ಕಲ್ಲಾದ ಬದುಕು, ದೇವರಾದ ಕಲ್ಲು
°°°°°°°°°°°°°°°°°°°
ಆ ಕಲ್ಲು ತನ್ನ ಪಾಡಿಗೆ ಬಿದ್ದಿತ್ತು
ಬಿಸಿಲು-ಮಳೆಗೆ ಮೈಯೊಡ್ಡಿ,
ಮೌನದ ಕಣಿವೆಯಲ್ಲಿ ಕಣ್ಣುಮುಚ್ಚಿ.,
ನಾವೇ ಅದರ ಬೆತ್ತಲೆತನಕೆ
ಕುಂಕುಮ-ವಿಭೂತಿಯ ಬಣ್ಣ ಹೊದಿಸಿದೆವು;
ಮುಡಿಸಿದ ಹೂವಿನ ಕಂಪಿನಲಿ
ಅದಕ್ಕೊಂದು ಜೀವ-ದೈವತ್ವ ತುಂಬಿದೆವು.,
ಬಟ್ಟೆ ಜಜ್ಜುವ ಬಂಡೆಯಂತೆ
ನಿಷ್ಕರುಣಿಯಾಗಿದ್ದ ಆ ಕಗ್ಗಲ್ಲಿನ ಕಾಲಬುಡಕ್ಕೆ
ಅರೆಹೊಟ್ಟೆಯ ಬಾಗಿದ ಬೆನ್ನುಗಳಾಗಿ ಶರಣಾದೆವು.,
ಹಸಿದ ಮರದ ನೆರಳಿನ ಉಸಿರಿನಲಿ
ಭಾಷೆಯಿಲ್ಲದ ಒಳನೋವನು
ಅದರ ಪಾದಕ್ಕಿಟ್ಟು ಕಣ್ಣೀರು ಸುರಿಸಿದೆವು.,
ಬಡತನಕ್ಕೋ ಬೆತ್ತಲೆಯ ಅಸಹಾಯಕತೆಗೋ… ನಾವದನು ಅನಾಥವಾಗಿಸಲಿಲ್ಲ,
ನಮ್ಮ ತಟ್ಟೆಯ ಕಡೆಯ ತುತ್ತನು
‘ಪ್ರಸಾದ’ವೆಂದು ಹಂಚಿಕೊಂಡು,
ಬೂಟಾಟಿಕೆಯ ಭರವಸೆಯಲ್ಲಿ
ಬದುಕನ್ನು ಹತ್ತಿಯಂತೆ ಹಗುರಾಗಿಸಿಕೊಂಡೆವು.
ಒಡೆದ ಪಾದಗಳ ನೆತ್ತರ ಹದದಲ್ಲಿ
ನಮ್ಮ ಬಿರಿಯಾದ ಸಂಕಟದ ದೀನತೆಯನು
ಆ ಮೂಕದೇವರ ನೆತ್ತಿಯ ನೆರಿಗೆಯ ಮೇಲಿಟ್ಟು
ಕ್ಷಣಕಾಲ ನಾವೇ ಮೂಕರಾದೆವು!
ಆದರೆ,
ಬರಿದಾದ ಜೋಳಿಗೆಯ ಜೊತೆಗೆ
ಹೊಟ್ಟೆಯ ಹಸಿವು ಮತ್ತೆ ಕೂಗಿತು,
ಮರುದಿನದ ಅದೇ ಕತ್ತಲಲಿ ಆ
ಕಲ್ಲು ಅಲ್ಲೇ ನಿರ್ಲಿಪ್ತ
ಧ್ಯಾನದಲಿ ದೇವರಾಗಿ ಕುಳಿತಿತ್ತು.,
ನಾವು ಮಾತ್ರ ಮತ್ತೆ…..ಪ್ರತಿ ದಿನದ ಹಸಿವಿನಲಿ ಅದೇ ಕಲ್ಲಿನತ್ತಿರ ನರಳಿದೆವು!
••••••••••••••••••
ಮನಸು ತೇವವಾಗಲು
•••••••••••••••••
ಒಂದು ಕಪ್ಪು ಚುಕ್ಕಿ ಸಾಕು
ಬದುಕಿನ ನೆತ್ತಿಗೆ
ಕಳಂಕದ ಮುಳ್ಳು ಮುಡಿಯಲು;
ಮಾಸಿದ ಗಾಯದ ಬಾಯಿಗೆ
ಉಪ್ಪಿನ ಮುಷ್ಟಿ ಸವರಲು
ಕಣ್ಣ ರೆಪ್ಪೆಗಳ ದಂಗೆಯೆಬ್ಬಿಸಲು.
ಒಂದು ಶಕುನದ ಹಕ್ಕಿ ಸಾಕು
ಕುಸಿದ ಹೆಣದ ಕಂದಕದ ಮೇಲೆ
ಶುಭ-ಅಶುಭಗಳ ಕವಡೆ ಚೆಲ್ಲಿ
ಎದೆಯ ಹಸಿಗೋಡೆ
ತೇವವಾಗಿ ಸೋರಲು.
ಒಂದು ಸಿಕ್ಕು ಸಾಕು
ಅಹಂಕಾರದ ಬಿಲ್ಲಿನ ಎದೆ ಮುರಿಯಲು;
ಕೊಬ್ಬಿ ಹರಿದ ನೆತ್ತರ ನದಿಗೆ
ಹಿಮದ ಕೋಳ ತೊಡಿಸಿ
ಸೊಕ್ಕನ್ನು ಹೆಪ್ಪುಗಟ್ಟಿಸಲು.
ಒಂದೇ ಒಂದು ಬಿಕ್ಕುಸಾಕು
ಮುಖವಾಡದ ಬಿರುಕಿನೊಳು
ನಿಜದ ನೆಲೆ ಕಾಣಲು;
ಸ್ವರದೊಳಗಿನ ಮರೀಚಿಕೆ ಆವಿಯಾಗಿ
ದಿಗಿಲಿನ ಕತ್ತಲೆಯಲ್ಲೂ
ಭಯ ಹೊಸೆಯಲು.
ಒಂದೇ ಒಂದು ದಿಕ್ಕು ಸಾಕು,
ಬೆಂಕಿಯ ಕಡ್ಡಿ ಗೀರಬೇಕಿಲ್ಲ;
ವಿಷದ ನಾಲಿಗೆಯ ನುಡಿ ಸಾಕು
ಧರ್ಮದ ಹೆಸರಿನ ರಣರಂಗದಲ್ಲಿ
ಇಡೀ ಜಗವೇ ಬೂದಿಯಾಗಲು.
••••••••••••••••••••••
ಶರಣಪ್ಪ ತಳ್ಳಿ ಕುಪ್ಪಿಗುಡ್ಡ