ಹಂಬಲದ ಬಯಲು
ನನ್ನ ನಾಲಿಗೆಯೊಳಗೆ
ಒಂದು ಎಲುಬು ಇರಬಾರದೆ?
ಇರುವ ತಾಣವ ಬಿಟ್ಟು ಅಲುಗದೆ ಕುಳಿತು
ಮನವ ಮೀರಿ ಬರುವ ನುಡಿಗಳ ತಡೆಯುತಲಿರೆ,
ಲೋಕದ ಸೊಲ್ಲದ ಹುಸಿ ತಲಬುಗಳು ಶೂನ್ಯವಾಗಿರುತ್ತಿದ್ದವು.
ನನ್ನ ತಲೆಯೊಳಗೆ
ಮೆದುಳಿನ ಜಾಗದಲಿ, ಮರಳು ತುಂಬಿರಬಾರದೆ?
ಹಗಲು-ಇರುಳಿನ ಮಾತಿನ ಅಮಲು,
ಅಕ್ಕರೆಯ ಆಸೆಗಳೆಲ್ಲ ಅಳಿದು-
ಮುಗಿದ ಶಬ್ದಗಳ ಮೇಲೆ ಮರುಳುತನದ
ನೆರಳು ಮಾತ್ರ ಉಳಿದಿರುತಿತ್ತು.
ನನ್ನ ಕಣ್ಣುಗಳು
ಉರಿಯುವ ಇದ್ದಿಲ ಕುಲುಮೆಯಾಗಿರಬಾರದೆ?
ಕತ್ತಲ ದಾರಿಯಲಿ ಸಹನೆಯ ದೀಪ ಹಚ್ಚಿ,
ನೆಲೆ ಅರಸಿ ಬರುವ ಪರದೇಶಿ ಕನಸಿಗರಿಗೆ
ಬೆಳಕಿನ ಆಸರೆಯಾಗುತ್ತಿದ್ದೆ.
ನನ್ನ ಕೈ-ಕಾಲುಗಳು
ಜಡ ಕೊರಡಿನದ್ದಾಗಿರಬಾರದೆ?
ಕಾಲ ಚಕ್ರದ ಹೊಂಚು-ಸಂಚಿನ ತಂತ್ರಗಳ
ಬಲೆಗೆ ಬೀಳದೆ, ತನುವಿನ ಅರಿವಿನಲ್ಲೇ
ಮನವು ಹಗುರವಾಗಿರುತ್ತಿತ್ತು.
ನನ್ನ ಮೈಯು ಒಂದು
ಮೃಗಜಲದ ಬಿಸಿಲ ಜಮಖಾನದಂತಿರಬಾರದೆ?
ನೆಲ-ಮುಗಿಲುಗಳ ಕಾವಲಿಗೆ ನಿಂತು,
ಕೊನೆಗೆ ನನ್ನೊಡಲನ್ನು ನಾನೇ
ಬಟಾಬಯಲಾಗಿಸಿಕೊಳ್ಳಬಹುದಾಗಿತ್ತು.
•••••••••••••••••••••••
ಶರಣಪ್ಪ ತಳ್ಳಿ ಕುಪ್ಪಿಗುಡ್ಡ