ಒಬ್ಬ ಹಣ್ಣು ಮಾರಾಟಗಾರ ಮಾರುಕಟ್ಟೆಯಲ್ಲಿ ಹಣ್ಣುಗಳನ್ನು ಮಾರಾಟ ಮಾಡುತ್ತಿದ್ದ. ಅವನು ‘ತಾಜಾ ಹಣ್ಣುಗಳನ್ನು ಇಲ್ಲಿ ಮಾರಾಟ ಮಾಡಲಾಗುತ್ತದೆ.’ ಎಂಬ ಬೋರ್ಡ್ ಹಾಕಿದನು. ಕೊಳ್ಳಲು ಬಂದ ವ್ಯಕ್ತಿಯು ಅವನಿಗೆ ಸಲಹೆ ನೀಡುತ್ತಾನೆ. ನೀವು ‘ಇಲ್ಲಿ’ ಹಾಕುವ ಅಗತ್ಯವಿಲ್ಲ, ನೀವು ಈಗಾಗಲೇ ಮಾರುಕಟ್ಟೆಯಲ್ಲಿ ಇದ್ದೀರಿ, ಆದ್ದರಿಂದ ಅವನು ಇಲ್ಲಿ ತೆಗೆದನು. ಈಗ ಅವನು ‘ತಾಜಾ ಹಣ್ಣುಗಳನ್ನು ಮಾರಾಟ ಮಾಡಲಾಗುತ್ತದೆ.’ ಎಂಬ ಬೋರ್ಡ್ ಹಾಕಿದನು. ನಂತರ ಮತ್ತೊಬ್ಬ ಬಂದನು. ನೀವು ತಾಜಾ ಹಾಕುವ ಅಗತ್ಯವಿಲ್ಲ. ನೀವು ಯಾವಾಗಲೂ ತಾಜಾ ಹಣ್ಣುಗಳನ್ನು ಮಾರಾಟ ಮಾಡುತ್ತೀರಿ. ಎಂದು ಹೇಳುತ್ತಾನೆ. ಈಗ ಅವನು ‘ಹಣ್ಣುಗಳನ್ನು ಮಾರಾಟ ಮಾಡಲಾಗುತ್ತದೆ.’ ಎಂದು ಹಾಕಿದನು. ನೀವು ಹಣ್ಣುಗಳನ್ನು ಹಾಕುವ ಅಗತ್ಯವಿಲ್ಲ. ನೀವು ಹಣ್ಣುಗಳನ್ನೇ ಮಾರಾಟ ಮಾಡುತ್ತಿದ್ದೀರಿ ಎಂದು ಹೇಳುತ್ತಾನೆ. ಆದ್ದರಿಂದ ಅವನು ಹಣ್ಣುಗಳನ್ನು ತೆಗೆದನು. ಈಗ ಅವನು ಮಾರಾಟ ಮಾಡಲಾಗುತ್ತದೆ ಎಂಬ ಬೊರ್ಡ್ ಹಾಕಿದ. ಮತ್ತೊಬ್ಬ ವ್ಯಕ್ತಿ ಬಂದು ಇಲ್ಲಿ ನೀವು ಮಾರಾಟ ಮಾಡಲಾಗುತ್ತದೆ ಎಂಬುದನ್ನು ಹಾಕುವ ಅಗತ್ಯವಿಲ್ಲ. ಏಕೆಂದರೆ ಮಾರಾಟ ಮಾಡಲೆಂದೇ ಇಲ್ಲಿದ್ದೀರಿ. ಕೊನೆಗೆ ಅವನು ಯಾವುದೇ ಬೋರ್ಡ್ ಇಲ್ಲದೇ ಹಣ್ಣುಗಳನ್ನು ಮಾರಾಟ ಮಾಡಹತ್ತಿದ. ನಂತರ ಅವನು ಗಮನಿಸಿದನು. ಬಹಳಷ್ಟು ಗ್ರಾಹಕರು ಇನ್ನೊಬ್ಬ ಮಾರಾಟಗಾರನ ಬಳಿ ಹೋಗುತ್ತಿದ್ದಾರೆ. ಏಕೆಂದರೆ ಅಲ್ಲಿ ‘ತಾಜಾ ಹಣ್ಣುಗಳನ್ನು ಇಲ್ಲಿ ಮಾರಾಟ ಮಾಡಲಾಗುತ್ತದೆ’ ಎಂದು ಬರೆದಿದ್ದರು.
ಈ ಕಥೆಯಿಂದ ಕಲಿತ ಪಾಠವೇನೆಂದು ತುಸು ತಲೆ ಕೆರೆದುಕೊಂಡರೆ, ‘ಪ್ರತಿಯೊಬ್ಬರೂ ತಮ್ಮ ಆಲೋಚನೆ ಪ್ರಕಾರ ಸಲಹೆ ನೀಡುತ್ತಾರೆ. ನೀವು ಅಗತ್ಯ ಮತ್ತು ಸೂಕ್ತವಾದುದನ್ನು ಮಾತ್ರ ಕೇಳಬೇಕು. ಜೀವನದಲ್ಲಿ ಮುಂದುವರಿಯಲು ಹೆದರುವ, ತಾವು ಬಯಸಿದ್ದನ್ನು ಸಾಧಿಸಲು ಸಾಧ್ಯವಾಗದ ಎಷ್ಟೋ ಜನರು ನಮಗೆ ಕಾಣ ಸಿಗುತ್ತಾರೆ. ಜನರು ಏನು ಹೇಳುತ್ತಾರೆಂಬ ರೋಗಕ್ಕೆ ಬಲಿಯಾಗದೇ ಇರಲು ಏನು ಮಾಡಬೇಕೆಂದು ತಿಳಿಯೋಣ ಬನ್ನಿ.
ಸೂಕ್ತವಾದದ್ದನ್ನು ಮಾಡಿ
ವಿರಾಟ್ ಕೊಹ್ಲಿ ತನ್ನ ತಂದೆಯ ಮೃತ ದೇಹವು ಮನೆಯಲ್ಲಿದ್ದಾಗ ದಿಲ್ಲಿಯ ಫಿರೋಜ ಷಾ ಕೋಟ್ಲಾ ಮೈದಾನದಲ್ಲಿ ದಿಲ್ಲಿ ಮತ್ತು ಕರ್ನಾಟಕದ ನಡುವೆ ಇದ್ದ ರಣಜಿ ಮ್ಯಾಚ್‌ನಲ್ಲಿ ರನ್ ಗಳಿಸುತ್ತಿದ್ದಾನೆ. ಜನರು ಏನು ಅನ್ನುತ್ತಾರೆ ಎಂಬುದರ ಬಗ್ಗೆ ತಲೆ ಕೆಡಿಸಿಕೊಳ್ಳದೇ ಕ್ರಿಕೆಟ್ ಆಡುತ್ತಿದ್ದಾನೆ. ಏಕೆಂದರೆ ಟೀಂಗೆ ಅವನು ಆಡುವುದು ಅವಶ್ಯಕತೆಯಿದೆ. ಜನರ ಬಾಯಿಗೆ ಸಿಕ್ಕು ಒಡೆದು ಹೋಗುವಷ್ಟು ನಮ್ಮ ಗುರಿ ದುರ್ಬಲವಾಗಿರಬಾರದು ಎನ್ನುವುದನ್ನು ಸಾಬೀತು ಪಡಿಸಿದನು ವಿರಾಟ ಕೋಹ್ಲಿ. ಜನರು ಏನೇ ಅಂದುಕೊಳ್ಳಲಿ ನಿಮ್ಮ ಕುಟುಂಬಕ್ಕೆ, ಆರೋಗ್ಯಕ್ಕೆ, ನಿಮಗೆ ಸೂಕ್ತವಾದುದನ್ನೇ ಮಾಡಿ.
ಗಮನ ನೀಡಿ
ಜಗತ್ತಿನಲ್ಲಿ ಉನ್ನತ ಮಟ್ಟ ತಲುಪಿದವರ ವಿಶೇಷ ಗುಣವೆಂದರೆ ಅವರೆಂದೂ ಜನರು ಏನೆಂದುಕೊಳ್ಳುತ್ತಾರೋ ಅಂತ ತಲೆ ಕೆಡಿಸಿಕೊಳ್ಳದೇ ಇರುವುದು. ‘ಜನರು ಏನನ್ನು ಹೇಳಲು ಬಯಸುತ್ತಾರೋ ಅವರು ಬಯಸಿದ ರೀತಿಯಲ್ಲಿ ಹೇಳುತ್ತಾರೆ.’ ಇದು ಇಂಗ್ಲೀಷ್ ಬರಹಗಾರ ನಿಗೆಲ್ ರೀಸ್ ಹೇಳಿದ ಮಾತು. ಜನರು ಏನು ಹೇಳುತ್ತಾರೆ ಎಂಬುದು ನಮ್ಮಲ್ಲಿ ಅನೇಕರಿಗೆ ಮುಖ್ಯ ಪ್ರಶ್ನೆಯಾಗಿರುತ್ತದೆ. ’ಜನರು ಏನನ್ನಾದರೂ ಹೇಳಲೇಬೇಕು, ಏನನ್ನಾದರೂ ಹೇಳುವುದೇ ಅವರ ಕೆಲಸ.’ ಜಗತ್ತಿನಲ್ಲಿ ಪ್ರತಿಯೊಬ್ಬರು ತಮ್ಮದೇ ಆದ ಮನಸ್ಸು ಮತ್ತು ಆಲೋಚನಾ ಪ್ರಕ್ರಿಯೆಯನ್ನು ಹೊಂದಿರುವುದರಿಂದ, ಅವರು ತಮ್ಮ ಅನುಭವಗಳ ಪ್ರಕಾರ ಏನನ್ನಾದರೂ ಹೇಳುತ್ತಾರೆ. ನಾವು ಅವರನ್ನು ನಿಯಂತ್ರಿಸಲು ಸಾಧ್ಯವಿಲ್ಲ. ನಮ್ಮ ಕೆಲಸ, ಆಲೋಚನೆ, ಮತ್ತು ನಮ್ಮ ಕೈಯಲ್ಲಿರುವ ವಿಷಯಗಳನ್ನು ನಾವು ನಿಯಂತ್ರಿಸಬಹುದು. ಹಾಗಾಗಿ ನಾವು ನಿಯಂತ್ರಿಸುವ ವಿಷಯಗಳ ಬಗ್ಗೆ ಗಮನ ಕೊಡಬೇಕು ಹೊರತು ಜನರ ಕಡೆ ಅಲ್ಲ.
ಚಿಂತೆ ಬಿಡಿ
ಜನರು ಇತರರ ಬಗ್ಗೆ ಮಾತನಾಡಲು ಇಷ್ಟಪಡುತ್ತಾರೆ. ಸರಿ ತಪ್ಪು ಗೊತ್ತಿಲ್ಲದೇ, ಏನೋ ತಮಗನಿಸಿದ್ದನ್ನು ಮಾತನಾಡುತ್ತಾರೆ. ಸ್ವಲ್ಪ ಸಮಯದ ನಂತರ ತಮ್ಮ ಸ್ವಂತ ಜೀವನದಲ್ಲಿ ಕಾರ್ಯನಿರತರಾಗುತ್ತಾರೆ. ಆಮೇಲೆ ಅವರು ಮರೆತುಬಿಡುತ್ತಾರೆ. ಅವರಿಗೆ ಹೆಚ್ಚು ಸಮಯ ನೆನಪಿರುವುದಿಲ್ಲ. ಜನರು ನಮ್ಮಂತೆಯೇ ಮನುಷ್ಯರು, ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಏರಿಳಿತಗಳನ್ನು ಹೊಂದಿರುತ್ತಾರೆ. ಒಂದು ಆಕರ್ಷಕ ಉದಾಹರಣೆ ಹೇಳಬೇಕೆಂದರೆ ಒಂದು ಗ್ರೂಪ್ ಫೋಟೋ ನೋಡುವಾಗ ಜನರು ಬೇರೆಯವರನ್ನು ನೋಡುವ ಬದಲು ತಮ್ಮ ಚಿತ್ರದ ಮೇಲೆ ಕೇಂದ್ರೀಕರಿಸುತ್ತಾರೆ. ಹಾಗೆಯೇ ನಾವೂ ಕೂಡ. ಅಮೇರಿಕನ್ ಹಾಸ್ಯ ನಟ ಹೇಳಿದಂತೆ ‘ ದ ಪಬ್ಲಿಕ್ ಹ್ಯಾಸ್ ಅ ಶಾರ್ಟ್ ಮೆಮೊರಿ.’ ಆದ್ದರಿಂದ ಚಿಂತೆ ಬಿಡಿ.
ಆಲಿಸಬೇಕು
ಅಷ್ಟಕ್ಕೂ ನಾವು ಜನರು ಏನು ಹೇಳುತ್ತಾರೆಂದು ಏಕೆ ಹೆಚ್ಚು ಗಮನಹರಿಸುತ್ತೇವೆ? ಏಕೆಂದರೆ ನಾವು ಎಲ್ಲರ ಮುಂದೆ ನಮ್ಮನ್ನು ಪರಿಪೂರ್ಣವೆಂದು ತೋರಿಸಲು ಬಯಸುತ್ತೇವೆ. ಇಲ್ಲಿ ಯಾರೂ ಪರಿಪೂರ್ಣರಲ್ಲ. ಯಶಸ್ವಿ ಜನರು ತಮ್ಮ ಜೀವನದಲ್ಲಿ ಅನೇಕ ವೈಫಲ್ಯಗಳನ್ನು ಮತ್ತು ಸಮಸ್ಯೆಗಳನ್ನು ಎದುರಿಸಿರುತ್ತಾರೆ. ನಾವು ಆ ಗುಪ್ತ ಬದಿಯನ್ನು ನೋಡುವದೇ ಇಲ್ಲ. ನಮ್ಮ ಮುಂದೆ ಏನು ಕಾಣುತ್ತಿದೆ ಅದನ್ನು ಮಾತ್ರ ನೋಡುತ್ತೇವೆ. ನಮ್ಮ ಹೃದಯವನ್ನು ಆಲಿಸಬೇಕು. ಮತ್ತು ನಮ್ಮನ್ನು ನಾವು ನಂಬಬೇಕು
ಆರಂಭಿಕ ಹಂತ
ನಾವು ನಮ್ಮ ಅತ್ಯುತ್ತಮ ಆವೃತ್ತಿಯಾಗಲು ನಮ್ಮ ಪ್ರತಿಭೆಯನ್ನು ಅತ್ಯುನ್ನತ ಮಟ್ಟದಲ್ಲಿ ಪ್ರದರ್ಶನ ನೀಡಲು ಬಯಸಿದರೆ, ಜನರ ಅಭಿಪ್ರಾಯಗಳು ನಮ್ಮನ್ನು ತಡಹಿಡಿಯುತ್ತಿರಬಹುದು. ಇತರ ಜನರ ಅಭಿಪ್ರಾಯಗಳ ಭಯವನ್ನು ಹೋಗಲಾಡಿಸುವುದು ಒಂದು ದೊಡ್ಡ ಸವಾಲಿನಂತೆ ಕಾಣುತ್ತದೆ. ಆರಂಭಿಕ ಹಂತದಲ್ಲಿ ಜನರು ತಮ್ಮ ಆಲೋಚನೆ ಆಧಾರದ ಮೇಲೆ ನಿಮ್ಮನ್ನು ನಿರ್ಣಯಿಸುತ್ತಾರೆ. ಕಾಲಕ್ರಮೇಣ ನೀವು ಏನು ಮಾಡುತ್ತಿದ್ದೀರಿ ಎಂದು ಅವರಿಗೆ ತಿಳಿಯುತ್ತದೆ. ಆಗ ತಾವೇ ನಿಮ್ಮನ್ನು ಮೆಚ್ಚುತ್ತಾರೆ.
ಮುಂದಿನ ಪೀಳಿಗೆ
ಸಾರ್ವಜನಿಕವಾಗಿ ಮಾತನಾಡಲು ಎದ್ದು ನಿಲ್ಲುವ ಮೊದಲು, ದೊಡ್ಡ ಸಭೆಯಲ್ಲಿ ನಮ್ಮ ಕೈ ಎತ್ತುವ ಮೊದಲು, ಅಥವಾ ಅಪರಿಚಿತರ ಕೋಣೆಗೆ ಹೋಗುವ ಮೊದಲು ನಾವು ಸಣ್ಣವರಾಗಿ, ಭಯಭೀತರಾಗಿ ಉದ್ವಿಗ್ನರಾಗಿ ಭಾವಿಸಲು ಕಾರಣವೆಂದರೆ ನಾವು ಸಾಮಾಜಿಕ ಅಸಮ್ಮತಿಯ ಬಗ್ಗೆ ಚಿಂತಿತರಾಗಿದ್ದೇವೆ. ಅಂದರೆ ಜನರ ಅಭಿಪ್ರಾಯಗಳ ಬಗ್ಗೆ ನಮಗಿರುವ ಭಯ ಅನುತ್ಪಾದಕ ಗೀಳಾಗಿ ಮಾರ್ಪಟ್ಟಿದೆ. ಅದರ ನಕಾರಾತ್ಮಕ ಪರಿಣಾಮಗಳು ಕಾರ್ಯಕ್ಷಮತೆಯನ್ನು ಮೀರಿ ವಿಸ್ತರಿಸುತ್ತವೆ. ಒಟ್ಟಾರೆ ಜನ ಏನು ಹೇಳುತ್ತಾರೆ ಎಂದು ನನಗೆ ಚಿಂತೆ ಇಲ್ಲ ಎಂದು ನೀವು ಏನು ಬೇಕಾದರೂ ಮಾಡಲೂ ಸಾಧ್ಯವಿಲ್ಲ. ನಮ್ಮ ಸಮಾಜ ಮತ್ತು ಮುಂದಿನ ಪೀಳಿಗೆಯ ಮೇಲೆ ಏನು ಪರಿಣಾಮ ಬೀರುತ್ತದೆ ಎಂಬುದರ ಬಗ್ಗೆ ನಮಗೆ ಸಾಮಾಜಿಕ ಜವಾಬ್ದಾರಿ ಇರಬೇಕು. ಕೌಟುಂಬಿಕ ಜವಾಬ್ದಾರಿಗಳನ್ನು ಮರೆಯಬಾರದು.
ಕೊನೆ ಹನಿ
ಸಂಕ್ಷಿಪ್ತವಾಗಿ ಹೇಳುವುದಾದರೆ ನೀವು ಯಾರು ಮತ್ತು ನಿಮ್ಮ ಜೀವನವನ್ನು ಹೇಗೆ ಬದುಕಲು ಬಯಸುತ್ತೀರಿ ಎಂಬುದನ್ನು ನಿಖರವಾಗಿ ತಿಳಿದುಕೊಳ್ಳಿ. ಎಲ್ಲಕ್ಕಿಂತ ಹೆಚ್ಚಾಗಿ ನೀವು ನಿಮ್ಮ ಸಾಮರ್ಥ್ಯದ ಅಂಚಿನಲ್ಲಿ ಕಾರ್ಯ ನಿರ್ವಹಿಸುತ್ತಿರುವಾಗ ಬೆಳವಣಿಗೆ ಮತ್ತು ಕಲಿಕೆ ನಡೆಯುತ್ತದೆ ಎಂಬುದನ್ನು ನೆನಪಿಡಿ. ಬಹುತೇಕ ಗಾಳಿ ತುಂಬಿದ ಬಲೂನನ್ನು ಊದುವಂತೆ, ನಿಮ್ಮ ವೈಯಕ್ತಿಕ ತತ್ವಶಾಸ್ತçಕ್ಕೆ ಅನುಗುಣವಾಗಿ ಬದುಕಲು ಹೆಚ್ಚಿನ ಪ್ರಯತ್ನ ಮತ್ತು ಶಕ್ತಿಯ ಅಗತ್ಯವಿರುತ್ತದೆ. ಆದರೆ ಫಲಿತಾಂಶವು ನೀವು ಯಾರೆಂದು ಅಧಿಕೃತವಾಗಿ ಮತ್ತು ಕಲಾತ್ಮಕವಾಗಿ ವ್ಯಕ್ತಪಡಿಸುತ್ತದೆ. ನಿಮ್ಮನ್ನು ಹೆಚ್ಚು ಉದ್ದೇಶ ಮತ್ತು ಅರ್ಥದೊಂದಿಗೆ ಬದುಕಲು ಮತ್ತು ಕೆಲಸ ಮಾಡಲು ತಳ್ಳುತ್ತದೆ. ಜನರು ಏನು ಹೇಳುತ್ತಾರೆ ಎನ್ನುವುದು ಮುಖ್ಯವಲ್ಲ ನೀವು ಏನಾಗುತ್ತೀರಿ ಎಂಬುದು ಮುಖ್ಯ. ಯಶಸ್ವಿ ವ್ಯಕ್ತಿಗಳು ಜನರ ಮಾತನ್ನು ಲೆಕ್ಕಿಸದೇ ತಮ್ಮದೇ ಮಾರ್ಗ ಆರಿಸಿಕೊಂಡಿದ್ದಾರೆ. ಹಾಗೆಯೇ ನೀವೂ ನಿಮ್ಮ ಮಾರ್ಗ ಆರಿಸಿಕೊಳ್ಳಿ. ಜಗತ್ತನ್ನು ಉತ್ತಮ ಸ್ಥಳವನ್ನಾಗಿ ಮಾಡಲು ಪ್ರಯತ್ನಿಸಿದರೆ ಜನರು ಗೌರವಿಸುತ್ತಾರೆ ಹಿಂಬಾಲಿಸುತ್ತಾರೆ.
=============================================================
ಜಯಶ್ರೀ.ಜೆ. ಅಬ್ಬಿಗೇರಿ
ಇಂಗ್ಲೀಷ್ ಉಪನ್ಯಾಸಕರು
ಬೆಳಗಾವಿ ೯೪೪೯೨೩೪೧೪೨