ಖ್ಯಾತ ಸಂಶೋಧಕ ಪ್ರಖ್ಯಾತ ವಿದ್ವಾಂಸ ಸುವಿಖ್ಯಾತ ಸಾಹಿತಿ ಗಳಾದ ಡಾ.ವೀರಣ್ಣ ರಾಜೂರ ಅವರಿಗೆ, ವಿದ್ಯಾಕಾಶಿ ಧಾರವಾಡ ದಲ್ಲಿ ಜರುಗಲಿರುವ ೧೯ ನೆಯ ಜಿಲ್ಲಾ ಕನ್ನಡಸಾಹಿತ್ಯ ಸಮ್ಮೇಳನದ ಗೌರವಾಧ್ಯಕ್ಷತೆ ಒಲಿದು ಬಂದಿರು ವುದು ಸುವರ್ಣಕೆ ಸುಗಂಧ ಬೆರೆಸಿ ದಂತಾಗಿದೆ.
ಶ್ರೇಷ್ಠ ಪ್ರಾಧ್ಯಾಪಕರು ದಕ್ಷ ಆಡಳಿತಗಾರರು, ಶರಣ ಸಾಹಿತಿ ಗಳು, ವಚನ ಚಿಂತಕರು ಕಥೆಗಾರರು, ನಾಟಕಕಾರರು, ಜೀವನ ಚರಿತ್ರೆ ರಚನೆಕಾರರು, ಸಂಪಾದಕರಾಗಿ ಸಾರಸ್ವತಲೋಕದಲ್ಲಿ ಚಿರಪರಿಚಿತ ರಾದ ಡಾ.ವೀರಣ್ಣ ರಾಜೂರ ಅವರಿಗೆ, ಉನ್ನತ ಗೌರವ ಸಂಪ್ರಾಪ್ತವಾಗಿರುವುದು ವಿದ್ಯಾರ್ಥಿ ಬಳಗಕ್ಕೆ, ಅಭಿಮಾನಗಳಿಗೆ ಅತೀವ ಆನಂದವನ್ನುಂಟು ಮಾಡಿದೆ.
ಡಾ.ವೀರಣ್ಣ ರಾಜೂರ- ವಿನಯ ವಿದ್ವತ್ತು, ಸರಳ ಮತ್ತು ಸೌಜನ್ಯಕೆ ಮತ್ತೊಂದು ಹೆಸರು. ಪ್ರಕಾಂಡ ಪಾಂಡಿತ್ಯವಿದ್ದರೂ, ಆಡಂಬರದ ದೊಂಬರಾಟವಿಲ್ಲದ ವ್ಯಕ್ತಿತ್ವವೇ ಅವರ ವೈಶಿಷ್ಟ್ಯತೆ. ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ, ಧಾರವಾಡ ಕವಿವಿ ಕನ್ನಡ ಅಧ್ಯಯನ ಪೀಠದ ಮುಖ್ಯಸ್ಥ, ಪ್ರಸಾರಾಂಗದ ನಿರ್ದೇಶಕ, ಪ್ರಕಟನಾ ವಿಭಾಗದ ಅಧ್ಯಕ್ಷರು, ಬಸವಪೀಠದ ಮುಖ್ಯಸ್ಥರು, ಕಲಾ ನಿಕಾಯದ ಡೀನ್, ಪಠ್ಯಪುಸ್ತಕ ರಚನಾ ಮಂಡಳಿ ಚೇರ್ಮನ್ , ಡಾ. ಕಲಬುರ್ಗಿ ರಾಷ್ಟ್ರೀಯ ಪ್ರತಿಷ್ಠಾಪನದ ಅಧ್ಯಕ್ಷತೆ ಮೊದಲಾದ ಹತ್ತು ಹಲವು ಪ್ರತಿಷ್ಠಿತ ಸಂಸ್ಥೆಗಳ ಕರ್ಣಧಾರತ್ವವಹಿಸಿದ್ದರೂ ಯಾವ ಹಮ್ಮು ಬಿಮ್ಮುಗಳಿಲ್ಲದ, ಅಧಿಕಾರದ ಅಮಲನ್ನು ತಲೆಗೇರಿಸಿ ಕೊಳ್ಳದ ಸರಳ ಸಜ್ಜನ ಜೀವಿ.
ಕರ್ನಾಟಕದ ಸಾಹಿತ್ಯ ಅಕಾಡೆಮಿ, ಕರ್ನಾಟಕ ನಾಟಕ ಅಕಾಡೆಮಿ ಫೆಲೋಶಿಪ್, ಡಾ.ಫ. ಗು. ಹಳಕಟ್ಟಿ ರಾಷ್ಟ್ರೀಯ ಪ್ರಶಸ್ತಿ, ಡಾ ಜಚನಿ ಪ್ರಶಸ್ತಿ, ಹುಬ್ಬಳ್ಳಿ ಮೂರು ಸಾವಿರ ಮಠದ ಗ್ರಂಥ ಪ್ರಶಸ್ತಿ, ವಿಶ್ವೇಶ್ವರಯ್ಯ ನವರತ್ನ ಪ್ರಶಸ್ತಿ, ಹಳಕಟ್ಟಿಶ್ರೀ ಸಾಹಿತ್ಯ ಪ್ರಶಸ್ತಿ, ಕಿಟೆಲ್ ಅಂತರ್ ರಾಷ್ಟ್ರೀಯ ಪ್ರಶಸ್ತಿ, ಡಾ. ಎಂ.ಎಂ. ಕಲಬುರ್ಗಿ ಸಂಶೋಧನಾ ಪ್ರಥಮ ಪ್ರಶಸ್ತಿ, ಅಭಿನವಕುಮಾರ ವಚನಶ್ರೀ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಘನ ಸರ್ಕಾರದ ಪ್ರತಿಷ್ಠಿತ ಬಸವ ಪ್ರಶಸ್ತಿ ಮುಂತಾದ ಪುರಸ್ಕಾರಗಳಿಗೆ ಪಾತ್ರರಾಗಿದ್ದಾರೆ. ಕುಷ್ಟಗಿ ತಾಲೂಕು ಕಸಾಪ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ, ಹಂಪಿ ಕನ್ನಡ ವಿವಿಯ ಹಸ್ತಪ್ರತಿ ಸಮ್ಮೇಳನ ಸರ್ವಾಧ್ಯಕ್ಷತೆ ಮುಂ ಗೌರವಗಳು ಪೂಜ್ಯ ಗುರುವರ್ಯರಿಗೆ ಸಂದಿವೆ.
ಹಳಗನ್ನಡ, ನಡುಗನ್ನಡ, ವಚನ ಸಾಹಿತ್ಯ, ಬಸವೋತ್ತರಯುಗದ ವಚನಸಾಹಿತ್ಯ, ಹಸ್ತಪ್ರತಿ ಅಧ್ಯಯನ ವ್ಯಾಕರಣ, ಛಂದಸ್ಸು ಮುಂತಾದವು ಶ್ರೀಯುತರ ಆಸಕ್ತಿಯ ಕ್ಷೇತ್ರಗಳು. ಕನ್ನಡದಲ್ಲಿ ಸಾಂಗತ್ಯ ಸಾಹಿತ್ಯ ಪಿಎಚ್ಡಿ ಮಹಾಪ್ರಬಂಧ. ವಚನ ಅಧ್ಯಯನ, ಸ್ವರವಚನಗಳು, ವಿಚಾರಪತ್ನಿಯರು ಬಸವೋತ್ತರ ಯುಗದ ವಚನ ಕಾರರು, ಹಳಕಟ್ಟಿ ಸಂಪಾದನಾ ಸಾಹಿತ್ಯ, ಏಕಾಂಕ ನಾಟಕಗಳ ಸಂಗ್ರಹ ಶ್ರೀಯುತರ ಮೌಲಿಕ ಗ್ರಂಥಗಳು.
ವಚನ ಸಂಗ್ರಹ, ಶಿವಶರಣರ ನುಡಿಮುತ್ತುಗಳು, ಶಿವಯೋಗ ಪ್ರದೀಪಿಕೆ, ವಚನಾಮೃತ ಸಾರ, ಭಕ್ತ್ಯಾನಂದ ಸುಧಾರ್ಣವ ಮುಂ. ಸಂಪಾದನಾ ಗ್ರಂಥಗಳು. ವೀರಭದ್ರಪ್ಪನವರು ಪಿ.ಬಿ. ಧುತ್ತರಗಿ ಜೀವನ ಚರಿತ್ರೆಗಳು. ಸಮತಾ,ಕಥಾ ಶಾಲ್ಮಲಾ ಸಣ್ಣ ಕಥಾಸಂಕಲನಗಳು. ನಡುಗನ್ನಡ ಪಠ್ಯ ತರಂಗ, ಪ್ರಬಂಧ ಸಂಚಯ ಪಠ್ಯಪುಸ್ತಕಗಳು, ಜನಪದ ಸಾಹಿತ್ಯ ದರ್ಶನ, ಜಾನಪದ ಜಾಣ್ಮೆ, ಜನಪದ ಕಥೆಗಳು ಇವು ಜನಪದ ಸಾಹಿತ್ಯಕೆ ಸಂಬಂಧಿಸಿದ ಪುಸ್ತಕಗಳು ಅವಳೇ ಗಂಡ, ನಾನೇ ಹೆಂಣ್ತಿ, ಲವ್ ಅಂದ್ರೆ ಪ್ರೇಮ ಮುಂ ನಾಟಕಗಳು.
ಇಂಥ ಧೀಮಂತ ಸಾಹಿತಿ ಬಹುಶ್ರುತ ಬರಹಗಾರ, ವಿಖ್ಯಾತ ಸಂಶೋಧಕ ಡಾ.ವೀರಣ್ಣ ರಾಜೂರ ಅವರಿಗೆ ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯ ಗೌರವ ಸಂದಿರುವುದು ಆಪ್ತರಿಗೆ ಕನ್ನಡಾಭಿಮಾನಿಗಳಿಗೆ,ಅಪಾರ ಶಿಷ್ಯ ಬಳಗಕ್ಕೆ ಸಂಭ್ರಮವುಂಟಾಗಿದೆ.
ಡಾ.ವೀರಣ್ಣ ರಾಜೂರ ಮೂಲತಃ ಕೊಪ್ಪಳ ಜಿಲ್ಲೆಯವರು. ಕುಷ್ಟಗಿ ತಾಲೂಕಿನ ಬೆನಕನಾಳ ಗ್ರಾಮದಲ್ಲಿ ೦೪-೦೬- ೧೯೪೭ರಲ್ಲಿ ಜನಿಸಿದರು. ತಂದೆ ಬಸಪ್ಪ,ತಾಯಿ ಫಕೀರಮ್ಮ. ಪ್ರಾಥಮಿಕ ಶಿಕ್ಷಣ ಬೆನಕ ನಾಳದಲ್ಲಿ, ಮಾಧ್ಯಮಿಕ ಹನುಮಸಾಗರದಲ್ಲಿ ಪಡೆದರು.ಗದಗ ಜೇಟಿ ಕಾಲೇಜ ದಿಂದ ಬಿ.ಎ.ಪದವಿ, ಕವಿವಿ ಧಾರವಾಡದಿಂದ ಎಂಎ ಪದವಿ ಸಂಪಾದಿಸಿದರು. ಎಫಿಗ್ರಾಫಿಯಲ್ಲಿ ಡಿಪ್ಲೋಮಾ ಡಾಕ್ಟರೇಟ್ ಪದವಿ ಪಡೆದರು.
ಧಾರವಾಡ ಕವಿವಿಯ ಕನ್ನಡ ಅಧ್ಯಯನ ಪೀಠದಲ್ಲಿ ಸಹಾಯಕ ಸಂಶೋಧಕರಾಗಿ ವೃತ್ತಿಯಾರಂಭಿಸಿ, ಮುಂದೆ ಅಧ್ಯಾಪಕರಾಗಿ, ಪ್ರವಾಚಕ ರಾಗಿ, ಪ್ರಾಧ್ಯಾಪಕರಾಗಿ, ವಿಭಾಗದ ಮುಖ್ಯಸ್ಥರಾಗಿ, ಪಠ್ಯಪುಸ್ತಕ ರಚನಾ ಮಂಡಳಿ ಚೇರ್ಮನ್ ರಾಗಿ, ಪ್ರಸಾರಾಂಗದ ನಿರ್ದೇಶಕರಾಗಿ ಪದೋನ್ನತಿ ಪಡೆದರು. ಕಲಾವಿಭಾಗ ಡೀನ್ ರಾಗಿ,ಕ್ರೀಡಾ ನಿರ್ದೇಶಕರಾಗಿ, ಶೈಕ್ಷಣಿಕ ಕಾರ್ಯಾಗಾರದ ಸಂಚಾಲಕರಾಗಿ, ಸಾಂಸ್ಕೃತಿಕ ಶಿಬಿರಗಳು, ವಿಶೇಷ ಉಪನ್ಯಾಸ, ಪುನಶ್ಚೇತನ ಶಿಬಿರಗಳನ್ನು ಯಶಸ್ವಿ ಯಾಗಿ ಸಂಘಟಿಸಿದರು. ವಿಶ್ವವಿದ್ಯಾಲಯ ಶ್ರೀ ಬಸವೇಶ್ವರ ಪೀಠಗಳ ಪರವಾಗಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವಿಚಾರ ಸಂಕಿರಣಗಳನ್ನು ಅರ್ಥಪೂರ್ಣ ವಾಗಿ ಸಂಯೋಜಿಸಿದರು. ಸುಮಾರು ಇಪ್ಪತ್ತು ಎಂಫಿಲ್ ಮತ್ತು ಪಿಎಚ್ಡಿ ವಿದ್ಯಾರ್ಥಿಗಳಿಗೆ ಸಮರ್ಥವಾಗಿ ಮಾರ್ಗದರ್ಶನ ಮಾಡಿದ್ದಾರೆ.ಅವರ ಶಿಷ್ಯಬಳಗ ಧಾರವಾಡ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ದತ್ತಿನಿಧಿ ಸ್ಥಾಪಿಸಿ ವರುಷಂಪ್ರತಿ ವಿಶೇಷ ಉಪನ್ಯಾಸ ನಡೆಸುತ್ತ ಬಂದಿದ್ದಾರೆ. ಅಭಿಮಾನಿಗಳಿಂದ ” ರಾಜಮಾರ್ಗ ” ಅಭಿನಂದನ ಗ್ರಂಥ ಸಮರ್ಪಿತ ವಾಗಿದೆ. ಇದೀಗ ಧಾರವಾಡದಲ್ಲಿ ಜರುಗುತ್ತಿರುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸುತ್ತಿರುವುದು ವಂದನೀಯ ಹಾಗೂ ಅಭಿನಂದನೀಯವಾಗಿದೆ.
ಡಾ. ಅಶೋಕ ನರೋಡೆ