ಪ್ರಧಾನಿ ನರೇಂದ್ರ ಮೋದಿಯವರ 12 ವರ್ಷಗಳ ಆಡಳಿತದ ಸಂಭ್ರಮಾಚರಣೆ ನಿಮಿತ್ತ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ ಬಾಲಚಂದ್ರ ಜಾರಕಿಹೊಳಿ
ಗೋಕಾಕ – ಪ್ರಧಾನಿ ನರೇಂದ್ರ ಮೋದಿಯವರು ದೇಶದಲ್ಲಿಯೇ ಅತೀ ದೀರ್ಘಕಾಲದ ಪ್ರಧಾನಿಯಾಗಿ ಸೇವೆ ಸಲ್ಲಿಸಿರುವ ಪ್ರೀತಿಗೆ ಪಾತ್ರರಾಗಿದ್ದು, ಸತತ 12 ವರ್ಷಗಳ ಕಾಲ ಅಧಿಕಾರದಲ್ಲಿ ಮುಂದುವರೆದಿದ್ದು, ಮುಂದಿನ 2028 ರಲ್ಲೂ ಕೇಂದ್ರ ಹಾಗೂ ರಾಜ್ಯದಲ್ಲೂ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಶಾಸಕ ಮತ್ತು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ವಿಶ್ವಾಸ ವ್ಯಕ್ತಪಡಿಸಿದರು.
ಶುಕ್ರವಾರ, ಇಲ್ಲಿನ ಎನ್ಎಸ್ಎಫ್ ಕಚೇರಿಯಲ್ಲಿ ಅರಭಾವಿ ಬಿಜೆಪಿ ಮಂಡಲವು ಪ್ರಧಾನಿಗಳ 12 ವರ್ಷಗಳ ಸಂಭ್ರಮಾಚರಣೆ ಕಾರ್ಯಕ್ರಮದ ನಿಮಿತ್ತ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರ ಸಮರ್ಥ ನೇತೃತ್ವದಲ್ಲಿ ಭಾರತವು ಜಗತ್ತಿನಲ್ಲಿಯೇ ಪ್ರಗತಿಶೀಲ ರಾಷ್ಟ್ರವಾಗಿ ಹೊರಹೊಮ್ಮುತ್ತಿದೆ ಎಂದರು.
ಮುಂದೆ 2028 ರಲ್ಲಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರ ಚುಕ್ಕಾಣಿ ಹಿಡಿಯಲಿದೆ. ಅದರಂತೆ ಕೇಂದ್ರದಲ್ಲಿಯೂ ನರೇಂದ್ರ ಮೋದಿಯವರ ಮುಂದಾಳುತನದಲ್ಲಿ ದೇಶದಲ್ಲಿ ಸತತ ಮೂರನೇ ಅವಧಿಗೆ ಕಮಲ ಅರಳಿದೆ. ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರವು ಆಡಳಿತದಲ್ಲಿದ್ದರೆ ಅಭಿವೃದ್ಧಿಗೆ ಅನುಕೂಲವಾಗಲಿದೆ. ಇದರಿಂದ ಮತ್ತಷ್ಟು ಶರವೇಗದಲ್ಲಿ ಪ್ರಗತಿ ಸಾಧಿಸಲು ನೆರವಾಗುತ್ತದೆ. ಬಿಜೆಪಿ ಗೆಲುವಿನಲ್ಲಿ ಕಾರ್ಯಕರ್ತರ ಪಾತ್ರ ಮುಖ್ಯವಾಗಿದೆ. ಕಾರ್ಯಕರ್ತರಿಂದ ಮಾತ್ರ ಪಕ್ಷವು ಅಧಿಕಾರಕ್ಕೆ ಬರಲು ಸಾಧ್ಯವಾಗುತ್ತದೆ ಎಂದರು.
ಪ್ರಧಾನಿ ನರೇಂದ್ರ ಮೋದಿಯವರು ದೀರ್ಘಾವಧಿ ಪ್ರಧಾನಿಯಾಗುವ ಮೂಲಕ ಈ ಹಿಂದಿನ ಪಂಡಿತ ಜವಾಹರಲಾಲ್ ನೆಹರೂ ಅವರ ದಾಖಲೆಯನ್ನು ಅಳಿಸಿ ಹಾಕಿದ್ದಾರೆ. ನಮ್ಮ ದೇಶಕ್ಕೆ ಮೋದಿಯವರಂತಹ ದಕ್ಷ, ಪಾರದರ್ಶಕ ಪ್ರಧಾನಿಗಳು ಬೇಕು. ಇನ್ನಷ್ಟು ಕಾಲ ಈ ದೇಶದ ಆಡಳಿತ ಚುಕ್ಕಾಣಿ ಹಿಡಿಯಲು ಮೋದಿಯವರಿಗೆ ದೇವರು ಇನ್ನಷ್ಟು ಅಧಿಕಾರ, ಆಯಸ್ಸು, ಶಕ್ತಿ ನೀಡಲಿ ಎಂದು ಪ್ರಾರ್ಥನೆ ಮಾಡಿಕೊಂಡರು.
ಪ್ರಧಾನಿಗಳ ಸೇವಾ ಕಾರ್ಯವನ್ನು ಜನರ ಮನೆ- ಮನೆಗಳಲ್ಲಿ ತಲುಪಲು ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. 12 ವರ್ಷ ಪ್ರಧಾನಿಯಾಗಿ ಕಾರ್ಯ ನಿರ್ವಹಿಸುತ್ತಿರುವದರಿಂದ ನಮ್ಮ ಎನ್ಎಸ್ಎಫ್ ಮೈದಾನದಲ್ಲಿ 12 ಸಸಿಗಳನ್ನು ನೆಡಲಾಗಿದೆ. ಇಂದಿನ ಸಸಿಗಳು ನಾಳೆ ದೊಡ್ಡ ಮರಗಳಾಗಿ ಜನರಿಗೆ ನೆರಳು ನೀಡುತ್ತವೆ. ನಮ್ಮ ಮುಂದಿನ ಪೀಳಿಗೆಗೂ ಗಿಡ- ಮರಗಳು ಹೆಮ್ಮರವಾಗಿ ಬೆಳೆದು ನಿಸರ್ಗದ ರಸದೌತನ ನೀಡುತ್ತವೆ ಎಂದು ಅವರು ತಿಳಿಸಿದರು.
ಪ್ರತಿಯೊಬ್ಬ ರೈತರು ನೈಸರ್ಗಿಕ ಕೃಷಿಯನ್ನು ಅನುಸರಿಸಬೇಕು. ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕಗಳ ಬಳಕೆ ಮಾಡದೇ ಸಾವಯವ ಕೃಷಿ ಪದ್ಧತಿಗೆ ಆದ್ಯತೆ ನೀಡಬೇಕು. ಇದರಿಂದ ಗೊಬ್ಬರ ಹಾಗೂ ಔಷಧಿಗಳ ಖರ್ಚು ಸಹ ಉಳಿತಾಯವಾಗುತ್ತದೆ. ಕೃಷಿ ಉಳಿದರೆ ದೇಶವು ಉಳಿಯುತ್ತದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿಯವರು ನೈಸರ್ಗಿಕ ಕೃಷಿ ಕುರಿತು ಮಾರ್ಮಿಕವಾಗಿ ಮಾತನಾಡಿದರು.
ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಅರಭಾವಿ ಮಂಡಲವು ಹಮ್ಮಿಕೊಂಡ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ಅಧ್ಯಕ್ಷತೆಯನ್ನು ಅರಭಾವಿ ಬಿಜೆಪಿ ಮಂಡಲ ಅಧ್ಯಕ್ಷ ಮಹಾದೇವ ಶೆಕ್ಕಿ ವಹಿಸಿದ್ದರು.
ಬೆಳಗಾವಿ ಗ್ರಾಮಾಂತರ ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಸ ಪಾಟೀಲ, ಓಬಿಸಿ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಲಕ್ಷ್ಮಣ ತಪಸಿ, ಮುತ್ತೆಪ್ಪ ಮನ್ನಾಪೂರ, ಪರಸಪ್ಪ ಬಬಲಿ, ಪ್ರಮೋದ ನುಗ್ಗಾನಟ್ಟಿ, ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.