Homeಲೇಖನಗುರು ಸ್ಮರಣೆ :  ಗುರುವಿಲ್ಲದಾ ಜೀವನ ಸೂತ್ರವಿಲ್ಲದ ಗಾಳಿಪಟ

ಗುರು ಸ್ಮರಣೆ :  ಗುರುವಿಲ್ಲದಾ ಜೀವನ ಸೂತ್ರವಿಲ್ಲದ ಗಾಳಿಪಟ

Published on

ಗುರು ಪದವೇ ವಿಶೇಷ. ನಿಷ್ಠೆಯುಳ್ಳ ನಿಜವಾದ ಗುರುಗಳು ತರಗತಿಯ ಹೊಸ್ತಿಲನ್ನು ತುಳಿದಾಗ ಪ್ರತಿದಿನವೂ ಅವರಿಗೆ ಒಂದು ನವೀನ ಪ್ರಾತಃಕಾಲ.ಪುಸ್ತಕದ ಮೌನ ಪುಟಗಳು ತೆರೆದುಕೊಂಡಂತೆ, ಅವರಲ್ಲಿ ಜಿಜ್ಞಾಸೆಯ ಮೊಗ್ಗುಗಳು ಅರಳುತ್ತವೆ; ಪ್ರಶ್ನೆಗಳ ಹಸಿರು ಕುಡಿಗಳು ಚಿಗುರಿ, ಉತ್ತರಗಳ ಅನಂತ ಹುಡುಕಾಟ ಆರಂಭವಾಗುತ್ತದೆ. ಆದರೆ, ಈ ಶೋಧನೆಯ ನೌಕೆಗೆ ದಿಕ್ಸೂಚಿಯಾಗಿ, ಭವಸಾಗರ ದಾಟಿಸುವ ನಾವಿಕರೇ ನಮ್ಯ ಗುರುಗಳು..

ಅವರ ಬೋಧನೆ ಬರೀ ಪಠ್ಯದ ಚೌಕಟ್ಟಿಗೆ ಬಂಧಿಯಾಗದೆ, ವಿದ್ಯಾರ್ಥಿಯ ಚಿಂತನೆಯ ಚೇತನವನ್ನು ಜಾಗೃತಗೊಳಿಸಿ, ವ್ಯಕ್ತಿತ್ವದ ಭವ್ಯ ಗೋಪುರವನ್ನು ಕಟ್ಟಿ, ಭವಿಷ್ಯದ ದಾರಿಗೆ ಅಳಿಸಲಾಗದ ಬೆಳಕಿನ ಗುರುತು ಮೂಡಿಸುತ್ತದೆ. ನಮ್ಮ ಗುರುಗಳು ಅಂದು ಎಲ್ಲಾ ವಿಷಯದಲ್ಲಿ ಪ್ರಾವಿಣ್ಯತೆಯುಳ್ಳವರಾಗಿದ್ದರು. ಅವರು
ಕೇವಲ ಪಠ್ಯದ ಗಡಿಗೆ ಸೀಮಿತವಾಗದೆ, ವಿಷಯದ ಹಿನ್ನೆಲೆ ಹಾಗೂ ಬದುಕಿನ ನಿಗೂಢ ಸಂಬಂಧಗಳನ್ನು ಬಿಡಿಸಿಡುತ್ತಾ ಜ್ಞಾನದ ವಿಶಾಲ ದಿಗಂತವನ್ನು ನಮಗೆ ಜೀವನದ ಘಟನೆಗಳ ಮೂಲಕ ಪರಿಚಯಿಸುತ್ತಿದ್ದರು. ನಮಗವರು
ತರಗತಿ ಜಿಜ್ಞಾಸೆಯ ಬೆಳಕಾಗಿ ಹರಿಯುವ ಮುಕ್ತ ಕಿಟಕಿಯಂತೆ ತಿಳಿದುದನ್ನೇ ಪುನರಾವರ್ತಿಸದೆ, “ಏಕೆ?” ಮತ್ತು “ಹೇಗೆ?” ಎಂಬ ಪ್ರಜ್ಞೆಯ ಬೀಜ ಬಿತ್ತುವ ಮೂಲಕ ಪ್ರಶ್ನಿಸುವ ಮನಸ್ಸನ್ನು ಜಾಗೃತಗೊಳಿಸುತ್ತಿದ್ದರು.

ಅವರು ಶೈಕ್ಷಣಿಕ ಶಿಸ್ತಿನ ಕಲ್ಪವೃಕ್ಷವಾಗಿದ್ದು, ಸಮಯಪ್ರಜ್ಞೆ ಮತ್ತು ಕರ್ತವ್ಯದ ಗಾಂಭೀರ್ಯವನ್ನು ಬೋಧಿಸುತ್ತಾ ಶಿಕ್ಷಣವೆಂದರೆ ಬರಿ ಅಂಕಗಳಿಕೆಯಲ್ಲ, ಜವಾಬ್ದಾರಿಯುತ ಬದುಕಿನ ಸಿದ್ಧತೆ ಎಂಬುದನ್ನು ತಮ್ಮ ನಡೆ ನುಡಿಗಳ ಮೂಲಕ
ತರಗತಿಯನ್ನು ಉತ್ಸಾಹದ ಚಿಲುಮೆಯಾಗಿಸಿ, ವಿದ್ಯಾರ್ಥಿಯ ಪ್ರತಿಯೊಂದು ಪ್ರಶ್ನೆಗೂ ತಾಯ್ತನದ ಸ್ಪಂದನೆ ನೀಡುತ್ತಾ ಕಲಿಕೆಯನ್ನು ರಸನಿಮಿಷಗಳಾಗಿ ಪರಿವರ್ತಿಸಿದ್ದು ಇಂದಿಗೂ ಮರೆಯಲಾಗದ ಅನುಭೂತಿ..

ಅವರು ತಮ್ಮ ವ್ಯಕ್ತಿತ್ವಕ್ಕೆ ಹಾಗೂ ಅನುಭವದ ಗಾಂಭೀರ್ಯಕ್ಕೆ ಮತ್ತು ಸರಳತೆಯ ಸೌರಭಕ್ಕೆ ಹೆಸರಾಗಿದ್ದರು. ನಮಗದು ಅವರ ಬೋಧನೆಯಲ್ಲಿ ವಿಷಯದ ಅಂತರಂಗದ ಒಳಹರಿವನ್ನು ದರ್ಶಿಸುವ ದೃಷ್ಟಿಯನ್ನು ಕಲಿಸಿದೆ ಎಂದರೆ ಅತಿಶಯೋಕ್ತಿಯಾಗದು. ಇಂದು ನಾವು ನಮ್ಮ ಅನುಭವವನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಹೊಣೆಗಾರಿಕೆಯಿಂದ ತರಗತಿಯ ಪ್ರತಿಯೊಂದು ಕ್ಷಣವನ್ನು ಭವಿಷ್ಯದ ಅಡಿಪಾಯವಾಗಿಸಬೇಕು.

ಎಷ್ಟೇ ಸಂಕೀರ್ಣವಾದ ವಿಷಯವನ್ನಾದರೂ ಮಗುವಿನ ಮಟ್ಟಕ್ಕೆ ಇಳಿಸಿ, ಆತ್ಮವಿಶ್ವಾಸದ ಬೆಳಕು ಚೆಲ್ಲುತ್ತಾ ಭಯವಿಲ್ಲದೆ ಪ್ರಶ್ನೆ ಕೇಳುವ ಮುಕ್ತ ವಾತಾವರಣವನ್ನು ಕಲ್ಪಿಸುತ್ತ ಇಂದಿನ ಪ್ರಸಕ್ತ ಪರಿಸ್ಥಿತಿ ಅರಿತು ವಿಷಯ ಬೋಧನೆ ಮಾಡಿದಾಗ ನಮ್ಮ ಬದುಕು ಸಾರ್ಥಕ ಅನಿಸುವುದು. ನಾವು ನಮ್ಮ ದೈನಂದಿನ ಜೀವನವನ್ನು ಅರಿತು ಬದಲಾವಣೆ ಹೊಂದುತ್ತಿರುವ ಶೖಕ್ಷಣಿಕ ವಿಚಾರಗಳನ್ನು ಹಂತ ಹಂತವಾಗಿ ವಿಷಯವನ್ನು ಕಟ್ಟಿ, ಜ್ಞಾನದ ಭದ್ರ ಬುನಾದಿಯನ್ನು ನಿರ್ಮಿಸುವ ಅವಶ್ಯಕತೆ ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿದೆ. ಇವರೊಂದಿಗೆ ಕಾಲೇಜಿನ ಸಮಸ್ತ ಉಪನ್ಯಾಸಕ ವೃಂದದ ಕೊಡುಗೆ ಕೂಡ ಶೈಕ್ಷಣಿಕ ವಾತಾವರಣವನ್ನು ಸಮೃದ್ಧಗೊಳಿಸಬೇಕು….

ಶಿಕ್ಷಕರಲ್ಲಿ ಇಂದು ಒಬ್ಬರಲ್ಲಿ ಅನುಭವದ ಆಳವಿದ್ದರೆ, ಇನ್ನೊಬ್ಬರಲ್ಲಿ ನವ್ಯ ಚಿಂತನೆಯ ಚೈತನ್ಯವಿದ್ದು ವಿಷಯ ಬೋಧನೆ ಯಲ್ಲಿ ಒಬ್ಬೊಬ್ಬರು ಒಂದೊಂದು ವಿಷಯದ ಸೂಕ್ಷ್ಮತೆಯನ್ನು ಬಿಡಿಸಿಟ್ಟರೆ, ಮತ್ತೊಬ್ಬರು ಚರ್ಚೆಯ ಮೂಲಕ ವಿಚಾರದ ದಿಗಂತವನ್ನು ವಿಸ್ತರಿಸುತ್ತಾ ವಿಷಯ ಶಿಕ್ಷಕರು ಇಂದು ಬದಲಾದ ಶಿಕ್ಷಣ ವ್ಯವಸ್ಥೆಯ ಭಾಗವಾಗಿದ್ದಾರೆ…

ಇಂತಹ ವಿಭಿನ್ನ ಬೋಧನಾ ಶೈಲಿಗಳು ಒಂದೇ ಸೂರಿನಡಿ ಸಂಗಮಿಸುತ್ತಿದೆ. ತರಗತಿಯು ವಿದ್ಯಾರ್ಥಿಗೆ ಬಹುಮುಖ ಕಲಿಕೆಯ ರಸದೌತಣವಾಗುತ್ತಿದೆ. ಶಿಕ್ಷಕರ ದಿನಾಚರಣೆ ಎಂದರೆ ಬರೀ ಒಂದು ದಿನದ ಅಭಿನಂದನಾ ಸಮಾರಂಭವಲ್ಲ. ಗುರುವಿನ ಮಾತೊಂದು, ಅವರು ತೋರಿದ ಸಣ್ಣ ದಾರಿಯೊಂದು ಅಥವಾ ನೀಡಿದ ಒಂದು ಅವಕಾಶ, ವಿದ್ಯಾರ್ಥಿಯ ಬದುಕಿನ ದಿಸೆಯನ್ನೇ ಬದಲಿಸಿರಬಹುದು. ಶಿಕ್ಷಕನೆಂಬ ಶಿಲ್ಪಿ ಕೆತ್ತಿದ ಮೂರ್ತಿಯ ಸೌಂದರ್ಯ ತಕ್ಷಣಕ್ಕೆ ಕಾಣದಿರಬಹುದು; ಆದರೆ ವರ್ಷಗಳ ನಂತರ ಅದು ಲೋಕಮೆಚ್ಚುವ ಸಾಧನೆಯಾಗಿ ಕಂಗೊಳಿಸುತ್ತದೆ

ಉತ್ತಮ ಶಿಕ್ಷಕನ ಬೋಧನೆ ತರಗತಿ ಮುಗಿದೊಡನೆ ಮುಗಿಯುವುದಿಲ್ಲ, ಅದು ವಿದ್ಯಾರ್ಥಿಯ ಚಿಂತನೆಯೊಳಗೆ ಆಜೀವನ ಧ್ವನಿಸುತ್ತಿರುತ್ತದೆ..

ಗುರುರ್ಬ್ರಹ್ಮಾ ಗುರುರ್ವಿಷ್ಣುಃ ಗುರುರ್ದೇವೋ ಮಹೇಶ್ವರಃ ಗುರುಃ ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರವೇ ನಮಃ.

ಗುರುವು ಸೃಷ್ಟಿಕರ್ತನಾದ ಬ್ರಹ್ಮನಂತೆ ಶಿಷ್ಯನಿಗೆ ಹೊಸ ಜೀವನ ಹಾಗೂ ಜ್ಞಾನವನ್ನು ನೀಡುತ್ತಾನೆ.ಗುರುವು ಪಾಲನಕರ್ತನಾದ ವಿಷ್ಣುವಿನಂತೆ ಶಿಷ್ಯನನ್ನು ಕಾಪಾಡುತ್ತಾನೆ ಮತ್ತು ಮಾರ್ಗದರ್ಶನ ಮಾಡುತ್ತಾನೆ.ಗುರುದೇವೋ ಮಹೇಶ್ವರಃ: ಗುರುವು ಲಯಕರ್ತನಾದ ಶಿವನಂತೆ (ಮಹೇಶ್ವರ) ವಿದ್ಯಾರ್ಥಿಗಳ ಅಜ್ಞಾನವನ್ನು ನಾಶ ಮಾಡುತ್ತಾನೆ. ಗುರುಸಾಕ್ಷಾತ್ ಪರಬ್ರಹ್ಮ: ಗುರುವು ಸಾಕ್ಷಾತ್ ಪರಬ್ರಹ್ಮ ಸ್ವರೂಪನಾಗಿದ್ದಾನೆ.ತಸ್ಮೈ ಶ್ರೀ ಗುರವೇ ನಮಃ: ಅಂತಹ ಶ್ರೇಷ್ಠ ಗುರುಗಳಿಗೆ ನನ್ನ ಅನಂತಾನಂತ ನಮಸ್ಕಾರಗಳು..ಪ್ರಶಸ್ತಿ ಪಡೆದೂ/ ಪಡೆಯದೆಯೂ ತಮ್ಮ ಪಾಡಿಗೆ ತಾವು ಆತ್ಮ ತೃಪ್ತಿಯಿಂದ ಶಿಕ್ಷಣ ನೀಡುತ್ತಿರುವ ಸಕಲ ಗುರುಬಳಗಕ್ಕೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು.

Latest articles

More like this