ಅರಕಲಗೂಡು – ರಂಗಭೂಮಿ ಕಲೆ ಉಳಿಸುವಲ್ಲಿ ಸಂಘ ಸಂಸ್ಥೆಗಳ ಪಾತ್ರ ಪ್ರಮುಖವಾಗಿದೆ ಎಂದು ನಿವೃತ್ತ ಸಬ್ ಇನ್ಸ್ಪೆಕ್ಟರ್ ನಿಡಗೆರೆ ನಾಗರಾಜು ತಿಳಿಸಿದರು.
ಅರಕಲಗೂಡು ತಾ. ಗರೀಘಟ್ಟ ಗ್ರಾಮದಲ್ಲಿ ಶ್ರೀ ಬಸವೇಶ್ವರ ಕಲಾ ಮತ್ತು ಸಾಂಸ್ಕೃತಿಕ ಸಂಘವನ್ನು ಉದ್ಘಾಟಿಸಿ ಮಾತನಾಡಿ ಅವರು ಕಲೆ ಮತ್ತು ಸಂಸ್ಕೃತಿಗೆ ಸಂಬಂಧಿಸಿದಂತೆ ಕಾರ್ಯಕ್ರಮಗಳು ಇತ್ತೀಚೆಗೆ ಕಡಿಮೆಯಾಗುತ್ತಿವೆ. ಗ್ರಾಮೀಣ ಪ್ರದೇಶದಲ್ಲಿ ಹಿಂದೆ ನಡೆಯುತ್ತಿದ್ದ ಜನಪದ ಹಾಡು, ನಾಟಕ, ಕೋಲಾಟ ಕ್ರಮೇಣ ಗತಿಸುತ್ತಿದ್ದು ರಂಗಭೂಮಿ ಕಲೆ ಮರೆಯಾಗುತ್ತಿದೆ, ಈ ದಿಸೆಯಲ್ಲಿ ಗರೀಘಟ್ಟ ಗ್ರಾಮದ ಯುವಕರು ಕಲೆಯನ್ನು ಪೋಷಿಸಿ ಉಳಿಸಲು ಕಲಾ ಸಂಘ ಸ್ಥಾಪಿಸಿ ನೋಂದಣಿ ಮಾಡಿಸಿರುವುದು ಉತ್ತಮವಾಗಿದೆ. ಸಂಘದ ಮೂಲಕ ಗ್ರಾಮದ ಅಭಿವೃದ್ಧಿ ಮಾಡುವಲ್ಲಿ ಪ್ರತಿಯೊಬ್ಬರೂ ಮುಕ್ತವಾಗಿ ಪಾಲ್ಗೊಳ್ಳಲು ಕರೆ ನೀಡಿದರು.
ಪ್ರಾಸ್ತಾವಿಕವಾಗಿ ರಂಗ ನಿರ್ದೇಶಕ ಜಿ. ಜಿ. ಕೇಶವ ಮಾತನಾಡಿ ಗ್ರಾಮದ ಯುವಕರು ಪೌರಾಣಿಕ ನಾಟಕ ಮಾಡುವ ಸಲುವಾಗಿ 18 ಜನರ ಸಂಘ ಸ್ಥಾಪಿಸಿ ಸಂಘದ ಪದಾಧಿಕಾರಿಗಳಿಗೆ ಗ್ರಾಮಸ್ಥರು ಸಹಕಾರ ನೀಡಿದ್ದಲ್ಲಿ ಸರ್ಕಾರದ ವಿವಿಧ ಯೋಜನೆಗಳ ಅನುಧಾನ ಪಡೆದುಕೊಳ್ಳಲು ಸಾಧ್ಯ. ಗ್ರಾಮಾಭ್ಯುದಯಕ್ಕೆ ಸಂಬಂಧಿಸಿ ವಿವಿಧ ಅಭಿವೃದ್ಧಿ ಕಾರ್ಯಕ್ರಮ, ಅರೋಗ್ಯ ತಪಾಸಣೆ ಶಿಬಿರ, ಅರಿವು ಕಾರ್ಯಕ್ರಮ, ರಕ್ತದಾನ ಶಿಬಿರ ಹೀಗೆ ಅಭಿವೃದ್ಧಿ ಕಾರ್ಯಕ್ರಮ ಹಾಗೂ ನಾಟಕೋತ್ಸವ ವಿವಿಧ ಸಾಂಸ್ಕೃತಿಕ ಹಾಗೂ ಕ್ರೀಡಾ ಸ್ಪರ್ಧೆ ನಡೆಸುವ ಉದ್ದೇಶ ಹೊಂದಿದೆ ಎಂದರು.
ಹಿರಿಯ ರಂಗಷನಿರ್ದೇಶಕರು ರಮೇಶ್ ಭಾಗವತ್, ಕದಂಬಸೇನೆ ತಾ. ಅಧ್ಯಕ್ಷ ಬೇಕರಿ ರಾಜೇಗೌಡರು, ನಿವೃತ್ತ ಅಂಚೆ ನೌಕರ ಸಣ್ಣಸ್ವಾಮಿಗೌಡರು ಮಾತನಾಡಿಧರು, ಸಂಘದ ಅಧ್ಯಕ್ಷ ಜಿ. ಎಲ್ ಹೇಮಂತ್ ಸಭೆಯ ಅಧ್ಯಕ್ಷತೆ ವಹಿಸಿದ್ದರು, ಕಾನೂನು ಸಲಹೆಗಾರರು, ವಕೀಲರು ಜಿ. ಜಿ. ರವಿ ಕಾರ್ಯಕ್ರಮ ನಿರೂಪಿಸಿದರು, ಸಂಘದ ಕಾರ್ಯದರ್ಶಿ ಜಿ. ಆರ್. ಚಂದ್ರ ಸ್ವಾಗತಿಸಿದರು.
ಸಭೆಯಲ್ಲಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಜಯಣ್ಣ, ಸಂಘದ ಉಪಾಧ್ಯಕ್ಷರು ವೀರಭದ್ರ, ಅಶೋಕ, ಗೌ.ಅಧ್ಯಕ್ಷ ರಾಜೇಗೌಡ, ದೊಡ್ಡಮ್ಮದೇವಿ ಕಲಾ ಸಂಘದ ಖಜಾಂಚಿ ಬಾಬು ಪ್ರಸಾದ್ ಇತರರು ಇದ್ದರು, ರಂಗಗೀತೆ ಹಾಗೂ ರಂಗ ದೃಶ್ಯಾವಳಿ ಕಾರ್ಯಕ್ರಮ ನಡೆಯಿತು.