ಬೆಳಗಾವಿಯ ರಂಗಸಂಪದ ಸಂಸ್ಥೆಯ ಸಾಹಿತ್ಯ ವೇದಿಕೆ ಕಳೆದ ಒಂದು ವರ್ಷದಿಂದ ಸಮಾಸ ( ಸಮಾನಮನಸ್ಕರ ಮಾಸಿಕ ಸಮ್ಮಿಲನ ) ಎಂಬ ಹೆಸರಿನಲ್ಲಿ ತಿಂಗಳಿಗೊಂದು ಪುಸ್ತಕ ಅವಲೋಕನ ಕಾರ್ಯಕ್ರಮ ಮಾಡುತ್ತಬಂದಿದೆ.
ಕಳೆದ ಹನ್ನೆರಡು ತಿಂಗಳು ಸತತ ಈ ಸಮ್ಮಿಲನ ಕಾರ್ಯಕ್ರಮಗಳು ನಡೆದು ನಿನ್ನೆ ಎರಡನೇ ವರ್ಷದ ಮೊದಲ ಕಾರ್ಯಕ್ರಮವೂ ನಡೆಯಿತು. ನಾಲ್ಕೈದು ತಿಂಗಳ ಹಿಂದೆ ನಾನು ಈ ಕಾರ್ಯಕ್ರಮವನ್ನೆಲ್ಲ ಅಕ್ಷರರೂಪದಲ್ಲಿ ದಾಖಲಿಸಬಹುದೆಂಬ ಸಲಹೆಯನ್ನು ಕೊಟ್ಟಾಗ ಸಂಯೋಜಕರು ಅದಕ್ಕೆ ಸಮ್ಮತಿಸಿದ್ದರಿಂದ ಆಗ ಒಂದು ಪ್ರಕಟನೆಯನ್ನೂ ಕೊಟ್ಟು ಸಮಾಸದ ಮುಖ್ಯ ವಕ್ತಾರರಿಗೆ ಅವರ ಭಾಷಣದ ಪ್ರತಿ ಕಳಿಸುವ ಸೂಚನೆಯನ್ನೂ ನೀಡಿದ್ದೆ. ಈಗ ಅದು ಕಾರ್ಯ ರೂಪ ಕ್ಕೂ ಬಂದಿದೆ.
ಡಾ. ಅರವಿಂದ ಕುಲಕರ್ಣಿಯವರು ಅದರ ಸಂಪಾದಕತ್ವದ ಜವಾಬ್ದಾರಿಯನ್ನೂ ನನಗೇ ವಹಿಸಿದರು. ಕೆಲವೊಂದು ಅಡ್ಡಿ, ಸಮಯದ ಅಭಾವದ ನಡುವೆಯೂ ೪೪ ಪುಟಗಳ ಒಂದು ಕಿರುಪುಸ್ತಕವನ್ನು ಸಿದ್ಧಪಡಿಸಿ ನಿನ್ನೆ ಅದನ್ನು ಬಿಡುಗಡೆ ಮಾಡಲಾಯಿತು. ಒಂದರಿಂದ ಹನ್ನೆರಡನೆಯ ಮಾಸಿಕ ಕಾರ್ಯಕ್ರಮಗಳ ಸಂಕ್ಷಿಪ್ತ ನೋಟ ಇದರಲ್ಲಿದೆ. ಹಾಜರಾದ ಸದಸ್ಯರ ಅಭಿಪ್ರಾಯಗಳನ್ನು , ಕಾರ್ಯಕ್ರಮದ ಚಿತ್ರಗಳನ್ನು ಹಾಕಲಾಗಿದೆ.
ಸಮಾಸದ ಈ ಸಮ್ಮಿಲನದಲ್ಲಿ ಪ್ರತಿ ತಿಂಗಳು ನಾಡಿನ ಪ್ರಸಿದ್ಧ ಸಾಹಿತಿಗಳ ಒಂದು ಕೃತಿಯನ್ನೆತ್ತಿಕೊಂಡು ಒಬ್ಬರು ಮುಖ್ಯ ಭಾಷಣಕಾರರಾಗಿ 30 -ರಿಂದ-40 ನಿಮಿಷ ಮಾತನಾಡಿದ ನಂತರ ಮೂರುನಾಲ್ಕು ಜನ ಓದುಗರು ಅದರ ಬಗ್ಗೆ ನಾಲ್ಕಾರು ನಿಮಷ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವುದು ಮತ್ತು ಸಂವಾದ ನಡೆಸುವುದು ಇದರ ವೈಶಿಷ್ಟ್ಯ. ಸಂಗಡ ಪ್ರತಿ ತಿಂಗಳು 40 ರಿಂದ 60-70 ರತನಕ ಸಾಹಿತ್ತಾಸಕ್ತರು, ಚಿಂತಕರು, ಬರೆಹಗಾರರು ಇದರಲ್ಲಿ ತಪ್ಪದೇ ಹಾಜರಾಗುವುದು ಒಂದು ವಿಶೇಷ.
ಪುಸ್ತಕ ಸಂಸ್ಕೃತಿ ಬೆಳೆಸುವ ದಿಸೆಯಲ್ಲಿ ಇದೊಂದು ಮಾದರಿ ಪ್ರಯತ್ನ. ಜನರಲ್ಲಿ , ಅದರಲ್ಲೂ ಹೊಸ ಪೀಳಿಗೆಯವರಲ್ಲಿ ಓದುವ ಹವ್ಯಾಸ ಬೆಳೆಸುವ ಒಂದು ಉತ್ತಮ ಪ್ರಯತ್ನ ಇದು. ಎಲ್ಲ ಕಡೆ ಇಂತಹ ಕಾರ್ಯಕ್ರಮಗಳು ನಡೆಯುವಂತಾಗಬೇಕು. ಇದಕ್ಕೆ ಕಾರಣ ರಂಗಸಂಪದದ ಸಂಚಾಲಕರಾದ ಡಾ. ಅರವಿಂದ ಕುಲಕರ್ಣಿಯವರು. ಶಿಸ್ತು ಸಮಯಬದ್ಧತೆಗೆ ಮಹತ್ವ ನೀಡುವ ಅವರು, ಮತ್ತು ರಂಗಸಂಪದದ ಬಳಗದವರು ಅತ್ಯಂತ ಅಚ್ಚುಕಟ್ಟಾಗಿ ಪ್ರತಿ ತಿಂಗಳು ಕಾರ್ಯಕ್ರಮ ಮಾಡುತ್ತಬಂದಿದ್ದಾರೆ. ಬೆಳಗಾವಿಯ ಸಾಹಿತ್ಯ/ ವಿದ್ವತ್ ಪರಂಪರೆಗೆ ಸೇರಿದ ಹಲವರು ಈ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಲಿದ್ದಾರೆ. ಸಾಹಿತ್ತಾಸಕ್ತರು ಸಹ ಬಹಳ ಆಸಕ್ತಿಯಿಂದ ಪಾಲ್ಗೊಳ್ಳುತ್ತಲಿದ್ದಾರೆ. ಪ್ರತಿಸಲ ಒಬ್ಬರು ಅಥವಾ ಒಂದು ಮನೆಯವರು ಆತಿಥ್ಯದ ಜವಾಬ್ದಾರಿ ವಹಿಸಿಕೊಂಡು ಕಾರ್ಯಕ್ರಮಕ್ಕೆ ಸ್ಥಳಾವಕಾಶ ಮತ್ತು ಉಪಾಹಾರದ ವ್ಯವಸ್ಥೆ ಮಾಡುತ್ತಿದ್ದಾರೆ. ಇವರೆಲ್ಲರಿಗೂ ಅಭಿನಂದನೆಗಳು ಸಲ್ಲಬೇಕು.
– ಎಲ್. ಎಸ್. ಶಾಸ್ತ್ರಿ