Homeಕವನಕವನ : ಉರುಳಾಗಿ ಕಾಡಿದೆ...

ಕವನ : ಉರುಳಾಗಿ ಕಾಡಿದೆ…

Published on

ಉರುಳಾಗಿ ಕಾಡಿದೆ…

ಹಾಡುವ ಧ್ವನಿಗೆ ಕೋಗಿಲೆ ಕೊರಳಾಗಬೇಕಿತ್ತು ಉರುಳಾಗಿ ಕಾಡಿದೆ ಏಕೋ
ನೋಡುವ ನೋಟಕೆ ಸೋತು ಮರುಳಾಗಬೇಕಿತ್ತು ಉರುಳಾಗಿ ಕಾಡಿದೆ ಏಕೋ

ಕಂಗಳ ಕನಸುಗಳ ಕೈ ಹಿಡಿದು ನಡೆಸುವ ಬೆರಳಾಗಬೇಕಿತ್ತು ಉರುಳಾಗಿ ಕಾಡಿದೆ ಏಕೋ
ಒಲವಿನಂಗಳದ ಹೂಗಳ ಕಾಪಿಡುವ ಹಸಿರ ಹೆರಳಾಗಬೇಕಿತ್ತು ಉರುಳಾಗಿ ಕಾಡಿದೆ ಏಕೋ

ಬೆಸೆದ ಭಾವಕೆ ತುಸು ನೆರಳಾಗಬೇಕಿತ್ತು ಉರುಳಾಗಿ ಕಾಡಿದೆ ಏಕೋ
ಎದೆ ತಟ್ಟಿಹೋದ ನೆನಪುಗಳಿಗೆ ತಂಪು ತಿರುಳಾಗಬೇಕಿತ್ತು ಉರುಳಾಗಿ ಕಾಡಿದೆ ಏಕೋ

ಆರಾಧಿಸುವ ಕಂಗಳಿಗೆ ಮುತ್ತಿಡುವ ಕುರುಳಾಗಬೇಕಿತ್ತು ಉರುಳಾಗಿ ಕಾಡಿದೆ ಏಕೋ
ಅನುರಾಗದ ಅನುಬಂಧಕೆ ಮಿಡಿವ ಕರುಳಾಗಬೇಕಿತ್ತು
ಉರುಳಾಗಿ ಕಾಡಿದೆ ಏಕೋ

ಹರಿವ ಹೃದಯದ ಕರೆಗೆ ಬೆಳದಿಂಗಳ ಇರುಳಾಗಬೇಕಿತ್ತು
ಉರುಳಾಗಿ ಕಾಡಿದೆ ಏಕೋ
ನೆನಪ ತೊಟ್ಟಿಲು ತೂಗುವ ಹೂ ಸರಳಾಗಬೇಕಿತ್ತು ಉರುಳಾಗಿ ಕಾಡಿದೆ ಏಕೋ

ತುಡಿವ ಎದೆ ಪ್ರೀತಿಗೆ ಹೂವ ಅರಳಾಗಬೇಕಿತ್ತು ಉರುಳಾಗಿ ಕಾಡಿದೆ ಏಕೋ
ಇಂದುವಿನ ಪ್ರೀತಿಗೆ ಶಶಿ ಬೆಳಕ ಹರಳಾಗಬೇಕಿತ್ತು
ಉರುಳಾಗಿ ಕಾಡಿದೆ ಏಕೋ

– ಇಂದಿರಾ ಮೋಟೆಬೆನ್ನೂರ. ಬೆಳಗಾವಿ

Latest articles

More like this