ನಾವು – ನಮ್ಮವರು
ವಿಜ್ಞಾನ ಮತ್ತು ಸುಜ್ಞಾನದ ಸೇತುವೆ ಎನ್ನುವುದು ಮಾನವನ ಪ್ರಗತಿಯ ಎರಡು ಪ್ರಮುಖ ಕಣ್ಣುಗಳು. ವಿಜ್ಞಾನವು ನಮಗೆ ಜಗತ್ತಿನ ಭೌತಿಕ ಸತ್ಯಗಳನ್ನು ಪರಿಚಯಿಸಿದರೆ, ಸುಜ್ಞಾನವು ಆ ಜ್ಞಾನವನ್ನು ಸಮಾಜದ ಕಲ್ಯಾಣಕ್ಕಾಗಿ ಹೇಗೆ ಬಳಸಬೇಕೆಂದು ಕಲಿಸುತ್ತದೆ.
ವಿಜ್ಞಾನ: ಪ್ರಯೋಗ, ನಿರಂತರ ಸಂಶೋಧನೆ ಮತ್ತು ಸಾಕ್ಷ್ಯಗಳ ಆಧಾರದ ಮೇಲೆ ಪಡೆಯುವ ವ್ಯವಸ್ಥಿತ ಜ್ಞಾನ. ಇದು ‘ಏನು?’ ಮತ್ತು ‘ಹೇಗೆ?’ ಎಂಬ ಅನೇಕ ಪ್ರಶ್ನೆಗಳಿಗೆ ಉತ್ತರಿಸುತ್ತದೆ.
ಸುಜ್ಞಾನ: ಲಭ್ಯವಿರುವ ಜ್ಞಾನವನ್ನು ಒಳ್ಳೆಯ ಮತ್ತು ಕೆಟ್ಟದ್ದರ ವಿವೇಚನೆಯೊಂದಿಗೆ ಧನಾತ್ಮಕವಾಗಿ ಬಳಸುವ ಬುದ್ಧಿವಂತಿಕೆ. ಇದು ‘ಯಾಕೆ?’ ಮತ್ತು ‘ಯಾವಾಗ?’ ಎಂಬ ವಿವೇಕವನ್ನು ನೀಡುತ್ತದೆ.
ಇವೆರಡರ ನಡುವಿನ ಸೇತುವೆ (ಸಂಬಂಧ)ದಿಕ್ಕು ಮತ್ತು ವೇಗ: ವಿಜ್ಞಾನವು ಜ್ಞಾನದ ವೇಗವನ್ನು ಹೆಚ್ಚಿಸಿದರೆ, ಸುಜ್ಞಾನವು ಅದಕ್ಕೆ ಸರಿಯಾದ ದಿಕ್ಕನ್ನು ತೋರಿಸುತ್ತದೆ.
ಮಾನವೀಯತೆಯ ರಕ್ಷಣೆ: ವಿಜ್ಞಾನವು ಅಣುಬಾಂಬ್ ತಯಾರಿಸುವ ತಂತ್ರಜ್ಞಾನ ನೀಡಬಹುದು, ಆದರೆ ಅದನ್ನು ಬಳಸದೆ ಜಗತ್ತನ್ನು ರಕ್ಷಿಸಬೇಕೆಂಬ ವಿವೇಕವನ್ನು ಸುಜ್ಞಾನ ನೀಡುತ್ತದೆ.
ಪರಿಸರ ಸಮತೋಲನ: ಕೈಗಾರಿಕಾ ಪ್ರಗತಿ ವಿಜ್ಞಾನದ ಕೊಡುಗೆಯಾದರೆ, ಪರಿಸರವನ್ನು ನಾಶಮಾಡದೆ ಬದುಕಬೇಕೆಂಬುದು ಸುಜ್ಞಾನದ ಸಂದೇಶ.
ಇಂದಿನ ಅಗತ್ಯತೆ ತಂತ್ರಜ್ಞಾನದ ದುರ್ಬಳಕೆ ತಡೆಗಟ್ಟಲು: ಇಂಟರ್ನೆಟ್ ಮತ್ತು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನಗಳು ವಿಜ್ಞಾನದ ಸೃಷ್ಟಿ. ಇವುಗಳನ್ನು ಸಮಾಜದ ಒಳಿತಿಗಾಗಿ ಮಾತ್ರ ಬಳಸುವಂತೆ ಮಾಡುವುದು ಸುಜ್ಞಾನ.
ಮೌಲ್ಯಯುತ ಸಮಾಜ ನಿರ್ಮಾಣ: ವಿಜ್ಞಾನದ ಜೊತೆಗೆ ನೈತಿಕ ಮೌಲ್ಯಗಳು (ಸುಜ್ಞಾನ) ಸೇರಿದಾಗ ಮಾತ್ರ ಸುಸ್ಥಿರ ಸಮಾಜ ನಿರ್ಮಾಣ ಸಾಧ್ಯ.
ಇಂತಹ ವಿಜ್ಞಾನ ಸುಜ್ಞಾನದ ಸೇತುವೆ ಕೊಂಡಿ ಅಪರೂಪದ ಪ್ರಬುದ್ಧ ಪ್ರಾಮಾಣಿಕ ವೈಚಾರಿಕ ನೆಲೆಯಲ್ಲಿ ರೂಪಗೊಂಡ ಆತ್ಮೀಯ ಗೆಳತಿ ರೇಖಾ ಬಿರಾದಾರ.
ಅವರು ಭೌತಶಾಸ್ತ್ರದಲ್ಲಿ ಎಂ ಎಸ್ ಸಿ ಮುಗಿಸಿ ಪ್ರಾಧ್ಯಾಪಕರಾಗಬಹುದಿತ್ತು. ಅಂದಿನ ಬಿ ಎಸ್ ಎನ್ ಎಲ್ ಪರೀಕ್ಷೆ ಕಟ್ಟಿ ಉತ್ತಮ ಅಂಕದೊಂದಿಗೆ ಪಾಸಾಗಿ ಅಧಿಕಾರಿಯಾಗಿ ನೇಮಕಗೊಂಡ ಸರಳ ಸಜ್ಜನಿಕೆಯ ಸಾಕಾರ ಮೂರ್ತಿ ರೇಖಾ. ಅವರು ವಿಜ್ಞಾನದ ಸ್ನಾತಕೋತ್ತರ ಪದವಿ ಪಡೆದರೂ ಸಹಿತ ಅವರ ಸೃಷ್ಟಿ ಪರಿಸರ ಸಂರಕ್ಷಣೆ ಹಾಗೂ ಆಧ್ಯಾತ್ಮಿಕ ಚಿಂತನೆಗೆ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
ಇಬ್ಬರು ಗಂಡು ಮಕ್ಕಳ ಪತಿಯ ಸಂಪ್ರೀತಿಯ ತುಂಬು ಕುಟುಂಬ.ಇವರು ನಮ್ಮ ಅಕ್ಕನ ಅರಿವು ತಂಡದ ಆಜೀವ ಸದಸ್ಯರು, ದತ್ತಿ ದಾಸೋಹಿಗಳು ಮತ್ತು ವಿಜಯಪುರ ಜಿಲ್ಲಾ ಘಟಕದ ಮೂಲಕ ಜರುಗುವ ಮನೆಯಲ್ಲಿ ಅರಿವಿನ ಕಾರ್ಯಕ್ರಮವನ್ನು ಸಕ್ರಿಯವಾಗಿ ನಡೆಸಿಕೊಡುವ ಉದಾತ್ತ ಗುಣವುಳ್ಳ ಸಂಘಟಕಿ. ಅವರ ಸಂಕ್ಷಿಪ್ತ ಪರಿಚಯ ಮಾಡಲು ನನಗೆ ಅತೀವ ಹೆಮ್ಮೆ ಎನಿಸುತ್ತದೆ.
ಶರಣಿ ರೇಖಾ.ಎಂ. ಬಿರಾದಾರ್ ಅವರು ಒಬ್ಬ ಸರಳ ಸಜ್ಜನಿಕೆಯ ಅಧಿಕಾರಿ. ಭಾರತ ಸಂಚಾರ ನಿಗಮದಲ್ಲಿ ಅಧಿಕಾರಿಯಾಗಿ ಸುಮಾರು 25 ವರ್ಷಗಳ ಕಾಲ ಕಾರ್ಯನಿರ್ವಹಿಸಿ ಸ್ವಯಂ ನಿವೃತ್ತಿ ಹೊಂದಿದ ಶರಣೆ.
ಇವರು ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಬಿ ಎಸ್ಸಿ ಐದನೆಯ Rank ನೊಂದಿಗೆ ಪದವಿ ಹಾಗೂ ಎಂ ಎಸ್ ಸಿ ಭೌತಶಾಸ್ತ್ರ ಮೊದಲನೆಯ Rank ಪಡೆದ ಇವರು ಬಂಗಾರ ಪದಕ
ವಿಜೇತೆ.1995ರಲ್ಲಿ ಭಾರತ ಸಂಚಾರ ನಿಗಮದಲ್ಲಿ ಜೆ. ಟಿ ಓ ಎಂದು ವೃತ್ತಿ ಆರಂಭಿಸಿ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಆಗಿ 2020ರಲ್ಲಿ ಸ್ವಯಂ ನಿವೃತ್ತಿ ಹೊಂದಿರುವರು.
ರೇಖಾ ಅವರು ಒಬ್ಬ ಪ್ರಾಮಾಣಿಕ ನಿಷ್ಠಾವಂತ ಹಾಗೂ ಶಿಸ್ತಿನ ಅಧಿಕಾರಿಯಾಗಿದ್ದರು. ವೃತ್ತಿ ಜೀವನದಲ್ಲಿ ಎದುರಾದ ಸಮಸ್ಯೆಗಳನ್ನು ಅವಕಾಶಗಳನ್ನಾಗಿ ಪರಿವರ್ತಿಸಿ ತಮ್ಮ ಸಿಬ್ಬಂದಿಯನ್ನು ಹುರಿದುಂಬಿಸಿ ಕಾರ್ಯನಿರ್ವಹಿಸಿದ ಹೆಗ್ಗಳಿಕೆ ಇವರದು. ಮಹಿಳೆ ಎಂಬುದು ಅವರಿಗೆ ಒಂದು ಪರಿಧಿಯಾಗಲಿಲ್ಲ, ಬದಲಾಗಿ ಅದನ್ನೊಂದು ಶಕ್ತಿಯನ್ನಾಗಿ ಪರಿವರ್ತಿಸಿಕೊಂಡರು. ಅವರ ಇರುವಿಕೆ ಕಾರ್ಯಾಲಯದಲ್ಲಿ ಸಿಬ್ಬಂದಿಗೆ ಧೈರ್ಯ ಸ್ಥೈರ್ಯ ಹಾಗೂ ಆತ್ಮವಿಶ್ವಾಸವನ್ನು ತುಂಬುತ್ತಿತ್ತು.
ಇವರು ಮೇಲಾಧಿಕಾರಿಯಾಗಿ ಎಲ್ಲೂ ತಮ್ಮ ಅಧಿಕಾರವನ್ನು ಚಲಾಯಿಸದೆ ಎಲ್ಲರನ್ನೂ ಒಗ್ಗೂಡಿಸಿ ಪ್ರೀತಿ ವಿಶ್ವಾಸದಿಂದ ಬೆರೆತು ಕಾರ್ಯನಿರ್ವಹಿಸುತ್ತಿದ್ದರು. ವಿಷಯಗಳನ್ನು ವಿಭಿನ್ನವಾಗಿ ನೋಡುವ ದೂರ ದೃಷ್ಟಿ, ನಿರ್ಧಾರಗಳನ್ನು ತೆಗೆದುಕೊಳ್ಳುವ ಧೈರ್ಯ, ಎಲ್ಲರನ್ನೂ ಮೇಲಕ್ಕೆತ್ತುವ ಹೃದಯವಂತಿಕೆ ಇವರ ನಾಯಕತ್ವದ ಗುಣಗಳಾಗಿದ್ದವು. ತಮ್ಮ ಸಿಬ್ಬಂದಿಗೆ ಕಾರ್ಯನಿರ್ವಹಣೆಯನ್ನು ಅಚ್ಚುಕಟ್ಟಾಗಿ ತಿಳಿಸಿ ಕೊಡುವ ರೀತಿ ಸರಳ ಹಾಗೂ ಅನನ್ಯ. ಯಾವುದೇ ತಾಂತ್ರಿಕ ಅಥವಾ ತಂತ್ರಾಂಶದ ತೊಂದರೆಗೆ ಇವರ ಬಳಿ ಪರಿಹಾರ ಇದ್ದೇ ಇರುತ್ತಿತ್ತು. ಹಲವಾರು ಬಾರಿ ತಂತ್ರಾಂಶ ಬದಲಾದರೂ ದೈನಂದಿನ ಕೆಲಸಕ್ಕೆ ಯಾವುದೇ ತೊಂದರೆಯಾಗದ ರೀತಿ ಕಾರ್ಯನಿರ್ವಹಿಸುತ್ತಿದ್ದರು.
ರೇಖಾ ಅವರು ತಮ್ಮ ಉನ್ನತ ಅಧಿಕಾರಿಗಳೊಂದಿಗೆ ಗೌರವಯುತವಾಗಿ ಹಾಗೂ ಸಹೋದ್ಯೋಗಿಗಳೊಡನೆ ಸಹನೆ ಸಹಕಾರದಿಂದ ಕಾರ್ಯನಿರ್ವಹಿಸಿ ಪ್ರಶಂಸೆಗೆ ಪಾತ್ರರಾಗಿದ್ದರು. ಇವರ ತಂದೆ ಭೀಮಪ್ಪ ಕೊಣ್ಣಾವರ ಹಾಗೂ ತಾಯಿ ಶಾಂತಾ ಕೊಣ್ಣಾವರ ಸಾ-ಕುರ್ತಕೋಟಿ- ಗದಗ ಜಿಲ್ಲೆಯವರು. ತಂದೆ ಜಂಟಿ ನಿರ್ದೇಶಕರಾಗಿ ಸಹಕಾರ ಸಂಘಗಳ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದರು. ತಾಯಿ ಗೃಹಿಣಿ, ಆಧ್ಯಾತ್ಮಿಕ ಚಿಂತನೆ ಶರಣ-ತತ್ವ ದರ್ಶನ ಮತ್ತು ದಾಸೋಹ ಸೇವೆ ಇವರ ಜೀವನದ ಅವಿಭಾಜ್ಯ ಅಂಗ. ಒಟ್ಟು ಐದು ಜನ ಮಕ್ಕಳು. ಮೂವರು ಹೆಣ್ಣು ಮಕ್ಕಳು ಹಾಗೂ ಎರಡು ಗಂಡು ಮಕ್ಕಳು.ಎಲ್ಲರೂ ಉನ್ನತ ಶಿಕ್ಷಣ ಹೊಂದಿ ಪ್ರತಿಷ್ಠಿತ ಹುದ್ದೆಯಲ್ಲಿರುವರು.
ಇವರ ಪತಿ ಮಹಾಂತೇಶ ಬಿರಾದಾರ್ ಅವರು ಬಿ ಎಲ್ ಡಿ ಇ ಎ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಉಪನ್ಯಾಸಕರು. ಇವರಿಗೆ ಇಬ್ಬರು ಗಂಡು ಮಕ್ಕಳು ಹಿರಿಯ ಮಗ ಡಾ. ಚಿನ್ಮಯ ಬಿರಾದಾರ ಎಂ ಎಸ್ (ಜನರಲ್ ಸರ್ಜರಿ) ಮತ್ತು ಕಿರಿಯ ಮಗ ಪ್ರಣವ ಬಿರಾದಾರ ಎಂ.ಬಿ.ಎ ಮಾಡುತ್ತಿದ್ದಾನೆ.
ಶರಣ ಸಂಸ್ಕೃತಿಯಲ್ಲಿ ಅಗಾಧ ಅಭಿರುಚಿಯುಳ್ಳ ಇವರು ಬಸವ ತಿಳಿವಳಿಕೆ ಮತ್ತು ಸಂಶೋಧನಾ ಕೇಂದ್ರ ಪುಣೆ ಅಡಿಯಲ್ಲಿ ಆಯೋಜಿತವಾದ ಮನೆಯಲ್ಲಿ ಅರಿವಿನ ಮನೆ ಮತ್ತು ಬಸವ ಜಯಂತಿ ಕಾರ್ಯಕ್ರಮಗಳಲ್ಲಿ ಸೇವೆ ಸಲ್ಲಿಸುತ್ತಿರುವರು. ಬಸವ ಪಥವನ್ನು ಆಯ್ಕೆ ಮಾಡಿಕೊಂಡಿರುವ ಇವರು ಶರಣರ ವಚನ ಅಧ್ಯಯನ ಪಾಲನೆ ಮತ್ತು ಪ್ರಸಾರದಲ್ಲಿ ಆಸಕ್ತಿ ಹೊಂದಿರುವರು. ಬಸವ ಸೇವೆಯಲ್ಲಿ ಜೀವನದ ಸಾರ್ಥಕತೆಯನ್ನು ಕಂಡುಕೊಳ್ಳಲು ಬಯಸಿರುವರು.ಇವರು ಪತಂಜಲಿ ಯೋಗ ಸಮಿತಿಯಲ್ಲಿ ಯೋಗ ಟೀಚರ್ ಟ್ರೈನಿಂಗ್ ಪಡೆದಿದ್ದಾರೆ ಮತ್ತು IGNOU ದಿಂದ ಡಿಪ್ಲೋಮಾ ಇನ್ ಮ್ಯಾನೇಜ್ಮೆಂಟ್ ಮಾಡಿದ್ದಾರೆ.
ಒಟ್ಟಿನಲ್ಲಿ ತಾಯಿಯಾಗಿ, ಸೊಸೆಯಾಗಿ, ಮಡದಿಯಾಗಿ, ಅಧಿಕಾರಿಯಾಗಿ,ಸ್ನೇಹಿತೆ ಯಾಗಿ, ಎಲ್ಲರ ಹಿತೈಷಿಯಾಗಿ ಎಲ್ಲರೊಂದಿಗೆ ಸಹೃದಯಿಯಾಗಿ ಬೆರೆ ಯುವ ಸಂಸ್ಕಾರವಂತ ಶರಣೆ ರೇಖಾ ಬಿರಾದಾರ ಅವರು.
ಸುಧಾ ಪಾಟೀಲ
ವಿಶ್ವಸ್ಥರು
ಬಸವ ತಿಳಿವಳಿಕೆ ಮತ್ತು ಸಂಶೋಧನಾ ಕೇಂದ್ರ -ಪುಣೆ
ಬೆಳಗಾವಿ