Homeಸುದ್ದಿಗಳುಸರ್ಕಾರದ ನಿರ್ದೇಶನಕ್ಕೂ ‘ಡೋಂಟ್ ಕೇರ್’ ಅಂದ  ಬೀದರ ಡಿಸಿಸಿ ಬ್ಯಾಂಕ್? ಸಕ್ಕರೆ ಕಾರ್ಖಾನೆ ಹರಾಜು ವಿಚಾರದಲ್ಲಿ...

ಸರ್ಕಾರದ ನಿರ್ದೇಶನಕ್ಕೂ ‘ಡೋಂಟ್ ಕೇರ್’ ಅಂದ  ಬೀದರ ಡಿಸಿಸಿ ಬ್ಯಾಂಕ್? ಸಕ್ಕರೆ ಕಾರ್ಖಾನೆ ಹರಾಜು ವಿಚಾರದಲ್ಲಿ ಸರ್ಕಾರದ ಸೂಚನೆಗೂ ಬೆಲೆ ಇಲ್ವ

Published on

ಬೀದರ – ಸರ್ಕಾರದ ಸ್ಪಷ್ಟ ನಿರ್ದೇಶನವಿದ್ದರೂ ಜಿಲ್ಲೆಯ ರೈತರ ಜೀವನಾಡಿಯಾಗಿರುವ ಬಿಎಸ್‌ಎಸ್‌ಕೆ ಸಕ್ಕರೆ ಕಾರ್ಖಾನೆಯ ಹರಾಜು ಪ್ರಕ್ರಿಯೆಗೆ ಬೀದರ್ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಮುಂದಾಗಿದೆಯೇ ?

ಹುಮನಾಬಾದ್ ತಾಲೂಕಿನ ಹಳ್ಳಿಖೇಡ್ (ಬಿ) ಯಲ್ಲಿರುವ ಬಿಎಸ್‌ಎಸ್‌ಕೆ ಸಕ್ಕರೆ ಕಾರ್ಖಾನೆಯ ಚರ ಹಾಗೂ ಸ್ಥಿರಾಸ್ತಿಗಳ ಹರಾಜು ಪ್ರಕ್ರಿಯೆ ಇಂದು ಸೆಪ್ಟೆಂಬರ್ 2ರಂದು ಮಧ್ಯಾಹ್ನ ಸುಮಾರು 2 ಗಂಟೆಗೆ ನಡೆಯುವ ಸಾಧ್ಯತೆ ಇದೆ
ಆದರೆ, ಈ ಹರಾಜು ಪ್ರಕ್ರಿಯೆಗೆ ತಡೆ ನೀಡುವಂತೆ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಕಾರ್ಯದರ್ಶಿಗಳು ಡಿಸಿಸಿ ಬ್ಯಾಂಕ್‌ಗೆ ನಿರ್ದೇಶನ ನೀಡಿದ್ದರು ಎಂಬ ಮಾಹಿತಿ ಈಗ ಬಹಿರಂಗವಾಗಿದೆ.

ಸರ್ಕಾರದ ನಿರ್ದೇಶನಕ್ಕೂ ಕಿಮ್ಮತ್ತು ಇಲ್ವಾ?

ಸರ್ಕಾರದ ಕಾರ್ಯದರ್ಶಿಗಳು ಹರಾಜು ಪ್ರಕ್ರಿಯೆಗೆ ತಡೆ ನೀಡುವಂತೆ ಸೂಚನೆ ನೀಡಿದರೂ, ಡಿಸಿಸಿ ಬ್ಯಾಂಕ್ ಮಾತ್ರ ಹರಾಜಿನತ್ತ ಹೆಜ್ಜೆ ಇಟ್ಟಿದ್ದು ಸರ್ಕಾರದ ನಿರ್ದೇಶನವನ್ನು ಡಿಸಿಸಿ ಬ್ಯಾಂಕ್ ಗಾಳಿಗೆ ತೂರಿತೇ? ಅಧಿಕಾರಿಗಳ ಸೂಚನೆಗೆ ಬ್ಯಾಂಕ್ ಆಡಳಿತ ಮಂಡಳಿ ನಿರ್ಲಕ್ಷ್ಯ ತೋರಿತೇ? ಅನ್ನದಾತ ರೈತರ ಹಿತಾಸಕ್ತಿಗಿಂತ ಸಾಲ ವಸೂಲಿಯೇ ಮುಖ್ಯವಾಯಿತೇ? ಎಂಬ ಪ್ರಶ್ನೆಗಳು ಈಗ ರೈತರು ಹಾಗೂ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿವೆ

ಕಳೆದ ಜುಲೈ 28ರಂದು ಸರ್ಕಾರದ ವತಿಯಿಂದ ಪತ್ರದ ಮೂಲಕ ಡಿಸಿಸಿ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಸೂಚನೆ ನೀಡಲಾಗಿತ್ತು ಎಂದು ತಿಳಿದುಬಂದಿದೆ. ಹರಾಜು ಪ್ರಕ್ರಿಯೆಗೆ ತಡೆ ನೀಡುವಂತೆ ನಿರ್ದೇಶನವಿದ್ದರೂ, ಇದೀಗ ಬ್ಯಾಂಕ್ ಹರಾಜಿಗೆ ಮುಂದಾಗಿರುವುದು ಹೊಸ ವಿವಾದಕ್ಕೆ ಕಾರಣವಾಗಿದೆ.

ಜಿಲ್ಲೆಯ ರೈತರ ಜೀವನಾಡಿ ಬಿಎಸ್‌ಎಸ್‌ಕೆ
1963ರಲ್ಲಿ ಆರಂಭಗೊಂಡ ಬಿಎಸ್‌ಎಸ್‌ಕೆ ಸಕ್ಕರೆ ಕಾರ್ಖಾನೆ ಬೀದರ್ ಜಿಲ್ಲೆಯ ಮೊದಲ ಸಕ್ಕರೆ ಕಾರ್ಖಾನೆಗಳಲ್ಲಿ ಒಂದಾಗಿದೆ. ಸುಮಾರು 24 ಸಾವಿರಕ್ಕೂ ಅಧಿಕ ರೈತರು ಷೇರುದಾರರಾಗಿರುವ ಈ ಕಾರ್ಖಾನೆ, ಸಾವಿರಾರು ರೈತ ಕುಟುಂಬಗಳ ಬದುಕಿನೊಂದಿಗೆ ನೇರವಾಗಿ ಬೆಸೆದುಕೊಂಡಿದೆ. ಒಂದು ಕಾಲದಲ್ಲಿ ರೈತರ ಬದುಕಿಗೆ ಆಸರೆಯಾಗಿದ್ದ ಕಾರ್ಖಾನೆ ಇಂದು ಭಾರೀ ಸಾಲದ ಸುಳಿಯಲ್ಲಿ ಸಿಲುಕಿದೆ.

ಮಾಹಿತಿಗಳ ಪ್ರಕಾರ, ಕಾರ್ಖಾನೆಯ ಮೇಲೆ ಒಟ್ಟು 350 ಕೋಟಿ ರೂಪಾಯಿಗೂ ಅಧಿಕ ಸಾಲದ ಹೊರೆ ಇದೆ ಕಾರ್ಖಾನೆಯು ಡಿಸಿಸಿ ಬ್ಯಾಂಕ್‌ನಿಂದ ಸುಮಾರು 115 ಕೋಟಿ ರೂಪಾಯಿ ಸಾಲ ಪಡೆದಿದ್ದು ಅಸಲು ಮತ್ತು ಬಡ್ಡಿ ಸೇರಿ ಬಾಕಿ ಮೊತ್ತ ಈಗ 230 ಕೋಟಿ ರೂಪಾಯಿಗೂ ಅಧಿಕವಾಗಿದೆ ಎಂದು ಹೇಳಲಾಗುತ್ತಿದೆ.

ಸಾಲ ಪಡೆಯುವ ಸಂದರ್ಭದಲ್ಲಿ ಕಾರ್ಖಾನೆಯ 143 ಎಕರೆ ಭೂಮಿಯನ್ನು ಭದ್ರತೆಯಾಗಿ ಇರಿಸಲಾಗಿತ್ತು ಎನ್ನಲಾಗಿದೆ
ಇದಲ್ಲದೆ, ಅಪೆಕ್ಸ್ ಬ್ಯಾಂಕ್‌ಗೆ ಸುಮಾರು 110 ಕೋಟಿ ರೂಪಾಯಿ ಹಾಗೂ ಎಸ್‌ಬಿಐಗೆ ಸುಮಾರು 13 ಕೋಟಿ ರೂಪಾಯಿ ಬಾಕಿ ಇದೆ ಎಂಬ ಮಾಹಿತಿ ಲಭ್ಯವಾಗಿದೆ.

ತುಕ್ಕು ಹಿಡಿಯುತ್ತಿರುವ ಯಂತ್ರಗಳು…                              ಬೀದರ ರೈತರು ಸಂಕಷ್ಟದಲ್ಲಿ ಇದ್ದಾರೆ ಕಳೆದ ಮೂರ್ನಾಲ್ಕು ವರ್ಷಗಳಿಂದ ಕಾರ್ಖಾನೆ ಸಂಪೂರ್ಣ ಬಂದ್ ಆಗಿದೆ. ಕಬ್ಬು ನುರಿಸುವ ಯಂತ್ರೋಪಕರಣಗಳು ತುಕ್ಕು ಹಿಡಿದು ಹಾಳಾಗುತ್ತಿದ್ದು, ಕಾರ್ಖಾನೆ ಪುನರಾರಂಭದ ಕನಸು ಕಂಡಿದ್ದ ರೈತರು ಈಗ ಆತಂಕಕ್ಕೆ ಒಳಗಾಗಿದ್ದಾರೆ.

ಈ ಹಿಂದೆಯೂ ಕಾರ್ಖಾನೆ ಮಾರಾಟಕ್ಕೆ ಡಿಸಿಸಿ ಬ್ಯಾಂಕ್ ಮುಂದಾಗಿತ್ತು. ಆದರೆ ರೈತರು ಮತ್ತು ಸಾರ್ವಜನಿಕರಿಂದ ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಆ ನಿರ್ಧಾರವನ್ನು ಕೈಬಿಡಲಾಗಿತ್ತು.

ನಂತರ 2023ರಲ್ಲಿ ಮಾರಾಟದ ಬದಲು ಕಾರ್ಖಾನೆಯನ್ನು ಲೀಸ್‌ಗೆ ನೀಡುವ ನಿರ್ಧಾರ ಕೈಗೊಳ್ಳಲಾಯಿತು. ಆರಂಭದಲ್ಲಿ ಲೀಸ್ ಪಡೆಯಲು ಯಾರೂ ಮುಂದೆ ಬರಲಿಲ್ಲ. ಬಳಿಕ ಕೆಲವರು ಆಸಕ್ತಿ ತೋರಿದರೂ, ಕಾರ್ಖಾನೆ ಪುನರಾರಂಭದ ಪ್ರಯತ್ನ ಯಶಸ್ವಿಯಾಗಲಿಲ್ಲ.

ಹರಾಜಿಗೆ ಪೊಲೀಸ್ ಭದ್ರತೆ!

ಹರಾಜು ಪ್ರಕ್ರಿಯೆ ಹಿನ್ನೆಲೆಯಲ್ಲಿ ಬೀದರ್ ನಗರದ ಬಸವೇಶ್ವರ ವೃತ್ತದ ಸಮೀಪದಲ್ಲಿರುವ ಡಿಸಿಸಿ ಬ್ಯಾಂಕ್ ಮುಖ್ಯ ಕಚೇರಿಯ ಸುತ್ತಮುತ್ತ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಂತೆ ಪೊಲೀಸ್ ಇಲಾಖೆಗೆ ಪತ್ರ ಬರೆಯಲಾಗಿದೆ ಎಂಬ ಮಾಹಿತಿಯೂ ಲಭ್ಯವಾಗಿದೆ.

ಡಿಸಿಸಿ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಪೊಲೀಸ್ ಸಿಬ್ಬಂದಿ ನಿಯೋಜಿಸುವಂತೆ ಮನವಿ ಮಾಡಿರುವುದು ಹರಾಜಿನ ಗಂಭೀರತೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಇದೀಗ ಪ್ರಶ್ನೆಗಳು ಸಾಲು ಸಾಲು !
ಸರ್ಕಾರದ ನಿರ್ದೇಶನವಿದ್ದರೂ ಹರಾಜು ನಡೆಯುತ್ತದೆಯೇ? ಸರ್ಕಾರದ ಸೂಚನೆಗಿಂತ ಬ್ಯಾಂಕ್ ಆಡಳಿತ ಮಂಡಳಿಯ ನಿರ್ಧಾರವೇ ದೊಡ್ಡದಾ?
24 ಸಾವಿರ ರೈತ ಷೇರುದಾರರ ಭವಿಷ್ಯ ಏನಾಗಲಿದೆ? ಸಾಲ ವಸೂಲಿಗಾಗಿ ರೈತರ ಜೀವನಾಡಿಯನ್ನೇ ಹರಾಜು ಹಾಕುವುದು ಸರಿಯೇ?ಬಿಎಸ್‌ಎಸ್‌ಕೆ ಉಳಿಸಲು ಸರ್ಕಾರ ಮತ್ತು ಜನಪ್ರತಿನಿಧಿಗಳು ಮುಂದೆ ಬರಲಿದ್ದಾರೆಯೇ?

ಒಟ್ಟಾರೆ ಸರ್ಕಾರದ ನಿರ್ದೇಶನ ಒಂದು ಕಡೆ… ಡಿಸಿಸಿ ಬ್ಯಾಂಕ್ ಹರಾಜು ಪ್ರಕ್ರಿಯೆ ಮತ್ತೊಂದು ಕಡೆ… ಇದರ ನಡುವೆ
ಆತಂಕದಲ್ಲಿರುವುದು ಮಾತ್ರ ಸಾವಿರಾರು ರೈತರು ಬದುಕು..

ವರದಿ : ನಂದಕುಮಾರ ಕರಂಜೆ, ಬೀದರ

Latest articles

More like this