Homeಕವನಕವನ : ನಾನು ನಿನಗೇನಾಗಬೇಕು ?

ಕವನ : ನಾನು ನಿನಗೇನಾಗಬೇಕು ?

Published on

ನಾನು ನಿನಗೇನಾಗಬೇಕು?

​ಇನ್ನೇನು ಕೆದರಿದ ಮುಂಗುರುಳ ಸರಿಸಿ
ಹೂಮುತ್ತಿನ ಹಿಮಮಳೆಯ ಸುರಿಸಬೇಕೆನ್ನುವಷ್ಟರಲ್ಲೇ,
ನಡುವೆ ಎದ್ದುನಿಂತಿತು ಶೀತಲ ಪಾರದರ್ಶಕ ಗಾಜಿನ ಗೋಡೆ;
ಕಣ್ಣಳತೆಯಲಿ ಅಡಗಿದ
ಪಿಸುಮಾತನು ಮರಳಿ ಕೊಟ್ಟುಬಿಡು.
ನಿನಗೇನಾಗಬೇಕಾಗಿದೆ ನಾನು?

​ಅಲೆಗಳ ಅಂಚಿನಲಿ ತಂಗಿದ ನೀರವ ಕುಳಿರ್ಗಾಳಿ
ಬತ್ತಿದ ಎದೆಗೆ ಯಾವ ಅಭಯದ ಒಲುಮೆಯ ತಂದೀತು?
ತೀರದ ಬಂಡೆಗೆ ಅಪ್ಪಳಿಸಿ ಅಳಿವ ತೆರೆಗಳ ಹಾದಿಗೆ
ತನನ್ನೇ ಒಡ್ಡಿದ ಮರಳು ಯಾವ ದೂರನು ಹೆಣೆದೀತು?
ನಿನಗೇನಾಗಬೇಕಾಗಿದೆ ನಾನು?

​ಅಕಸ್ಮಾತ್ ನಾಳೆಯ ಅಪರಿಚಿತ ದಿನಗಳಲಿ
ನೀನು ಎದುರಾಗಿ ನಿಂತರೆ, ಕಳೆದುಹೋದ ನನ್ನ ಬದುಕಿನ ನಿಗೂಢ ತಿರುವು,
ಗೊತ್ತೇ ಇರದ ಹಾದಿಯಲಿ ಕಾಲಿಟ್ಟ ಬರೀ ಅರಿವು—
ಎಲ್ಲವನ್ನೂ ಮರಳಿ ಕೊಟ್ಟುಬಿಡು
ನಿನಗೇನಾಗಬೇಕಾಗಿದೆ ನಾನು?

​ತಪ್ತ ಮರುಭೂಮಿಯ ಕಾದ ಬಿಸಿಲಲಿ ತಿರು-ತಿರುಗಿಸಿ,
ನೀರಡಿಸಿ, ಹಿಂಸಿಸಿದ ಆ ಪ್ರಾಣಸಂಕಟದ ಗಳಿಗೆ,
ಪಾತಾಳದ ಆಳದಲಿ ಉಸಿರುಗಟ್ಟಿ,
ಎದೆಯೊಳಗಿನ ರಕ್ತ ಗಂಟಲಿಗೆ ಬಂದ- ತೀವ್ರ ವೇದನೆಯನು
ಹಿಂತಿರುಗಿಸಿಬಿಡು
ನಿನಗೇನಾಗಬೇಕಾಗಿದೆ ನಾನು?

​ನನ್ನನ್ನೇ ಕೊಂದ ನಿನ್ನ- ಪ್ರತಿಬಿಂಬದ ಕನ್ನಡಿ,
ಬೆಂಕಿಗೆ ಬಿದ್ದ ಶೂನ್ಯ ಕನಸುಗಳು—
ಒಣಮರದ ಎಲೆಯಂತೆ ಬಿದ್ದು ಕರಗಿದರೂ,
ನಿನ್ನ ದಿಗಂಬರ ಅಧರಗಳಿಗೆ ಸೋಕಿಸಿದ,
ಅಲ್ಲಿಯೇ ಉಳಿದು, ಒಣಗಿದ ಎಂಜಲು ತೇವವನು ವಾಪಾಸು
ನೀಡಿಬಿಡು
ನಿನಗೇನಾಗಬೇಕಾಗಿದೆ ನಾನು?
•••••••••••••••••••••••
ಶರಣಪ್ಪ ತಳ್ಳಿ ಕುಪ್ಪಿಗುಡ್ಡ

Latest articles

More like this