Homeಲೇಖನರಾಜಕೀಯ ನಿರ್ಲಕ್ಷ್ಯದ ದುಷ್ಪರಿಣಾಮ ; ಸಾಂಸ್ಕೃತಿಕ ಜಗತ್ತು ಸಾಯುತ್ತಿದೆ....!

ರಾಜಕೀಯ ನಿರ್ಲಕ್ಷ್ಯದ ದುಷ್ಪರಿಣಾಮ ; ಸಾಂಸ್ಕೃತಿಕ ಜಗತ್ತು ಸಾಯುತ್ತಿದೆ….!

Published on

ಬೆಳಗಾವಿ: ಧಾರವಾಡದ ಪ್ರಸಿದ್ಧ ಕಲಾಭವನ ತೀವ್ರ ನಿರ್ಲಕ್ಷ್ಯಕ್ಕೊಳಗಾಗಿರುವ ಬಗ್ಗೆ ಅಲ್ಲಿಯ ಸಾಂಸ್ಕೃತಿಕ ಲೋಕ ಕಳವಳ ವ್ಯಕ್ತಪಡಿಸಿದ್ದನ್ನು ಓದಿದೆ. . ಬೆಳಗಾವಿಯ ಕಲಾಮಂದಿರ ಇನ್ನೂ ಬಾಗಿಲು ತೆರೆಯುತ್ತಿಲ್ಲ. ಇದ್ದ ಒಂದು ಉತ್ತಮ ನಾಟ್ಯಗೃಹ ಲೋಕಮಾನ್ಯ ಸಭಾಗೃಹ ನವೀಕರಣಕ್ಕಾಗಿ ಕೆಡಹಲಾಗುತ್ತಿದೆ. ನಂತರ ಅದು ಮತ್ತೆ ರಂಗಾಸಕ್ತರಿಗೆ ದೊರಕುತ್ತದೋ‌ ಇಲ್ಲವೋ ಗೊತ್ತಿಲ್ಲ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕುಮಾರ ಗಂಧರ್ವ ರಂಗಮಂದಿರ ಕೆಲವು ಅನಾನುಕೂಲತೆಗಳಿಂದ ಕೂಡಿದೆ. ಸದ್ಯಕ್ಕೆ ರಾಮದೇವ ಹೊಟೆಲ್ ಹತ್ತಿರದ ಕನ್ನಡ ಭವನ ಸ್ವಲ್ಪ ಮಟ್ಟಿಗೆ ಬಳಕೆಗೆ ಯೋಗ್ಯ. ಪೂರ್ತಿ ಅಲ್ಲ. ಐಎಂಇಆರ್ ಆಡಿಟೋರಿಯಂ ಚೆನ್ನಾಗಿದ್ದರೂ ಆಸನಗಳು ಮಿತವಾಗಿವೆ. ದೊಡ್ಡ ಕಾರ್ಯಕ್ರಮಗಳಿಗೆ ಸಾಲದು.

ಇವೆಲ್ಲ ಕಾರ್ಯಕ್ರಮಗಳ ವಿಚಾರವಾಯಿತು. ಆದರೆ ಅದಕ್ಕಿಂತ ದೊಡ್ಡ ಸಮಸ್ಯೆ ಕರ್ನಾಟಕದ ಸಾಂಸ್ಕೃತಿಕ ಲೋಕವೇ ಆಳುವ ಸರಕಾರದ ನಿರ್ಲಕ್ಷ್ಯ ದಿಂದ ಜೀವ ಕಳೆದುಕೊಳ್ಳುತ್ತಿರುವುದು. ಹಿಂದಿನ ಬಿಜೆಪಿ ಸರಕಾರವನ್ನೂ ಸೇರಿಸಿಕೊಂಡು , ಈಗಿನ ಕಾಂಗ್ರೆಸ್ ಸರಕಾರದ ಆಡಳಿತದಲ್ಲಿ ಕಲೆಸಾಹಿತ್ಯ ಪುಸ್ತಕ ಸಂಸ್ಕೃತಿಗಳು ಸರ್ವನಾಶದ ಹಾದಿಯಲ್ಲಿ ಸಾಗುತ್ತಿರುವುದು ಅತ್ಯಂತ ಆತಂಕದ ಸಂಗತಿಯಾಗಿದೆ. ಈಗಾಗಲೇ ಗ್ರಂಥಾಲಯ ವ್ಯವಸ್ಥೆಯನ್ನು ನಾಶಗೊಳಿಸಿ ಪುಸ್ತಕೋದ್ಯಮವನ್ನು ಉಸಿರುಗಟ್ಟಿಸಿರುವ ಈ ಸರಕಾರಗಳು ಸಾಹಿತ್ಯ ಕಲೆಗಳಿಗೆ ಕವಡೆ ಕಿಮ್ಮತ್ತೂ ಕೊಡುತ್ತಿಲ್ಲ. ಅಕಾಡೆಮಿ ಪ್ರಾಧಿಕಾರಗಳೆಲ್ಲ ಹೆಸರಿಗಷ್ಟೇ ಜೀವಂತವಾಗಿವೆ. ವಾರ್ಷಿಕ ಪ್ರಶಸ್ತಿಗಳನ್ನು ನಿಯಮಿತವಾಗಿ ನೀಡುವುದಕ್ಕೂ ಅವಕ್ಕೆ ಸಾಧ್ಯವಾಗುತ್ತಿಲ್ಲ. ಸಾಹಿತ್ಯ ಕಲಾ ಸಂಘಟನೆಗಳಿಗೂ ಕಲಾವಿದರಿಗೂ ಆರ್ಥಿಕ ನೆರವು ಸಿಗುತ್ತಿಲ್ಲ. ಸರಕಾರವೇ ಸ್ಥಾಪಿಸಿದ ಸಂಗೀತ ಸಂಸ್ಥೆಗಳು/ ಶಾಲೆಗಳು ಅನುದಾನವಿಲ್ಲದೇ ಬಾಗಿಲು ಮುಚ್ಚುತ್ತಿವೆ. ಈ ವಿಷಯದಲ್ಲಿ ಅಧಿಕಾರದಲ್ಲಿರುವವರಿಗೆ ಆಸಕ್ತಿಯೇ ಇಲ್ಲದಿರುವಾಗ ಮತ್ತೇನು ನಿರೀಕ್ಷಿಸಬಹುದು? ವಿಶ್ವವಿದ್ಯಾಲಯಗಳೂ ದುರವಸ್ಥೆಗೀಡಾಗಿವೆ. ಸಾವಿರಾರು ಕನ್ನಡ ಶಾಲೆಗಳು ಮುಚ್ಚಿವೆ. ಮಾಸಾಶನಗಳು ನಿಂತಿವೆ.

ಬರೀ ಬಾಯಿಬಡುಕತನದ ಒಂದಿಷ್ಟು ನಾಯಕರು ತಮಗೆ ಸಂಬಂಧವೇ ಇಲ್ಲದ ವಿಷಯಗಳನ್ನು ಮಾತಾಡುತ್ತ ತಿರುಗುತ್ತಿದ್ದಾರೆ. ಕಲೆ ಸಾಹಿತ್ಯ, ಪುಸ್ತಕಗಳಿಂದ ಅವರು ಗಳಿಸುವುದಾದರೂ ಏನಿದೆ, ಅಲ್ಲವೆ? ಅವೇನು ನೀರಾವರಿ ಅಬಕಾರಿ ಇಲಾಖೆಗಳೇ ಗಳಿಸಲಿಕ್ಕೆ? ವಾಸ್ತವಿಕವಾಗಿ ಸದ್ಯದಲ್ಲಂತೂ ಆಡಳಿತವೇ ಇಲ್ಲ. ಸರಕಾರ ತಿರುಪತಿ ಕ್ಷೌರದ ಸ್ಥಿತಿಯಲ್ಲಿ ಅಪೂರ್ಣವಾಗಿಯೇ ಉಳಿದುಕೊಂಡಿದೆ. ಹೆಚ್ಚಿನ ಖಾತೆಗಳಿಗೆ ಮಂತ್ರಿಗಳೇ ಇಲ್ಲ. ಅಧಿಕಾರಿಗಳಲ್ಲಿ ಜನರ ಕೆಲಸ ಮಾಡುವ ಆಸಕ್ತಿ ಇಲ್ಲ. ಬರೀ ಮಾತು, ಮಾತು ಮಾತು..ಬಕವೇದಾಂತ ಹೇಳುತ್ತ ತಿರುಗುತ್ತಿದ್ದಾರೆ. ಜನ ಅದನ್ನು ಕೇಳಿಯೇ ಹೊಟ್ಟೆ ತುಂಬಿಕೊಳ್ಳಬೇಕು.

ಎಲ್ಲಿಗೆ ಸಾಗುತ್ತಿದೆ ಕರ್ನಾಟಕದ ಸ್ಥಿತಿ! ಇದ್ದದ್ದನ್ನು ಇದ್ದಂತೆ ಹೇಳಿದವರೇ ಕೆಟ್ಟವರು. ಆದರೆ ವಾಸ್ತವ ಹೇಳದೇ ಇರಲು ಆಗುತ್ತದೆಯೇ? ಅಪ್ರಿಯವಾದರೂ ಸತ್ಯ ಹೇಳುವ ಕೆಟ್ಟ ಅಭ್ಯಾಸ ನಮ್ಮಂಥವರದು. ‌ಬೇಕಾದರೆ ತೆಗೆದುಕೊಳ್ಳಲಿ, ಇಲ್ಲದಿದ್ದರಿಲ್ಲ.

ಎಲ್. ಎಸ್. ಶಾಸ್ತ್ರಿ

Latest articles

More like this