Homeಲೇಖನಲೇಖನ : ಜಾಲಿ ಬಿತ್ತಿ, ಕಾಲಿಗೆ ಮೂಲ ಎಂದರೆ ಹೇಗೆ ?

ಲೇಖನ : ಜಾಲಿ ಬಿತ್ತಿ, ಕಾಲಿಗೆ ಮೂಲ ಎಂದರೆ ಹೇಗೆ ?

Published on

“ಜಾಲಿ ಬಿತ್ತಿ ಆಲದ ಮರ ಬೆಳೆಯಲು ಸಾಧ್ಯವೇ?” ಅಥವಾ “ಜಾಲಿ ಗಿಡ ನೆಟ್ಟು ಜೇನು ಹುಡುಕಲು ಸಾಧ್ಯವೇ?” ಅಲ್ಲದೆ “ಜಾಲಿ ಬಿತ್ತಿದವನ ಕಾಲಿಗೆ ಹೂವುಗಳು ಚುಂಬಿಸುತ್ತವೆಯೆ? ತನ್ನ ಕೋಪವೇ ತನಗೆ ಶತ್ರು ಎಂಬುದು ಎಲ್ಲರಿಗೂ ತಿಳಿದ ವಿಷಯವೆ. ನಾವೇನು ಒಳ್ಳೆಯ ಕೆಲಸ ಮಾಡುತ್ತೇವೆಯೋ ಅದರೊಳಗೆ ಸುಖವಿದೆ.ಆದರೆ,ಅವರಿವರಿಗೆ ಕೆಟ್ಟದಾದರೆ, ನಾವು ಆರಾಮವಾಗಿ ಇರುತ್ತೇವೆ ಎಂದು ಭಾವಿಸಿದರೆ ಖಂಡಿತಾ ತಪ್ಪು.ಮುಂದೊಂದು ದಿನ ತಾಪತ್ರಯ ಬೆಂಬಿಡದೆ ಕಾಡದೆ ಇರದು. ಬೇವಿನ ಬೀಜದಿಂದ ಮಾವಿನ ಮರ ಬರುವುದೆ?

ಈ ಜಗತ್ತಿನಲ್ಲಿ ಬಹುಕೃತ ವೇಷದ ನಟನೆ ಇತ್ತೀಚೆಗೆ ಅಧಿಕವಾಗಿದೆ.ಹೊರ ಪ್ರಪಂಚಕ್ಕೆ ಬರೀ ತೋರಿಕೆಯೇ ವಿನಃ ನಿಜವಾದ ಸುಖ ಎಲ್ಲಿದೆ? ಈ ಲೋಕದಲ್ಲಿ ಒಳ್ಳೆಯದು, ಕೆಟ್ಟದ್ದು ಎರಡೆ ಇರೋದು.ಇವೆರಡರ ಕುರಿತು ಎಲ್ಲರಿಗೂ ಅರೆಬರೆ ಜ್ಞಾನವಿರುತ್ತದೆ.ಆದರೂ ಕೆಟ್ಟದ್ದನ್ನು ಮಾಡಲು ಬಯಸುತ್ತಾರೆ.ಒಳ್ಳೆಯವರಾಗಿದ್ದರೆ ಈ ಪ್ರಪಂಚದಲ್ಲಿ ಬಾಳಲಾಗುವುದಿಲ್ಲವೆಂಬ ಒಂದು ಹುಚ್ಚು ಭ್ರಮೆ ಇದೆ. ನಾವೆಷ್ಟು ಖತರ್ನಾಕ್ ಆಗಿದ್ದರೆ ಅದರಷ್ಟೇ ಸುಖ ಸಿಗುವುದು ಎಂಬುದು ಮತ್ತೊಂದು ಹುಚ್ಚು ಭ್ರಮೆ.ಈ ರೀತಿಯ ಜೀವನದುದ್ದಕ್ಕೂ ನಾನಾ ತರಹದ ಕೆಟ್ಟ ಕೃತ್ಯಕ್ಕೆ ನಮ್ಮನ್ನು ನಾವೇ ತೊಡಗಿಸಿಕೊಂಡು ಬಿಡುತ್ತೇವೆ.

ಆಶ್ಚರ್ಯವೇನಂದರೆ ಭಯಾನಕ ವ್ಯಕ್ತಿಗಳ ಕೆಟ್ಟ ಕೆಟ್ಟ ದುರಾಲೋಚನೆಯ ಕಾರ್ಯಗಳು ಬಹು ದಿನ ಬದುಕುವುದಿಲ್ಲ.ಅಂತವರ ಮುದಿತನದ ದಿನಮಾನಗಳಲ್ಲಿ ಮಕ್ಕಳು ನಾಯಿಗೆ ಕಲ್ಲು ಎಸೆದಂತೆ ಎಸೆದು ಹೀನಾಯವಾಗಿ ಕಾಣುತ್ತಾರೆ. ಆಗಬೇಕಾದ ನೋವುಗಳು ಆದ ಮೇಲೆ, ಬರಬೇಕಾದ ಕಷ್ಟಗಳು ಬಂದ ಮೇಲೆ ಪಶ್ಚಾತ್ತಾಪ ಪಡುವುದು ಸತ್ಯ.

​”ಹಾಸಿಗೆ ಇದ್ದಷ್ಟು ಕಾಲು ಚಾಚು”, “ಕೈ ಕೆಸರಾದರೆ ಬಾಯಿ ಮೊಸರು” ಎಂಬಂತಹ ಗಾದೆ ಮಾತುಗಳ ಸಾಲಿಗೆ ಮೇಲಿನ ಗಾದೆ ಮಾತು ಸಹ ಸೇರುವ ಇದೊಂದು ಅಮೂಲ್ಯವಾದ ಗಾದೆ ಮಾತಾಗಿದೆ.

“ನಾವು ಏನನ್ನು ಬಿತ್ತುತ್ತೇವೆಯೋ, ಅದನ್ನೇ ಕೊಯ್ಯುತ್ತೇವೆ” (As you sow, so shall you reap) ಎಂಬ ಜಾಗತಿಕ ಸತ್ಯಕ್ಕೆ ಈ ಮಾತು ಅತ್ಯುತ್ತಮ ಸಾಕ್ಷಿಯಾಗಿದೆ.

​ಜಾಲಿ ಎಂದರೆ ತುಂಬಾ ತೀಕ್ಷ್ಣವಾದ ಮತ್ತು ಗಟ್ಟಿಯಾದ ಮುಳ್ಳುಗಳಿರುವ ಒಂದು ಜಾತಿಯ ಗಿಡ ಮರ.
ನೆಲದ ಮೇಲೆ ಜಾಲಿಯ ಬೀಜವನ್ನು ಬಿತ್ತುವುದು ಅಥವಾ ಅದನ್ನು ಬೆಳೆಸುವುದು ​ಕಾಲಿಗೆ ಮೂಲ. ಜಾಲಿಯ ಗಿಡ ದೊಡ್ಡದಾದಾಗ ಅದರ ಸುತ್ತಲೂ ಮುಳ್ಳುಗಳು ಉದುರಿರುತ್ತವೆ. ಆ ದಾರಿಯಲ್ಲಿ ನಡೆಯುವಾಗ ಆ ಮುಳ್ಳುಗಳು ನಮ್ಮ ಕಾಲಿಗೆ ಚುಚ್ಚುವುದು ನಿಶ್ಚಿತ.

​ ಒಬ್ಬ ವ್ಯಕ್ತಿ ತಾನೇ ಆಸಕ್ತಿಯಿಂದ ತನ್ನ ತೋಟದಲ್ಲಿ ಅಥವಾ ಮನೆಯ ಮುಂದೆ ಜಾಲಿಯ ಗಿಡವನ್ನು ತಂದು ಬಿತ್ತಿ, ಅದಕ್ಕೆ ನೀರೆರೆದು ಬೆಳೆಸಿದರೆ, ಅದರಿಂದ ಸಿಗುವುದು ಹಣ್ಣುಗಳಲ್ಲ, ಬದಲಿಗೆ ಅವನದೇ ಕಾಲಿಗೆ ಚುಚ್ಚುವ ಮುಳ್ಳುಗಳು ಮಾತ್ರ. ತಾನು ಮಾಡಿದ ತಪ್ಪಾದ ಆಯ್ಕೆಯಿಂದ ತಾನೇ ತೊಂದರೆಗೆ ಸಿಲುಕುತ್ತಾನೆ.

​ಇದೇ ಗಾದೆಯ ಮಾತನ್ನು ನಾವು ಜೀವನದ ವಿವಿಧ ಕ್ಷೇತ್ರಗಳಿಗೆ ಅನ್ವಯಿಸಿ ನೋಡಿದಾಗ ಸಿಗುವ ವಿಸ್ತೃತ ಅರ್ಥಗಳು ಬಹಳಷ್ಟಿವೆ.

​ಭಾರತೀಯ ತತ್ತ್ವಶಾಸ್ತ್ರದಲ್ಲಿ ‘ಕರ್ಮ’ಕ್ಕೆ ಪ್ರಮುಖ ಸ್ಥಾನವಿದೆ. ನಾವು ಮಾಡುವ ಒಳ್ಳೆಯ ಕೆಲಸಗಳು ನಮಗೆ ಪುಣ್ಯವನ್ನೂ, ಕೆಟ್ಟ ಕೆಲಸಗಳು ಪಾಪವನ್ನೂ ತರುತ್ತವೆ. ​ಜಾಲಿ ಬಿತ್ತುವುದು ಎಂದರೆ ಕೆಟ್ಟ ಆಲೋಚನೆ ಮತ್ತು ದುರ್ನಡತೆ ಎನ್ನಬಹುದು. ಒಬ್ಬ ವ್ಯಕ್ತಿ ಸಮಾಜದಲ್ಲಿ ಇತರರಿಗೆ ದ್ರೋಹ ಮಾಡುವುದು, ಸುಳ್ಳು ಹೇಳುವುದು, ಹಿಂಸೆ ನೀಡುವುದು ಮಾಡುತ್ತಿದ್ದರೆ ಅವನು ‘ಜಾಲಿ ಬಿತ್ತುತ್ತಿದ್ದಾನೆ’ ಎಂದರ್ಥ.

​ಕಾಲಿಗೆ ಮುಳ್ಳು ಎಂದರೆ ದುಃಖದ ಫಲ. ಅಂತಹ ವ್ಯಕ್ತಿ ತನಗೆ ತಾನೇ ಭವಿಷ್ಯದಲ್ಲಿ ತೊಂದರೆಯನ್ನು ತಂದುಕೊಳ್ಳುತ್ತಿದ್ದಾನೆ. ಅವನು ಮಾಡಿದ ಕೆಟ್ಟ ಕೆಲಸಗಳೇ ಮುಂದೆ ಒಂದು ದಿನ ಅವನ ವಿನಾಶಕ್ಕೆ ಕಾರಣವಾಗುತ್ತವೆ. ಕಾಡಿಗೆ ಕಿಚ್ಚು ಹಚ್ಚಿದವನು ಆ ಕಿಚ್ಚಿಗೆ ತಾನೇ ಬಲಿಯಾಗುವಂತೆ, ಜಾಲಿಯ ಮುಳ್ಳು ಬಿತ್ತಿದವನ ಕಾಲನ್ನೇ ಚುಚ್ಚುತ್ತದೆ.

​ಮನುಷ್ಯನ ಸ್ವಭಾವದ ಮೇಲೆ ಇಂತಹ ಗಾದೆ ಮಾತುಗಳು ಬೆಳಕು ಚೆಲ್ಲುತ್ತವೆ. ಕೋಪ ಮತ್ತು ದ್ವೇಷ ಜಮಾಯಿಸಿಕೊಂಡು ನಾವು ಸಮಾಜದಲ್ಲಿ ಎಲ್ಲರೊಂದಿಗೆ ಕ್ರೂರವಾಗಿ, ಅಹಂಕಾರದಿಂದ ವರ್ತಿಸಿದರೆ ಪ್ರತಿಯಾಗಿ ನಮಗೂ ಸಮಾಜದಿಂದ ದ್ವೇಷ ಮತ್ತು ಒಂಟಿತನವೇ ಸಿಗುತ್ತದೆ. ​ಪ್ರೀತಿಯ ಬಿತ್ತನೆಯ ಬದಲಿಗೆ ನಾವು ಪ್ರೀತಿ, ಕರುಣೆಯೆಂಬ ಆಲದ ಅಥವಾ ಮಾವಿನ ಮರವನ್ನು ಬಿತ್ತಿದರೆ, ನಮಗೆ ನೆರಳು ಮತ್ತು ಸಿಹಿಯಾದ ಹಣ್ಣುಗಳು ಸಿಗುತ್ತವೆ.

​ಮಕ್ಕಳನ್ನು ಬೆಳೆಸುವಲ್ಲಿ ಪೋಷಕರ ಪಾತ್ರವನ್ನು ಈ ಗಾದೆಮಾತು ನೆನಪಿಸುತ್ತದೆ. ​ಚಿಕ್ಕಂದಿನಲ್ಲೇ ಮಕ್ಕಳಿಗೆ ತಪ್ಪು ಹಾದಿ, ಸುಳ್ಳು ಹೇಳುವುದು, ದುರಾಸೆಯನ್ನು ಕಲಿಸಿದರೆ (ಜಾಲಿ ಬಿತ್ತನೆ), ಆ ಮಕ್ಕಳು ದೊಡ್ಡವರಾದ ಮೇಲೆ ತಂದೆ-ತಾಯಿಯರನ್ನೇ ವೃದ್ಧಾಶ್ರಮಕ್ಕೆ ತಳ್ಳಬಹುದು ಅಥವಾ ಗೌರವ ನೀಡದೆ ಇರಬಹುದು (ಕಾಲಿಗೆ ಮುಳ್ಳು). ​ಸಂಸ್ಕಾರವನ್ನು ಬಿತ್ತಿದರೆ ಸುಖದ ಫಸಲು ಸಿಗುತ್ತದೆ, ದುರಹಂಕಾರವನ್ನು ಬಿತ್ತಿದರೆ ದುಃಖದ ಮುಳ್ಳು ಸಿಗುತ್ತದೆ. ಕೋಮುದ್ವೇಷದ ತಳಹದಿಯ ಮೇಲೆ ಸಮಾಜದಲ್ಲಿ ಜಾತಿ, ಧರ್ಮಗಳ ಹೆಸರಿನಲ್ಲಿ ದ್ವೇಷದ ಬೀಜ ಬಿತ್ತುವ ನಾಯಕರು ತಾತ್ಕಾಲಿಕವಾಗಿ ಲಾಭ ಪಡೆಯಬಹುದು. ಆದರೆ, ಆ ದ್ವೇಷದ ಜಾಲಿಯ ಮರ ದೊಡ್ಡದಾದಾಗ ಇಡೀ ಸಮಾಜವೇ ತಲ್ಲಣಿಸುತ್ತದೆ, ಆ ಹಿಂಸಾಚಾರದ ಮುಳ್ಳುಗಳು ಇಡೀ ದೇಶದ ಪ್ರಗತಿಯ ಕಾಲಿಗೆ ಚುಚ್ಚುತ್ತವೆ. ವ್ಯವಸ್ಥೆಯಲ್ಲಿ ಭ್ರಷ್ಟಾಚಾರದ ಜಾಲಿ ಬಿತ್ತಿದರೆ, ಕೊನೆಗೆ ನ್ಯಾಯ ಸಿಗದೆ ಸಾಮಾನ್ಯ ಜನಸಾಮಾನ್ಯರ ಬದುಕು ದುಸ್ತರವಾಗುತ್ತದೆ.

​ ಮಹಾಭಾರತದಲ್ಲಿ ಶಕುನಿ ಮತ್ತು ದುರ್ಯೋಧನರು ಪಾಂಡವರ ವಿರುದ್ಧ ದ್ವೇಷ, ಅಸೂಯೆ ಮತ್ತು ಸಂಚು ಎಂಬ ‘ಜಾಲಿ ಬೀಜ’ಗಳನ್ನು ಬಿತ್ತುತ್ತಾ ಹೋದರು. ಕೊನೆಗೆ ಕುರುಕ್ಷೇತ್ರ ಯುದ್ಧದಲ್ಲಿ ಕೌರವರ ಇಡೀ ವಂಶವೇ ನಾಶವಾಯಿತು. ಅವರು ಬಿತ್ತಿದ ಜಾಲಿಯ ಮುಳ್ಳು ಅವರದೇ ವಿನಾಶಕ್ಕೆ ಕಾರಣವಾಯಿತು.

​ ನಾವು ಹೊಲದಲ್ಲಿ ಕೃಷಿ ಮಾಡದೆ ಕಸ ಕಡ್ಡಿ ಬೆಳೆಸಿ, ಕಳೆ ತೆಗೆಯದೆ ಮುಳ್ಳು ಕಂಟಿ ಗಿಡಗಳನ್ನು ಬೆಳೆಸಿ, ಅದರಿಂದ ರಾಗಿ ಅಥವಾ ಭತ್ತದ ಫಸಲನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಪ್ರಕೃತಿ ಎಂದಿಗೂ ಮೋಸ ಮಾಡುವುದಿಲ್ಲ. ಜಾಲಿಯ ಬೀಜಕ್ಕೆ ಜಾಲಿಯ ಮುಳ್ಳೇ ಹೊರತು ದ್ರಾಕ್ಷಿ ಫಲವಲ್ಲ. ​ಈ ವೇಗದ ಕಂಪ್ಯೂಟರ್ ಯುಗದಲ್ಲೂ ಈ ಗಾದೆ ಮಾತುಗಳು ಅತ್ಯಂತ ಪ್ರಸ್ತುತವಾಗಿವೆ.

ಜನರು ಯಾವಾಗಲೂ ಸುಮ್ಮನಿರುವುದಿಲ್ಲ.ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡುವುದು, ಇತರರ ಬಗ್ಗೆ ಸುಳ್ಳು ಸುದ್ದಿ ಹರಡುವುದು (ಜಾಲಿ ಬಿತ್ತುವುದು) ಕೊನೆಗೆ ಸೈಬರ್ ಕ್ರೈಮ್ ಕೇಸ್ ಆಗಿ ನಮ್ಮದೇ ವೃತ್ತಿಜೀವನವನ್ನು ಹಾಳು ಮಾಡಿಕೊಳ್ಳುವ ಪರಿಸ್ಥಿತಿ ಬರುತ್ತದೆ.

ನಾವು ಇಂದು ಪ್ರಕೃತಿಯನ್ನು ನಾಶಪಡಿಸಿ ಕಾಂಕ್ರೀಟ್ ಎಂಬ ಜಾಲಿಯನ್ನು ಬಿತ್ತುತ್ತಿದ್ದೇವೆ. ಇದರ ಪರಿಣಾಮವಾಗಿ ಜಾಗತಿಕ ತಾಪಮಾನ, ಕುಡಿಯುವ ನೀರಿನ ಅಭಾವದಂತಹ ಮುಳ್ಳುಗಳು ನಮ್ಮ ಕಾಲಿಗೆ ಚುಚ್ಚುತ್ತಿವೆ.

​”ಜಾಲಿ ಬಿತ್ತಿ ಕಾಲಿಗೆ ಮೂಲ” ಎಂಬ ಗಾದೆಯು ಕೇವಲ ಒಂದು ಎಚ್ಚರಿಕೆಯ ಮಾತಲ್ಲ, ಅದೊಂದು ಜಾಗೃತಿಯ ಬೆಳಕು. ನಾವು ಮಾಡುವ ಪ್ರತಿಯೊಂದು ಕೆಲಸದ ಹಿಂದೆ ಒಂದು ಪರಿಣಾಮವಿರುತ್ತದೆ ಎಂಬುದನ್ನು ಇದು ನೆನಪಿಸುತ್ತದೆ. ​ನಮ್ಮ ಬದುಕು ಸುಖಮಯವಾಗಿರಬೇಕಾದರೆ, ನಾವು ಸಮಾಜದಲ್ಲಿ ಸ್ನೇಹ, ಸತ್ಕರ್ಮ, ಪ್ರಾಮಾಣಿಕತೆ ಮತ್ತು ಪ್ರೀತಿಯೆಂಬ ಉತ್ತಮ ಬೀಜಗಳನ್ನು ಬಿತ್ತಬೇಕು. ಆಗ ಮಾತ್ರ ನಮ್ಮ ಜೀವನದ ಹಾದಿಯಲ್ಲಿ ಮುಳ್ಳುಗಳಿಲ್ಲದೆ, ಹೂವಿನ ಹಾಸಿಗೆಯಂತಹ ನೆಮ್ಮದಿ ಸಿಗಲು ಸಾಧ್ಯ.

°°°°°°°°°°°°°°°°°°°°°°
ಶರಣಪ್ಪ ತಳ್ಳಿ ಕುಪ್ಪಿಗುಡ್ಡ

Latest articles

More like this