Homeಲೇಖನಹಲವು ಪ್ರಕಾರ ಕಲಾವಿದರ ಪರಿಚಯಿಸುವ ಗೊರೂರು ಅನಂತರಾಜು ಅವರ 'ಕಲೆ ಸೆಲೆ' ಕೃತಿ

ಹಲವು ಪ್ರಕಾರ ಕಲಾವಿದರ ಪರಿಚಯಿಸುವ ಗೊರೂರು ಅನಂತರಾಜು ಅವರ ‘ಕಲೆ ಸೆಲೆ’ ಕೃತಿ

Published on

ಹಾಸನ ತಾಲ್ಲೂಕು ಗೊರೂರಿನಲ್ಲಿ ಜನಿಸಿ , ಪ್ರಸ್ತುತ ಹಾಸನದಲ್ಲಿ ವಾಸವಿರುವ, 64 ವಸಂತ ಪೂರೈಸಿ, ಕಳೆದ ೩೮ ವರ್ಷಗಳಿಂದ ಸಾಹಿತ್ಯ ಸೇವೆ, ಕಲಾ ಸೇವೆ ಮಾಡಿಕೊಂಡು ಬಂದಿರುವ ಕ್ರಿಯಶೀಲ ವ್ಯಕ್ತಿತ್ವವುಳ್ಳವರಾಗಿ ಹಲವು ಯುವ ಕವಿಗಳು, ಕಲಾವಿದರನ್ನು ಬರವಣಿಗೆ ಮೂಲಕ ಮೆಚ್ಚಿ ಪ್ರೋತ್ಸಾಹಿಸುವ ಸೇವೆ ಮಾಡುತ್ತಿರುವ ನಮ್ಮೆಲ್ಲರ ನೆಚ್ಚಿನ ಅಜಾತಶತ್ರು ಗೊರೂರು ಅನಂತರಾಜುರವರು.

ಇವರು ಸರಿ ಸುಮಾರು 60 ಹೊತ್ತಿಗೆಗಳನ್ನು ರಚಿಸಿದ್ದಾರೆ ಇಲ್ಲಿಯವರೆಗೆ. ಇವರ ಕವನ ಸಂಕಲನಗಳು ಮೇಳದ ಹಾಡುಗಳು, ಜನಪ್ರಿಯ ಗೀತೆಗಳು ಇವು ಹಾಡುಗಳ ಕಿರು ಕೃತಿಗಳು. ಹಲವು ದಿನ ಪತ್ರಿಕೆಗಳಲ್ಲಿ ಬಿತ್ತರಗೊಂಡಿರುವ ಲೇಖನಗಳ ಕೃತಿಗಳು ಹಬ್ಬಗಳು ಮತ್ತು ಜನಪದರ ನಂಬಿಕೆಗಳು, ಹೇಮೆಯ ಮಡಿಲಲ್ಲಿ, ಗ್ರಂಥಾಲಯ ಜ್ಞಾನ ದೇಗುಲ, ಮಾನವ ಜನ್ಮ ದೊಡ್ಡದು. ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಬದುಕು ಮತ್ತು ಬರಹಗಳ ಕೃತಿ ಗ್ರಾಮೀಣ ಸೊಗಡಿನ ಸಾಹಿತಿ ರಾಮಸ್ವಾಮಿ ಅಯ್ಯಂಗಾರ್.

ಇವರ ಗೊರೂರು ಹೇಮಾವತಿ ದರ್ಶನ ಕೃತಿ ಹುಟ್ಟೂರಿನ ಸಾಂಸ್ಕೃತಿಕ ಅಧ್ಯಯನ, ಹೇಮಾವತಿ ಯೋಜನೆಯ ವಿವರಗಳ ಸಮ್ಮಿಲನ, ಇವರು ಹಲವಾರು ರಾಷ್ಟ್ರ, ರಾಜ್ಯ, ಜಿಲ್ಲಾ ಪ್ರಶಸ್ತಿಗಳಿಗೂ ಭಾಜನರು. ಕಲಾ ಕ್ಷೇತ್ರದಲ್ಲಿ ಎತ್ತಿದ ಕೈ. ಇವರು ನಾಟಕದಲ್ಲಿ ನಟಿಸಿ, ನಿರ್ದೇಶಕರಾಗಿ ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ತಮ್ಮದಾಗಿಸಿಕೊಂಡಿರುವರು. ಇವರು ನಟಿಸಿರುವ ನಾಟಕಗಳು ಹುಡುಗಾಟ,ಆತ್ಮ ಯಾವ ಕುಲ ಜೀವ ಯಾವ ಕುಲ, ಸರ್ವೇ ಜನೋ: ಸುಖಿನೋ ಭವಂತು, ಕನಸಿನವರು, ಮನುಷ್ಯರು, ವರದಕ್ಷಿಣೆ ಭೂತ. ಇವರೇ ರಚಿಸಿ ನಟಿಸಿ ನಿರ್ದೇಶಿಸಿದ ನಾಟಕಗಳು ವ್ಯವಸ್ಥೆ, ವೀರಪ್ಪನ್ ಭೂತ, ನಾರಿ ಹೆಜ್ಜೆ ನಾರಿ ಕಣ್ಣು, ತೋಳ ಬಂತು ತೋಳ. ಇವರ ಕಿರು ಹಾಸ್ಯ ಪ್ರಹಸನಗಳು ಕೃತಿ ೨೦ ಜೋಕ್ಸ್ ಆಧರಿಸಿ ಹಾಸ್ಯ ಪಾತ್ರಗಳಲ್ಲಿ ರೂಪು ತಳೆದಿದೆ. ಇವರ ವ್ಯವಸ್ಥೆ ನಾಟಕ ಆಂಗ್ಲ ಭಾಷೆಗೆ ಬ್ಲಡಿ ಸಿಸ್ಟo ಎಂದು ರೂಪಾಂತರಗೊಂಡಿದೆ.

ಇವರ ಅಭಿನಯ ಅಭಿವ್ಯಕ್ತಿ ಕೃತಿಯಲ್ಲಿ ರಂಗಭೂಮಿಯಲ್ಲಿ ಕ್ರಿಯಾಶೀಲರಾಗಿ ದುಡಿದು ಹೆಸರು ಮಾಡಿರುವ ೧೫೦ ರಂಗ ಕಲಾವಿದರನ್ನು ಕಿರಿದಾಗಿ ಪರಿಚಯಿಸಿದ್ದಾರೆ. ಇವರ ಎಲ್ಲ ಸ್ವಾರಸ್ವತ ಸೇವೆಯನ್ನು ಪರಿಗಣಿಸಿ ಜಿಲ್ಲಾಡಳಿತದಿಂದ ನೀಡುವ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ರಾಜ್ಯದ ಹಲವು ಸಂಘ ಸಂಸ್ಥೆಗಳು ಇವರಿಗೆ ಅನೇಕ ಬಿರುದು ನೀಡಿ ಪ್ರಶಸ್ತಿ ಸನ್ಮಾನ ಮಾಡಿವೆ. ಇಷ್ಟೆಲ್ಲ ಇವರ ಕುರಿತಾಗಿ ಹೇಳಲೇಬೇಕು ಅನ್ನಿಸಿತು. ಬರವಣಿಗೆ ಮೂಲಕ ಹೇಳಿರುವೆ.

ಮುಂದೆ ಸಾಗಿ ಇವರ ಹೊಸ ಕೃತಿ ಕಲೆ ಸೆಲೆ ಕುರಿತು ಹೇಳುವುದಾದರೆ ಈ ಕೃತಿಯಲ್ಲಿ ಒಟ್ಟು 74 ಕಿರು ಲೇಖನಗಳಿವೆ. ಇದು ರಾಜ್ಯ ಮತ್ತು ಹಾಸನ ಜಿಲ್ಲೆ, ತಾಲೂಕಿನ ಕಲೆ, ಸಾಹಿತ್ಯ ಸಂಸ್ಕೃತಿ ಬಿಂಬಿಸುವ ಅಭಿವ್ಯಕ್ತಿಯ ಸುಂದರ ಭಾವನಾತ್ಮಕ ಲೇಖನಗಳಿಂದ ಕೂಡಿದೆ. ವ್ಯಕ್ತಿ ಪರಿಚಯವೇ ಅಧಿಕ. ಅವರೆಲ್ಲ ಸಾಮಾನ್ಯರಲ್ಲ ಸಾಧಕರೇ.
ಇವರು ಕಲಾಕ್ಷೇತ್ರದಲ್ಲಿ ನಡೆಯುವ ನಾಟಕೋತ್ಸವ, ಸ್ಪರ್ಧೆ, ನಾಟ್ಯ ಕಲಾವಿದರ ಕುರಿತಾಗಿ ಬರೆದವುಗಳಾಗಿವೆ. ರಂಗ ಸಜ್ಜಿಕೆ, ಸೀನರಿಗಳು, ಜಗಮಗಿಸುವ ದೀಪಾಲಂಕಾರ, ನಟನೆ, ಸ್ವಾರಸ್ಯಕರ ಸಂಗತಿಗಳು, ವ್ಯಕ್ತಿಯ ವ್ಯಕ್ತಿತ್ವ ಇದರಲ್ಲಿ ಅಡಗಿದೆ,

ಬೆಳಕು ಚೆಲ್ಲುವ ವಾರಸುದಾರ, ಚಾವುಂಡರಾಯ, ಬೆಂದಕಾಳೂರು ನಿರ್ಮಾತೃ ಕೆಂಪೇಗೌಡರ ಜೀವನ ಚರಿತ್ರೆ ಅಧರಿಸಿದ ನಾಟಕ, ಸಂತ ಶಿಶುನಾಳ ಷರೀಫರ ಜೀವನಗಾಥೆ, ವಿಗಡ ವಿಕ್ರಮರಾಯ ಐತಿಹಾಸಿಕ ನಾಟಕ, ಆಧುನಿಕ ವೇಷ ಭೂಷಣ ಶೈಲಿಯನ್ನು ಒಳಗೊಂಡು ವಿಮರ್ಶಿಸಲಾಗಿದೆ.. ಕೇರಿ ಹಾಡು ನಾಟಕದಲ್ಲಿ ಸರಳ ರಂಗ ಸಜ್ಜಿಕೆಯಲ್ಲಿ ಗ್ರಾಮ್ಯ ಬದುಕಿನ ನೈಜ ಚಿತ್ರಣ ರಂಜಿಸಿದೆ, ಮಹಾಭಾರತದಲ್ಲಿನ ಪದ್ಮವ್ಯೂಹ ನಾಟಕದ ಪಾತ್ರಗಳು ಸನ್ನಿವೇಶಗಳು ಆಧುನಿಕ ಶೈಲಿಯಲ್ಲಿ ಪ್ರದರ್ಶಿತಗೊಂಡಿವೆ. ಪ್ರತಿಮಾ ಲೋಕದ ಸೃಷ್ಟಿ ಮತ್ತು ಅಪೂರ್ವ ಧ್ವನಿ. ಇದೊಂದು ಮನೆ ಮನೆಯ ಕಥೆ ಕೂಡ ಹೌದು,

ಪ್ರಪಂಚದ ವಿಸ್ತಾರ, ಮೌಲ್ಯಗಳ ಸಂಘರ್ಷ ಕಥನ. ಬದುಕಿನ ಅರ್ಥವನ್ನು ಶೋಧಿಸುವ ಕೈಕನ್ನಡಿಯಂತೆಯಿದೆ ಪೀಪಲ್ ಆಫ್ ಇಂಡಿಯಾ ಲೇಖನದಲ್ಲಿ. ಸುಯೋಧನ, ಒಂದು ಬೊಗಸೆ ನೀರು, ಧಾರಶಿಕೋ, ಜೇಡರ ದಾಸಿಮಯ್ಯ, ಕುಲಂ, ಕಳಚಿದ ಕೊಂಡಿಗಳು, ಮಠದೊಳಗಿನ ಬೆಕ್ಕು, ಇದು ಅಜ್ಜಂಪುರ ತಾಲ್ಲೂಕು, ಅನುವನಹಳ್ಳಿಯವರ ಕಥೆ ಕವಿತೆ ವಿಚಾರ ವಿಮರ್ಶೆ ಸಂಶೋಧನೆ, ನಾಟಕ ಈ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿದ್ದಾರೆ, ಇವರ ನಾಟಕಗಳು ಈ ರಂಗ ಸಜ್ಜಿಗೆಯ ಮೇಲೆ ಕಂಡ ಪ್ರಚಲಿತ ದಿನಗಳ ರಾಜಕೀಯ ದೊಂಬರಾಟವನ್ನು ಅಭಿನಯಿಸಿದ ಪಾತ್ರಧಾರಿಗಳ, ಗಾಯಕರ, ಚಿತ್ರಣವನ್ನು ಕಣ್ಣಿಗೆ ಕಾಣುವಂತೆ ಬಿಂಬಿಸಿದ್ದಾರೆ.
ಕೆ. ಬಿ. ಸಿದ್ದಯ್ಯನವರ ಕಾವ್ಯ ಆಧಾರಿತ ನಾಟಕ ದಕ್ಲ ಕಥಾ ದೇವಿ ಕಾವ್ಯವು ಲಕ್ಷ್ಮಣ ಕೆ. ಪಿ ರಚನೆ ನಿರ್ದೇಶನದಲ್ಲಿ ಕಂಡ ವಿಶೇಷ ಕಥೆ. ಒಂದು ವಿಶಿಷ್ಟ ಪ್ರಯೋಗ. ದಹನದ ಕಥೆ ಅನ್ನೋ ಒಂದು ಹೋರಾಟದ ಹಾಡು ಪ್ರಸಿದ್ಧವಾಗಿದೆ, ಈ ಹಾಡು ಬಿಹಾರದಲ್ಲಿರೊ ಬೆಲ್ಜಿಯಲ್ಲಿ ದಲಿತರ ಮೇಲಾದ ಅತ್ಯಾಚಾರ ನೋವನ್ನು ಬಿಂಬಿಸುವ ಚಿತ್ರಣ, ಕಾದ ಹೂವು ಕಸವ ಸೇರಿತೆ ಹಾಡು ಪ್ರೇಕ್ಷಕರನ್ನು ಸೆರೆ ಹಿಡಿಯುತ್ತೆ,. ಇನ್ನೊಂದು ಗ್ಯಾರಂಟಿ ರಾಮಣ್ಣ ವಿರಚಿತ ಬಾಡಿದ ಬದುಕು ನಾಟಕ. ಗಾಡೇನಹಳ್ಳಿ ವೀರಭದ್ರಚಾರ್ ನಿರ್ದೇಶನದಲ್ಲಿ ಪ್ರಚಂಡ ರಾವಣ ನಾಟಕ. ಪೌರಾಣಿಕ ನಾಟಕಗಳಲ್ಲಿ ರಂಗಗೀತೆ, ನೃತ್ಯ, ಸಂಭಾಷಣೆಯೇ ಪ್ರೇಕ್ಷಕರನ್ನು ಸೆರೆ ಹಿಡಿಯುವುದು ಎಂಬ ಅಂಶಗಳ ಮೇಲೆ ಬೆಳಕು ಚೆಲ್ಲಿದೆ. ದಿಬ್ಬುರು ರಮೇಶ ಅವರ ಇವನಾರವಾ ನಾಟಕ ಜಾತಿಪದ್ಧತಿ ಮೌಢ್ಯತೆಗಳ ಕುರಿತಾಗಿದೆ, ಅಶೋಕನು ಯುದ್ಧದಲ್ಲಿ ಗೆದ್ದನು. ಇವನನ್ನು ಮಾತಿನಲ್ಲಿ ಗೆದ್ದ ಓರ್ವ ಪುಟ್ಟ ಬಾಲಕಿಯಿಂದ ಅಶೋಕನು ಹೇಗೆ ಮನ ಪರಿವರ್ತನೆಗೊಂಡನು ಎಂಬುದರ ಕಥೆ. ಇದು ಬೆಂಗಳೂರಿನ ಶ್ರೀಮತಿ ವಸುಮತಿ ರಾಮಚಂದ್ರರವರ ಎರಡನೇ ಕೃತಿ ದೇವನಾoಪ್ರಿಯ ಸುಕೋಮಲ ಕಥೆಯೊಂದನ್ನು ಕುರಿತಾಗಿದೆ. ಎ. ಸಿ ರಾಜು ನಿರ್ದೇಶನದಲ್ಲಿ, ದೈವೀಕ ನೆಲೆಯಲ್ಲಿ ದೇವಿ ಮಹಾತ್ಮೆಯಲ್ಲಿ, ಶ್ರೀದೇವಿ ಅರ್ಥಾತ್ ಚಾಮುಂಡೇಶ್ವರಿಯಾಗಿ ಪರಿವರ್ತಿತವಾಗುವ ಸುಂದರ ರೋಚಕ ಸನ್ನಿವೇಶ ಕುರಿತಾಗಿ ಹಾಗೂ ಆ ಪಾತ್ರದಲ್ಲಿ ನಟಿಸಿರುವ ನಟ ಗೋವಿಂದೇಗೌಡರ ಅಭಿನಯ ಕುರಿತಾಗಿದೆ.

ಇತ್ತೀಚಿನ ದಿನಗಳಲ್ಲಿ ಮಹಿಳಾ ಮಣಿಯರು ನಟಿಸಿರುವ ಸಾವಿತ್ರಿಯ ಸವಾಲು ನಾಟಕ ಪಾತ್ರಧಾರಿಗಳ ಜೊತೆಗೆ ಸಾವಿತ್ರಿಯಾಗಿ ಅಭಿನಯಿಸಿರುವ ನಟಿ ವೇದ ಎಂ. ವೈ ನಟನೆಯ ಕುರಿತಾಗಿದೆ. ಮತ್ತೊಬ್ಬರು ಕಲಾವಿದೆಯಾಗಿ, ವೃತ್ತಿಯಲ್ಲಿ ಶಿಕ್ಷಕಿಯಾಗಿರುವ ಹಾಸನದ ರಾಣಿ ಚರಾಶ್ರಿ ಕುರಿತಾಗಿದೆ. ಸಿನಿಮಾ ಕುರಿತಾದ ಬರಹ ಗಾಂಧಿ ಮತ್ತು ನೋಟು ಹತ್ತು ವರ್ಷದ ಸುಕ್ರಿ ಎಂಬ ಹೆಣ್ಣು ಮಗುವಿನ ಗಾಂಧಿ ತತ್ವದ ಮೇಲೆ ಅವರ ಅಪ್ಪನ ಕುಡಿತದ ಚಟ ಬಿಡಿಸಲು ನೋಟಿನ ಮೇಲಿರುವ ಗಾಂಧಿಯ ನೋಟನ್ನು ಬಳಸಬಾರದೆಂದು ಹೇಳುವ ಸನ್ನಿವೇಶ ಪಾತ್ರವನ್ನು ಎತ್ತಿ ತೋರಿಸಿದೆ.

ಲೇಖಕರು ನೋಡಿದ ಶ್ರೀಮಂತ ಚಲನಚಿತ್ರದ ಅನ್ನದಾತನೇ ಜಗತ್ತಿನ ಶ್ರೀಮಂತ ಎಂಬ ನೈಜ ಸಂದೇಶ ಸಾರುವ ಲೇಖನವಾಗಿದೆ.
ಮತ್ತೊಂದು ಸಿನಿಮಾ ಬ್ರಹ್ಮಕಮಲ. ಇದಕ್ಕೆ ಅಂತರಾಷ್ಟ್ರೀಯ ಪ್ರಶಸ್ತಿ ಸಿಕ್ಕಿರುವ ಬಗ್ಗೆ, ಚಿತ್ರ, ಕಥೆ ಮತ್ತು ಪಾತ್ರಗಳ ಕುರಿತಾಗಿದೆ.
ಹಾಸನದ ಅಭಿಜ್ಞಾ ಸ್ಕೂಲ್ ಆಫ್ ಡಾನ್ಸ್ ವಿದುಷಿ ಸಮೀಕ್ಷ ಮನುಕುಮಾರ್ ಅವರ ಶಿಷ್ಯರು ಪ್ರದರ್ಶಿಸಿದ ನೃತ್ಯ ಕುರಿತಾಗಿದೆ.
ಚನ್ನರಾಯಪಟ್ಟಣದ ನಾಟ್ಯ ಪ್ರತಿಭೆ ಶುಭ್ರತಾ ಪಿ ಈಕೆಯು ಭರತನಾಟ್ಯ ಕಲಾವಿದೆ. ಬಾಲ ಪ್ರತಿಭೆ ಶೃಜನ್ಯ ಜೆ ಕೋಟ್ಯಾನ್ ಇವರಲ್ಲಿ ಅಡಗಿರುವ ಕಲಾ ಪ್ರತಿಭಯು ಲೇಖನದಲ್ಲಿ ಅನಾವರಣಗೊಂಡಿದೆ.
ಭರತ ನಾಟ್ಯ ಕ್ಷೇತ್ರದಲ್ಲಿ ಮಿಂಚುತ್ತಿರುವ ಉದಯೋನ್ಮುಖ ಪ್ರತಿಭೆ ಯೋಗಿತ ಪಿ ಪಟೇಲ್ ಅವರ ಪರಿಚಯ ಲೇಖನ, ನಿವೃತ್ತ ಪೊಲೀಸ್ ಸಬ್ ಇನ್ಸ್ ಸೈಕ್ಟರ್ ತತ್ವಪದ ಗಾಯಕರು ಜೆ ಪಿ ಶಿವನಂಜೇಗೌಡ ಜನಪದ ಹಾಡುಗಾರಿಕೆ ಮೆಚ್ಚುವಂತದ್ದೆ. ತತ್ವಪದ ಹಾಡುವ ಯೋಗೇಂದ್ರ ಅವರ ಜನಪದ ಕ್ಷೇತ್ರದ ಸಾಧನೆ,

ಭಾವಚಿತ್ರ ರಚನೆಯಲ್ಲಿ ಸುಮಾರು 40 ವರ್ಷಗಳಿಂದ ತೊಡಗಿಸಿಕೊಂಡಿರುವ ಬಾಬುರಾವ್ ನಡೋಣಿ ಜೀವನ ಚರಿತ್ರೆ ಗಮನ ಸೆಳೆಯುತ್ತದೆ.
ಚಿತ್ರಕಲೆಗೆ ಹಾಸನ ಜಿಲ್ಲೆಯ ಕೊಡುಗೆ ಅಪಾರ ಎಂಬ ಅಭಿಪ್ರಾಯ ಹಿನ್ನೆಲೆಯಲ್ಲಿ ಚಿತ್ರ ಕಲಾವಿದೆ ಚಂದ್ರಪ್ರಭಾ ಅವರ ಕುರಿತಾಗಿ ಬಾಳೆoಬ ದೋಣಿಯ ಬದುಕಿನಲ್ಲಿ ಕಷ್ಟ ಸುಖ ನೋವುಗಳು ಸಹಜ, ಸೂರ್ಯ ಭೂಮಿಗೆ ಬೆಳಕಾದರೆ, ನೀನು ನನ್ನ ಬಾಳಿಗೆ ಬೆಳಕು ಎಂದು ಮರೆಯಾಗಿರುವ ಇವರ ಪತಿಯನ್ನು , ತಂದೆ ತಾಯಿ ಅವರ ನುಡಿಗಳನ್ನು ನೆನಪಿಸುವ, ಮನ ಮಿಡಿಯುವ ಸನ್ನಿವೇಶದಿಂದ ಕೂಡಿ ಅಭಿವ್ಯಕ್ತಿಯ ಸುಂದರ ಲೇಖನ.
ನೇಚರ್ ಆರ್ಟಿಸ್ಟ್ ಮುರುಳಿ ಎಸ್ ಕೆ, ಚಿಕ್ಕ ವಯಸ್ಸಿನಿಂದಲೇ ಕಲೆಯ ಬಗ್ಗೆ ಆಸಕ್ತಿ ರೂಢಿಸಿಕೊಂಡಿದ್ದಾರೆ.
ಕಲಾ ಶಿಕ್ಷಕಿ ಮಂಜುಳ ಕಲೆಯನ್ನು ಪೋಷಿಸುತ್ತಿರುವ ಕುರಿತಾಗಿ.
ಹಳೆಯ ಬೇರೊಂದಿಗೆ ಹೊಸ ಚಿಗುರಾಗಿ ಕಲೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಚಿತ್ರಕಲೆಗೆ ತನ್ನದೇ ಆದ ವೈಶಿಷ್ಟ್ಯವಿದೆ ಎಂಬುದನ್ನು ನಿರೂಪಿಸಿದೆ.
ಯುವಕಲಾವಿದ ಪ್ರತಿಭಾ ಪ್ರದರ್ಶನ, ಯುವಜನೋತ್ಸವದಲ್ಲಿ ಕುರಿತಾಗಿ ಚಂದದ ವಿವರಣೆ.
ಹೊಳೆನರಸೀಪುರ ತಾಲ್ಲೂಕಿನ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಆರ್. ಬಿ.ಪುಟ್ಟೇಗೌಡರ ಸೇವಾಕ್ಷೇತ್ರದೊಂದಿಗೆ ಕಲಾವಿದರಾಗಿ ಕೊಳಲುವಾದನ ನುಡಿಸುವ ಕಲಾ ಪ್ರತಿಭೆ ಕುರಿತಾಗಿ ವ್ಯಕ್ತಿ ಪರಿಚಯ ಮಾಡಿಕೊಟ್ಟಿದ್ದಾರೆ.
ಮಂಡ್ಯ ಗಮಕಿ ಸಿ.ಪಿ.ವಿದ್ಯಾಶಂಕರ್ ಅವರು ನಮ್ಮಂತಹ ಹಲವಾರು ಕವಿಗಳ ಸಾಹಿತ್ಯಕ್ಕೆ ಗಾಯನದ ಮೂಲಕ ಜೀವ ತುಂಬಿದ್ದಾರೆ, ಜೊತೆಗೆ ಸಂಗೀತಾ ಶಾಲೆ ನಡೆಸುತ್ತಿದ್ದಾರೆ. ಅದ್ಭುತ ಗಮಕಿ ಗಾಯಕರು ಸಹ ಎಂದು ಹೇಳುವುದರಲ್ಲಿ ಖುಷಿಯಿದೆ.
ಜನಪದ ಗಾಯಕರಲ್ಲಿ ಒಬ್ಬರಾದ ಕುಮಾರ್ ಕಟ್ಟೆಬೆಳಗುಳಿರವರ ಪರಿಚಯ ಸೊಗಸಿದೆ.
ಬರಹಗಾರರು ಕಂಡ ಅದ್ಭುತ ಗಾಲಿ ನೃತ್ಯ, ಆನೇಕಲ್ ನ ಸಯ್ಯದ್ ಸಲ್ಲಾವುದ್ದಿನ್ ಪಾಶ ವಿಕಲ ಚೇತನರಿಗೆ ಗಾಲಿ ನೃತ್ಯ ಕಲೆಯ ತರಬೇತಿ ನೀಡಿ, ಕಲಾ ಪ್ರದರ್ಶನ ನೀಡಿ ರಾಷ್ಟ್ರಪತಿಗಳಿಂದ ಪ್ರಶಸ್ತಿ ಪಡೆದಿರುವ ಕುರಿತಾಗಿ ಅಭಿವ್ಯಕ್ತ ಸುಂದರ ಲೇಖನ.
ಚಿತ್ರ ಕಲಾವಿದೆಯಾಗಿ ಹಲವು ಹೆಣ್ಣು ಮಕ್ಕಳಲ್ಲಿರುವ ಕಲೆಯನ್ನು ಪೋಷಿಸುತ್ತಿರುವ ಕಲಾ ಶಿಕ್ಷಕಿಯಾಗಿ ವಿಮಲ. ಎಸ್.ಎನ್. ರವರ ಕುರಿತಾದ ಲೇಖನವಾಗಿದೆ.
ರಂಗಭೂಮಿಯಲ್ಲಿ ಕೇಳಿ ಬರುವ ಒಂದು ಹೆಸರು ಗಾಡೇನಹಳ್ಳಿ ವೀರಭದ್ರಾಚಾರ್ ಇವರು ರಂಗ ನಿರ್ದೇಶಕರಾಗಿ ಜನಗಳ ಮನ ಗೆದ್ದಿದ್ದಾರೆ,
ನಾಟಕ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಚನ್ನರಾಯಪಟ್ಟಣವು ಸಾಕಷ್ಟು ಮುಂಚೂಣಿಯಲ್ಲಿದೆ ಎಂಬ ಅಂಶದ ಜೊತೆಗೆ ಈ ಪಟ್ಟಿಗೆ ಸೇರ್ಪಡೆಗೊಳ್ಳುವ ಮತ್ತೊಂದು ನಾಮಧೇಯವೇ ಪ್ರತಿಮಾ ಟ್ರಸ್ಟ್ ನ ಉಮೇಶ್ ತೆಂಕನಹಳ್ಳಿ.
ವಿದ್ಯಾರ್ಥಿ ದೆಸೆಯಲ್ಲಿದ್ದಾಗಲೇ ಬುದ್ಧ ಬಸವ ಗಾಂಧೀಜಿಯಂತ ಹಿರಿಯ ಆದರ್ಶವಾದಿಗಳ ತತ್ವ ಸಿದ್ದಾಂತಗಳ ಮೈಗೂಡಿಸಿಕೊಂಡಿರುವ ಸಿಸಿರಾ, ಕವಿಗಳಿಗೆ ಕಲಾವಿದರಿಗೆ ಪ್ರೋತ್ಸಾಹಿಸಿ ಸಾಹಿತ್ಯ ಪರಿಚಾರಿಕೆಯಲ್ಲಿ ಕವಿಗೆ ಕವಿ ಒಲಿವ ಕವಿಗೆ ಕವಿ ಮುನಿವ ನುಡಿ ಮಾತಿದೆ ಎಂದು ಅನುಭವದ ಈ ಸವಿಯು, ಹೇಳದಿರೆ ತಾಳಲಾರೆನು ಕವಿಯು ಎಂಬ ಕುವೆಂಪು ಅವರ ನುಡಿಯು, ಒಂದು ತರಹದ ಪ್ರಸವ ಸ್ಥಿತಿಯಲ್ಲಿರುತ್ತಾನೆ. ಕವಿ ಕವಿಗೆ ಪ್ರೋತ್ಸಾಹವಿರದಿರೆ ವಿರಹ ವೇದನೆಯಲ್ಲಿ ಕವಿತ್ವಕ್ಕೆ ಮಂಕು ಕವಿಯುತ್ತದೆ ಎನ್ನುವ ಇವರು ಕವಿಗಳಿಗೆ ಕಲಾವಿದರಿಗೆ ಪ್ರೋತ್ಸಾಹ ನೀಡುವುದರಲ್ಲಿ ಕಾಯಕ ನಿರತರು. ಇಂತವರು ಅಪರೂಪದಲ್ಲಿ ಅಪರೂಪ, ಇಂತ ಎಷ್ಟೋ ಸಾಧಕರ ಕುರಿತಾಗಿ ಪುಸ್ತಕ ರೂಪದಲ್ಲಿ ತಂದಿರುವುದು ಸಂತಸದ ವಿಷಯ. ಎಲ್ಲರನ್ನು ಪ್ರೋತ್ಸಾಹಿಸುವ ಗುಣ ಎಲ್ಲರಲ್ಲು ಇರುವುದಿಲ್ಲ, ಇಂತ ಸುಗುಣ ಹೃದಯವಂತರಲ್ಲಿ ಮುಂದಾಳು ಗೊರೂರು ಅನಂತರಾಜು ಅವರು. ಒಬ್ಬ ಸಾಹಿತಿ ಕಲಾವಿದನಾಗಲು ಸಾಧ್ಯವಿಲ್ಲ. ಅದೇ ಒಬ್ಬ ಕಲಾವಿದ ಸಾಹಿತಿಯಾಗಬಹುದು. ಇದೆಲ್ಲ ಸಾಧ್ಯ ಎಂಬುದನ್ನ ಸಾಬೀತುಪಡಿಸಿದ್ದಾರೆ.

ಕಟ್ಟೆ ಕೃಷ್ಣಸ್ವಾಮಿ,
ಸಾಹಿತಿ ಕಲಾವಿದರು, ಮಂಡ್ಯ
೮೦೭೩೭೮೨೫೬೪

Latest articles

More like this