ಮಲಗಿದ್ದಾರೆ
ಮಲಗಿದ್ದಾರೆ ಮಲಗಿರಲಿ
ನನ್ನ ನಾಡ ಜನರು
ಎದ್ದರೆ ಸಾಲಿನಲ್ಲಿ ನಿಲ್ಲುವರು
ರೇಷನ್ ಗ್ಯಾಸ್ ಪಡೆಯಲು
ಬಸ್ಸಿನಲ್ಲಿ ಕೋಳಿಯ ನಿದ್ರೆ
ಮಕ್ಕಳ ಫೀ ಕಟ್ಟಬೇಕು
ಮಗಳಿಗೆ ವರ ಹುಡುಕ ಬೇಕು
ಮನೆ ಬಾಡಿಗೆ ಕಟ್ಟ ಬೇಕು
ಕಚೇರಿಯಲ್ಲಿ ಕಿರುಕುಳ
ಮನೆಯಲ್ಲಿ ಹರತಾಳ
ಬಡತನಕೆ ಮಕ್ಕಳು ಬಾಳ
ಮುಳುಗಿರುವರು ಸಾಲದಾಳ
ಪುಕ್ಕಟೆ ಯೋಜನೆಗೆ ಅರ್ಜಿ
ಕೊಡುವುದು ಅವರ ಮರ್ಜಿ
ಅಲೆಯಬೇಕು ನಿತ್ಯ ಅವರು
ಹಸಿದ ಹೊಟ್ಟೆ ನೂಕಲು
ನಾಡ ಹಬ್ಬ ಸ್ವಾತಂತ್ರ ದಿನ
ಮಲಗುವರು ಮೂಲೆಯಲಿ
ಸಂಘರ್ಷ ಕ್ರಾಂತಿ ಗೊತ್ತಾಗದ ಪದಗಳು
ಎಂಟು ದಶಕ ಮಲಗಿರುವ ಜನಗಳು
ಮಲಗಿದ್ದಾರೆ ಮಲಗಿರಲಿ
ನನ್ನ ನಾಡ ಜನರು

ಡಾ ಶಶಿಕಾಂತ ಪಟ್ಟಣ ರಾಮದುರ್ಗ