ಹುನಗುಂದ : ತಾಲೂಕಿನ ಸೂಳೇಬಾವಿಯ ಲೇಖಕ ಅಶೋಕ ವಿ ಬಳ್ಳಾ ಹಾಗೂ ಕಮತಗಿಯ ಶೇಯಾಂಶ ಕೋಲಾರ ಅವರ ಕೃತಿಗಳು ಬೆಂಗಳೂರು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ ಲೋಕಾರ್ಪಣೆಗೊಂಡವು.
ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಕನ್ನಡ ಬಹುಮುಖಿ ಪರಂಪರೆಯನ್ನು ಪ್ರತಿನಿಧಿಸುವ ಕನ್ನಡ ಸಾಮರಸ್ಯ ನೆಲೆಗಳು ಮಾಲಿಕೆಯಲ್ಲಿ ರಾಜ್ಯದ ವಿವಿಧ ಪ್ರದೇಶಗಳ ಸಾಮರಸ್ಯ, ಭ್ರಾತೃತ್ವ, ಸೌಹಾರ್ದತೆಯ ಬದುಕನ್ನು ಸಾರುವ ನಲವತ್ತೊಂದು ಕೃತಿಗಳನ್ನು ಹೊರತಂದಿದ್ದು, ಅದರಲ್ಲಿ ಅಶೋಕ ವಿ ಬಳ್ಳಾ ಅವರ ಅವಿಭಜಿತ ಹುನಗುಂದ ಪರಿಸರದ ಸಾಮರಸ್ಯದ ನೆಲೆಗಳು ಮತ್ತು ಶೇಯಾಂಶ ಕೋಲಾರ ಅವರ ಭಾವೈಕ್ಯದ ಬೆಳಗು ಬಾಗಲಕೋಟೆ ಎಂಬ ಕೃತಿಗಳು ಜಿಲ್ಲೆಯ ಭಾವೈಕ್ಯತೆಯ ಬದುಕು, ಸಾಮಾಜಿಕ-ಧಾರ್ಮಿಕ ಸೌಹಾರ್ದತೆಯನ್ನು ಕಟ್ಟಿಕೊಡುವ ನಿಟ್ಟಿನಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿ ಪ್ರಕಟಗೊಂಡಿವೆ.
ಈ ವೇಳೆ ಇಬ್ಬರೂ ಲೇಖಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಶಿವರಾಜ ತಂಗಡಗಿ ಗೌರವ ಪ್ರತಿಗಳನ್ನು ವಿತರಿಸಿ ಅಭಿನಂದಿಸಿದರು. ಹೈಸ್ಕೂಲು ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ನಮ್ಮ ಸೌಹಾರ್ದತೆಯ ಪರಂಪರೆಯನ್ನು ಪರಿಚಯಿಸಿ ಭ್ರಾತೃತ್ವ ಭಾವನೆಯನ್ನು ಬೆಳೆಸುವ ಪ್ರಯತ್ನದ ಭಾಗವಾಗಿ ನೂರು ಕೃತಿಗಳನ್ನು ಹೊರತರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಆಶಯದಲ್ಲಿ ಮೊದಲ ಹಂತದಲ್ಲಿ 41 ಕೃತಿಗಳು ಲೋಕಾರ್ಪಣೆ ಆಗಿದ್ದು, ಉಳಿದ ಕೃತಿಗಳು ಶೀಘ್ರದಲ್ಲೇ ಪ್ರಕಟವಾಗಲಿವೆ. ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ, ಶಾಸಕ ರಿಜ್ವಾನ್ ಅರ್ಷದ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ, ಸಾಹಿತಿ ಬರಗೂರು ರಾಮಚಂದ್ರಪ್ಪ, ಶಿಕ್ಷಣ ತಜ್ಞ ಡಾ. ವಿ ಪಿ ನಿರಂಜನಾರಾಧ್ಯ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ. ಸಂತೋಷ ಹಾನಗಲ್ಲ, ಸದಸ್ಯರು, ಸಂಪಾದಕರು, ಲೇಖಕರು, ಅಧಿಕಾರಿಗಳು ಉಪಸ್ಥಿತರಿದ್ದರು.