ನನಗೂ ಕನಸುಗಳಿವೆ
_____________________
ನನಗೂ ಕನಸುಗಳಿವೆ
ಆಸೆ ಬಯಕೆ ಬದುಕು
ಮುಂದೆ ಜೀವನದ ಗುರಿ
ಸೋತಿದ್ದೇನೆ ಬಳಲಿದ್ದೇನೆ
ಆದರೂ ಬಿಟ್ಟಿಲ್ಲ ನನ್ನ ಛಲ
ಒಮ್ಮೊಮ್ಮೆ ತೂರಿ ಬರುತ್ತವೆ
ನನ್ನ ಮುಗ್ಧ ಭಾವಗಳು
ಕೋಟೆ ಕಟ್ಟುವುದಿಲ್ಲ
ಕಹಳೆ ಊದುವುದಿಲ್ಲ
ನೊಂದ ಮನಕೆ ಸಾಂತ್ವನ ಹೇಳುತ್ತವೆ.
ಸ್ನೇಹ ಪ್ರೀತಿ ಪ್ರೇಮ ನಂಬಿಕೆ
ಹಸಿದ ಒಡಲಿಗೆ ಅಂಬಲಿ
ಬಿಸಿಲು ಬೇಗೆಗೆ ತಂಪು ಆಸರೆ
ಹೊರಗೆ ಸದ್ದು ಮೆರವಣಿಗೆ ಜೋರು
ನಾನು ಹುಡುಕುವೆ ನೆಮ್ಮದಿ ಸೂರು
ಕವನವಾಗಿವೆ ಭಾವಗಳು
ಸೋಲು ಗೆಲುವಿನ ಲೆಕ್ಕ
ಏಳು ಬೀಳುವಿನ ಕಾಲ
ಸಂಘರ್ಷ ಸಮರಸ ಶಾಂತಿ
ಸತ್ಯ ಸಮತೆ ಬಾಳ ನೀತಿ
_______________________
ಬಾರದ ಕನಸು
__________________
ರಾತ್ರಿಯ ನಿಶ್ಯಬ್ದದಲಿ
ಕಣ್ಮುಚ್ಚಿ ಕಾಯುತ ಕುಳಿತೆ,
ಮನದ ಮೂಲೆಗಳಲಿ
ನೂರಾರು ಆಸೆಗಳ ಬಿತ್ತಿ
ರೆಪ್ಪೆಯ ಮರೆಯಲ್ಲಿ ನೀ
ಬರುವ ಹಾದಿ ನೋಡಿದೆ,
ಏಕೋ ನೀ ಬರಲೇ ಇಲ್ಲ,
ನನ್ನ ಒಂಟಿಯಾಗಿಸಿ ಮರೆತು ಬಿಟ್ಟೆ.
ಬೆಳದಿಂಗಳ ರಾತ್ರಿಯಲಿ
ತಂಗಾಳಿ ಬೀಸಿತು,
ನಿನ್ನ ನೆನಪಿನ ಅಲೆಗಳು
ಮೆಲ್ಲಗೆ ಎದೆಯಲಿ ಮೂಡಿಸಿತು,
ಕೊನೆಯಿಲ್ಲದ ನಿರೀಕ್ಷೆಯಲಿ
ಜಾಗರಣೆಯ ಕಂತು
ಬಾರದ ಆ ನಿನ್ನ ಕನಸು,
ಕಣ್ಣೀರ ಹನಿಯಾಗಿ ನಿಂತು!
ಕನಸಿನ ಲೋಕದಲಿ
ನಿನಗಾಗಿ ಅರಮನೆ ಕಟ್ಟಿದ್ದೆ,
ಭಾವನೆಗಳ ಬಣ್ಣದಲಿ ನಿನ್ನ
ಚಿತ್ರವನ್ನೇ ಗೀಚಿದ್ದೆ,
ಬೆಳಗಿನ ಜಾವ ಕಣ್ಣು ತೆರೆದರೆ,
ಬರಿ ಶೂನ್ಯ ಉಳಿದಿತ್ತು,
ನನ್ನದೇ ನೆರಳಿನ ಜೊತೆ
ನನಸಾಗದ ಆಸೆಗಳ ಬೆನ್ನತ್ತಿದ ಮನವೇ,
ಇನ್ನಾದರೂ ಸುಮ್ಮನಿರು,
ಕಾಯುವುದ ಬಿಟ್ಟು,
ಬಾರದ ಕನಸಿಗೆ ನೀ ಮತ್ತೆ ಮತ್ತೆ ,
ಕೊರಗದಿರು ಬಳಲದಿರು
ಮತ್ತೆಂದೂ ಕರೆಯಲಾರೆ,
ಕರಗಿ ಹೋದ ಹಳೆಯ ನೆನಪು!
_______________________
ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ