೧೨ನೆ ಶತಮಾನದ ಬಸವಾದಿ ಶರಣರ ಸಮಕಾಲಿನ ಡೋಹರ ಕಕ್ಕಯ್ಯ, ಮೂಲತಃ ಮಧ್ಯಪ್ರದೇಶ ರಾಜ್ಯದ ಮಾಳ್ವ ಪ್ರಾಂತ್ಯದ ಢೋಹರ ಸಮುದಾಯದ ಶ್ರೇಷ್ಠ ಶರಣ. ಅನುಭವ ಮಂಟಪದ ಸಕ್ರಿಯ ಸದಸ್ಯರಾಗಿದ್ದರು. ಶೂನ್ಯಪೀಠಾಧೀಶರಾಗಿದ್ದ ಅಲ್ಲಮ ಪ್ರಭುಗಳ ದೂರದರ್ಶಿತ್ವದ ಕರ್ತೃತ್ವದ ಶಕ್ತಿಗೆ ದೇಶ, ವಿದೇಶಗಳಿಂದ ಕಲ್ಯಾಣಕ್ಕೆ ಹರಿದು ಬಂದ ಸಹಸ್ರಾರು ಶರಣರಲ್ಲಿ ಕಕ್ಕಯ್ಯ ಒಬ್ಬರು. ಇವರ ತಂದೆ ಮುದಿವೀರ, ತಾಯಿ ಭೀಮವ್ವಾ. ಧರ್ಮ ಪತ್ನಿ ಮಲ್ಲಿದೇವಿ, ನಂತರ ಶರಣೆ ಭಿಷ್ಠಮ್ಮ ಎಂದು ಕರೆಯಲಾಯ್ತು.
ಇವರಿಗೆ ದೂಳಯ್ಯನೆಂಬ ಏಕೈಕ ಪುತ್ರನಿದ್ದ. ಇವರ ಕಾಲ ಕ್ರಿ. ಶ. ೧೧೩೦, ಕಲ್ಯಾಣದ ಸಮೀಪ ಇರುವ ತೊಗಲೂರಲ್ಲಿ ಇವರು ನೆಲೆಸಿದ್ದರು. ಕಕ್ಕಯ್ಯನವರು ತಮ್ಮ ಪತ್ನಿಯೊಂದಿಗೆ ಚರ್ಮ ಹದ ಮಾಡುವ ಕಾಯಕದಲ್ಲಿ ತೊಡಗಿದ್ದರು. ಅವರೂ ೭೭೦ ಅಮರ ಗಣಂಗಳಲ್ಲಿ ಒಬ್ಬರಾಗಿದ್ದರು.
“ಎನ್ನ ಕಷ್ಟ ಕುಲದಲ್ಲಿ ಹುಟ್ಟೆದೆನೆಂಬ ಕರ್ಮವ ಕಳೆದು ಮುಟ್ಟಿ ಪಾವನವ ಮಾಡಿ ಕೊಟ್ಟನಯ್ಯಾ ಎನ್ನ ಕರಸ್ಥಲಕ್ಕೆ ಲಿಂಗವ/ ಆ ಲಿಂಗ ಬಂದು ಸೋಂಕಲೊಡನೆ ಎನ್ನ ಸರ್ವಾಂಗದ ಅವಲೋಹವಳಿಯಿತ್ತಯ್ಯಾ/ ಎನ್ನ ತನುವಿನಲ್ಲಿ ಗುರುವ ನೆಲೆಗೊಳಿಸಿದ, ಎನ್ನ ಮನದಲ್ಲಿ ಜಂಗಮವ ನೆಲೆಗೊಳಿಸಿದ, ಎನ್ನ ಅರುಹಿನಲ್ಲಿ ಪ್ರಸಾದವ ನೆಲೆಗೊಳಿಸಿದ/ ಇಂತೀ ತ್ರಿವಿಧ ಸ್ಥಾನವ ಶುದ್ಧವ ಮಾಡಿ ಚತುರ್ವಿಧಸಾರಾಯಸ್ಥಲವ ಸಂಬoಧವ ಮಾಡಿದ, ಸಂಗನ ಬಸವಣ್ಣನ ಕರುಣದಿಂದ ಪ್ರಭುದೇವರ ಶ್ರೀಪಾದವ ಕಂಡು ಬದುಕಿದೆನು ಕಾಣಾ/ ಅಭಿನವ ಮಲ್ಲಿಕಾರ್ಜುನ”.
ಡೋಹರ ಕಕ್ಕಯ್ಯನವರ ಹಿನ್ನೆಲೆ ತಿಳಿಯಲು ಮತ್ತು ಅವರು ಲಿಂಗ ದೀಕ್ಷೆ ಪಡೆದು ಕಲ್ಯಾಣದ ಶರಣರಲ್ಲಿ ಶ್ರೇಷ್ಠ ಶರಣರಾಗಿದ್ದರೆಂದು ಅರಿಯಲು ಈ ವಚನವೊಂದು ಸಾಕಾಗುತ್ತದೆ. ಕಲ್ಯಾಣ ಕ್ರಾಂತಿ ಸಂಭವಿಸಿದಾಗ ಶರಣರ ಪ್ರಾಣ ಉಳಿಸುವಲ್ಲಿ ಹಾಗೂ ವಚನ ಭಾಂಡಾರ ಸಂರಕ್ಷಿಸುವಲ್ಲಿ ಕಕ್ಕಯ್ಯನವರ ಪಾತ್ರ ಹಿರಿದಾಗಿತ್ತು. ಚನ್ನಬಸವಣ್ಣ ಮತ್ತು ಅಕ್ಕ ನಾಗಮ್ಮನವರ ನೇತೃತ್ವದ ಶರಣರ ದಂಡಿನೊಂದಿಗೆ ಕಾದ್ರೊಳ್ಳಿ ತಲುಪಿದ ಶರಣ ಕಕ್ಕಯ್ಯ, ತಮ್ಮ ಬೆನ್ನತ್ತಿದ ಬಿಜ್ಜಳನ ಸೈನಿಕರನ್ನು ಸದೆಬಡೆಯುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಪರಾಕ್ರಮದಿಂದ ಹೋರಾಡಿ ತೀವ್ರ ಗಾಯಗೊಂಡಿದ್ದರು. ಅದೇ ಕಾರಣಕ್ಕೆ ಕಾದ್ರೊಳ್ಳಿ ಪ್ರದೇಶದ ಅಣತಿ ದೂರದಲ್ಲಿರುವ ಗುಡ್ಡವೊಂದರಲ್ಲಿ ಉಪಚಾರ ಪಡೆಯುತ್ತ ತಂಗಿದ್ದರು. ನಂತರ ಅಲ್ಲಿಯೇ ಲಿಂಗೈಕ್ಯರಾದರು. ಈಗಲೂ ಅವರ ಸಮಾದಿಯಿರುವ ಪ್ರದೇಶಕ್ಕೆ “ಕಕ್ಕಯ್ಯನ ಮಡ್ಡಿ” ಎಂದೆ ಕರೆಯಲಾಗುತ್ತದೆ. ಕ್ರಮೇಣ ಅವರು ನೆಲೆಸಿದ ಪ್ರದೇಶಕ್ಕೆ “ಕಕ್ಕಯ್ಯನ ಕೇರಿ, ಕಕ್ಕೇರಿ” ಎಂದು ಕರೆಯಲಾಯ್ತು. ಈಗದು ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನಲ್ಲಿದೆ.
ಕಕ್ಕಯ್ಯ ಶರಣರು ಲಿಂಗೈಕ್ಯರಾದ ಬಳಿಕ ಅವರ ಪತ್ನಿ ಶರಣೆ ಭಿಷ್ಠಮ್ಮ ಅದೇ ಪ್ರದೇಶದಲ್ಲಿ ಕೆಲವು ವರ್ಷ ನೆಲೆಸಿದ್ದರು. ಶರಣ ಧರ್ಮ ಪ್ರಚಾರಗೊಳಿಸುವಲ್ಲಿ ನಿರತರಾಗಿದ್ದರು. ನಂತರ ಅವರೂ ಅಲ್ಲಿಯೇ ಲಿಂಗೈಕ್ಯರಾದರು. ಅವರ ಸಮಾಧಿ ನಿರ್ಮಿಸಿದ ಪ್ರದೇಶವನ್ನು ಈಗಲೂ “ಶರಣೆ ಭಿಷ್ಠಮ್ಮನ ಗುಮ್ಮಟ” ಎಂದೆ ಕರೆಯಲಾಗುತ್ತಿದೆ. ಕಕ್ಕೇರಿಯಲ್ಲಿ ಪುರಾತನ ಕಾಲದಿಂದಲೂ ಕೆರೆಯಿತ್ತು. ಅಲ್ಲಿ ಕಕ್ಕಯ್ಯನವರು ನೀರು ಬಳಸುತ್ತಿದ್ದರಂತೆ, ಹೀಗಾಗಿ ಅದಕ್ಕೆ “ಕಕ್ಕಯ್ಯನ ಕೆರೆ” ಎನ್ನುತ್ತಾರೆ. ಅಲ್ಲದೆ ಪುರಾತನ ಲಕ್ಷ್ಮಿ ದೇವಿ ಗುಡಿ ಇತ್ತು. ಅದರಲ್ಲಿ ಮಾಂಡಲಿಕ ಮತ್ತು ಸಾಮಂತರು ದಾನ, ದೇಣಿಗೆ ನೀಡಿದ ಸಿರಿ, ಸಂಪತ್ತುಗಳನ್ನು ಸಂಗ್ರಹಿಸಿಟ್ಟಿದ್ದರoತೆ. ಅದಕ್ಕೆಂದು ಆ ಭಾಗದ ಬಹುತೇಕ ಸೇನಾಧಿಕಾರಿಗಳು ಆರಾಧಿಸುವ ದೇವತೆಯಾಗಿ ಪ್ರಸಿದ್ಧಿ ಪಡೆದಿತ್ತು. ಕಿತ್ತೂರು ಸಂಸ್ಥಾನದ ಆಡಳಿತಾವಧಿಯಲ್ಲಿ ಸಂಗೊಳ್ಳಿ ರಾಯಣ್ಣ ಸಹ ಲಕ್ಷ್ಮಿ ದೇವಿ ಭಕ್ತನಾಗಿದ್ದನೆಂಬ ಪ್ರತೀತಿ ಇದೆ.
ಬ್ರಿಟೀಷರ ಕಾಲದಲ್ಲಿ ರಾತ್ರಿವೊಂದಿನ ಲಕ್ಷ್ಮಿ ದೇವಿಯ ಗುಡಿ ಕಳ್ಳತನವಾಗಿತ್ತು. ಗರ್ಭ ಗುಡಿಯೊಳಗಿಟ್ಟ ಮೂರ್ತಿಯೊಂದಿಗೆ ಪುರಾತನ ಸಿರಿ, ಸಂಪತ್ತನ್ನು ದೋಚಿದ್ದರು. ಆಗ ಗ್ರಾಮದ ಹಿರಿಯರು ನಿರ್ಣಯಿಸಿದ್ದೆಂದರೆ ಊರಾಚೆ ಇರುವ ಶರಣೆ ಭಿಷ್ಠಮ್ಮ ಸಮಾದಿಯೊಳಗಿನ ಮೂರ್ತಿಯನ್ನು ತಂದು ಲಕ್ಷ್ಮಿ ದೇವಿ ಗುಡಿಯಲ್ಲಿ ಪ್ರತಿಷ್ಠಾಪಿಸಿದ್ದರು. ಅವಾಗಿನಿಂದ ಆ ಮಂದಿರಕ್ಕೆ “ಭಿಷ್ಟಾದೇವಿ” ಗುಡಿಯೆಂದೆ ಕರೆಯುವುದು ವಾಡಿಕೆ. ಆದ್ರೆ ವರ್ಷಕ್ಕೊಮ್ಮೆ ಲಕ್ಷ್ಮಿ ದೇವಿ ಜಾತ್ರೆ ಉತ್ಸವ ಮಾಡುವ ಪದ್ಧತಿ ನಿರಂತರ ಮುಂದುವರೆಯಿತು. ಹೀಗಾಗಿ ಭಿಷ್ಠಾದೇವಿ ಗುಡಿಯೆಂದೆ ಕರೆಯುವ ಜಾತ್ರಾ ಉತ್ಸವದಲ್ಲಿ ಪ್ರಾಣಿ ಬಲಿ ಕೊಡುವ ಪದ್ಧತಿಯೂ ಮುಂದುವರೆಯಿತು. ವರ್ಷಕ್ಕೊಮ್ಮೆ ಆಚರಿಸುವ ಯುಗಾದಿ, ದೀಪಾವಳಿ, ದಸರಾ ಪಾಡ್ಯಗಳಂದು ವರ್ಷದಲ್ಲಿ ಮೂರು ಬಾರಿ ಮಾತ್ರ ತೆಂಗು ಒಡೆಯುವ ಪದ್ಧತಿಯನ್ನು ಜಾರಿಗೆ ತಂದರು.
ಸುಮಾರು ೩೦೦ ರಿಂದ ೪೦೦ ವರ್ಷಗಳಷ್ಟು ಹಳೆಯದಾದ ಈ ಗುಡಿಗೆ ದೂರದ ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳ ಡೋಹರ ಸಮುದಾಯದವರು ಭಕ್ತರಾಗಿದ್ದಾರೆ. ಈಗಲೂ ಹರಕೆ, ಮುಡಿಪು ಹೊತ್ತು ಪ್ರಾಣಿ ಬಲಿ ಆಚರಿಸುವ ಪದ್ಧತಿ ಅನುಸರಿಸುತ್ತಿದ್ದಾರೆ. ಆದ್ರೆ ಇತ್ತೀಚೆಗೆ ಜಿಲ್ಲಾಡಳಿತ ಪ್ರಾಣಿ ಬಲಿ ನಿಷೇಧಿಸಿದ್ದರಿಂದ ಆ ಪದ್ಧತಿಯನ್ನು ಆಚರಿಸುತ್ತಿಲ್ಲವೆಂದು ಗ್ರಾಮದ ಹಿರಿಯರು ಹೇಳುತ್ತಿದ್ದಾರೆ. ಕಕ್ಕೇರಿಯಲ್ಲಿನ ಬಹುತೇಕ ವೀರಗಲ್ಲುಗಳ ಮೇಲೆ ಶರಣರು ಸೈನಿಕರೊಂದಿಗೆ ಕಾದಾಡಿದ ಚಿತ್ರಗಳು ಕಾಣ ಸಿಗುತ್ತವೆ. ಪ್ರತಿಷ್ಠಾಪಿಸಿದ ಶಿಲಾ ಮೂರ್ತಿಯ ಚಿಕ್ಕದಾದ ಗುಡಿವೊಂದು ಇದೆ. ಅಲ್ಲಿ ಅಕ್ಕ ನಾಗಮ್ಮನವರು ಲಿಂಗ ಪೂಜಾನುಷ್ಠಾನ ಗೈದ ಸ್ಥಳವೆಂದು ಸ್ಥಳೀಯರು ನಂಬಿದ್ದಾರೆ.

-ಡಾ. ಸತೀಶ ಕೆ. ಇಟಗಿ, ಪತ್ರಿಕೋದ್ಯಮ ಉಪನ್ಯಾಸಕರು ಅಂಚೆ: ಕೋಳೂರು, ತಾ: ಮುದ್ದೇಬಿಹಾಳ ಜಿ.ವಿಜಯಪುರ-೫೮೬೧೨೯ (ಕರ್ನಾಟಕ ರಾಜ್ಯ) ಮೊ: ೯೨೪೧೨೮೬೪೨೨ Email: satishitagi10@gmail.com,