ನಮ್ಮ ಸನಾತನದ ಸಂಸ್ಕೃತಿಯಲ್ಲಿ ಮಾತೃದೇವೋ ಭವ, ಪಿತೃದೇವೋ ಭವ, ಆಚಾರ್ಯದೇವೋ ಭವ ಎಂದು ಹೆತ್ತವರ ನಂತರದ ಪರಮೋಚ್ಛ ಸ್ಥಾನವನ್ನು ಗುರುಗಳಿಗೆ ನೀಡಲಾಗಿದೆ. ಗುರು ಎಂದರೆ ಕತ್ತಲೆಯಿಂದ ಬೆಳಕಿನೆಡೆಗೆ ಮುನ್ನಡೆಸುವ ಜ್ಞಾನದೀವಿಗೆ. ಆದರೆ ಎಲ್ಲರ ಬದುಕಿನಲ್ಲೂ ಅಕ್ಷರ ಕಲಿಸಿದವರೇ ಗುರುಗಳಾಗಬೇಕಿಲ್ಲ ಕೆಲವರ ಜೀವನದ ರಂಗಸ್ಥಳದಲ್ಲಿ ಆ ಗುರುವಿನ ಪವಿತ್ರ ಸ್ಥಾನವನ್ನು ಮಾರ್ಗದರ್ಶಕರ ಜವಾಬ್ದಾರಿಯನ್ನು ಹಿರಿಯಣ್ಣನೇ ತುಂಬಿರುತ್ತಾನೆ. ರಕ್ತಸಂಬಂಧದ ಆಚೆಗೆ ನಿಂತು ಬದುಕಿಗೆ ದಾರಿದೀಪವಾಗುವ ಅಣ್ಣನ ಪಾತ್ರ ನಿಜಕ್ಕೂ ಅನನ್ಯ ಮತ್ತು ಸ್ಫೂರ್ತಿದಾಯಕ. ತಂದೆಯ ನೆರಳು ಮುಸುಕಿದಾಗ ಅಥವಾ ಕೌಟುಂಬಿಕ ಬಿರುಗಾಳಿಗಳು ಎದುರಾದಾಗ ಏನು ತಿಳಿಯದ ಚಿಕ್ಕ ವಯಸ್ಸಿನ ಬಾಲಕನಾಗಿದ್ದರೂ ಅಣ್ಣ ಹೆಗಲಿಗೆ ಜವಾಬ್ದಾರಿಯ ನೊಗವನ್ನು ಹೊತ್ತುಕೊಳ್ಳುತ್ತಾನೆ. ತನ್ನ ಕನಸುಗಳನ್ನು ಬದಿಗಿಟ್ಟು ತಂಗಿ ತಮ್ಮಂದಿರ ಭವಿಷ್ಯಕ್ಕೆ ರೇಷ್ಮೆ ಹಾದಿ ನಿರ್ಮಿಸಲು ಹೂವಿನ ಸುಂದರ ದಾರಿಯ ಕಲ್ಪಿಸಲು ತಾನು ಕಲ್ಲು ಮುಳ್ಳಿನ ಹಾದಿಯಲ್ಲಿ ನಡೆಯುತ್ತಾನೆ. ಅನುಭವದ ಪಾಠಶಾಲೆಗೆ ಅಣ್ಣನೇ ಮೊದಲ ಮುಖ್ಯೋಪಾಧ್ಯಾಯ. ತಂದೆಯ ತರಹದ ರಕ್ಷಣೆ, ತಾಯಿಯ ತರಹದ ಪ್ರೀತಿ, ಹಾಗೂ ಗುರುವಿನ ತರಹದ ಶಿಸ್ತನ್ನು ಏಕಕಾಲದಲ್ಲಿ ಧರಿಸಬಲ್ಲ ಏಕೈಕ ಚೇತನ ಅಣ್ಣ.
ಗುರುವು ಶಿಷ್ಯನ ಉನ್ನತಿಯನ್ನು ಕಂಡು ಹೇಗೆ ಹೆಮ್ಮೆಪಡುತ್ತಾನೋ ಹಾಗೆಯೇ ಅಣ್ಣನು ತನ್ನ ಒಡಹುಟ್ಟಿದವರ ಯಶಸ್ಸನ್ನು ಕಂಡು ಸಂಭ್ರಮಿಸುತ್ತಾನೆ. ಸ್ವಾರ್ಥವಿಲ್ಲದ ಆತನ ತ್ಯಾಗ ನಿಷ್ಕಲ್ಮಶವಾದ ಆತನ ಪ್ರೀತಿ ಬದುಕಿಗೆ ದೊಡ್ಡ ಪ್ರೇರಣೆ. ಯಾರ ಬದುಕಿನಲ್ಲಿ ಅಣ್ಣನೇ ಗುರುವಿನ ಸ್ಥಾನದಲ್ಲಿ ನಿಂತು ಮುನ್ನಡೆಸಿದ್ದಾನೋ ಆ ಬದುಕು ಎಂದಿಗೂ ದಿಕ್ಕೆಡಲಾರದು. ಅಣ್ಣನೆಂಬ ಗುರು ಕೇವಲ ರಕ್ತಸಂಬಂಧಿಯಲ್ಲ ಆತ ಬದುಕಿನ ದಾರಿ ತಪ್ಪದಂತೆ ಕಾಯುವ ಅಮರ ಜ್ಞಾನದೀವಿಗೆ ಹಾಗೂ ನಮ್ಮ ಬದುಕಿನಲ್ಲಿ ಇರುವ ಕತ್ತಲೆಯನ್ನು ಕಳೆಯುವ ಅತ್ಯಮೂಲ್ಯವಾದ ಕಾದಂಬರಿ ಇದ್ದಂತೆ .
ತಂದೆ ಇಲ್ಲದ ಮನೆ ಕೇವಲ ಗೋಡೆಗಳಲ್ಲ ಅದು ಭಾವನೆಗಳ ಬಿರುಗಾಳಿ. ಅಂಥ ಮನೆಯಲ್ಲಿ ಅಣ್ಣನೆಂಬ ದೀಪ ಬೆಳಗುತ್ತಾನೆ. ಅವನು ಅಣ್ಣನಲ್ಲ ನೊಂದ ಬದುಕಿಗೆ ತಂದೆಯಾದ ಅಣ್ಣ. ತನ್ನ ಬಾಲ್ಯವನ್ನು ಬದಿಗಿಟ್ಟು ತಮ್ಮ -ತಂಗಿಯರ ಭವಿಷ್ಯಕ್ಕೆ ತಳಪಾಯವಾಗುವವನು. ತನ್ನ ಕನಸುಗಳನ್ನು ಸುಟ್ಟು ತಮ್ಮನ ಕನಸಿಗೆ ಬೆಳಕಾಗುವವನು. ಹಸಿವನ್ನು ಮರೆತು ತಮ್ಮನ ಹಸಿವು ನೀಗಿಸುವವನು ಕಣ್ಣೀರನ್ನು ನುಂಗಿ ತಮ್ಮನಿಗೆ ನಗು ನೀಡುವವನು ಅಣ್ಣನ ತ್ಯಾಗಕ್ಕೆ ಬೆಲೆ ಕಟ್ಟಲಾಗದು. ಅವನ ಹೆಗಲೇ ತಮ್ಮನ ಪಾಲಿಗೆ ಹಿಮಾಲಯ, ಅವನ ಮಾತೇ ವೇದವಾಕ್ಯ. ಅಂಥ ಅಣ್ಣನ ಋಣ ತೀರಿಸಲು ಜನ್ಮ ಸಾಲದು.
ಅಮ್ಮ ಓದು ಎಂದರೆ ಅದು ಪ್ರೀತಿಯ ಕರೆ. ಅಣ್ಣ ಓದಲೇಬೇಕು ಎಂದರೆ ಅದು ಭವಿಷ್ಯದ ಆಜ್ಞೆ. ತಾಯಿಯು ಬಿದ್ದಾಗ ಎತ್ತಿ ನಿಲ್ಲಿಸುವ ಕರುಣಾಮಯಿ. ಅಣ್ಣನು ಬೀಳದಂತೆ ನಡೆಯಲು ಕಲಿಸುವ ಕಠಿಣ ಪರಿಶ್ರಮದ ಗುರು. ಅವನ ಬುದ್ಧಿಮಾತುಗಳು ಬೇವಿನ ಎಲೆಯಂತೆ ಕಹಿ ಆದರೆ ಜೀವನಕ್ಕೆ ಔಷಧಿ. ಅವನ ಮಾತು ಹಾಗೂ ಜವಾಬ್ದಾರಿಯು ಹಾಗಲಕಾಯಿಯಂತೆ ವಿಷವಾದರೂ ಕೂಡ ಆರೋಗ್ಯಕ್ಕೆ ಬಹಳ ಉತ್ತಮವಾದದ್ದು. ಸೋದರನ ಪ್ರೀತಿಯಲ್ಲಿ ಕಠಿಣತೆ ಇರುತ್ತದೆ, ಕಠಿಣತೆಯಲ್ಲಿ ಕಾಳಜಿ ಇರುತ್ತದೆ. ಅವನ ಕೋಪದ ಹಿಂದೆ ಆತಂಕವಿದೆ ಅವನ ಶಿಸ್ತಿನ ಹಿಂದೆ ಕನಸಿದೆ. ಅಣ್ಣ ಎಂದರೆ ಎರಡನೇ ತಂದೆ, ಮೊದಲ ಸ್ನೇಹಿತ, ಕಣ್ಣಿಗೆ ಕಾಣುವ ದೇವರು. ಅವನು ಹಿಡಿದ ಕೈಯೇ ಜೀವನದ ದಿಕ್ಸೂಚಿ. ಅಂತಹ ಗುರುವಾದ ಅಣ್ಣನಿಗೆ ಸಾವಿರ ನಮನ.
ಅಕ್ಷರ ಕಲಿಸಿದವರು ಶಾಲೆಯ ಗುರುಗಳು. ಆದರೆ ಬದುಕು ಕಲಿಸಿದವನು ನನ್ನ ಅಣ್ಣ. ಶಾಲೆಯ ಗೋಡೆಗಳಲ್ಲಿ ಪಾಠವಿದೆ. ಆದರೆ ಅಣ್ಣನ ನಡತೆಯಲ್ಲಿ ಜೀವನಪಾಠವಿದೆ. ಶಾಲೆಯಲ್ಲಿ ನೂರು ಜನ ಗುರುವಿರಬಹುದು ಉತ್ತರ ಕೊಡಲು. ಆದರೆ ಬದುಕಿನಲ್ಲಿ ನನಗೆ ಒಬ್ಬನೇ ಗುರು ನನ್ನ ಅಣ್ಣ, ಪ್ರಶ್ನೆ ಬಂದಾಗ ಉತ್ತರದ ಧೈರ್ಯ ಕೊಡಲು ಮುಂದೆ ಬಂದ ಮೊದಲ ಸಂಬಂಧಿಯೇ ಅಣ್ಣ. ಅವನು ಗದರಿಸಿದ್ದು ಶಿಸ್ತಿಗಾಗಿ ಪ್ರೀತಿಸಿದ್ದು ಬೆಳವಣಿಗೆಗಾಗಿ, ಅವನು ಬೈದದ್ದು ಭವಿಷ್ಯಕ್ಕಾಗಿ. ಅವನ ಬುದ್ಧಿಮಾತುಗಳು ಚಾವಟಿಯಂತೆ ಆದರೆ ಹೃದಯ ಹೂವಿನಂತೆ ಮೃದು. ಬಿದ್ದಾಗ ಕೈಹಿಡಿದು ಎಬ್ಬಿಸಿದ್ದು ಅವನೇ ಬೀಳದಂತೆ ಹಾದಿ ತೋರಿದ್ದೂ ಅವನೇ. ಅಣ್ಣ ಎಂದರೆ ಸುಡುಬಿಸಿಲಿನಲ್ಲಿ ನೆರಳು. ಬರಗಾಲದಲ್ಲಿ ತುಂತುರು ಮಳೆಹನಿ, ಕತ್ತಲಲ್ಲಿ ದೀಪ. ಅವನ ತ್ಯಾಗವೇ ನನ್ನ ಬಂಡವಾಳ, ಅವನ ಕನಸೇ ನನ್ನ ಗುರಿ.
ಅಣ್ಣ ಗುರುವಾದರೆ ಅದು ಶಿಸ್ತು. ಅಕ್ಕ ಗುರುವಾದರೆ ಅದು ಸಂಸ್ಕಾರ. ತಾಯಿಯ ನಂತರ ತಾಯಿಯ ಮಮತೆಯನ್ನೇ ಹೊತ್ತು ಬಂದ ಎರಡನೇ ಜೀವವೇ ಅಕ್ಕ. ಅವಳ ಅಸ್ತಿತ್ವವೇ ಒಂದು ಮೌನ ಪ್ರಾರ್ಥನೆ. ಅಮ್ಮನಾದ ಅಕ್ಕ, ಅಮ್ಮ ಅಡುಗೆ ಮನೆಯಲ್ಲಿ ತೊಡಗಿದ್ದಾಗ, ತಮ್ಮ ತಂಗಿ ಹಸಿದಿದ್ದಾರೆ ಎಂದು ಮೊದಲು ಕಳವಳಗೊಳ್ಳುವ ಹೃದಯ ಅಕ್ಕನದ್ದೇ. ತನ್ನ ಹಸಿವನ್ನು ಮರೆತು ತಟ್ಟೆಯಲ್ಲಿ ಅನ್ನ ಬಡಿಸುವವಳು ಅಕ್ಕ.ತಾನು ಹಳೆಯ ಬಟ್ಟೆ ಉಟ್ಟುಕೊಂಡು ತಮ್ಮ ತಂಗಿಗೆ ಹೊಸ ಬಟ್ಟೆ ತರುವ ತ್ಯಾಗಮೂರ್ತಿ. ಅವಳ ಮಾತಿನಲ್ಲಿ ಲಾಲನೆಯಿದೆ ಕೈಯಲ್ಲಿ ಕಾಳಜಿಯಿದೆ, ಹೃದಯದಲ್ಲಿ ತಾಯಿಯ ಕಾಳಜಿ ಹಾಗೂ ಪ್ರೀತಿ ಇದೆ.
ಗುರುವಾದ ಅಮ್ಮನ ಗದರಿಕೆಯಲ್ಲಿ ಕೋಪ ಕಾಣುತ್ತದೆ. ಅದೇ ಮಾತನ್ನು ಅಕ್ಕ ಹೇಳಿದಾಗ ಅದರಲ್ಲಿ ಭವಿಷ್ಯದ ದಾರಿದೀಪ ಕಾಣುತ್ತದೆ. ಚೆನ್ನಾಗಿ ಓದಿ ನಿಮ್ಮ ಯಶಸ್ಸೇ ನನ್ನ ಹೆಮ್ಮೆ ಎಂದು ರಾತ್ರಿಯಿಡೀ ಎಚ್ಚರ ತಪ್ಪಿ ಪುಸ್ತಕದ ಪಕ್ಕದಲ್ಲಿ ಕೂಡುವವಳು ಅಕ್ಕ. ಅವಳ ಕಠಿಣತೆಯ ಹಿಂದೆ ಕನಸಿದೆ ಅವಳ ಪ್ರೀತಿಯ ಹಿಂದೆ ಪ್ರಾರ್ಥನೆಯಿದೆ. ಅಣ್ಣ ಜಗತ್ತಿನ ಕಠೋರ ಪಾಠ ಹೇಳಿಕೊಟ್ಟರೆ ಅಕ್ಕ ಮನೆಯ ಮೃದು ಸಂಸ್ಕಾರವನ್ನು ಕಲಿಸುತ್ತಾಳೆ. ಕ್ಷಮೆ, ಪ್ರೀತಿ, ತಾಳ್ಮೆ, ತ್ಯಾಗ ಈ ನಾಲ್ಕು ಅಕ್ಷರಗಳನ್ನು ಅವಳು ಉಸಿರಿನಲ್ಲಿ ಬದುಕಿ ತೋರಿಸುತ್ತಾಳೆ.
ಶಾಲೆಯಲ್ಲಿ ಪಾಠ ಹೇಳಿದವರು ಶಿಕ್ಷಕರು. ಆದರೆ ಜೀವನದ ನಿಜವಾದ ಪಾಠ ಹೇಳಿದವಳು ಅಕ್ಕ. ಆದ್ದರಿಂದ ಮೊದಲ ಗುರು ಅಮ್ಮನಾದರೆ ಎರಡನೇ ಗುರು ನನ್ನ ಅಕ್ಕ. ಅಕ್ಕನಿಗೆ ಕೊಡುವ ಗುರುದಕ್ಷಿಣೆ ಹಣವಲ್ಲ. ಅವಳು ತೋರಿಸಿದ ಸನ್ಮಾರ್ಗದಲ್ಲಿ ನಾವು ಉತ್ತಮ ಮನುಷ್ಯರಾಗಿ ಬೆಳೆಯುವುದೇ ಅವಳಿಗೆ ಸಲ್ಲಿಸುವ ಅತ್ಯುನ್ನತ ಗೌರವ ಅಕ್ಕ ಮತ್ತು ಅಣ್ಣ ಈ ಭೂಮಿ ಮೇಲಿನ ಅಪರೂಪದ ಮುತ್ತು ರತ್ನಗಳು ಇದ್ದಹಾಗೆ . ನಮ್ಮ ಬದುಕಿನ ಜ್ಞಾನದ ಜ್ಯೋತಿಯನ್ನು ನಿರಂತರವಾಗಿ ಬೆಳಗಲು ಅಣ್ಣ ಹಣತೆ ಆದರೆ ಅಕ್ಕ ತನ್ನನ್ನೇ ತಾನು ಸುಟ್ಟುಕೊಂಡು ಬೆಳಕು ನೀಡುವ ಬತ್ತಿ ಇದ್ದಂತೆ. ಏನೇ ಹೇಳಿ ಮನೆಯಲ್ಲಿ ತಂದೆಯ ಸ್ಥಾನ ತುಂಬುವ ಅಣ್ಣ ಮತ್ತು ತಾಯಿಯ ಸ್ಥಾನ ತುಂಬುವ ಅಕ್ಕ ಇರುವ ಮನೆ ನಂದ ಗೋಕುಲ.
ಕು. ಜ್ಯೋತಿ ಆನಂದ ಚಂದುಕರ
ಬಾಗಲಕೋಟ