ನಾವು ನಮ್ಮವರು
ದೇಶ ಕಾಯುವ ಯೋಧರು ನಮ್ಮ ಭಾರತ ದೇಶದ ಹೆಮ್ಮೆ, ರಕ್ಷಣೆ ಮತ್ತು ಸ್ವಾತಂತ್ರ್ಯದ ನಿಜವಾದ ಶಕ್ತಿಪ್ರತೀಕವಾಗಿದ್ದಾರೆ.
ಕೋಟ್ಯಂತರ ಭಾರತೀಯರು ನೆಮ್ಮದಿಯಿಂದ ನಿದ್ರಿಸಲು ಗಡಿಯಲ್ಲಿ ಹಗಲಿರುಳು ಜಾಗೃತರಾಗಿ ನಿಲ್ಲುವ ಸೈನಿಕರ ತ್ಯಾಗ ಅನನ್ಯವಾದುದು.ವೀರ ಯೋಧರ ಜೀವನ, ದೇಶಪ್ರೇಮ ಅಪ್ರತಿಮವಾದದ್ದು .
ಸೈನಿಕರು ತಮ್ಮ ವೈಯಕ್ತಿಕ ಸುಖ, ಕುಟುಂಬ ಮತ್ತು ಸ್ವಂತ ಜೀವನವನ್ನು ಬದಿಗಿಟ್ಟು ದೇಶಸೇವೆಯನ್ನೇ ಪರಮ ಧರ್ಮ ಎಂದು ಭಾವಿಸುತ್ತಾರೆ. ಹಿಮಾವೃತ ಸಿಯಾಚಿನ್‌ನಿಂದ ಹಿಡಿದು ಸುಡುವ ರಾಜಸ್ಥಾನದ ಮರುಭೂಮಿಯವರೆಗೆ, ಯಾವುದೇ ಕಠಿಣ ಪರಿಸ್ಥಿತಿಯಲ್ಲೂ ಗಡಿಯನ್ನು ಕಾಯುತ್ತಾರೆ.
ಯೋಧರಷ್ಟೇ ಅವರ ಕುಟುಂಬಸ್ಥರ ತ್ಯಾಗವೂ ದೊಡ್ಡದಾಗಿದೆ. ಹಬ್ಬ ಹರಿದಿನಗಳಲ್ಲಿ ಮಗ, ಪತಿ ಅಥವಾ ತಂದೆಯ ಬರುವಿಕೆಗಾಗಿ ಕಾಯುವ ಕುಟುಂಬಗಳ ಪ್ರಾರ್ಥನೆ ಸೈನಿಕರ ಶಕ್ತಿಯಾಗಿರುತ್ತದೆ.
ಇಂದಿನ ಯುವ ಪೀಳಿಗೆಗೆ ಸಿನಿಮಾ ನಟರು ಅಥವಾ ಕ್ರಿಕೆಟ್ ಆಟಗಾರರಿಗಿಂತ ದೇಶಕ್ಕಾಗಿ ಪ್ರಾಣವನ್ನೇ ಪಣಕ್ಕಿಡುವ ಸೈನಿಕರೇ ಆದರ್ಶ ಪ್ರಾಯರಾಗಬೇಕು.
ಯುದ್ಧದ ಸಮಯದಲ್ಲಷ್ಟೇ ಅಲ್ಲದೆ, ದೇಶದಲ್ಲಿ ಪ್ರವಾಹ, ಭೂಕಂಪದಂತಹ ನೈಸರ್ಗಿಕ ವಿಕೋಪಗಳು ಸಂಭವಿಸಿದಾಗಲೂ ಯೋಧರು ಮುಂಚೂಣಿಯಲ್ಲಿ ನಿಂತು ನಾಗರಿಕರನ್ನು ರಕ್ಷಿಸುತ್ತಾರೆ.”ಜೈ ಜವಾನ್ ಜೈ ಕಿಸಾನ್” ಎಂಬ ಘೋಷಣೆಯಂತೆ ದೇಶಕ್ಕೆ ಅನ್ನ ನೀಡುವ ರೈತ ಹಾಗೂ ದೇಶ ಕಾಯುವ ಯೋಧ ಇವರಿಬ್ಬರೂ ನಮ್ಮ ದೇಶದ ಎರಡು ಕಣ್ಣುಗಳಿದ್ದಂತೆ. ದೇಶದ ಪ್ರತಿಯೊಬ್ಬ ಪ್ರಜೆಯೂ ವೀರ ಯೋಧರಿಗೆ ಮತ್ತು ಅವರ ಕುಟುಂಬಕ್ಕೆ ಸದಾ ಗೌರವ ಸಲ್ಲಿಸುವುದು ನಮ್ಮ ಕರ್ತವ್ಯವಾಗಿದೆ.
ಇಂತಹ ಅಪ್ರತಿಮ ದೇಶ ಕಾಯ್ದ ದಿಟ್ಟ ಯೋಧ ಬಸವ ಭಕ್ತ ಅಥಣಿಯ ಶ್ರೀ ಮುರುಗೇಂದ್ರ ಶಿವಯೋಗಿಗಳ ಕರಸಂಜಾತ ನೀಲಕಂಠ ಲಗಳಿ ಅವರು ನಮ್ಮ ಬಸವ ತಿಳಿವಳಿಕೆ ಮತ್ತು ಸಂಶೋಧನಾ ಕೇಂದ್ರ – ಪುಣೆಯ ಆಜೀವ ಸದಸ್ಯರು ಮತ್ತು ದತ್ತಿ ದಾಸೋಹಿಗಳು.
ಇವರ ತಂದೆಯವರು ಶಿವರಾಯಪ್ಪ ಲಗಳಿ, ತಾಯಿಯವರು ಚೆನ್ನವ್ವ ಲಗಳಿ. ಇವರು ನಿತ್ಯ ಇಷ್ಟ ಲಿಂಗ ಪೂಜಕರು. ತಂದೆಯವರು ಲಿಂಗಾಯತ ಸಮಾಜದ ಒಬ್ಬ ಹಿರಿಯ ಪಂಚರು. ಯಾವುದೇ ಶುಲ್ಕ ಇಲ್ಲದೆ ರೋಗಿಗಳಿಗೆ ಉಪಚಾರ ಮಾಡುತ್ತಿದ್ದರು. ಇವರು ನಾಲ್ಕು ಜನ ಅಣ್ಣತಮ್ಮಂದಿರು ನಾಲ್ಕು ಜನ ಅಕ್ಕಂದಿರು. ಅವರ ತಂದೆ ತಾಯಿ ನಿರಕ್ಷರಸ್ಥರಾದರೂ ಎಲ್ಲರಿಗೂ ಶಿಕ್ಷಣವನ್ನು ಕೊಡಿಸಿ, ಸಮಾಜದಲ್ಲಿ ಒಳ್ಳೆಯ ಸ್ಥಾನವನ್ನು ಗಳಿಸುವಂತೆ ಮಾಡಿದ್ದಾರೆ ಎನ್ನುವುದನ್ನು ಅಭಿಮಾನದಿಂದ ಹೇಳುತ್ತಾರೆ.
ನೀಲಕಂಠ ಲಗಳಿ ಅವರಿಗೆ ಇಬ್ಬರು ಹೆಣ್ಣು ಮಕ್ಕಳು ಮತ್ತು ಒಬ್ಬ ಮಗ. ಎಲ್ಲರೂ ಉನ್ನತ ಹುದ್ದೆಯಲ್ಲಿದ್ದಾರೆ.ಇವರ ಜೀವನ ಸಂಗಾತಿ ಲಿಂ. ಸರಸ್ವತಿ ಲಗಳಿ ಅವರೂ ಸಹ ನಿತ್ಯ ಇಷ್ಟಲಿಂಗ ಪೂಜಕರಾಗಿದ್ದರು ಎನ್ನುವುದನ್ನು ನೆನೆಸಿಕೊಳ್ಳುತ್ತಾರೆ.
ಇವರು 1963 ರಲ್ಲಿ ಎಸ್ ಎಸ್ ಎಲ್ ಸಿ ಯನ್ನು ನ್ಯೂ ಹೈಸ್ಕೂಲ್ ಅಥಣಿಯಲ್ಲಿ ಮುಗಿಸಿದರು. ಆರ್ಮಿಯಲ್ಲಿ 9 – 9- 1963 ರಿಂದ 30-9- 1991 ರವರೆಗೆ ಸುಬೇದಾರ್ Rankನಿಂದ ನಿವೃತ್ತಿ ಹೊಂದಿದರು . ಅಲ್ಲಿ 38 ವರ್ಷ ಸೇವೆಯನ್ನು ಸಲ್ಲಿಸಿದ್ದಾರೆ. ದೇಶದ ವಿವಿಧ ಭಾಗದಲ್ಲಿ ಪೋಸ್ಟಿಂಗ್ ಹೊಂದಿ ಸೇವೆ ಸಲ್ಲಿಸಿದ್ದಾರೆ. ಹೈದರಾಬಾದ್, ಮಥುರಾ, ನಾಸಿಕ್, ಅಸ್ಸಾಂ, ಪಂಜಾಬ್, ಉತ್ತರ ಪ್ರದೇಶ್, ನಾಸಿಕ್. 1971ರಲ್ಲಿ ಪಾಕಿಸ್ತಾನ ಯುದ್ಧದಲ್ಲಿ ಭಾಗವಹಿಸಿದ್ದಾರೆ .
ನೀಲಕಂಠ ಲಗಳಿ ಅವರು ಬಸವ ತತ್ವದ ಪ್ರಕಾರ ಕಾಯಕವೇ ಕೈಲಾಸ ಎಂದು ನಂಬಿ 38 ವರ್ಷ ಕಾಲ ಸೇವೆ ಸಲ್ಲಿಸಿ ಒಳ್ಳೆಯ ಆರೋಗ್ಯದೊಂದಿಗೆ ಯಾವ ತೊಂದರೆ ಇಲ್ಲದೆ 1991 ರಲ್ಲಿ ನಿವೃತ್ತರಾದರು. ಆನಂತರ ಮಕ್ಕಳ ಶಿಕ್ಷಣಕ್ಕಾಗಿ ನಾಸಿಕ್ ನಲ್ಲಿಯೇ ನೆಲೆಯೂರಿದರು.
ಇವರು ನಾಸಿಕ್ ಕನ್ನಡ ಸಂಘದ ಸದಸ್ಯರು ಮತ್ತು ಕಮಿಟಿ ಮೆಂಬರ್ ಆಗಿ ಕೆಲಸ ಮಾಡಿದ್ದಾರೆ.1992 ರಲ್ಲಿ ಕನ್ನಡ ಸಂಘದ ಸದಸ್ಯರಾದಾಗ ಶಶಿಕಾಂತ ಪಟ್ಟಣ ಅವರ ಮಾವನವರ ಪರಿಚಯ ಆಯ್ತು.2015 ರಿಂದ ಭಾರತೀಯ ಯೋಗ ಸಂಸ್ಥೆ ದೆಹಲಿ ಅಡಿಯಲ್ಲಿ ಯೋಗ ಸಾಧಕ ಮತ್ತು ಶಿಕ್ಷಕನಾಗಿ ಸೇವೆ ಸಲ್ಲಿಸಿದ್ದಾರೆ.ಈ ಸಂಸ್ಥೆ ನಿಃಶುಲ್ಕ ಯೋಗ ವರ್ಗಗಳನ್ನು ನಡೆಸುತ್ತದೆ. ಸಂಪೂರ್ಣ ಭಾರತದಲ್ಲಿ ಮತ್ತು ಪರದೇಶಗಳಲ್ಲಿ ಸಹ.
ನೀಲಕಂಠ ಲಗಳಿ ಅವರ ಹಿರಿಯ ಅಣ್ಣನವರಾದ ಲಿಂ. ಅಲ್ಲಪ್ಪಾ ಸಿದ್ದರಾಮಪ್ಪಾ ಲಗಳಿ ಅವರು ಇಷ್ಟಲಿಂಗ ಪೂಜೆಯ ನಂತರ ನಿತ್ಯ ಶಿ.ಶಿ. ಬಸವನಾಳರ ಬಸವಣ್ಣವರ ಷಟಸ್ಥಲ ವಚನಗಳು ಮತ್ತು ಶಿರಹಟ್ಟಿಯವರ ಬಸವರಾಜ ದೇವರು ಪುಸ್ತಕಗಳನ್ನು ಓದುತ್ತಿದ್ದರು. ಅವರು ಹಾನಗಲ್ ಕುಮಾರ್ ಸ್ವಾಮಿ ಅವರ ಚರಿತ್ರೆ ಓದಲು ಆರಂಭ ಮಾಡಿದಾಗ ಮೇಲಿನ ಎರಡು ಪುಸ್ತಕಗಳನ್ನು ಅವರಿಂದ ಪಡೆದು ಓದಲು ಪ್ರಾರಂಭ ಮಾಡಿದ್ದನ್ನು ಲಗಳಿ ಅವರು ನೆನಪು ಮಾಡಿಕೊಳ್ಳುತ್ತಾರೆ. ಅವರ ಅಣ್ಣನವರು ಬಸವಣ್ಣ ಮತ್ತು ಅಥಣಿಯ ಮುರುಘೇoದ್ರ ಸ್ವಾಮಿಗಳಲ್ಲಿ ಅಪಾರ ಶ್ರದ್ಧೆ ಮತ್ತು ಭಕ್ತಿ ಉಳ್ಳವರಾಗಿದ್ದರು. ಗಚ್ಚಿನ ಮಠದ ಮರುಳ ಶಂಕರ ದೇವರಲ್ಲಿ ಸಹ ಭಕ್ತಿ ಮತ್ತು ಶ್ರದ್ಧೆ ಉಳ್ಳವರಾಗಿದ್ದರು. ಅವರ ಅಣ್ಣನವರು ಸೇವೆಯಲ್ಲಿದ್ದರೂ ಸಹ ನಿತ್ಯಇಷ್ಟ ಲಿಂಗ ಪೂಜೆ ಮಾಡಿಕೊಳ್ಳುತ್ತಿದ್ದರು. ಒಂದು ಸಲ ಚಂದನ ವಾಹಿನಿ ನೋಡುತ್ತಿರುವಾಗ ಬಸವ ಸಮಿತಿ ಬೆಂಗಳೂರು ಅವರು ಬಸವಪಥ ಮಾಸಿಕ ಪ್ರಕಟಣೆ ಮಾಡುವುದು ತಿಳಿಯಿತು. 1910 ರಲ್ಲಿ ಆಗಿನಿಂದ ಅದರ ಚಂದದಾರರಾಗಿದ್ದಾರೆ. ಆಪ್ತರಿಗೆ ಮತ್ತು ಮಿತ್ರರಿಗೂ ಸಹ ಚಂದದಾರರನ್ನಾಗಿ ಮಾಡಿದ್ದಾರೆ.
ಅವರು ಬೆಳಗಾವಿ, ವಿಜಯಪುರ ಸಾಂಗ್ಲಿ ಮತ್ತು ನಾಸಿಕ್ ದಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮ ಮಾನ್ಯತೆ ಸಿಗಲು ನಡೆದ ಸಮಾವೇಶಗಳಲ್ಲಿ ಭಾಗವಹಿಸಿದ್ದಾರೆ. ಪುಣೆಯಲ್ಲಿ ನಡೆಯುತ್ತಿರುವ ಮೀಟಿಂಗ್ ಗಳಲ್ಲಿ ಭಾಗವಹಿಸಿದ್ದಾರೆ.ಆ ಸಮಯದಲ್ಲಿ ಡಾ.ಪಟ್ಟಣ ಅವರ ಪರಿಚಯವಾಯಿತು ಎಂದು ಸಂತೋಷ ವ್ಯಕ್ತಪಡಿಸುತ್ತಾರೆ.
ಬಸವಣ್ಣನವರೇ ಲಿಂಗಾಯತ ಧರ್ಮದ ಸಂಸ್ಥಾಪಕರು. ಇಷ್ಟ ಲಿಂಗದ ಜನಕ. ಶರಣರ ವಚನಗಳೇ ಧರ್ಮದ ಆಧಾರ ಮತ್ತು ಶಾಸ್ತ್ರ ಸತ್ಯ ಶುದ್ಧ ಕಾಯಕ, ದಾಸೋಹ, ವರ್ಣಭೇದ, ವರ್ಗಭೇದ,ಲಿಂಗ ಭೇದ, ಕಾಯಕಭೇದವಿಲ್ಲದ ಧರ್ಮ ಎಂಬುದು ಅವರ ಧಾರ್ಮಿಕ ಮತ್ತು ವೈಚಾರಿಕ ನಿಲುವು
ಬಸವ ತತ್ವ ಪ್ರಸಾರ ಪ್ರಚಾರಕ್ಕೆ ಬಸವ ನಿಷ್ಠರಾದ ಡಾ. ಶಶಿಕಾಂತ ಪಟ್ಟಣ ಅವರ ವಚನ ಅಧ್ಯಯನ ಕೇಂದ್ರ ಮತ್ತು ಅಕ್ಕನ ಅರಿವುಗಳಿಗೆ ತಮ್ಮ ತನು ಮನ ಧನದಿಂದ ಬೆಂಬಲವಿದೆ ಎನ್ನುವುದನ್ನು ಬಸವ ತತ್ವದ ಯೋಜನೆ ಅಡಿಯಲ್ಲಿ ತಮ್ಮ ಸ್ಪಷ್ಟ ನಿಲುವನ್ನು ನೀಲಕಂಠ ಲಗಳಿ ಅವರು ವ್ಯಕ್ತಪಡಿಸುತ್ತಾರೆ.
ಸುಧಾ ಪಾಟೀಲ
ವಿಶ್ವಸ್ಥರು
ಬಸವ ತಿಳಿವಳಿಕೆ ಮತ್ತು ಸಂಶೋಧನಾ ಕೇಂದ್ರ -ಪುಣೆ
ಬೆಳಗಾವಿ