Homeಕ್ರೀಡೆಮೆಲ್ಬರ್ನ್‌ನಲ್ಲಿ ಕ್ರಿಕೆಟ್ ದುರಂತ: 17 ವರ್ಷದ ಯುವ ಕ್ರಿಕೆಟಿಗ ಬೆನ್ ಆಸ್ಟಿನ್ ತಾಲೀಮು ವೇಳೆ ಚೆಂಡು...

ಮೆಲ್ಬರ್ನ್‌ನಲ್ಲಿ ಕ್ರಿಕೆಟ್ ದುರಂತ: 17 ವರ್ಷದ ಯುವ ಕ್ರಿಕೆಟಿಗ ಬೆನ್ ಆಸ್ಟಿನ್ ತಾಲೀಮು ವೇಳೆ ಚೆಂಡು ತಗುಲಿ ಮೃತಪಟ್ಟ ವಿಷಾದನೀಯ ಘಟನೆ

Published on

ಮೆಲ್ಬರ್ನ್: ಆಸ್ಟ್ರೇಲಿಯಾದ ಕ್ರಿಕೆಟ್ ವಲಯವನ್ನು ನಿಬ್ಬೆರಗುಗೊಳಿಸಿದ ದಾರುಣ ಘಟನೆ ನಡೆದಿದೆ. ಕೇವಲ 17 ವರ್ಷದ ಪ್ರತಿಭಾವಂತ ಕ್ರಿಕೆಟಿಗ ಬೆನ್ ಆಸ್ಟಿನ್ ತಾಲೀಮು ವೇಳೆ ತಲೆಗೆ ಚೆಂಡು ಬಡಿದು ಸಾವನ್ನಪ್ಪಿದ್ದಾನೆ. ಈ ದುರ್ಘಟನೆ ಮಂಗಳವಾರ ಮೆಲ್ಬರ್ನ್‌ನ ಫೆರ್ನ್‌ಟ್ರೀ ಗಲ್ಲಿ ಕ್ರಿಕೆಟ್ ಕ್ಲಬ್ ನಲ್ಲಿ ನಡೆದಿದೆ.

ತಾಲೀಮು ವೇಳೆ ಬೌಲಿಂಗ್ ಮೆಷಿನ್ ಮುಂದೆ ಬ್ಯಾಟಿಂಗ್ ಅಭ್ಯಾಸ ಮಾಡುತ್ತಿದ್ದ ವೇಳೆ ಚೆಂಡು ಬೆನ್‌ನ ತಲೆ ಮತ್ತು ಕುತ್ತಿಗೆ ಭಾಗಕ್ಕೆ ಬಡಿದಿದ್ದು, ತಕ್ಷಣವೇ ಆತನನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ವೈದ್ಯರು ಹಲವು ಗಂಟೆಗಳ ಕಾಲ ಶ್ರಮಿಸಿದರೂ ಚಿಕಿತ್ಸೆ ಫಲಕಾರಿಯಾಗದೆ, ಬುಧವಾರ ಆತ ಕೊನೆಯುಸಿರೆಳೆದಿದ್ದಾನೆ.

ಈ ಘಟನೆ ಕ್ರಿಕೆಟ್ ಲೋಕದಲ್ಲಿ 2014ರಲ್ಲಿ ನಡೆದ ಫಿಲಿಪ್ ಹ್ಯೂಸ್ ದುರಂತವನ್ನು ನೆನಪಿಸಿದೆ. ಹ್ಯೂಸ್ ಅವರು ಬೌನ್ಸರ್‌ಗೆ ತಲೆಗೆ ಬಡಿದು ಮೃತಪಟ್ಟಿದ್ದು, ಅದರಂತೆ ಈ ಘಟನೆಯೂ ಕ್ರಿಕೆಟ್ ಪ್ರೇಮಿಗಳನ್ನು ಆಘಾತಕ್ಕೀಡುಮಾಡಿದೆ.

ಕ್ಲಬ್‌ನ ಶೋಕಸಂದೇಶ

ಫೆರ್ನ್‌ಟ್ರೀ ಗಲ್ಲಿ ಕ್ರಿಕೆಟ್ ಕ್ಲಬ್ ಗುರುವಾರ ಬೆಳಿಗ್ಗೆ ಅಧಿಕೃತ ಪ್ರಕಟಣೆ ನೀಡಿದ್ದು, “ಬೆನ್‌ನ ನಿಧನದಿಂದ ನಾವು ನೊಂದಿದ್ದೇವೆ. ಅವನ ಕುಟುಂಬ, ಜೇಸ್, ಟ್ರೇಸಿ, ಕೂಪರ್ ಹಾಗೂ ಝ್ಯಾಕ್, ಅವರೊಂದಿಗೆ ನಮ್ಮ ಪ್ರೀತಿ ಮತ್ತು ಬೆಂಬಲ ಇದೆ. ಬೆನ್ ನಮ್ಮ ಕ್ಲಬ್‌ಗೆ ನೀಡಿದ ಸಂತೋಷ ಮತ್ತು ಪ್ರೇರಣೆ ಎಂದಿಗೂ ಮರೆಯಲಾಗದು,” ಎಂದು ಹೇಳಿದೆ.

ಪ್ರತಿಭಾವಂತ ಮತ್ತು ಜನಪ್ರಿಯ ಆಟಗಾರ

ಬೆನ್ ಆಸ್ಟಿನ್ ಕೇವಲ ಪ್ರತಿಭಾವಂತ ಕ್ರಿಕೆಟಿಗನಷ್ಟೇ ಅಲ್ಲ, ಒಬ್ಬ ಉತ್ತಮ ನಾಯಕ ಹಾಗೂ ಶಿಸ್ತಿನ ಆಟಗಾರನಾಗಿದ್ದಾನೆ ಎಂದು ಕ್ಲಬ್ ಅಧಿಕಾರಿಗಳು ಹೇಳಿದ್ದಾರೆ. ಆತ ಮುಲ್‌ಗ್ರೇವ್ ಹಾಗೂ ಎಲ್ಡನ್ ಪಾರ್ಕ್ ಕ್ರಿಕೆಟ್ ಕ್ಲಬ್‌ಗಳ ಪರ ಆಡಿದ್ದಲ್ಲದೆ, ವೇವರ್ಲಿ ಪಾರ್ಕ್ ಹಾಕ್ಸ್ ಜೂನಿಯರ್ ಫುಟ್‌ಬಾಲ್ ತಂಡದಲ್ಲೂ ಸಕ್ರಿಯವಾಗಿದ್ದ.

ಸಂತಾಪ

“ಮೆಲ್ಬರ್ನ್‌ನ ಯುವ ಕ್ರಿಕೆಟಿಗ ಬೆನ್ ಆಸ್ಟಿನ್ ಅವರ ಅಕಾಲಿಕ ನಿಧನದಿಂದ ನಾವು ತುಂಬಾ ದುಃಖಿತರಾಗಿದ್ದೇವೆ. ಈ ಕಠಿಣ ಸಮಯದಲ್ಲಿ ಅವರ ಕುಟುಂಬ ಮತ್ತು ಕ್ಲಬ್‌ಗೆ ನಮ್ಮ ಹೃತ್ಪೂರ್ವಕ ಸಂತಾಪ,” ಎಂದು ಕ್ರಿಕೆಟ್ ಆಸ್ಟ್ರೇಲಿಯಾ ತನ್ನ ಅಧಿಕೃತ ಪ್ರಕಟಣೆಯಲ್ಲಿ ಹೇಳಿದೆ.

ಹಿಂದಿನ ದುರಂತಗಳು ನೆನಪಾದವು

ಕ್ರಿಕೆಟ್ ಇತಿಹಾಸದಲ್ಲಿ ಚೆಂಡಿನ ಹೊಡೆತದಿಂದ ಮೃತಪಟ್ಟ ಘಟನೆಗಳು ಅಪರೂಪವಲ್ಲ. 1998ರಲ್ಲಿ ಭಾರತದ ರಮಣ್ ಲಾಂಬಾ, 2014ರಲ್ಲಿ ಫಿಲಿಪ್ ಹ್ಯೂಸ್, ಹಾಗೂ ಇತ್ತೀಚಿನ ವರ್ಷಗಳಲ್ಲಿ ಭಾರತದ ಪುಣೆಯಲ್ಲಿ ಮತ್ತು ಪಂಜಾಬ್‌ನಲ್ಲಿ ನಡೆದ ಘಟನೆಗಳು ಕ್ರಿಕೆಟ್ ಜಗತ್ತಿಗೆ ಶೋಕ ತಂದಿದ್ದವು. ಈಗ ಬೆನ್ ಆಸ್ಟಿನ್ ಅವರ ನಿಧನ ಆ ಪಟ್ಟಿ ಸೇರ್ಪಡೆಯಾಗಿದೆ.

ಈ ದುರಂತ ಕ್ರಿಕೆಟ್ ಸಮುದಾಯವನ್ನು ಮತ್ತೊಮ್ಮೆ ನಿಶ್ಚೇತನಗೊಳಿಸಿದೆ. ಕ್ರೀಡೆ ಸುರಕ್ಷತೆಯ ಕುರಿತ ಚರ್ಚೆ ಮರುಕಳಿಸಿದ್ದು, ಯುವ ಕ್ರಿಕೆಟಿಗರ ಸುರಕ್ಷತೆಗಾಗಿ ಕಟ್ಟುನಿಟ್ಟಿನ ಕ್ರಮಗಳ ಅಗತ್ಯತೆ ಎಲ್ಲೆಡೆ ವ್ಯಕ್ತವಾಗುತ್ತಿದೆ.

Latest articles

More like this