Homeಲೇಖನಚೌತಿ ಸಂಭ್ರಮ — ಕಲಾಪ್ರಿಯ ಗಣಪ ಸೆ 14 – ಗಣೇಶ ಚತುರ್ಥಿ ಪ್ರಯುಕ್ತ ಸಕಾಲಿಕ...

ಚೌತಿ ಸಂಭ್ರಮ — ಕಲಾಪ್ರಿಯ ಗಣಪ ಸೆ 14 – ಗಣೇಶ ಚತುರ್ಥಿ ಪ್ರಯುಕ್ತ ಸಕಾಲಿಕ ನುಡಿ ನಮನ

Published on

ಮೋದಕಪ್ರಿಯ ಗಣಪನಿಗೆ ‘ಮೊದಲೊಂದಿಪೆ’ ಎನ್ನುವ ಕ್ಷಣಗಣನೆ ಆರಂಭವಾಗಿದೆ. ಗಣೇಶ ಚತುರ್ಥಿಯ ಸಂಭ್ರಮಕ್ಕೆ ನಗರದೆಲ್ಲೆಡೆ ಸಿದ್ಧತೆಗಳು ಜೋರಾಗಿವೆ. ಆಧುನಿಕತೆಯ ವೇಗದಲ್ಲಿ ಬೆಂಗಳೂರು ಬದಲಾಗುತ್ತಿದ್ದರೂ, ಹಬ್ಬ-ಹರಿದಿನಗಳ ನೆಪದಲ್ಲಿ ಗ್ರಾಮೀಣ ಸೊಗಡಿನ ಕಲೆ, ಕರಕುಶಲ ಪರಂಪರೆ ಹಾಗೂ ಜನಜೀವನದ ನಂಟು ಇನ್ನೂ ಜೀವಂತವಾಗಿರುವುದು ವಿಶೇಷ.

ಗಣಪತಿಯ ಜನಪ್ರಿಯತೆಗೆ ಎಲ್ಲೆಯೇ ಇಲ್ಲ. ಸರ್ವಾದರಣೀಯನಾದ ಆತನ ವಿಶಿಷ್ಟ ರೂಪವೇ ಆಕರ್ಷಣೆಯ ಕೇಂದ್ರ. ಆನೆಮುಖ, ದೊಡ್ಡ ಕಿವಿ, ಪುಟ್ಟ ಕಣ್ಣು, ಉದರ, ಸೊಂಡಿಲು, ಮೂಷಕವಾಹನ—ಈ ಎಲ್ಲ ವೈಶಿಷ್ಟ್ಯಗಳು ಭಕ್ತರನ್ನಷ್ಟೇ ಅಲ್ಲ, ಕಲಾವಿದರ ಕಲ್ಪನಾಶಕ್ತಿಯನ್ನೂ ಸೆಳೆಯುತ್ತವೆ. ಹೀಗಾಗಿಯೇ ಗಣಪತಿಯ ಸಹಸ್ರಾರು ರೂಪಗಳು ಕಲಾವಿದರ ಕೈಚಳಕದಲ್ಲಿ ಮೂರ್ತರೂಪ ಪಡೆದಿವೆ.

ಚೌತಿ ಬಂತೆಂದರೆ ಗಣಪತಿಯೇ ‘ಸೂಪರ್ ಮಾಡೆಲ್’! ಮೂರ್ತಿಕಾರರೇ ಆತನ ‘ಫ್ಯಾಷನ್ ಡಿಸೈನರ್’ಗಳು. ಪ್ರತಿವರ್ಷವೂ ಹೊಸ ರೂಪ, ಹೊಸ ಅಲಂಕಾರ, ಹೊಸ ವಿನ್ಯಾಸದಲ್ಲಿ ಗೌರೀಪುತ್ರ ಮನೆಮನೆಗೆ ಆಗಮಿಸುತ್ತಾನೆ. ಆದರೆ ಈ ಸೃಜನಶೀಲತೆಯ ಹಿಂದೆ ಕಲಾವಿದರ ತಿಂಗಳುಗಳ ಪರಿಶ್ರಮವಿದೆ; ಅದರ ಬೆಲೆಯನ್ನೂ ನಾವು ಅರ್ಥಮಾಡಿಕೊಳ್ಳಬೇಕು.

ನಗರದ ಬನಶಂಕರಿ ಮೊದಲನೇ ಹಂತದ ಶ್ರೀನಿವಾಸ ನಗರದ ಸಮೀಪ ಬ್ರಹ್ಮಚೈತನ್ಯ ಮಂದಿರದ ಎದುರು ಹಾದುಹೋದರೆ ಇಂತಹ ಕಲಾಲೋಕವೊಂದು ಕಣ್ಣಿಗೆ ಬೀಳುತ್ತದೆ. ದೊಡ್ಡ ಗಣೇಶ, ಸಣ್ಣ ಗಣೇಶ, ಮರಿ ಗಣೇಶ, ಕಿರುಗಣೇಶ, ಹಸುವಿನ ಮೇಲೆ ಕುಳಿತ ಗಣೇಶ, ನವಿಲಿನ ಮೇಲೆ ಕುಳಿತ ಗಣೇಶ, ರಥಾರೂಢ ಗಣೇಶ, ಕಮಲಾಸೀನ ಗಣೇಶ, ಪಂಚಮುಖ ಗಣೇಶ… ಹೀಗೆ ವೈವಿಧ್ಯಮಯ ರೂಪಗಳ ಗಣಪತಿಗಳನ್ನು ನೋಡಲು ಕಣ್ಣುಗಳೆರಡೂ ಸಾಲದು!

ಮೂಲತಃ ಕುಂಬಳಗೋಡಿನ ಕಲಾವಿದ ನಾಗರಾಜಪ್ಪ ಮತ್ತು ಅವರ ಕುಟುಂಬ ಗಣೇಶಮೂರ್ತಿಗಳ ನಿರ್ಮಾಣದಲ್ಲಿ ತೊಡಗಿಸಿಕೊಂಡಿದೆ. ತಂದೆಯಿಂದ ಬಂದ ಕಾಯಕವನ್ನು ಮುಂದುವರಿಸಿರುವ ನಾಗರಾಜಪ್ಪ ಅವರಿಗೆ ಗಣೇಶನ ಮೂರ್ತಿ ನಿರ್ಮಾಣ ಕೇವಲ ಉದ್ಯೋಗವಲ್ಲ; ಅದು ಪೂಜ್ಯವಾದ ಕಲೆ, ಜೀವನದ ನೆಲೆ.

“ಸ್ವಯಂ ಅನುಭವವೇ ಗುರು. ಗಣೇಶನನ್ನು ನಿರ್ಮಿಸುವುದು ಪೂಜನೀಯ ಕೆಲಸ. ಮಳೆಗಾಲ ಆರಂಭವಾಗುವ ಮುನ್ನವೇ ನಮ್ಮ ಕೆಲಸ ಶುರುವಾಗುತ್ತದೆ. ಮರಳು ಕಡಿಮೆ ಇರುವ ಜೇಡಿಮಣ್ಣು ಹಾಗೂ ಕಪ್ಪುಮಣ್ಣನ್ನು ಸಂಗ್ರಹಿಸಿಟ್ಟುಕೊಳ್ಳುತ್ತೇವೆ. ಆರು–ಏಳು ತಿಂಗಳ ಪರಿಶ್ರಮಕ್ಕೆ ಪ್ರತಿಫಲ ಸಿಗುವುದು ಗಣೇಶ ಚತುರ್ಥಿಯ ಸಂದರ್ಭದಲ್ಲಿ ಉತ್ತಮ ವ್ಯಾಪಾರವಾದಾಗ ಮಾತ್ರ. ಇದೇ ನಮ್ಮ ಜೀವನಾಧಾರ” ಎನ್ನುವುದು ಅವರ ಅಳಲು–ಅನುಭವ.

ಒಂದು ಮೂರ್ತಿಯ ರೂಪಕ್ಕೆ ಮೌಲ್ಡ್‌ ಆಕಾರ ನೀಡಬಹುದು. ಆದರೆ ಅದಕ್ಕೆ ಜೀವಂತಿಕೆಯನ್ನೂ ಭಾವವನ್ನೂ ನೀಡುವುದು ಕಲಾವಿದನ ಕೈಚಳಕ. ಮಣ್ಣಿನ ಗುಂಡಿಗೆ ದೇವರ ರೂಪ ನೀಡುವ ಈ ಕಲೆ ಸುಲಭದ್ದಲ್ಲ. ಮನೆಯವರ ಸಹಕಾರವೂ ಇಲ್ಲಿ ಮಹತ್ವದ್ದು. ಗಣೇಶ ಚತುರ್ಥಿಯ ಅವಧಿಯಲ್ಲಿ ಗಣೇಶಮೂರ್ತಿ ತಯಾರಿಸುವ ಈ ಕುಟುಂಬ, ಉಳಿದ ಸಮಯದಲ್ಲಿ ಕುಂಬಾರಿಕೆಯನ್ನು ವೃತ್ತಿಯನ್ನಾಗಿ ಮಾಡಿಕೊಂಡಿದೆ.

ಪಾರಂಪರಿಕ ಗಣೇಶಮೂರ್ತಿಗಳ ಜೊತೆಗೆ ಕಾಲಕ್ಕೆ ತಕ್ಕ ಹೊಸ ರೂಪಗಳನ್ನೂ ಈ ಕಲಾವಿದರು ಸೃಷ್ಟಿಸುತ್ತಿದ್ದಾರೆ. ಮೊಬೈಲ್, ಲ್ಯಾಪ್‌ಟಾಪ್ ಹಿಡಿದ ಗಣಪತಿ, ವಿವಿಧ ವೃತ್ತಿ ಮತ್ತು ಸಾಮಾಜಿಕ ಬದುಕಿನ ಪ್ರತೀಕಗಳನ್ನು ಒಳಗೊಂಡ ಗಣೇಶನ ರೂಪಗಳು ಹೊಸ ತಲೆಮಾರಿನ ಗಮನ ಸೆಳೆಯುತ್ತಿವೆ. ಹೀಗಾಗಿ ಗಣೇಶನ ರೂಪ ಕೇವಲ ಧಾರ್ಮಿಕ ಅಭಿವ್ಯಕ್ತಿಯಾಗಿರದೆ, ಆಯಾ ಕಾಲಘಟ್ಟದ ಸಾಮಾಜಿಕ ಮತ್ತು ಸಾಂಸ್ಕೃತಿಕ ಬೆಳವಣಿಗೆಯ ಪ್ರತಿಬಿಂಬವೂ ಆಗುತ್ತಿದೆ.

ಆದರೆ ಈ ಸೃಜನಶೀಲತೆಯ ಹಿಂದೆ ಇರುವ ಕಲಾವಿದರ ಬದುಕು ಮಾತ್ರ ಅಷ್ಟೊಂದು ವರ್ಣರಂಜಿತವಾಗಿಲ್ಲ. “ಎಲ್ಲರೂ ಕಲೆಯನ್ನು ಆಯ್ಕೆ ಮಾಡಿಕೊಳ್ಳಬಹುದು; ಆದರೆ ಕೆಲವರಲ್ಲಿ ಮಾತ್ರ ಅದು ಉಳಿಯುತ್ತದೆ” ಎಂಬ ಮಾತಿನಂತೆ, ಮಣ್ಣಿನೊಂದಿಗೆ ಬದುಕು ಕಟ್ಟಿಕೊಂಡಿರುವ ಈ ಕಲಾವಿದರ ಕಲೆಯ ಆಳ, ಅಗಲ ಮತ್ತು ವಿಸ್ತಾರವನ್ನು ಗುರುತಿಸುವ ಅಗತ್ಯವಿದೆ.

ಇಂದು ಪರಿಸರ ಕಾಳಜಿಯೂ ಗಣೇಶೋತ್ಸವದ ಪ್ರಮುಖ ಚರ್ಚೆಯಾಗಿದೆ. ಸಂಪ್ರದಾಯ ಉಳಿಯಬೇಕು; ಪರಿಸರವೂ ಉಳಿಯಬೇಕು ಎಂಬ ಅರಿವು ಹೆಚ್ಚುತ್ತಿದೆ. ರಾಸಾಯನಿಕ ಬಣ್ಣಗಳು ಹಾಗೂ ಪರಿಸರಕ್ಕೆ ಹಾನಿಕಾರಕ ವಸ್ತುಗಳ ಬದಲು ಹಸಿ ಮಣ್ಣಿನ ಗಣಪತಿ, ನೈಸರ್ಗಿಕ ಮತ್ತು ಸಸ್ಯಮೂಲ ಬಣ್ಣಗಳಿಂದ ಅಲಂಕರಿಸಿದ ಮೂರ್ತಿಗಳತ್ತ ಜನರ ಒಲವು ಹೆಚ್ಚುತ್ತಿರುವುದು ಆಶಾದಾಯಕ ಬೆಳವಣಿಗೆ.

“ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ” ಎಂಬ ಗಾದೆಯಂತೆ, ತಿಂಗಳುಗಟ್ಟಲೆ ರೂಪುಗೊಂಡ ಗಣಪತಿ ಎರಡು–ಮೂರು ದಿನಗಳ ಪೂಜೆಯ ಬಳಿಕ ಜಲದಲ್ಲಿ ಲೀನವಾಗಿ ಮತ್ತೆ ಮಣ್ಣಾಗುತ್ತಾನೆ. ಆದರೆ ಆ ಮಣ್ಣಿನ ಗಣಪನ ಹುಟ್ಟಿನ ಹಿಂದೆ ಕಲಾವಿದನಿಗೆ ಮಾತ್ರ ಗೊತ್ತಿರುವುದು ತಿಂಗಳುಗಳ ಪರಿಶ್ರಮ! ಆ ದೃಷ್ಟಿಯಿಂದ ನೋಡಿದರೆ, ಗಣೇಶನ ‘ಹುಟ್ಟು’ ನಿಜಕ್ಕೂ ಒಂದು ರೀತಿಯ ‘ಗಜಪ್ರಸವ’ವೇ ಸರಿ.

ಇಂದು ಗಣೇಶಮೂರ್ತಿ ತಯಾರಿಕೆಯೇ ಕಸುಬಾಗಿಸಿಕೊಂಡಿರುವ ಗುಡಿಗಾರರ ಬದುಕಿಗಿಂತಲೂ ಅವರ ಪಾರಂಪರಿಕ ಸೃಜನಶೀಲತೆ ನಶಿಸಿಹೋಗುವ ಆತಂಕ ದೊಡ್ಡದು. ಹೊಸ ತಲೆಮಾರು ಈ ವೃತ್ತಿಯಿಂದ ದೂರ ಸರಿದರೆ, ಕೇವಲ ಒಂದು ಉದ್ಯೋಗವಲ್ಲ, ಶತಮಾನಗಳ ಕರಕುಶಲ ಪರಂಪರೆಯೊಂದು ಕಳೆದುಹೋಗುವ ಅಪಾಯವಿದೆ.

ಆದ್ದರಿಂದ ಪರಿಸರವಾದಿಗಳು, ಧಾರ್ಮಿಕ ಮುಖಂಡರು, ಕಲಾವಿದರು ಹಾಗೂ ಸಾರ್ವಜನಿಕರು ಪರಿಸರಕ್ಕೆ ಮಾರಕವಾದ ಪ್ಲಾಸ್ಟರ್ ಆಫ್ ಪ್ಯಾರಿಸ್ ಮೂರ್ತಿಗಳ ಬಳಕೆಯನ್ನು ತಡೆಯುವ ಕುರಿತು ಒಗ್ಗಟ್ಟಿನ ಧ್ವನಿ ಎತ್ತಬೇಕು. ಅದರ ಜತೆಗೆ ಮಣ್ಣಿನ ಗಣಪತಿಯನ್ನು ರೂಪಿಸುವ ಸಾಂಪ್ರದಾಯಿಕ ಕಲಾವಿದರಿಗೆ ಸೂಕ್ತ ಪ್ರೋತ್ಸಾಹ ನೀಡಬೇಕು.

ಎಲೆಮರೆ ಕಾಯಿಯಂತೆ ಕಲಾರಾಧನೆಯಲ್ಲಿ ತೊಡಗಿರುವ ಗುಡಿಗಾರರನ್ನು ಗುರುತಿಸಿ, ಅವರ ಕಾಯಕಕ್ಕೆ ಸಣ್ಣ ಉದ್ಯಮದ ಮಾನ್ಯತೆ ನೀಡುವುದು ಅಗತ್ಯ. ಜಾಗದ ಸೌಲಭ್ಯ, ಸಹಾಯಧನ, ವಿಮಾ ಯೋಜನೆ, ಕಡಿಮೆ ಬಡ್ಡಿದರದ ಸಾಲ ಹಾಗೂ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿದರೆ ಈ ವೃತ್ತಿಯಲ್ಲಿ ತೊಡಗಿರುವ ಯುವಕರಲ್ಲಿ ಮೂಡಿರುವ ಅಭದ್ರತೆಯ ಭಾವನೆ ದೂರವಾಗಬಹುದು.

ಗಣೇಶ ಚತುರ್ಥಿ ಎಂದರೆ ಕೇವಲ ಮನೆಗೆ ಗಣಪನನ್ನು ತಂದು ಪೂಜಿಸುವ ಹಬ್ಬವಲ್ಲ. ಅದು ಭಕ್ತಿ, ಕಲೆ, ಕರಕುಶಲ, ಕುಟುಂಬದ ಪರಿಶ್ರಮ ಮತ್ತು ಪರಿಸರ ಪ್ರಜ್ಞೆಯ ಸಂಗಮ. ಮಣ್ಣಿಗೆ ರೂಪ ನೀಡಿ ದೇವತ್ವವನ್ನು ಕಾಣಿಸುವ ಈ ಕಲಾವಿದರ ಕೈಗಳನ್ನು ಗೌರವಿಸುವುದೇ ನಿಜವಾದ ಗಣೇಶಾರಾಧನೆ.

ಮಣ್ಣಿನಿಂದ ಮೂಡುವ ಗಣಪತಿ ನೀರಿನಲ್ಲಿ ಲೀನವಾಗಬಹುದು; ಆದರೆ ಆತನನ್ನು ರೂಪಿಸಿದ ಕಲಾವಿದನ ಕಲೆ ಮತ್ತು ಕಾಯಕ ನಮ್ಮ ನೆನಪಿನಲ್ಲಿ ಉಳಿಯಬೇಕು. ಅದುವೇ ಚೌತಿಯ ನಿಜವಾದ ಸಂಭ್ರಮ.

ಡಾ. ಗುರುರಾಜ ಪೋಶೆಟ್ಟಿಹಳ್ಳಿ
ಸಂಸ್ಕೃತಿ ಚಿಂತಕರು | ದೂ.: ೯೦೩೫೬೧೮೦೭೬

Latest articles

More like this