈದ ಪಾಪಿಗಳ ಅಟ್ಟಹಾಸದ ಮಧ್ಯೆ
ನನಗೆ ಮತ್ತೆ ಮತ್ತೆ
ಅಂಬೇಡ್ಕರ್ ನೆನಪಾಗುತ್ತಾರೆ
ನ್ಯಾಯಾಧೀಶರ ಮನೆಯಲ್ಲಿ
ಕೋಟಿ ಕೋಟಿ ಕಂತು ಸಿಕ್ಕಾಗ
ನ್ಯಾಯದ ತಕ್ಕಡಿ ಮುರಿದು
ತುಕಡಿಯಾಗಿ ಬಿದ್ದಾಗ
ನನಗೆ ಅಂಬೇಡ್ಕರ್ ನೆನಪಾಗುತ್ತಾರೆ
ದಶಕ ಶತಮಾನಗಳು ಉರುಳಿ
ಬುದ್ಧ ಬಸವ ಬಾಪುವಿನ
ಕನಸು ನನಸಾಗದೆ
ನಿತ್ಯ ಭಯ ಭೀತಿಯಲಿ ಬಳಲುವಾಗ
ನನಗೆ ಅಂಬೇಡ್ಕರ್ ನೆನಪಾಗುತ್ತಾರೆ
_________________________
ಡಾ.ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ