ನೆನೆಯ ಬನ್ನಿ
ಕಾಯಕವೇ ಕೈಲಾಸ
ನಂಬಿ ನಡೆದವರ,
ಜ್ಞಾನದ ದೀವಿಗೆ
ಜಗಕೆ ಬೆಳಗಿದವರ.
ಮೌಢ್ಯ ಬೇರುಗಳ
ಕಿತ್ತೊಗೆದವರ,
ಬಸವಣ್ಣನವರ ಪಾವನ
ಪಥವ ನೆನೆಯ ಬನ್ನಿ!
ಅನುಭವದ ಮಂಟಪದ
ದಿವ್ಯಜ್ಯೋತಿಗಳು,
ಅಕ್ಕಮಹಾದೇವಿ
ತಪಸ್ವಿನಿಯರ,
ಮಾದಾರ ಧೂಳಯ್ಯ,
ಅಂಬಿಗರ ಚೌಡಯ್ಯ,
ಕಾಯಕದ ಮಹಿಮೆ
ಸಾರಿದವರ ನೆನೆಯ ಬನ್ನಿ!
ಸತ್ಯ, ಅಹಿಂಸೆ, ಶಾಂತಿ
ಸಮಾನತೆಯ ಮಂತ್ರವ,
ಜಾತಿಭೇದವ ಮೀರಿದ
ಮಾನವತೆಯ ತಂತ್ರವ
ವಚನಗಳ ಸಾಹಿತ್ಯದ
ಅಮೃತದ ಸವಿಯನು,
ಹೃದಯದಂಗಳದಿ ನಿತ್ಯ
ನಾವು ನೆನೆಯ ಬನ್ನಿ!
ಗುರುವಿನ ವಚನಕೆ
ಶರಣೆಂದ ಶರಣರ,
ಲಿಂಗೈಕ್ಯರಾದ ದಿವ್ಯ
ಚೇತನಗಳ,
ಮಾನವ ಧರ್ಮದ
ಉಸಿರಾದ ಮಹನೀಯರ,
ಭಕ್ತಿಯಿಂದ ಶಿರಬಾಗಿ
ನೆನೆಯ ಬನ್ನಿ! ಶರಣರೇ ಬನ್ನಿ
ಸುಧಾ ಪಾಟೀಲ
ಬೆಳಗಾವಿ