Homeಸುದ್ದಿಗಳುಸನಾತನ ವೈದಿಕ ಆಚರಣೆಗಳನ್ನು ನಿರಾಕರಿಸಿದ ಬಸವಣ್ಣ - ನ್ಯಾಯವಾದಿ ಸುನೀಲ ಸಾಣಿಕೊಪ್ಪ ಅಭಿಮತ

ಸನಾತನ ವೈದಿಕ ಆಚರಣೆಗಳನ್ನು ನಿರಾಕರಿಸಿದ ಬಸವಣ್ಣ – ನ್ಯಾಯವಾದಿ ಸುನೀಲ ಸಾಣಿಕೊಪ್ಪ ಅಭಿಮತ

Published on

ಬೆಳಗಾವಿ-  ವಚನ ಪಿತಾಮಹ ಡಾ ಫ. ಗು. ಹಳಕಟ್ಟಿಯವರ ಲಿಂಗಾಯತ ಭವನ ಮಹಾಂತೇಶ ನಗರ ಬೆಳಗಾವಿಯಲ್ಲಿ ದಿನಾಂಕ 26.7.2026 ರಂದು ವಾರದ ಪ್ರಾರ್ಥನೆ ಮತ್ತು ವಚನ ವಿಶ್ಲೇಷಣೆ. ಕಾರ್ಯಕ್ರಮ ಜರುಗಿತು.

ಪ್ರಾರಂಭದಲ್ಲಿ ಸಾಮೂಹಿಕ ಪ್ರಾರ್ಥನೆಯನ್ನು ಶರಣೆ ಮಹಾದೇವಿ ಅರಳಿಯವರು ನಡೆಸಿಕೊಟ್ಟರು.
ಉಪನ್ಯಾಸಕ ಸುನೀಲ ಎಸ್. ಸಾಣಿಕೊಪ್ಪ ನ್ಯಾಯವಾದಿ ಮಾತನಾಡಿ, 12ನೇ ಶತಮಾನದಲ್ಲಿ ಬಸವಾದಿ ಶರಣರು ಭಾರತದ ಪೂರ್ವ ಧರ್ಮಗಳಾದ ಜೈನ, ಬೌದ್ಧ ಮತ್ತು ವೈದಿಕ ಧರ್ಮಗಳನ್ನು ಅಧ್ಯಯನ ಮಾಡಿ ಅವೆಲ್ಲವುಗಳಿಗಿಂತ ವಿಭಿನ್ನವಾದ, ವೈಜ್ಞಾನಿಕ, ವೈಚಾರಿಕ ಧರ್ಮವನ್ನು ಸ್ಥಾಪಿಸಿದರು. ಅದು ಶರಣರ ಹಲವಾರು ವಚನಗಳಲ್ಲಿ ಅದರ ಕುರುಹು ದೊರಕುತ್ತವೆ. ಹಿಂದೂ ಎಂಬುದು ಒಂದು ಧರ್ಮವಲ್ಲ ಜೀವನ ಪದ್ಧತಿ ಎಂದು 1966ರಲ್ಲಿಯೇ ಶಾಸ್ತ್ರಿ ಯಜ್ಞಪುರುಷಜೀ ಪ್ರಕರಣದಲ್ಲಿ ಸರ್ವೋಚ್ಛ ನ್ಯಾಯಾಲಯ ಹೇಳಿದೆ. ಅದನ್ನೇ ಹಲವಾರು ತೀರ್ಪಿನಲ್ಲಿ ಪುನರುಚ್ಛರಿಸಿದೆ.
ಇಂದು ಹಿಂದೂ ಎಂದು ಕರೆಯಲ್ಪಡುವ ಧರ್ಮವು ವಾಸ್ತವದಲ್ಲಿ ಸನಾತನ ಅಥವಾ ವೈದಿಕ ಧರ್ಮವಾಗಿದೆ. ವೈದಿಕ ಧರ್ಮದ ಆಧಾರವಾದ ಶೃತಿಗಳು ಅಂದರೆ ಚತುರ್ವೇದಗಳು ಮತ್ತು ಸ್ಮೃತಿಗಳನ್ನು ಮತ್ತು ಇತಿಹಾಸವಾದ ರಾಮಾಯಣ, ಮಹಾಭಾರತ ಮತ್ತು ಭಗವದ್ಗೀತೆಗಳನ್ನು ಶರಣರು ಒಪ್ಪಲಿಲ್ಲ ಎಂಬುದಕ್ಕೆ ನೂರಾರು ವಚನಗಳು ಸಾಕ್ಷಿಯಾಗಿವೆ. ಶೂದ್ರರು ಮತ್ತು ಮಹಿಳೆಯರಿಗೆ ಸಮಾನತೆಯಿಲ್ಲದ ಕಾರಣ, ನೂರಾರು ವಚನಕಾರರು ಮನುಸ್ಮೃತಿ ಮುಂತಾದ ಸ್ಮೃತಿಗಳ ಮಹತ್ವವನ್ನು ಅಲ್ಲಗಳೆಯುತ್ತಾರೆ. 17ನೇ ಶತಮಾನದ ಶರಣರಾದ ಕಾಡಸಿದ್ದೇಶ್ವರರು ತಮ್ಮ 19 ವಚನಗಳಲ್ಲಿ ವೇದವನ್ನು ವಿರೋಧಿಸಿರುತ್ತಾರೆ ಎಂದರು.

ಜೈನ ಧರ್ಮವು ಎಲ್ಲಕ್ಕಿಂತ ಪ್ರಾಚೀನ ಧರ್ಮವಾಗಿದ್ದು, ಅದರ ಕುರುಹುಗಳು 5 ಸಾವಿರ ವರ್ಷಗಳ ಹಿಂದಿನ ಹರಪ್ಪಾ ಮೆಹಂಜೋದಾರೋದ ಆದಿನಾಥ ಅಥವಾ ವೃಷಭನಾಥ ಮತ್ತು ಅವರ ಲಾಂಛನವಾದ ವೃಷಭ [ನಂದಿ] ಮೂರ್ತಿಗಳಲ್ಲಿ ಕಾಣಬಹುದು. ಈ ಜೈನ ಧರ್ಮದ ಆದಿನಾಥ ಮತ್ತು ವೃಷಭನಿಗೂ ಶೈವದ ಆದಿಯೋಗಿ ಶಿವ ಮತ್ತು ಅವನ ವಾಹನ ನಂದಿಗೂ ಹಲವಾರು ಸಾಮ್ಯತೆಗಳಿವೆ. ಆದರೂ ಆದಿನಾಥ ಜೈನ ಧರ್ಮದ ಮೊದಲ ತೀರ್ಥಂಕರರಾಗಿದ್ದು ಅವರನ್ನು ದೇವರೆಂದು ಕರೆಯದೇ ವ್ಯಕ್ತಿಯಾಗಿ ಗುರುತಿಸುತ್ತಾರೆ. ಆದರೆ ಆದಿಯೋಗಿ ಶಿವ ತತ್ವವು ಹಿಂದೂ ಧರ್ಮದ ಶೈವದ ದೇವರಾಗಿದ್ದು, ವಿಭಿನ್ನವಾಗಿ ಕಂಡುಬರುವುದು ಎಂದರು

ಅದೇ ರೀತಿ, ಬೌದ್ಧ ಧರ್ಮದ ಮಹಾಯಾನ ಪಂಥದ ಅವಲೋಕಿತೇಶ್ವರರಿಗೂ ಹಿಂದೂ ಧರ್ಮದ ವೈಷ್ಣವ ಪಂಥದ ವಿಷ್ಣುವಿಗೂ ಹೋಲಿಕೆಯಿದೆ; ಬೌದ್ಧ ಧರ್ಮದ ಮಹಾಯಾನ ಮತ್ತು ವಜ್ರಯಾನ ಪಂಥದ ತಾರಾದೇವಿಗೂ ಹಿಂದೂ ಧರ್ಮದ ಕಾಳಿಗೂ ಹೋಲಿಕೆಯಿದೆ ಎಂದು ಸಂಶೋಧಕರು ಹೇಳುತ್ತಾರೆ. ಹಾಗಂತ ವೈದಿಕ ಅಥವಾ ಸನಾತನ ಧರ್ಮವು ಜೈನ ಅಥವಾ ಬೌದ್ಧ ಧರ್ಮದ ಭಾಗವಾಗುವುದಿಲ್ಲ.
ಅದೇ ರೀತಿ ಸನಾತನ ಧರ್ಮದ ಉಪನಿಷತ್ತುಗಳಿಂದ ಶರಣರ ಕೆಲವೊಂದು ಚಿಂತನೆಗಳು ಪ್ರೇರಿತವಾಗಿದ್ದರೂ ಸಹಿತ, ಅವೆಲ್ಲವುಗಳನ್ನು ಮೀರಿ ತಮ್ಮದೇ ಸ್ವತಂತ್ರ ವಿಚಾರಧಾರೆಯನ್ನು ಮಂಡಿಸಿದ್ದಾರೆ.

ಉದಾಹರಣೆಗೆ, ಅಥರ್ವವೇದದ ಪ್ರಶ್ನೋಪನಿಷತ್ತಿನಲ್ಲಿ ಬರುವ ಜೀವ-ಚೈತನ್ಯ, ರಯಿ ಎಂದರೆ ದ್ರವ್ಯ ಮತ್ತು ಪ್ರಾಣ ಎಂದರೆ ಜೀವ ಅಥವಾ ಚೈತನ್ಯಾಂಶ ಇವುಗಳು ಶರಣರ ಶಿವ-ಜೀವೈಕ್ಯ, ಲಿಂಗಾಂಗಯೋಗಕ್ಕೆ ಹೋಲಿಕೆಯಾಗುತ್ತವೆ. ಅದೇ ರೀತಿ ಜೈನ ಧರ್ಮದ ಬ್ರಹ್ಮಾಂಡದ ಪರಿಕಲ್ಪನೆಗೂ ಶರಣರ ಮಹಾಲಿಂಗ ತತ್ವಕ್ಕೂ ಹೋಲಿಕೆಯಾಗುತ್ತದೆ. ಬೌದ್ಧ ಧರ್ಮದ ಮಧ್ಯಮಮಾರ್ಗಗಳು ಸಹ ಶರಣರ ಸಮರತಿ ಚಿಂತನೆಗೆ ಹೋಲಿಕೆಯಾಗುತ್ತದೆ. ಹಾಗಂತ ಯಾವುದೇ ಧರ್ಮವು ಇನ್ನೊಂದು ಧರ್ಮದ ಭಾಗವಾಗುವುದಿಲ್ಲ. ಪ್ರತಿಯೊಂದು ಧರ್ಮವು ಇನ್ನೊಂದು ಧರ್ಮದ ಕೆಲವು ತತ್ವ ಸಿದ್ಧಾಂತಗಳಿಂದ ಪ್ರೇರಿತ ಅಥವಾ ಆಧಾರಿತವಾಗಿದ್ದರೂ ಅವು ತಮ್ಮದೇ ಆದ ಸ್ವತಂತ್ರ ಮತ್ತು ವಿಭಿನ್ನ ಪರಿಕಲ್ಪನೆಯನ್ನು ಹೊಂದಿವೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಲಿಂಗೈಕ್ಯರಾದ – ಶರಣ ಶ್ರೀಶೈಲ ಮಲ್ಲೇಶಪ್ಪ ಗೋಮಾಡಿ ಹಾಗೂ ಶರಣೆ ರುದ್ರಮ್ಮ ಚoದರಗಿ ಅವರಿಗೆ ಶೃದ್ಧಾಂಜಲಿ ಸಮರ್ಪಿಸಲಾಯಿತು.
ಆನಂದ ಕರಕಿ, ಬಸವರಾಜ ಬಿಜ್ಜರಗಿ, ಮಹಾದೇವ ಕೆoಪಿಗೌಡರ,ಅಕ್ಕಮಹಾದೇವಿ ತೆಗ್ಗಿ, ಬಿ.ಪಿ. ಜೇವಣಿ, ನoದಾ ಬಗಲಿ, ಶ್ರೀದೇವಿ ನರಗುಂದ ಮುಂತಾದ ಶರಣ ಶರಣೆಯರು ವಚನ ವಿಶ್ಲೇಷಣೆ ಮಾಡಿದರು. ಶರಣ ಅಶೋಕ ಇಟಗಿ ದಾಸೋಹ ಸೇವೆಗೈದರು. ಸಂಗಮೇಶ ಅರಳಿ ನಿರೂಪಿಸಿದರು. ಸುರೇಶ ನರಗುಂದ ವಂದಿಸಿದರು. ಶoಕರ ಗುಡಸ, ಸದಾಶಿವ, ದೇವರಮನಿ, ಬಸವರಾಜ ಕರಡಿಮಠ, ಶಿವಪುತ್ರಯ್ಯ ಪೂಜಾರ, ಮ. ಬ.ಕರಿಕಟ್ಟಿ, ಸುದೀರ ರಘಶೆಟ್ಟಿ, ಶೇಖರ ವಾಲಿ ಇಟಗಿ, ಎಮ್.ವೈ. ಮೆಣಸಿನಕಾಯಿ, ಶಿವಾನoದ ತಲ್ಲೂರ, ಗುರುಸಿದ್ದಪ್ಪ ರೇವಣ್ಣವರ, ಶಿವಾನಂದ ನಾಯಕ, ರಾಮಾಪೂರಿ ದoಪತಿಗಳು, ಮುಂತಾದವರು ಉಪಸ್ಥಿತರಿದ್ದರು.

Latest articles

More like this