ಮೂಡಲಗಿ – ಮೂಡಲಗಿಯ ಶ್ರೀ ಶ್ರೀಪಾದಬೋಧ ಸ್ವಾಮೀಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅಂತಿಮ ವರ್ಷದ ಬಿ.ಎಸ್ಸಿ ವಿಭಾಗದ ವಿದ್ಯಾರ್ಥಿನಿಯಾದ ಕು. ಶ್ರೀನಿಧಿ ಸಣ್ಣಕ್ಕಿಯವರು ದೇಶದ ಅತ್ಯಂತ ಪ್ರತಿಷ್ಠಿತ ಪರೀಕ್ಷೆಗಳಲ್ಲಿ ಒಂದಾದ ಸ್ನಾತಕೋತ್ತರ ಜಂಟಿ ಪ್ರವೇಶ ಪರೀಕ್ಷೆ (ಎಂಒ) ಪರೀಕ್ಷೆಯಲ್ಲಿ ಅಖಿಲ ಬಾರತ ಮಟ್ಟದಲ್ಲಿ ೪೦೮ ನೆಯ ಸ್ಥಾನವನ್ನು ಗಳಿಸಿ ಭೌತಶಾಸ್ತ್ರದ ಸ್ನಾತಕೋತ್ತರ ಪದವಿಗೆ ದೇಶದ ಅಗ್ರಗಣ್ಯ ಸಂಸ್ಥೆಯಾದ ಐಐಟಿ ಮದ್ರಾಸಿಗೆ ಆಯ್ಕೆಯಾಗುವ ಮೂಲಕ ಕಾಲೇಜಿಗೆ ಹಿರಿಮೆಯನ್ನು ತಂದಿರುತ್ತಾರೆ.
ಇವರು ಮೂಡಲಗಿ ಪಟ್ಟಣದ ನಿವಾಸಿಗಳಾದ ಶ್ರೀಮತಿ ಸುರೇಖಾ ಮತ್ತು ಶಿವಬಸು ಸಣ್ಣಕ್ಕಿ ಅವರ ಹೆಮ್ಮೆಯ ಪುತ್ರಿ. ವಿದ್ಯಾರ್ಥಿನಿಯ ಈ ಸಾಧನೆಗೆ ಮಹಾವಿದ್ಯಾಲಯದ ಕಾಲೇಜು ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಶಾಸಕ ಬಾಲಚಂದ್ರ ಜಾರಕಿಹೊಳಿ, ಸರ್ವ ಸದಸ್ಯರು, ಪ್ರಾಂಶುಪಾಲರಾದ ಮಹೇಶ ಕಂಬಾರ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.