Homeಸುದ್ದಿಗಳುಬಹುವಚನ ಪ್ರಕಾಶನದ 3 ಅನುವಾದಿತ ನಾಟಕಗಳ ಲೋಕಾರ್ಪಣೆ

ಬಹುವಚನ ಪ್ರಕಾಶನದ 3 ಅನುವಾದಿತ ನಾಟಕಗಳ ಲೋಕಾರ್ಪಣೆ

Published on

ಬೆಳಗಾವಿ: ಪತ್ರಕರ್ತ ಹಾಗೂ ಅನುವಾದಕ ಅಶೋಕ ಚಿಕ್ಕಪರಪ್ಪಾ ಅವರು ಮರಾಠಿಯಿಂದ ಕನ್ನಡಕ್ಕೆ ಅನುವಾದ ಮಾಡಿರುವ ‘ರಾಜಹಂಸ’ ಸೇರಿದಂತೆ ಇತರ ಎರಡು ನಾಟಕಗಳ ಲೋಕಾರ್ಪಣೆ ಸಮಾರಂಭ ಬೆಂಗಳೂರಿನ ಸುಚಿತ್ರಾ ಸಭಾಂಗಣದಲ್ಲಿ ಭಾನುವಾರದಂದು ನೆರವೇರಿತು.‌

ಧಾರವಾಡ ‘ರಂಗಾಯಣ’ದ ಮಾಜಿ ನಿರ್ದೇಶಕರಾದ ಹುಲುಗಪ್ಪ ಕಟ್ಟಿಮನಿ ಅವರು ರಾಜಹಂಸ, ನೆರಳುಗಳು ಹಾಗೂ ಅತಂತ್ರ ಪುಸ್ತಕಗಳನ್ನು ಲೋಕಾರ್ಪಣೆ ಮಾಡಿ, ತಮ್ಮ ನಾಲ್ಕು ದಶಕಗಳ ರಂಗಭೂಮಿಯ ಅನುಭವಗಳನ್ನು ಬಹು ಸ್ವಾರಸ್ಯಕರವಾಗಿ ವಿವರಿಸಿದರು.

ಹಿರಿಯ ಲೇಖಕಿ ಹಾಗೂ ಅನುವಾದಕಿ ಡಾ. ಹೇಮಾ ಪಟ್ಟಣಶೆಟ್ಟಿ ಅವರು ಮರಾಠಿಯಿಂದ ಅನುವಾದಗೊಂಡಿರುವ ಮೂರು ನಾಟಕಗಳ ಆಳ ಮತ್ತು ಅನುವಾದದ ಸೊಗಸಿನ ಬಗ್ಗೆ ವಿಮರ್ಶೆ ಮಾಡಿದರು.
ಮುಖ್ಯ ಅತಿಥಿ ರಂಗಕರ್ಮಿ ಹಾಗೂ ಅನುವಾದಕ ಡಿ.ಎಸ್. ಚೌಗಲೆ ಅವರು ಭಾಷಾಂತರದ ಸಂದರ್ಭದಲ್ಲಿ ಎದುರಾಗುವ ತಾಂತ್ರಿಕ ಸವಾಲುಗಳು ಮತ್ತು ಅನುವಾದಕರು ಪಾಲಿಸಬೇಕಾದ ಶಿಸ್ತಿನ ಬಗ್ಗೆ ಮಾರ್ಗದರ್ಶನ ನೀಡಿದರು.
ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದ್ದು ‘ರಾಜಹಂಸ’ ನಾಟಕದ ವಾಚನ. ಕಿರುತೆರೆಯ ಹಿರಿಯ ಕಲಾವಿದ ಕೀರ್ತಿ ಭಾನು ಹಾಗೂ ಪ್ರಾಚಿ ರವಿಚಂದ್ರ ಅವರು ನಾಟಕದ ಒಂದು ಸನ್ನಿವೇಶವನ್ನು ಅತ್ಯಂತ ರಸವತ್ತಾಗಿ ವಾಚಿಸಿ ಸಭಿಕರ ಮೆಚ್ಚುಗೆಗೆ ಪಾತ್ರರಾದರು.’ಅತಂತ್ರ’ ನಾಟಕದ ಅನುವಾದಕ ವಿಶಾಲ ಮಹಾಲೆ ಅವರು ಮೇಲುಕೋಟೆಯ ಫೆಲೋಶಿಪ್’ನ 15 ದಿನಗಳ ಸವಿ ನೆನಪನ್ನು ಸ್ಮರಿಸಿಕೊಂಡರು.

‘ರಾಜಹಂಸ’ ನಾಟಕದ ಅನುವಾದಕ ಅಶೋಕ ಚಿಕ್ಕಪರಪ್ಪಾ ಅವರು ತಮ್ಮ ಅಭಿಪ್ರಾಯ ಮಂಡಿಸುತ್ತಾ ಫೆಲೋಶಿಪ್’ಗಾಗಿ ಅರ್ಜಿ ಸಲ್ಲಿಸುವ ಮುಂಚೆ ಅನುವಾದದ ಎರಡು ಮಾದರಿಗಳನ್ನು ಕಳಿಸಲು ಸೂಚಿಸಿದ್ದರು. ಆ ಸಂಪನ್ಮೂಲ ಹೇಗೆ ಸಂಗ್ರಹಿಸಬೇಕು ಎಂದು ತಮಗೆ ಆತಂಕ ಉಂಟಾಗಿತ್ತು ಎಂದು ತಿಳಿಸಿದರಲ್ಲದೆ, ಅಂತಹ ಸಮಯದಲ್ಲಿ ಬೆಳಗಾವಿಯ ಹಳೆಯ ಮಿತ್ರರಾದ ವಸಂತ ಧಾಮಣೇಕರ ಹಾಗೂ ನವಸಾಹಿತ್ಯ ಬುಕ್ ಸ್ಟಾಲ್’ನ ಜವಳಕರ್ ಅವರು ಸಂಪನ್ಮೂಲ ಒದಗಿಸಿ, ತಮಗೆ ಫೆಲೋಶಿಪ್ ಸಿಗುವಲ್ಲಿ ಕಾರಣೀಭೂತರಾದರೆಂದು ಹೇಳಿ ಇಬ್ಬರಿಗೂ ಧನ್ಯವಾದ ಅರ್ಪಿಸಿದರು.

ಬಹುವಚನ ಪ್ರಕಾಶನದ ದೀಪಾ ಗಣೇಶ್ ಅವರು ಪ್ರಾಸ್ತಾವಿಕ ಭಾಷಣ ಮಾಡಿದರು. ಹೆಸರಾಂತ ಕಥೆಗಾರ ವಿವೇಕ್ ಶಾನಭಾಗ್ ಕೊನೆಯಲ್ಲಿ ವಂದನಾರ್ಪಣೆ ಮಾಡಿದರು. ಸುಮಧುರಾ ಅವರು ಕಾರ್ಯಕ್ರಮ ನಿರೂಪಿಸಿದರು.

ವೈಶಿಷ್ಟ್ಯ ಮೆರೆದ ಅಶೋಕ
ಅನುವಾದಕ ಅಶೋಕ ಚಿಕ್ಕಪರಪ್ಪಾ ಅವರು ಕಾರ್ಯಕ್ರಮದಲ್ಲಿ ಒಂದು ಅಪರೂಪದ ಸಂಪ್ರದಾಯಕ್ಕೆ ನಾಂದಿ ಹಾಡಿದರು. ಸಾಮಾನ್ಯವಾಗಿ ಮುಖ್ಯ ಅತಿಥಿಗಳು ಪುಸ್ತಕದ ಪ್ರಥಮ ಪ್ರತಿಯನ್ನು ಹಸ್ತಾಂತರಿಸುತ್ತಾರೆ. ಆದರೆ ಅಶೋಕ ಅವರು ತಮ್ಮ ಪೂಜ್ಯ ತಾಯಿಯವರ ಮುಖಾಂತರ ತಮಗೆ ಪ್ರಥಮ ಪ್ರತಿ ಹಸ್ತಾಂತರಿಸಬೇಕೆಂದು ವಿನಂತಿಸಿಕೊಂಡಿದ್ದರು. ಹೀಗಾಗಿ ಆಯೋಜಕರು ಅವರ ತಾಯಿಯವರಾದ 87 ವಯಸ್ಸಿನ ತಂಗೆವ್ವಾ ಗುಂಡಪ್ಪಾ ಚಿಕ್ಕಪರಪ್ಪಾ ಅವರಿಂದ ಪ್ರಥಮ ಪ್ರತಿ ಕೊಡಿಸಿದರು.
ಸಭಿಕರ ಸಮ್ಮುಖದಲ್ಲಿ ತಾಯಿ ಮಗನಿಗೆ ಪುಸ್ತಕ ಹಸ್ತಾಂತರಿಸಿದಾಗ ಇಡೀ ಸಭಾಂಗಣ ಭಾವುಕವಾಯಿತು. ‘ವಿಶ್ವ ತಾಯಂದಿರ ದಿನ’ಕ್ಕೆ ಒಂದು ತಿಂಗಳು ಬಾಕಿ ಇರುವಾಗಲೇ ಅಶೋಕ ಅವರು ಈ ಮೂಲಕ ತಾಯಿಗೆ ಸಲ್ಲಿಸಿದ ಗೌರವ ಕಾರ್ಯಕ್ರಮದ ಹೈಲೈಟ್ ಆಗಿತ್ತು.

Latest articles

More like this