ನಾವು – ನಮ್ಮವರು
ಸಂಗೀತ ಲೋಕದ ಅನನ್ಯ ರತ್ನ ಸಾಧಕಿ ವಿದ್ಯಾ ಮಗದುಮ್ಮ ಅವರು ನಮ್ಮ ಬಸವ ತಿಳಿವಳಿಕೆ ಮತ್ತು ಸಂಶೋಧನ ಕೇಂದ್ರ – ಪುಣೆ ವೇದಿಕೆಯ ಅತ್ಯಂತ ಹುರುಪಿನ, ನಗುಮೊಗದ, ಎಲ್ಲರಿಗೂ ಸಹೋದರಿಯ ಪ್ರೀತಿಯನ್ನು ಸದಾ ಹಂಚುವ, ಎಲ್ಲರೊಳಗೊಂದಾಗಿ ಬೆರೆಯುವ ಗುಣವುಳ್ಳ ಅಪರೂಪದ ವ್ಯಕ್ತಿತ್ವದವರು.
ಬೆಳಗಾವಿಯ ಲಿಂ.ಶ್ರೀಮತಿ ಶಾಂತಾ ಮತ್ತು ಶ್ರೀ ಬಸವರಾಜ ದುಂಡಪ್ಪ ಕುಡಚಿ ಇವರ ಮಗಳಾಗಿ 08 – 09 – 1969 ರಲ್ಲಿ ಜನಿಸಿದ ಶರಣೆ ವಿದ್ಯಾ ಮಗದುಮ್ಮ ಅವರು ಒಬ್ಬ ಅಪ್ಪಟ ಹಿಂದೂಸ್ತಾನಿ ಗಾಯಕಿ, ಕಲಾವಿದೆ.ಸಂಗೀತ ಸಾಧನೆಗೆಂದೇ ಹುಟ್ಟಿದ ವಿದ್ಯಾ ಅವರು ಬಾಲ್ಯದಿಂದಲೂ ಸಂಗೀತದ ಆರಾಧಕಿ. ಎಳೆಯ ವಯಸ್ಸಿನಲ್ಲಿ ಇವರ ಅಗಾಧ ಪ್ರತಿಭೆಯನ್ನು ಗುರುತಿಸಿ ಇವರ ಅಜ್ಜ ಲಿಂ. ಶ್ರೀ ದುಂಡಪ್ಪ ಕುಡಚಿ ಇವರು ಬೆಳಗಾವಿಯ ಖ್ಯಾತ ಸಂಗೀತ ಕಲಾವಿದರಾದ ಶ್ರೀ ಕಾಡ್ಲಾಸ್ಕರ್ ಬುವಾ ಅವರ ಬಳಿ ತರಬೇತಿಗೆ ಕಳುಹಿಸಿದರು.
ಶರಣೆ ವಿದ್ಯಾ ಮಗದುಮ್ಮ ಅವರು ಎಂ. ಎ ಪದವೀಧರೆ. ಇವರು ನಾಡಿನ ತುಂಬೆಲ್ಲಾ ಸಂಗೀತ ಕಚೇರಿ ನಡೆಸಿಕೊಟ್ಟ ಶ್ರೇಷ್ಠ ಸಂಗೀತ ಕಲಾವಿದರು. 27 – 04 – 1990 ರಲ್ಲಿ ಸಮಾಜ ಸೇವಕರಾದ ಸೋಮಶೇಖರ ಬಸವರಾಜ ಮಗದುಮ್ಮ ಅವರ ಜೊತೆಗೆ ವಿದ್ಯಾ ಅವರ ವಿವಾಹವಾಯಿತು. ಇವರ ಮಗಳು ಶ್ರೀಮತಿ ಶ್ವೇತಾ ವೀರೇಶ ಜತ್ತಿ, ಸಾ. ಜಮಖಂಡಿ ಇವರು ಎಂ. ಎಸ್ಸಿ ಪದವೀಧರೆ. ಈಗ ಸದ್ಯ ಪತಿ ಮತ್ತು ಮಗ ಏಕಾಂಶ ಜೊತೆಗೆ ಅಮೇರಿಕಾದ ಥಾoಪಾದಲ್ಲಿ ವಾಸವಾಗಿದ್ದಾರೆ. ಮಗ ಸೋಮನಾಥ ಬಿ. ಇ. ಪದವೀಧರ, ಸ್ವಂತ ಬಿಸಿನೆಸ್ ಮಾಡುತ್ತಾರೆ.ಸೊಸೆ ವಿದ್ಯಾಶ್ರೀ ಬಿ. ಎಸ್ಸಿ, ಬಿ. ಎಡ್ ಪದವೀಧರೆ.ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪುಟ್ಟ ಮೊಮ್ಮಗಳು ಧ್ವನಿ.
ವಿದ್ಯಾ ಅವರು ಕಲಾವಿದರ ಕುಟುಂಬದಲ್ಲಿ ಹುಟ್ಟಿ ಬೆಳೆದವರು. ಅವರ ತಂದೆಯವರು ಕಂದಾಯ ಇಲಾಖೆಯಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿ, ಉಪ ತಹಸಿಲ್ದಾರರಾಗಿ ನಿವೃತ್ತಿ ಹೊಂದಿದರೂ, ಸಾಹಿತ್ಯ, ಕಲೆ, ಸಂಗೀತದಲ್ಲಿ ಅಭಿರುಚಿಯನ್ನು ಉಳ್ಳವರಾಗಿದ್ದರು. ಅವರ ಮೂವರು ಸೋದರತ್ತೆಯರು ಮತ್ತು ಒಬ್ಬ ಚಿಕ್ಕಪ್ಪ ಸಹ ಸಂಗೀತ ಪ್ರಿಯರಾಗಿದ್ದರು. ಅವರು ಚಿಕ್ಕವರಿದ್ದಾಗ ಅವರ ಸೋದರತ್ತೆಯ ಜೊತೆ ಎರಡು ಕನಸು ಚಲನಚಿತ್ರದ “ಪೂಜಿಸಲೆಂದೇ ಹೂಗಳ ತಂದೆ ” ಹಾಡನ್ನು ಏಳನೆಯ ವಯಸ್ಸಿನಲ್ಲಿ ಹಾಡಿ ಎಲ್ಲರ ಮೆಚ್ಚುಗೆ ಗಳಿಸಿದ್ದರು. ಇದನ್ನು ಕೇಳಿ ಅವರ ಅಜ್ಜ ಡುಂಡಪ್ಪನವರು ವಿದ್ಯಾ ಅವರನ್ನು ಸಂಗೀತ ಶಾಲೆಗೆ ಸೇರಿಸಲು ಬೆಳಗಾವಿಯ ಮಂಗಳವಾರ ಪೇಟೆಯಲ್ಲಿರುವ ಪ್ರಸಿದ್ದ ಸಂಗೀತ ಶಿಕ್ಷಕರಾದ ಕಡ್ಲಾಸ್ಕರ ಬುವಾ ಅವರ ಹತ್ತಿರ ಸಂಗೀತ ಕಲಿಯಲು ಕಳಿಸಿದರು. ಅಗ ಗುರುಗಳು ಬರೀ ತಂಬೂರಿಯ ಮೇಲೆ ರಾಗಗಳನ್ನು ಕಲಿಸುತ್ತಿದ್ದರು.ಆಗ ಅವರು ನಾಲ್ಕನೆಯ ತರಗತಿಯಲ್ಲಿ ಓದುತ್ತಿದ್ದರು. ಒಂದು ವರ್ಷ ಬೆಳಗಾವಿಯಲ್ಲಿ ಸಂಗೀತ ಕಲಿತರು. ನಂತರ ಅವರ ತಂದೆಯವರಿಗೆ ಚಿಕ್ಕೋಡಿಗೆ ವರ್ಗಾವಣೆಯಾಯಿತು. ಅವರೂ ಸಹ ಅನಿವಾರ್ಯವಾಗಿ ಚಿಕ್ಕೋಡಿಗೆ ಹೋದ ಕಾರಣ ಸಂಗೀತ ಕಲಿಯುವುದು ಅಲ್ಲಿಗೆ ನಿಂತಿತು. ಕಡ್ಲಾಸ್ಕರ ಸರ್ ಅವರು ಕಲಿಸಿದ ಸ್ವರಗಳ ಪರಿಚಯದ ಮೇಲೆ ವಿದ್ಯಾ ಅವರು ವಿವಿಧ ಗಾಯನ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಬಹುಮಾನ ಗಿಟ್ಟಿಸುತ್ತಿದ್ದರು. ಮತ್ತೆ ಅವರ ತಂದೆಗೆ ಬೆಳಗಾವಿಗೆ ವರ್ಗಾವಣೆಯಾದಾಗ ಅಲ್ಲಿ ಪಂಡಿತ ರಾಮಭಾವು ಬಿಜಾಪುರೆ ಅವರಲ್ಲಿ ಒಂದು ವರ್ಷ ಸಂಗೀತ ಕಲಿತರು.
1990ರಲ್ಲಿ ಗೋಕಾಕಕ್ಕೆ ಮದುವೆಯಾಗಿ ಬಂದ ನಂತರ ಅವರ ಅತ್ತೆಯವರು ಮತ್ತು ಮಾವನವರು, ಅವರ ಪತಿ ಮತ್ತು ಕುಟುಂಬಸ್ಥರು ಅವರಿಗೆ ಪ್ರೋತ್ಸಾಹ ನೀಡಿ ಸಂಗೀತದ ಕ್ಷೇತ್ರದಲ್ಲಿ ಮುಂದುವರೆಯುವಂತೆ ಮಾಡಿದರು. ವಿಶೇಷವಾಗಿ 2001ರಲ್ಲಿ ಪರಮ ಪೂಜ್ಯ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಅಪ್ಪಗಳು ಗೋಕಾಕ ನಗರಕ್ಕೆ ಪ್ರವಚನ ನೀಡಲು ಆಗಮಿಸಿದಾಗ, ಆ ವೇದಿಕೆಯ ಮೇಲೆ ವಚನಗಳನ್ನು ಹಾಡಿದ ಅವರನ್ನು ಗುರುತಿಸಿ, ಸಂಗೀತ ಕಾರ್ಯಕ್ರಮಗಳನ್ನು ನೀಡಲು ಆಹ್ವಾನಿಸಲು ಪ್ರಾರಂಭ ಮಾಡಿದರು.ಅದೇ ವರ್ಷ ಭಾವಸಂಗಮ ಸಂಸ್ಥೆ ಗೋಕಾಕದಲ್ಲಿ ಪ್ರಾರಂಭವಾಯಿತು. ಅಲ್ಲಿ ಪ್ರತಿ ತಿಂಗಳು ವಿದ್ಯಾ ಅವರ ಕಾರ್ಯಕ್ರಮವಿರುತ್ತಿತ್ತು. ವಿದ್ಯಾ ಅವರು ವಿಶೇಷವಾಗಿ ವಚನ ಗಾಯನ,ಭಕ್ತಿಗೀತೆ, ಭಾವಗೀತೆ ಮತ್ತು ಜನಪದ ಗೀತೆಗೆ ಹೆಚ್ಚು ಒತ್ತುಕೊಟ್ಟವರು. ಈಗ ಸದ್ಯ ವಿದ್ಯಾ ಅವರು ಗೋಕಾಕದಲ್ಲಿ ಸಂಗೀತಾಸಕ್ತ ಸಹೋದರಿಯರಿಗೆ ಸಂಗೀತವನ್ನು ಹೇಳಿಕೊಡುತ್ತಿದ್ದಾರೆ .
ವಿದ್ಯಾ ಮಗದುಮ್ಮಅವರಿಗೆ ಸಂದ ಪ್ರಶಸ್ತಿಗಳು
1.. ಭಾವ ಸಂಗಮದವರು ನೀಡಿದ “ಗಾನಗಾರುಡಿ “ಪ್ರಶಸ್ತಿ
2.. ವಡೇರಹಟ್ಟಿಯ ಶಾರದಾ ಪೀಠದವರು ನೀಡಿದ ” ಗಾನರತ್ನ ” ಪ್ರಶಸ್ತಿ
3.. ಕಳ್ಳಿಗುದ್ದಿ ಕಪರಟ್ಟಿ ಆಶ್ರಮದವರು ನೀಡಿದ ” ರೇಣುಕ ಬಸವ “ಪ್ರಶಸ್ತಿ
4.. ಶರಣ ಸಾಹಿತ್ಯ ಪರಿಷತ್ತು ಮತ್ತು ಕದಳಿ ವೇದಿಕೆಯವರು ನೀಡಿದ “ಕದಳಿ ಶ್ರೀ ಪ್ರಶಸ್ತಿ ”
5.. ಶರಣು ವಿಶ್ವ ವಚನ ಫೌಂಡೇಶನ್ ಮೈಸೂರು ಇವರು ನೀಡಿದ ” ವಚನ ಕೋಗಿಲೆ ” ಪ್ರಶಸ್ತಿ
6.. ಅಖಿಲ ಕರ್ನಾಟಕ ಗಾನಯೋಗಿ ಸಂಗೀತ ಪರಿಷತ್- ಗದಗ ಅವರು ನೀಡಿದ ” ಗಾನಯೋಗಿ ಪಂಚಾಕ್ಷರಿ ಅನುಗ್ರಹ ಪ್ರಶಸ್ತಿ ” ಗಳು ಪ್ರಧಾನವಾಗಿವೆ.
ಇದಲ್ಲದೆ ವಿದ್ಯಾ ಅವರು 2001ರಲ್ಲಿ ಸ್ಥಾಪಿತವಾದ ಭಾವ ಸಂಗಮದ ಸ್ಥಾಪಕ ಕಾರ್ಯದರ್ಶಿಯಾಗಿ, ರೋಟರಿ ಇಂಟರ್ನ್ಯಾಷನಲ್ ಸಂಸ್ಥೆಯ ಅಂಗ ಸಂಸ್ಥೆಯಾದ ಇನ್ನರ್ ವೀಲ್ ಸಂಸ್ಥೆಯ ಸ್ಥಾಪಕ ಕಾರ್ಯದರ್ಶಿಯಾಗಿ ಹಾಗೂ ಪಂಡಿತ ಈಶ್ವರಪ್ಪ ಮಿಣಜಿ ಇವರ ಸ್ಮರಣಾರ್ಥವಾಗಿ ಸ್ಥಾಪಿತವಾದ ” ಸ್ವರ ಸಂಗಮ “ಸಂಘದ ಅಧ್ಯಕ್ಷರಾಗಿ, ಅಖಿಲ ಕರ್ನಾಟಕ ಗಾನಯೋಗಿ ಸಂಗೀತ ಪರಿಷತ್ – ತಾಲೂಕ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 2025 – 26 ರಲ್ಲಿ ಮತ್ತೆ ಪುನ: ಇನ್ನರ್ ವೀಲ್ ಸಂಸ್ಥೆಯಲ್ಲಿ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದಾರೆ. ಹೀಗೆ ಇವರು ಸಮಾಜಕ್ಕಾಗಿ ತಮ್ಮ ಅಳಿಲು ಸೇವೆ ಸಲ್ಲಿಸುತ್ತಾ ಬಂದಿದ್ದಾರೆ.
ಒಬ್ಬ ಅತ್ಯುತ್ತಮ ಗೆಳತಿ,ಸಹೋದರಿ, ಸಲಹೆಗಾರ್ತಿ, ಕಳಕಳಿಯ ಸ್ವಭಾವದ,ಸಕಾರಾತ್ಮಕ ಮನಸ್ಸಿನ, ನಮ್ಮ ವೇದಿಕೆಯ ಗಾನಕೋಗಿಲೆ ವಿದ್ಯಾ ಮುಗದುಮ್ಮ ಅವರ ಪರಿಚಯ ಮಾಡಿಕೊಡುತ್ತಿರುವುದು ನನಗೆ ಅತ್ಯಂತ ಖುಷಿ ಕೊಡುವ ವಿಚಾರ.
ಸುಧಾ ಪಾಟೀಲ
ವಿಶ್ವಸ್ಥರು
ಬಸವ ತಿಳಿವಳಿಕೆ ಮತ್ತು ಸಂಶೋಧನಾ ಕೇಂದ್ರ – ಪುಣೆ