Homeಸುದ್ದಿಗಳುಪುಸ್ತಕ ಸಾಹಿತ್ಯ ಸಂವಾದಕ್ಕೆ ಓದುಗರು ಸ್ಪಂದಿಸಿ - ಕುಶಾಲ ಬರಗೂರು ಮನವಿ

ಪುಸ್ತಕ ಸಾಹಿತ್ಯ ಸಂವಾದಕ್ಕೆ ಓದುಗರು ಸ್ಪಂದಿಸಿ – ಕುಶಾಲ ಬರಗೂರು ಮನವಿ

Published on

ಹಾಸನ: ಕರ್ನಾಟಕ ಸರ್ಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು ಹಾಗೂ ಮನೆಗೊಂದು ಗ್ರಂಥಾಲಯ ಜಿಲ್ಲಾ ಜಾಗೃತ ಸಮಿತಿ ಹಾಸನ ಜಿಲ್ಲೆ ಇವರ ವತಿಯಿಂದ ಮನೆಗೊಂದು ‘ಗ್ರಂಥಾಲಯ ಅನುಷ್ಠಾನ ಸಮಾರಂಭವು ಡಾ. ಓಬಳೇಶ್ ಘಟ್ಟಿ, ವಿಶ್ರಾಂತ ಪ್ರಾಂಶುಪಾಲರು, ಅಕ್ಷರ ಗಂಗಾ ನಿಲಯ, ಬಿಟ್ಟಗೋಡನಹಳ್ಳಿ, ಗೊರೂರು ರಸ್ತೆ ನಿವಾಸದಲ್ಲಿ ನಡೆಯಿತು.

ಪುಸ್ತಕ ಪ್ರಾಧಿಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಮನೆಗೊಂದು ಗ್ರಂಥಾಲಯ ಅನುಷ್ಠಾನ ಯೋಜನೆಯು ಹಲವು ಆಶಯಗಳನ್ನು ಹೊಂದಿದೆ. ಒಂದು ಲಕ್ಷ ಮನೆ ಗುರಿ ಸಾಧಿಸುವ ದಿಶೆಯಲ್ಲಿ ಕಾರ್ಯ ಸಾಗಿದೆ ಎoದು ಕಾರ್ಯಕ್ರಮ ಉದ್ಘಾಟಿಸಿ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರು ಡಾ. ಮಾನಸ ಮಾಹಿತಿ ನೀಡಿದರು.

ರಾಜ್ಯಾದ್ಯಂತ ಒಂದು ಸುತ್ತಿನ ಕಾರ್ಯಕ್ರಮವು ಯಶಸ್ವಿಯಾಗಿ ನಡೆದಿದೆ. ಹಾಸನ ಜಿಲ್ಲೆಯಲ್ಲಿ ಈ ಕಾರ್ಯ ಯೋಜನೆ ಜಾರಿಗೊಂಡು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಾಸನ ಜಿಲ್ಲಾಧಿಕಾರಿಗಳು ಈ ಕಾರ್ಯಕ್ರಮಕ್ಕೆ ಆಗಮಿಸಿರುವುದು ಆಶದಾಯಕ ಬೆಳವಣಿಗೆ. ಪ್ರಾಧಿಕಾರದ ಪುಸ್ತಕ ಸೊಗಸು ಯೋಜನೆಯಂತೆ ಪ್ರಕಾಶಕರು, ಮುದ್ರಕರಿಗೆ ಪ್ರಶಸ್ತಿ ಇದೆ. ಈ ವರ್ಷ ಪುಸ್ತಕ ಓದುಗರನ್ನು ಗುರುತಿಸಿ ಅವರಿಗೆ ಪ್ರಶಸ್ತಿ ಇಪ್ಪತ್ತೈದು ಸಾವಿರ ನಗದು ಬಹುಮಾನ ನೀಡುವ ಯೋಜನೆ ಇದೆ. ರಾಜ್ಯದ ನಾಲ್ಕು ವಲಯಗಳಲ್ಲಿ ನಾಲ್ಕು ಪ್ರಶಸ್ತಿ ನೀಡಲಾಗುವುದು. ಯಾರ ಮನೆಯಲ್ಲಿ ಹೆಚ್ಚು ಪುಸ್ತಕ ಸಂಗ್ರಹ ಇರುವುದೋ ಅಂತಹ ಮನೆ ಓದುಗರಿಗೆ ನೀಡಲಾಗುವುದು ಎಂದರು.

ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯರು ಹಾಗೂ ಪ್ರಾಧ್ಯಾಪಕರು ಡಾ. ಕುಶಾಲ್ ಬರಗೂರು ಮಾತನಾಡಿ ಮನೆಗೊಂದು ಗ್ರಂಥಾಲಯ ಯೋಜನೆ ಕೇವಲ ಪುಸ್ತಕ ಪ್ರಾಧಿಕಾರ ಒಂದರದ್ದಲ್ಲ. ಇದು ನಾಡಿನ ಸಕಲ ಸಂಘ ಸಂಸ್ಥೆ ಜಿಲ್ಲೆ ತಾಲೂಕು ಮಂಡಲ ಪಂಚಾಯಿತಿ ಅಧಿಕಾರಿಗಳ ಜವಾಬ್ದಾರಿವರೆಗೆ ವಿಸ್ತರಿಸಿಕೊಂಡು ಇದರ ಮಹತ್ವ ಅರ್ಥ ಮಾಡಿಕೊಂಡರೆ ಬಹುಬೇಗ ಯೋಜನೆ ಸಕಲ ಕುಟುಂಬಗಳ ಜನಮನ ತಲುಪುತ್ತದೆ. ಅದಕ್ಕಾಗಿ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು ಗಮನ ಹರಿಸಬೇಕೆಂದು ಕೋರಿದರು. ಪುಸ್ತಕ ಓದಿನ ತಿಳಿವಳಿಕೆಯಿಂದ ಸಾಮಾಜಿಕ ಸಮಸ್ಯೆಗಳಿಗೆ ಅವರವರ ಮನ ಪರಿವರ್ತನೆಗಳಿಂದ ತಣ್ಣನೆಯ ಪರಿಹಾರ ಸಿಗುತ್ತದೆ. ಹೀಗಾದಾಗ ಆಡಳಿತಾಧಿಕಾರಿಗಳಿಗೂ ಕಾರ್ಯ ನಿರ್ವಹಿಸಲು ಅನುಕೂಲವಾಗುವುದು ಎಲ್ಲಾ ಸಂಘಟನೆ, ಸಾಹಿತಿಗಳು ಪಾಲ್ಗೊಂಡು ಪುಸ್ತಕ ಸಾಹಿತ್ಯ ಸಂವಾದಕ್ಕೆ
ಭಾಗವಹಿಸಬೇಕೆಂದರು.

ಜಿಲ್ಲಾಧಿಕಾರಿಗಳು ಶ್ರೀಮತಿ ಲತಾ ಕುಮಾರಿ ಮಾತನಾಡಿ ಮನೆಯೆಂದರೆ ನಾವು ವಿವಿಧ ವಸ್ತು ಸಂಗ್ರಹಣೆಗಳಿಂದ ಅಲಂಕಾರ ಮಾಡುತ್ತೇವೆ.ಕಲಾತ್ಮಕ ಚಿತ್ರಕಲೆಗಳನ್ನು ತಂದು ಶೃಂಗಾರ ಮಾಡುತ್ತೇವೆ. ಅಂತೆಯೇ ಮನೆಯಲ್ಲೊಂದು ಗ್ರಂಥಾಲಯ ಮಾಡಿಕೊಂಡರೆ ಕುಟುಂಬಕ್ಕೆ ಪ್ರಯೋಜನಕಾರಿಯಾಗಿ ಮುಂದಿನ ಮಕ್ಕಳಿಗೆ ಓದಲು ಅನುಕೂಲವಾಗುತ್ತದೆ. ಇವತ್ತು ಒಂದು ಪುಸ್ತಕ ಖರೀದಿಸಿ ಮನೆಯಲ್ಲಿ ಇಟ್ಟರೆ ಮುಂದೆ ಅದೇ ರೀತಿ ಖರೀದಿಸುತ್ತಾ ಹೋದರೆ ಮುಂದೊಂದು ದಿನ ಅದು ಗ್ರಂಥಾಲಯವಾಗಿ ಮಾರ್ಪಡುತ್ತದೆ. ಬಾಲ್ಯದಲ್ಲಿ ನನಗೆ ಓದುವ ಆಸಕ್ತಿ ತುಂಬಾ ಇತ್ತು. ಪುಸ್ತಕ ಖರೀದಿ ದುಬಾರಿ ಇತ್ತು. ನಮ್ಮ ತಂದೆ ತಾಯಿ ಐಸ್ ಕ್ರೀಮ್ ತಿನ್ನಲು ಕೊಡುತ್ತಿದ್ದ ಪಾಕೆಟ್ ಮನಿಯಿಂದ ಪುಸ್ತಕಗಳನ್ನು ಖರೀದಿಸಿ ತರುತ್ತಿದ್ದೆ. ಪುಸ್ತಕದ ಸಂಗ್ರಹವನ್ನು ಗೆಳತಿಯರಿಗೆ ತೋರಿಸಿ ಹೆಮ್ಮೆ ಪಡುತ್ತಿದ್ದೆ. ನನ್ನ ಓದುವ ಆಸಕ್ತಿ ಗಮನಿಸಿ ನನ್ನ ಯಜಮಾನರು ಜನ್ಮದಿನಕ್ಕೆ ಪುಸ್ತಕವನ್ನು ಉಡುಗೊರೆಯಾಗಿ ನೀಡುತ್ತಿದ್ದರು ಎಂದು ತಮ್ಮ ಕಳೆದು ಹೋದ ದಿನಗಳನ್ನು ಸ್ಮರಿಸಿಕೊಂಡ ಜಿಲ್ಲಾಧಿಕಾರಿಗಳು ಕನ್ನಡ ಪುಸ್ತಕ ಪ್ರಾಧಿಕಾರದ ಮನೆಗೊಂದು ಗ್ರಂಥಾಲಯ ಅನುಷ್ಠಾನ ಯೋಜನೆಗೆ ಜಿಲ್ಲಾಡಳಿತವು ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ  ಓಬಳೇಶ್ ಘಟ್ಟಿ, ಶಿಕ್ಷಣ ತಜ್ಞರು, ಮೋಹನ್ ಕುಮಾರ್ ಪ್ರಾಂಶುಪಾಲರು ಎನ್.ಡಿ.ಆರ್ ಕೆ. ಶಿಕ್ಷಣ ಮಹಾವಿದ್ಯಾಲಯ, ಮನೆಗೊಂದು ಗ್ರಂಥಾಲಯ ಜಿಲ್ಲಾ ಸಮಿತಿಯ ಸದಸ್ಯರಾದ ಡಾ. ಬರಾಳು ಶಿವರಾಮ, ಸುಂದರೇಶ್ ಡಿ ಉಡುವಾರೆ, ಪತ್ರಕರ್ತರು ರವಿ ನಾಕಲಗೋಡು, ಉದಯ ರವಿ ಆರ್.ಪಿ. ವೆಂಕಟೇಶ್ ಮೂರ್ತಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರು ತಾರಾನಾಥ್, ಕವಿ ಎನ್.ಎಲ್. ಚನ್ನೇಗೌಡರು, ಲೇಖಕಿ ಶ್ರೀಮತಿ ಭಾರತಿ ಹಾದಿಗೆ, ಹಾಸನ ಜಿಲ್ಲಾ ವೀರಶೈವ ಮುಖಂಡರ, ಕಟ್ಟಾಯ ಶಿವಕುಮಾರ್, ಕಲಾವಿದರು ಪ್ರದೀಪ್, ನವಿಲುಹಳ್ಳಿ ವಾಸು, ಮಾಜಿ ಆಲೂರು ತಾ. ಕ.ಸಾ.ಪ. ಅಧ್ಯಕ್ಷರು ಶಿಕ್ಷಕರು ಗಂಗರ ಶ್ರೀಕಾಂತ್ ಮೊದಲಾದವರು ಇದ್ದರು

ಶ್ರೀಮತಿ ವಾಣಿಗಟ್ಟಿ ಪ್ರಾರ್ಥಿಸಿದರು. ಮನಗೊಂದು ಗ್ರಂಥಾಲಯ ಅನುಷ್ಠಾನ ಹಾಸನ ಜಿಲ್ಲಾ ಸಮಿತಿ ಸಂಚಾಲಕರು ಹಾಗೂ ಸಾಹಿತಿಗಳು ಗೊರೂರು ಅನಂತರಾಜು ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು. ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ಡಾ. ಒಬಳೇಶ್ ಘಟ್ಟಿ ಮತ್ತು ಶ್ರೀಮತಿ ವಾಣಿ ಘಟ್ಟಿ ದಂಪತಿಗಳನ್ನು ಶಾಲು ಹೊದಿಸಿ ಸನ್ಮಾನಿಸಿ ಪ್ರಾಧಿಕಾರದ ಅಭಿನಂದನಾ ಪತ್ರವನ್ನು ಪ್ರಾಧಿಕಾರದ ಅಧ್ಯಕ್ಷರು ಡಾ. ಮಾನಸರವರು ನೀಡಿ ಗೌರವಿಸಿದರು.

Latest articles

More like this